ಸಗರನಾಡಿನ ನಿಗೂಢ ಕೊಲೆಯ ಪತ್ತೆ..
ಮನುಷ್ಯ ತೀರಾ ರಾಕ್ಷಸ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾನಾ?ಬರುತ್ತಾ ಬರುತ್ತಾ ಮನುಷ್ಯ ಹೃದಯವನ್ನು ಕಳೆದುಕೊಂಡು ಮೃಗವಾಗುತ್ತಿದ್ದಾನಾ?ಹಣದ ಹಪಾಹಪಿ ಮನುಷ್ಯ ಮನುಷ್ಯತ್ವವನ್ನು ತೊರೆಯುವಂತೆ ಮಾಡುತ್ತಿದೆಯಾ?ಕಾಲ ಬದಲಾಗಿದೆಯಾ ಅಥವಾ ಮಾನವೀಯ ಮೌಲ್ಯಗಳು ಸತ್ತು ಹೋಗಿವೆಯಾ?ಸದ್ಯದ ಮಾನವ ಜಗತ್ತಿನ ನಿರ್ದಯೀ ಘಟನೆಗಳನ್ನು ನೋಡಿದಾಗ ಇಂಥಹ ನೂರೆಂಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.ಉತ್ತರಗಳು ಇಲ್ಲವಾಗುತ್ತವೆ;ಆತಂಕವಾಗುತ್ತದೆ;ಭಯ ಕಾಡುತ್ತದೆ:ಎತ್ತ ಸಾಗುತ್ತಿದೆ ಸಮಾಜ ಎನ್ನುವ ಮತ್ತದೆ ವಿಲಕ್ಷಣ ಪ್ರಶ್ನೆ ತಲೆ ಎತ್ತುತ್ತದೆ!ಈ ಸಮಾಜದ ಕುರಿತು ಚಿಂತಿಸುವವರು ಯಾರು ಎನ್ನುವ ಪ್ರಶ್ನೆಗೆ ಕಡಾಕಂಡಿತವಾಗಿ ದೊರೆಯುವ ಉತ್ತರ-
ಪೋಲಿಸ್!
ನಿಜವೇ,ಸಮಾಜ ಎನ್ನುವ ತೋಟವನ್ನು ಪೋಲಿಸ್ ಎನ್ನವ ಬೇಲಿ ಕಾಯದೆ ಹೋದರೆ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ.ಒಂದೇ ಒಂದು ಕ್ಷಣ ಪೋಲಿಸ್ ಇಲ್ಲದ ಪ್ರಪಂಚವನ್ನು ಊಹಿಸಿ ನೋಡಿಕೊಳ್ಳಿ;ಎದೆ ಒಡೆದು ಹೋಗುತ್ತದೆ.ನಮ್ಮ ನಿತ್ಯದ ಜೀವನದ ಜಂಜಾಟದಲ್ಲಿ ಆ ಪದ ಬಳಕೆಯಾಗದೆ ಹೋಗಬಹುದು.ಪೋಲಿಸರು ಉಪಸ್ಥಿತಿ ನಮಗೆ ಅನಗತ್ಯ ಎಂದು ಅನ್ನಿಸಬಹುದು,ನೆನಪಿರಲಿ:ಇಪ್ಪತ್ತು ನಾಲ್ಕು ಗಂಟೆಯೂ ಆ ಇಲಾಖೆ ಸಮಾಜದ ನಿಗಾವಣೆಯಲ್ಲಿರುತ್ತದೆ.ಅಂತೆಯೇ ನಾವು ನೆಮ್ಮದಿಯ ಜೀವನ ಮಾಡುತ್ತೇವೆ.ಇದು ಪೋಲಿಸ್ ಪವರ್!
ಮೊನ್ನೆ ಯಾದಗಿರಿ ಜಿಲ್ಲೆಯಲ್ಲಿ ಭೀಬತ್ಸಕರವಾದ ಘಟನೆಯೊಂದು ನಡೆಯಿತು.ನೋಡು ನೋಡುತ್ತಿರುವಂತೆ ವಾಟ್ಸಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮುಖಾಂತರ ಇಡೀ ಜಿಲ್ಲೆಗೆ ಪ್ರಸರಣವಾಯಿತು.ಜನ ಬೆಚ್ಚಿ ಬಿದ್ದರು.ಆ ಭರ್ಬರವಾದ ದೃಶ್ಯವನ್ನು ಕಂಡು ನಿಜಕ್ಕೂ ಜನ ಆತಂಕಗೊಂಡರು.ಅದೇನು ಗೊತ್ತೇ?
ಸುಟ್ಟು ಕರಕಲಾದ ಶವ!
ಯಾದಗಿರಿ ಜಿಲ್ಲೆಯ ಶಹಾಪೂರು ತಾಲ್ಲೂಕಿನ ಸಗರ ಎನ್ನುವ ಗ್ರಾಮದ ಸಗರ ಮತ್ತು ಶಾರದಹಳ್ಳಿ ಮಾರ್ಗ ಮಧ್ಯೆ ತೊಗರಿ ಹೊಲವೊಂದರಲ್ಲಿ ತೊಗರಿ ಕಟ್ಟಿಗೆಯಿಂದ ಸುಟ್ಟ ಶವವೊಂದು ಪತ್ತೆಯಾಯಿತು.ಬಹುತೇಕ ಸಂಪೂರ್ಣವಾಗಿ ಸುಟ್ಟು ಹೋದ ದೇಹವನ್ನು ಹೆಣ್ಣೋ ಗಂಡೋ ಎಂದು ಗುರುತಿಸದ ಸ್ಥಿತಿಯಲ್ಲಿತ್ತು.ಗ್ರಾಮಸ್ಥರು ಆ ಭೀಬತ್ಸವಾದ ಘಟನೆಯನ್ನು ತುಂಬಾ ಆತಂಕದಿಂದ ನೋಡಲು ಜಮೆಯಾದರು.ಎಲ್ಲರ ಕಂಗಳಲ್ಲಿ ಭಯ!ಹೆಣ ಯಾರದು ಎನ್ನುವ ಕುತೂಹಲದ ಪ್ರಶ್ನೆ.ಯಾರದು ಆ ಹೆಣ?
ಸಗರ ಗ್ರಾಮದ ಮುದುಕಪ್ಪ ತಂದೆ ಶಿವಪ್ಪ ಸಣ್ಣೂರು ಎನ್ನುವ ವ್ಯಕ್ತಿ
16/03/2019 ಬೆಳ್ಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಶಹಾಪೂರು ಪಿಎಸ್ ಗೆ ಭೇಟಿ ನೀಡಿ ತಮ್ಮ ಗ್ರಾಮದ ಗುಡಿಯ ಪಕ್ಕದ ಸಗರ ಶಾರದಹಳ್ಳಿ ರಸ್ತೆಯ ಹೊಲವೊಂದರಲ್ಲಿ ಬೆಂಕಿ ನೆನ್ನೆ ಬೆಂಕಿ ಕಾಣಿಸಿರುವುದು ತಾನು ನೋಡಿರುವುದಾಗಿ ಮತ್ತು ಮುಂಜಾನೆ ಅಲ್ಲಿ ಸುಟ್ಟ ಮನುಷ್ಯನ ದೇಹ ಇರುವುದಾಗಿ ಠಾಣೆಗೆ ದೂರು ನೀಡುತ್ತಾನೆ.ಸತ್ತಿರುವ ವ್ಯಕ್ತಿ ಯಾರು?ಗಂಡೋ ಹೆಣ್ಣೋ?
ಅಸಲು ಯಾವ ಊರಿನ ವ್ಯಕ್ತಿಯೋ?ಎಲ್ಲೋ ಕೊಲೆ ಮಾಡಿ ಇಲ್ಲಿ ಕೊಲೆಯನ್ನು ಮರೆ ಮಾಚಲು ಸುಟ್ಟು ಹೋಗಿದ್ದಾರೆಯೋ ಎನ್ನುವ ಹಲವು ಪ್ರಶ್ನೆಗಳು ತಲೆ ಎತ್ತುತ್ತವೆ?ನಿಜಕ್ಕೂ ಇದೊಂದು ನಿಗೂಢ ಘಟನೆ.ಶಹಾಪೂರು ಪೋಲಿಸ್ ಠಾಣಾ ಸರಹದ್ದಿನ ಮಟ್ಟಿಗೆ ಹೇಳುವುದಾದರೆ ಇಷ್ಟೊಂದು ಭೀಕರವಾಗಿ ಸುಟ್ಟು ಹಾಕಿ ಕೊಂದ ಘಟನೆಗಳು ದಾಖಲಾಗಿರಲಿಲ್ಲ.ಸಾಮಾಜಿಕ ಕಾಳಜಿಯಿಂದ ಮುದುಕಪ್ಪ ನೀಡಿದ ಹೇಳಿಕೆಯ ಅನ್ವಯ ಪ್ರಕರಣ
ದಾಖಲಿಸಿಕೊಳ್ಳಲಾಗುತ್ತದೆ.
ನಿಜಕ್ಕೂ ಇದೊಂದು ಅತ್ಯಂತ ಕಗ್ಗಂಟಿನ ಪ್ರಕರಣವಾಗಿ ಮೇಲ್ನೋಟಕ್ಕೆ ಕಾಣಿಸುತ್ತದೆ.ಶವವನ್ನು ಐಡಿಂಟಿಪೈ ಮಾಡುವುದು ಹೇಗೆ?ವ್ಯಕ್ತಿ ಯಾವ ಊರಿನವನು?ಉಹುಂ,ಒಂದೂ ಗೊತ್ತಿರುವುದಿಲ್ಲ.ಘಟನೆಯನ್ನು ಗಂಭೀರವಾಗಿ ಪರಿಗಣಿಸುವ ಪಿಐ ನಾಗರಾಜ ಅವರು ದೂರನ್ನು ಪೋಲಿಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನರಿಗೂ ಮತ್ತು ಸುರಪುರದ ಡಿವೈಎಸ್ಪಿ ಶಿವುನಗೌಡ
ಪಾಟೀಲ್ ಅವರ ಗಮನಕ್ಕೆ ತಂದು ಈ ಮೂರು ಜನ ದಕ್ಷ ಅಧಿಕಾರಿಗಳು ಸ್ಥಲ ಪರಿಶೀಲನೆ ಮಾಡುತ್ತಾರೆ.ಏನಿರುತ್ತದೆ ಅಲ್ಲಿ?ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುತ್ತದೆ.
ನೆನಪಿರಲಿ:ಅಪರಾಧ ಜಗತ್ತಿನಲ್ಲೊಂದು ವಿಲಕ್ಷಣ ತಪ್ಪು ಪ್ರತಿಯೊಬ್ಬ ಅಪರಾಧಿಯೂ ಮಾಡುತ್ತಾನೆ.ಅಪರಾಧ ಪರಿಶೋಧಕರ ಈ ನಂಬಿಕೆ ಯಾವತ್ತು ಹುಸಿ ಹೋಗಿಲ್ಲ.ಅಪರಾಧಿ ಇಲ್ಲೂ ಕೆಲವು ತಪ್ಪು ಮಾಡಿದ್ದ.ಆ ತಪ್ಪುಗಳೆಂದರೆ:ಬೈಕೊಂದರ ಬೀಗ,ಸಂದೂಕಿನ ಬೀಗ ಮತ್ತು ಅಂಗವಿಕಲರು ಬಳಸುವ ಕೋಲುಗಳು.
ಎಸ್,ಈ ಕರುಹುಗಳು ದೊರೆತ ಮೇಲೆ ಸತ್ತಿರುವ ವ್ಯಕ್ತಿ ಗಂಡು ಆಗಿದ್ದು ವಯಸ್ಸು ಮೂವತ್ತು ಮೂವತ್ತೈದರಲ್ಲಿ ಇರಬಹುದು ಎಂದು ನಿರ್ಧರಿಸಲಾಗುತ್ತದೆ.ಪೋಲಿಸ್ ಇಲಾಖೆಗೆ ನಿಜವಾದ ಸವಾಲು ಎದುರಾಗುವುದೆ ಇಲ್ಲಿ!ಸಿಕ್ಕಿರುವ ಈ ಕುರುಹುಗಳ ಮುಖಾಂತರ ಅಪರಾಧಿ ಮತ್ತು ಸತ್ತಿರುವ ವ್ಯಕ್ತಿ ಯಾರೆಂದು ಪತ್ತೆ ಮಾಡುವುದು ಹೇಗೆ?
ದೇಶಾದ್ಯಂತ ಪೋಲಿಸ್ ಇಲಾಖೆ ಇದೆ.ದಿನಕ್ಕೆ ಸಾವಿರ ಸಾವಿರ ಲೆಖ್ಖದಲ್ಲಿ ಅಪರಾಧ ಪ್ರಕರಣಗಳು ದಾಖಲಾಗುತ್ತಿರುತ್ತವೆ.ಅಪರಾಧ ಪರಿಶೋಧನೆಗೆ ತನ್ನದೆ ಆದ ನಿಯಮವಿದೆ.ಅವು ಯಥಾರೀತಿ ಪತ್ತೆಯಾಗುತ್ತಲಿರುತ್ತವೆ.ಆದರೆ ಪ್ರಕರಣವೊಂದು ಕ್ಷಿಪ್ರ ರೀತಿಯಲ್ಲಿ ಬೇಧಿಸುವುದಿದೆಯಲ್ಲ ಅದು ಉತ್ತಮ ತಂಡವಿದ್ದರೆ ಮಾತ್ರ ಸಾಧ್ಯ.ಸದ್ಯ ಅಂತಹದ್ದೊಂದು ಶ್ಲಾಘನೀಯ ತಂಡ ಶಹಾಪೂರು ಠಾಣೆಯಲ್ಲಿದೆ.ಠಾಣಾಧಿಕಾರಿ ಪಿಐ ನಾಗರಾಜು ಸೇರಿದಂತೆ ಬಾಬು ನಾಯ್ಕಲ್,ಹೊನ್ನಪ್ಪ
head constable,ಸತೀಶಕೂಮಾರ ನರಸನಾಯಕ,ಸಂಗನಬಸ್ಸಪ್ಪ ಅಕ್ಕಿ,ಗಜೇಂದ್ರ,ಬಸವರಾಜ್ ಆರ್,ಭೀಮನಗೌಡ,ನಾಗರೆಡ್ಡಿ ,ಶಿವನಗೌಡ
ಪಾಟೀಲ್ ಇದೆಲ್ಲಾ ಕರ್ತವ್ಯವನ್ನೇ ದೇವರು ಎಂದು ಭಾವಿಸಿ ಸೇವೆ ಸಲ್ಲಿಸುವ ತಂಡ.ಕಾಗದ ಕಾನೂನಿನ ಮುಖಾಂತರ ಸಮಾಜ ಸುಧಾರಿಸುವುದಕ್ಕಿಂತ ಕರುಳು ಮತ್ತು ಹೃದಯದ ಮೂಲಕ ಸಮಾಜವನ್ನು ತಿದ್ದಬೇಕು ಎನ್ನುವ ಧ್ಯೇಯವನ್ನು ಹೊಂದಿರುವವರು.ನೆನಪಿರಲಿ:ಶಹಾಪೂರು ಠಾಣಾ ವ್ಯಾಪ್ತಿಯಲ್ಲಿ ಒಂದೇ ಒಂದು ಶಾಂತಿ ಭಂಗ ಉಂಟು ಮಾಡುವಂತಹ ಪ್ರಕರಣಗಳು ದಾಖಲಾಗಿರುವುದಿಲ್ಲ.ಶಹಾಪೂರು ಸರಹದ್ದಿನಲ್ಲಿ ರೌಡಿಗಳ ಕಾಟವಿಲ್ಲ.ಸಣ್ಣಪುಟ್ಟ ವ್ಯಾಜ್ಯಗಳನ್ನು ಸೌಜನ್ಯದಿಂದ ಮನುಷ್ಯತ್ವದಿಂದ ಪರಿಹರಿಸಿ ಕಳಿಸಿಕೊಡುವ ಈ ದಕ್ಷರ ತಂಡ ಸಮಾಜ ಘಾತುಕ ಶಕ್ತಿಗಳನ್ನು ಬೆಳೆಯಲು ಬಿಟ್ಟಿಲ್ಲ.
ಸಿಕ್ಕಿರುವ ಕುರುಹುಗಳ ಆಧಾರದ ಮೇಲೆ ಪ್ರಕರಣವನ್ನು ಮೂರೇ ಮೂರು ದಿನಗಳಲ್ಲಿ ಭೇದಿಸಲಾಗುತ್ತದೆ.ಬೀಗದ ಕೈಗಳು,ಮತ್ತು ಅಂಗವಿಕಲರು ಬಳಸುವ ಊರುಗೋಲುಗಳು ವ್ಯಕ್ತಿ ಯಾರೆಂದು ಪತ್ತೆ ಹಚ್ಚುತ್ತವೆ.ಅಲ್ಲಿಗೆ ಪ್ರಕರಣ ಕ್ಲೋಸ್,ಪ್ರಕರಣದ ಮೊಟಿವ್ ತಿಳಿದ ಮೇಲೆ ಅಪರಾಧಿ ಸಿಕ್ಕಿ ಹಾಕಿಕೊಂಡಿದ್ದಾನೆ.ಹೆಣ ಸುಟ್ಟು ಆತುರದಲ್ಲಿ ಬೈಕ್ ಬೀಗ ಮರೆತು ಬಂದ ತಪ್ಪಿಗೆ ಕೊಲೆಗಾರ ಸಿಕ್ಕಿ ಹಾಕಿಕೊಂಡಿದ್ದಾನೆ.ಅಪರಾಧಿಯನ್ನು ದಸ್ತಗಿರ್ ಮಾಡಿ ವಿಚಾರಣೆ ಆರಂಭಿಸಿದಾಗ ಘಟನೆಯ ಕಾರಣ ಬಯಲಾಗಿದೆ.ಅತಿ ಸಣ್ಣ ತಪ್ಪಿಗೆ ಜೀವ ತಿಂದು ಹಾಕುವ ದ್ವೇಷದ ಕೆನ್ನಾಲಿಗೆಯ ಕರಾಳ ಮುಖ ಬಯಲಾಗಿದೆ.ಯಾರು ಕೊಲೆಗೀಡಾದ ವ್ಯಕ್ತಿ?ಯಾರು ಆ ಕ್ರೂರ ಅಪರಾಧಿ?ಬನ್ನಿ ವಿವರಿಸುತ್ತೇನೆ.
ಸೋಪಣ್ಣ ತಂದೆ ಬಾಗಣ್ಣ ಮ್ಯಾಳಿಗಿ ವಯಸ್ಸು ಮೂವತ್ತೊಂದು ಸಗರ ಗ್ರಾಮದ ಬೇಡ ಜನಾಂಗಕ್ಕೆ ಸೇರಿದ ಒಬ್ಬ ಅಂಗವಿಕಲ ವ್ಯಕ್ತಿ.ಅಂಗವಿಕಲನಾದರೂ ಸ್ವಾಭಿಮಾನಿ ಜೀವನ ನಡೆಸುತ್ತಾ ಒಂದು ಪಾನ್ ಶಾಪನ್ನು ಇಟ್ಟುಕೊಂಡು ಜೀವನ ನಿರ್ವವಹಣೆ ಮಾಡುತ್ತಿದ್ದವನು.ಅಂಗವಿಕಲನಾದರೂ ಕ್ರೀಯಾಶೀಲ ವ್ಯಕ್ತಿಯಾಗಿರುವುದರಿಂದ ಜಾತ್ರೆ ಮತ್ತಿತ್ತರ ಪ್ರದೆಶಗಳಿಗೆ ವ್ಯಾಪರಕ್ಕೆಂದು ಹೊರಡುತ್ತಾ ಒಂದಿಷ್ಟು ಹಣ ಮಾಡಿಕೊಂಡಿದ್ದನು.ಅದೇ ಸಗರ ಗ್ರಾಮದ ಮಂಜುನಾಥ ತಂದೆ ನಿಂಗಪ್ಪ ಊರಕಾಯಿ
(23) ಎಂಬ ವ್ಯಕ್ತಿ ಸಂಸಾರಿಕ ಅಡಚಣೆಗಾಗಿ ಸೋಪಣ್ಣನ ಹತ್ತಿರ ಇಪ್ಪತ್ತು ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ.ಈ ಇಪ್ಪತ್ತು ಸಾವಿರ ರೂಪಾಯಿಗಳ ಸಾಲವೇ ಸೋಪಣ್ಣನ ಸಾವಿಗೆ ಕಾರಣವಾಗಿದೆ.ಮಂಜುನಾಥ ಮನುಷ್ಯತ್ವ ಮರೆತು ಭರ್ಬವಾಗಿ ಹತ್ಯೆ ನಡೆಸಲಿಕ್ಕೆ ಕೇವಲ ಇಪ್ಪತ್ತು ಸಾವಿರ ರೂಪಾಯಿ ಕಾರಣವಾಗಿದೆ.ಹೇಗೆ ಅಂತೀರಾ?ಎಸ್,ಸೋಪಣ್ಣ ಮಂಜುನಾಥನಿಗೆ ಸಾಲವಾಗಿ ನೀಡಿರುವ ಇಪ್ಪತ್ತು ಸಾವಿರ ರೂಪಾಯಿಯನ್ನು ಮರಳಿ ನೀಡು ಎಂದು ಬೇಡಿದ್ದಾನೆ.ಸದ್ಯ ಮಂಜುನಾಥ ಆ ಹಣವನ್ನು ಮರಳಿ ನೀಡುತ್ತಿದ್ದನೇನೋ?ಸೋಪಣ್ಣ ದುರಹಂಕಾರದಿಂದ ಮಂಜುನಾಥನಿಗೆ ಏನೆಂದು ಅವಾಜ್ ಹಾಕಿದ್ದನೆಂದರೆ ಒಂದ್ನಿಮಿಷ,ಅದನ್ನು ಹೇಳುವ ಮುನ್ನ ಸೋಪಣ್ನನ ತಾಯಿ ಮಾತನ್ನೊಮ್ಮೆ ಕೇಳಿ:
“ನನ್ ಮಗ ಕುಂಟ ಸಾಹೇಬರೆ,ಯಾರ್ ತಂಟ್ಯಾಕ್ ಹೋದವನಲ್ಲ.ಕಾಲು ಕುಂಟ ಇರುವುದರಿಂದ ಬದುಕಲಾಕ ಅದೊಂದು ಅಂಗಡಿ ಹಾಕಿಕೊಂಡಿದ್ದ.ಜಾತ್ರಿ ಜಾತ್ರಿ ಹೋಗಿ ಕಾಯಿ ಯಾಪಾರ ಮಾಡುತ್ತಿದ್ದ.ಕೈಯಾಗ ನಾಕು ದುಡ್ಡು ಓಡಾಡುತ್ತಿತ್ತು.ಅವನ ಕೈಯಾಗ ಎಂಬತ್ತು ಸಾವಿರ ರೂಪಾಯಿ ಇದ್ವು,ಅದರಿಂದಾನೆ ನನ್ ಮಗನ ಜೀವ ಹೋತು!ಅಂವ ದೋಸ್ತ ಅಲ್ಲ ಏನಲ್ಲ,ಅವನ ಮಾರೀನೆ ನಾನು ನೋಡಿಲ್ಲ.ನನ್ ಮಗನ್ ಜೀವ ತಿಂದು ಹಾಕಿದ!”ಎನ್ನುತ್ತಾಳೆ.ಆಕೆಯ ಪ್ರಕಾರ ಮಗನ ಹತ್ತಿರವಿದ್ದ ಎಂಬತ್ತು ಸಾವಿರ ಹಣದ ಆಸೆಗೆ ಬಿದ್ದು ಕೊಲೆ ಮಾಡಲಾಗಿದೆ.ಎನ್ನುವುದು.ಆದರೆ ಪೋಲೀಸ್ ವಿಚಾರಣೆಯ ವೇಳೆ ಅಪರಾಧಿ ಮಂಜುನಾಥ ನೀಡಿ ಹೇಳಿಕೆ ಏನು ಗೊತ್ತೆ?
“ಸಾಹೇಬರೆ ಅವನ ಹತ್ತಿರ ಇಪ್ಪತ್ತು ಸಾವಿರ ಸಾಲ ಮಾಡಿದ್ದೆ.ರೊಕ್ಕಕ್ಕಾಗಿ ದಿನಾ ದಿನಾ ಪೀಡಿಸುತ್ತಿದ್ದ.ಸ್ವಲ್ಪ ತಾಳು ಎನ್ನುವ ಮಾತಿಗೆ ಆತ ನಿನ್ನ ಹೆಂಡತಿಯನ್ನು ಮಲಗಿಸಿ ದುಡ್ಡು ತಂದು ಕೊಡು,ಇಲ್ಲವೆಂದರೆ ನಿನ್ನ ಹೆಂಡತಿಯನ್ನು ನನ್ನೊಂದಿಗೆ ಮಲಗಿಸು ಎಂದು ಹೇಳುತ್ತಿದ್ದ.ಕೋಪ ತಡಿಯಲಾಗಲಿಲ್ಲ.ಕೊಂದು ಹಾಕಿದೆ!”ಎಂದು ಹೇಳಿಕೆ ನೀಡಿದ್ದಾನೆ.
ಸೋಪಣ್ಣಾ ಹೆಂಡತಿಯನ್ನು ಮಲಗಿಸು ಎಂದು ಹೇಳಿದ್ದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ.ಸೊಪಣ್ಣ ತನ್ನ ಸುರಪುರದ ದೊಡ್ಡವ್ವಳಿಗೆ ಎಂಬತ್ತು ಸಾವಿರ ಹಣ ನೀಡಬೇಕಿದೆ ಎಂದಾಗ ಮಂಜುನಾಥ ತನ್ನ ಬೈಕಿನಲ್ಲೆ ಹೋಗೋಣ ಎಂದಿದ್ದು ಮಾರ್ಗ ಮಧ್ಯೆ ಒಂದು ಮಂಜುನಾಥ ಒಂದು ಬಿಯರ ಕುಡಿದಿದ್ದು ನಂತರ ನೆಶೆಯಲ್ಲಿ ಒಲೆ ಊದುವ ಕೊಳವೆಯಿಂದ ಹೊಡೆದು ಸಾಯಿಸಿದ್ದು ಬಯಲಾಗಿದೆ.ಕೊಲೆ ಮಾಡಿದ ನಂತರ ಮಂಜುನಾಥ ತನ್ನ ಹೆಂಡತಿಯ ಊರಾದ ಶಾರದಹಳ್ಲಿಗೆ ಓಡಿ ಹೋಗಿದ್ದಾನೆ.ಅಂತೂ ಪ್ರಕರಣ ಸಿನಿಮೀಯ ರೀತಿಯಲ್ಲಿ ಪತ್ತೆಯಾಗಿದೆ.
ಪೋಲಿಸ್ ಕಣ್ಣಿನಿಂದ ತಪ್ಪು ಮಾಡಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲಶಹಾಪೂರಿನ ದಕ್ಷ ಅಧಿಕಾರಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯನ್ನು ಜೈಲಿಗೆ ಕಳಿಸಿದೆÉ.
ಎಸ್ಪಿ ಹೃಷಿಕೇಷ್ ಭಗವಾನ್ ಸುರುಪುರ ಡಿವೈಎಸ್ಪಿ,ಶಿವಕೂಮಾರ ಪಾಟೀಲ್ ಮತ್ತು ಸಿಪಿಐ ನಾಗರಾಜ್ ಜಿ.ಮತ್ತು ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ.
ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ