ನಂದನವನದಂತಹ ಈ ಸ್ವರ್ಗ ಭೂಮಿಗೆ ಅದೆಲ್ಲಿಂದ ಬಂದು ಒಕ್ಕರಿಸಿತು ಕರೋನಾ?
ಈ ಕರೋನಾ ಮಹಾ
ಮಾರಿ ನಮ್ಮ ದೇಶವನ್ನು ಪ್ರವೇಶಿಸಿರುವ ಈ ಸಂದಿಗ್ಧ ಸಂದರ್ಭದಲ್ಲಿ ಸೋಕಾಲ್ಡ್ ಸಮಾಜ ಸೇವಕರು ವಿಚಿತ್ರ
ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ!ತಾವು ಮಾಡುತ್ತಿರುವುದು ಸರಿಯಾ,ಅರ್ಥಪೂರ್ಣವಾ?ಊಹುಂ,ಒಂದೂ
ಗೊತ್ತಿಲ್ಲ.ಐದಾರು ರೂಪಾಯಿಗೆ ದೊರೆಯಬಹುದಾದ ಅತ್ಯಂತ ಕಳಪೆ ಗುಣಮಟ್ಟದ ಮಾಸ್ಕುಗಳನ್ನು ತಂದು ಅಮಾಯಕ
ಜನರಿಗೆ ಹಂಚುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.ಹಾಗೆ ಮಾಡುತ್ತಾ ಪ್ರಕಟವಾಗದ ಕೇವಲ ಪಿಡಿಎಫ್‌ಗೆ
ಮಾತ್ರ ಸೀಮಿತವಿರುವ ದಿನ ಪತ್ರಿಕೆಗಳಿಗೆ ಸುದ್ದಿ ಕೊಡುವ ಮೂಲಕ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ.ಇದರ
ಹಿನ್ನೆಲೆಯಲ್ಲಿ ಮಾನವೀಯ ಕಳಕಳಿ ಇಲ್ಲ.ತಮ್ಮ ಪ್ರಚಾರದ ತೆವಲನ್ನು ಈ ಮೂಲಕ ಈಡೇರಿಸಿಕೊಳ್ಳುವ ಯತ್ನ
ಮಾಡುತ್ತಿದ್ದಾರೆ.ಭಾರತದ ಹಳ್ಳಿಗಳ ಮುಗ್ಧ ಪ್ರಜೆಯ ಮನೋ ಭೂಮಿಕೆಯ ಮೇಲೆ ಹೀರೋ ಆಗಲೆತ್ನಿಸುವ ಆ ಕ್ರಮ
ಅಕ್ಷಮ್ಯ!ಅವು ಅಮಾಯಕ ಜನ;ಹಾಲು ಎಂದು ನಂಬಿಸಿ ವಿಷ ಕೊಟ್ಟರೂ ಕುಡಿದು ಬಿಡುತ್ತವೆ.ಈ ತರಹದ ಉದಾಹರಣೆಗಳನ್ನು
ಲಕ್ಷ ಕೊಡಬಹುದು;ಯಾರೋ ಹುಟ್ಟಿಸಿದ ಸುಳ್ಳು ವದಂತಿಗೆ ಕಲ್ಲಿನ ಗಣಪತಿಗೆ ಹಾಲು ಕುಡಿಸಿದ ದೇಶವಿದು;ಅತ್ಯಂತ
ಬೇಗ ಸಮೂಹಸನ್ನಿಗೆ ಒಳಗಾಗುತ್ತದೆ.ಇಷ್ಟಕ್ಕೂ ನೀವು ನೀಡುವ ಆ ಅಗ್ಗದ ಮಾಸ್ಕುಗಳಿಂದ ಏನಾದರೂ ಪ್ರಯೋಜನೆ
ಇದೆಯಾ ಎಂದು ಪ್ರಶ್ನೆ ಹಾಕಿಕೊಂಡು ಉತ್ತರ ಕಂಡುಕೊಳ್ಳಲು ಯತ್ನಿಸಿದಾಗ...
“ಸದ್ಯಕ್ಕೆ
ಜನಗಳು ಹೋಮ್ ಕ್ವಾರೆಂಟೈನ್‌ನಲ್ಲಿ ಇರುವ ಅಗತ್ಯವಿದೆ.ಅದೆಲ್ಲದಕ್ಕೂ ಹೆಚ್ಚು ಅಂದರೆ ಜನ ಸಾಮಾಜಿಕ
ಅಂತರ ಕಾಯ್ದುಕೊಳ್ಳಬೇಕು.ಇಲ್ಲಿ ಮುಖ್ಯವಾಗಿ ಜನಗಳಿಗೆ ಏನಾದರೂ ಸಹಾಯ ಮಾಡಲೇಬೇಕು ಎನ್ನುವುದಾದರೆ
ಸ್ಯಾನಿಟೈಜೆಷನ್ ಬಗ್ಗೆ ಅರಿವು ಮೂಡಿಸಬೇಕು.ಶುಚಿತ್ವಕ್ಕೆ ಮಹತ್ವ ಕೊಡುವುದನ್ನು ಪ್ರತಿಯೊಬ್ಬರಿಗೂ
ತಿಳಿಸಬೇಕು.ಪ್ರತಿ ವಸ್ತುವನ್ನು ಮುಟ್ಟಿದಾಗಲೂ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.ತಮ್ಮ
ಕೈಗಳನ್ನು ವೈರಸ್ ದೇಹ ಪ್ರವೇಶಿಸಬಹುದಾದ ಕಣ್ಣು,ಬಾಯಿ,ಮೂಗಿನ ಹತ್ತಿರ ತಾರದೆ ಇರಬೇಕು.ಮುಖ್ಯವಾಗಿ
ಪರಸ್ಪರರು ಅಂತರ ಕಾಯ್ದುಕೊಳ್ಳಬೇಕು.ಈ ಮಾಸ್ಕಿನಿಂದ ಏನೂ ಪ್ರಯೋಜನೆ ಇಲ್ಲ.ಮಾಸ್ಕು ಯಾರು ಬಳಸಬೇಕು
ಎಂದರೆ ಕೆಮ್ಮು,ನೆಗಡಿ,ಜ್ವರ ಇರುವಂತಹ ವ್ಯಕ್ತಿಗಳು ಬಳಸಬೇಕು.ಏಕೆಂದರೆ,ಕೆಮ್ಮಿದಾಗ,ಸೀನಿದಾಗ ಆತನ
ಮೂಗು ಮತ್ತು ಬಾಯಿಯಿಂದ ಹೊರ ಚಿಮ್ಮುವ ಕಣಗಳು ಇತರ ವ್ಯಕ್ತಿಗೆ ಸ್ಪ್ರೆಡ್ ಆಗದಿರಲಿ ಎಂದು.ನಾರ್ಮಲ್
ವ್ಯಕ್ತಿಗೆ ಅದರ ಅಗತ್ಯವಿಲ್ಲ.ಒಂದು ವೇಳೆ ನಾರ್ಮಲ್ ವ್ಯಕ್ತಿ ಮಾಸ್ಕ ಧರಿಸಿದಾಗ ಪಕ್ಕದಲ್ಲಿ ಕರೋನಾ
ಸೋಂಕಿತ ವ್ಯಕ್ತಿ ಇದ್ದರೆ ಮಾಸ್ಕಿನಿಂದ ಸೋಂಕು ತಗಲುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಈ ಮಾಸ್ಕಿನಿಂದ
ಇನ್ನೊಂದು ತೊಂದರೆ ಇದೆ;ಒಂದು ಮಾಸ್ಕನ್ನು ಹೆಚ್ಚೆಂದರೆ ಆರು ತಾಸು ಬಳಸಬೇಕು.ಅದರ ಬಳಕೆಯ ನಂತರ ಅದನ್ನು
ನಾಶ ಮಾಡಬೇಕು.ತುಂಬಾ ಜನ ಕೊಂಡ ಒಂದು ಮಾಸ್ಕನ್ನು ದೀರ್ಘಾವದಿ ಬಳಸುತ್ತಾರೆ,ತಪ್ಪದು.ಮಾಸ್ಕನ್ನು ಆರು
ತಾಸು ಮಾತ್ರ ಬಳಸಬೇಕು.ಕೊನೆಯದಾಗಿ ಒಂದು ಮಾತು:ನಾರ್ಮಲ್ ವ್ಯಕ್ತಿಗಳು ಮಾಸ್ಕ್ ಬಳಸುವ ಅಗತ್ಯವಿಲ್ಲ.ಡಸ್ಟ್
ಅಲರ್ಜಿಯಂತಹ ತೊಂದರೆ ಇರುವವರು ಮಾಸ್ಕ್ ಬಳಸಬೇಕು.ಈ ಕಲುಷಿತ ವಾತಾವರಣದಲ್ಲಿ ಮಾಸ್ಕ್ ಬಳಸುವ ಅಗತ್ಯ
ಕಡ್ಡಾಯವಾಗಿದ್ದರೂ ಈ ಕರೋನಾ ನೆಪಕ್ಕೆ ಮಾಸ್ಕ್ ಬಳಸುವುದು,ದೀರ್ಘಾವದಿ ಒಂದೇ ಮಾಸ್ಕನ್ನು ಬಳಸುವುದು,ಬಳಸಿದ
ಮಾಸ್ಕನ್ನು ಎಲ್ಲಂದರಲ್ಲಿ ಬಿಸಾಕುವುದು ತುಂಬಾ ಅಪಾಯ!”ಎಂದರು ನನ್ನ ವೈದ್ಯ ಸ್ನೇಹಿತರೊಬ್ಬರು.ಇದು
ಸತ್ಯ ಕೂಡಾ.ಜಾಗತಿಕವಾಗಿ ಬಹುತೇಕ ವೈದ್ಯರ ಅಭಿಪ್ರಾಯ ಕೂಡಾ ಇದೇ ಆಗಿದೆ.ನಾರ್ಮಲ್ ವ್ಯಕ್ತಿ ಕೆಮ್ಮಿದಾಗ,ಸೀನಿದಾಗ
ಯಾವ ವೈರಸ್ ಸ್ಪ್ರೆಡ್ ಆಗುತ್ತವೆ ಹೇಳಿ?ಆದರೆ ಸೋಂಕಿತರು ಮಾತ್ರ ಕಡ್ಡಾಯವಾಗಿ ಮಾಸ್ಕ್ ಬಳಸಲೇಬೇಕು;ಬರೀ
ಮಾಸ್ಕ್ ಬಳಸುವುದಷ್ಟೇ ಅಲ್ಲ;ಅವರು ಸಾಮಾಜಿಕ ಸ್ವಾಸ್ಥ್ಯವನ್ನೂ ಕಾಪಾಡಬೇಕು.ಹೋಮ್ ಕ್ವಾರೆಂಟೈನ್
ಅಥವಾ ಸರ್ಕಾರದ ನಿಗಾವಣೆಗೆ ಒಳಪಡಬೇಕು.
ಏನಿದು ಮಾಸ್ಕ್ ಉಚಿತ ವಿತರಣೆಯ ಹಿನ್ನೆಲೆ?ಮಾಸ್ಕ್
ವಿತರಿಸುವ ಮೂಲಕ ಜನರನ್ನು ಕಾಪಾಡಿದಂತಾಗುತ್ತದಾ?ಮಾಸ್ಕ್ ಜೀವನಾವಶ್ಯಕ ವಸ್ತುವಾ?ಬಿಡಿ ಸ್ವಾಮಿ ನಾಟಕ!ಸಮಾಜಕ್ಕೆ,ಯಾವ
ಮೂಲಭೂತ ಸೌಕರ್ಯಗಳನ್ನೂ ಹೊಂದಿರದ ಅನೇಕ ಹಳ್ಳಿಗಳು ಭಾರತದಲ್ಲಿವೆ.ಅವರಿಗಿನ್ನೂ ತಮ್ಮ ಮೂಲಭೂತ ಹಕ್ಕುಗಳೇ
ಲಭ್ಯವಾಗಿಲ್ಲ.ಕೇಂದ್ರ ಸರ್ಕಾರ ಕೆಲವು ಸೌಲಭ್ಯಗಳನ್ನು ಘೋಷಿಸುವುದರ ಮೂಲಕ ಜನರ ಜೊತೆ ನಾವಿದ್ದೇವೆ
ಎನ್ನುವ ವಿಶ್ವಾಸ ತುಂಬುವ ಪ್ರಯತ್ನ ನಡೆಸಿತು.ನಿಮಗೆ ಗೊತ್ತೇ?ಭಾರತದ ಬಹುತೇಕ ಹಳ್ಳಿಗರಿಗೆ ಕಾರ್ಮಿಕ
ಇಲಾಖೆ ಎನ್ನುವುದೊಂದು ಇದೆ ಎನ್ನುವುದೇ ಗೊತ್ತಿಲ್ಲ.ತುಂಬಾ ಜನ ಜನಧನ್ ಖಾತೆಯನ್ನು ಹೊಂದಿಲ್ಲ.ಕೆಲವರ
ಹತ್ತಿರ ಇನ್ನೂ ಆಧಾರ್ ಕಾರ್ಡೂ ಇಲ್ಲ.ಯಾವ ಬಡವನಿಗೆ ಈ ಸಂದರ್ಭದಲ್ಲಿ ಸರ್ಕಾರದ ಔದಾರ್ಯ ತಲುಪುತ್ತದೆ?ಹೀಗಿರುವಾಗ
ಸಮಾಜ ಸೇವೆಯನ್ನು ಮಾಡಲೇಬೇಕು ಎನ್ನುವ ಆಶಯ ಇರುವವರು ಪ್ರಸ್ತುತ ಸಂದರ್ಭದಲ್ಲಿ ಜನರಿಗೆ ಏನು ಅಗತ್ಯ
ಎನ್ನುವುದರ ಕುರಿತು ಯೋಚಿಸಬೇಕು.ಹಳ್ಳಿಗರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುತ್ತವೆ,ಮಹಿಳೆಯರಿಗೆ
ವಿಟಮಿನ್ ಮಾತ್ರೆಗಳ ಅಗತ್ಯ ಇರುತ್ತದೆ,ಗರ್ಭಿಣಿ ಸ್ತ್ರೀಯರಿರುತ್ತಾರೆ;ಅವರ ನಿಗಾವಣೆ ಅತ್ಯಗತ್ಯ.
ಇದೆಲ್ಲದಕ್ಕೂ ಮಿಗಿಲು ಸ್ಯಾನಿಟೈಜೆಷನ್‌ನ ಅರಿವು
ಮೂಡಿಸುವುದು!ಪದೇ ಪದೇ ಕೈತೊಳೆದುಕೊಳ್ಳುವುದರ ಬಗ್ಗೆ ಮನ ಮುಟ್ಟುವ ಹಾಗೆ ತಿಳಿಸುವುದು,ಸಾಮಾಜಿಕ ಅಂತರ
ಮತ್ತು ಬೇರೆ ವ್ಯಕ್ತಿಯನ್ನು ಮನೆಯೊಳಕ್ಕೆ ಕರೆದುಕೊಳ್ಳುವುದನ್ನು ತಡೆಯುವುದು,ಮತ್ತು ವಲಸಿಗ ಕೂಲಿ
ಕಾರ್ಮಿಕರನ್ನು ಸೂಕ್ತ ತಪಾಷಣೆಯ ಹೊರತು ಗ್ರಾಮ ಪ್ರವೇಶಿಸದ ಹಾಗೆ ನಿರ್ಬಂಧಿಸುವುದು.ಸದ್ಯಕ್ಕೆ ಸಮಾಜ
ಸೇವಕರ ಅಗತ್ಯವಿಲ್ಲ ಜನಕ್ಕೆ.ಪೋಲಿಸ್ ಇಲಾಖೆ,ಆರೋಗ್ಯ ಸಹಾಯಕರು,ಗ್ರಾಮಪಂಚಾಯತಿ,ಗ್ರಾಮಲೆಖ್ಖಿಗರ
ಅಗತ್ಯವಿದೆ.ಇದರ ಜೊತೆ ಜನರ ಸಹಕಾರವೂ ಅತ್ಯಗತ್ಯ.ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಭಾಗದವಿದ್ಯಾವಂತ
ಯುವಕರ ಹೆಗಲ ಮಹತ್ತರ ಜವಬ್ದಾರಿ ಇದೆ.ಅಶಿಕ್ಷಿತರು,ಕೆಲ
ಮೊಂಡು ಜನಗಳಿಗೆ ಸೂಕ್ತ ರೀತಿಯ ತಿಳುವಳಿಕೆ ನೀಡಬೇಕು.ಜನ ಸಾಮೂಹಿಕವಾಗಿ ಸೇರುವುದನ್ನು ನಿರ್ಬಂಧಿಸಬೇಕು.ಜನ
ಬುದ್ದಿಗೇಡಿಗಳ ಹಾಗೆ ವರ್ತಿಸಿದಾಗ ಕೂಡಲೆ ಸಂಬಂಧಿಸಿದವರ ಗಮನಕ್ಕೆ ತರಬೇಕು.
ಬಿಡಿ,ಅಗ್ಗದ ಮಾಸ್ಕ್ ಹಂಚುವ ಆ ಮೂಲಕ ಬಿಟ್ಟಿ
ಪ್ರಚಾರ ಪಡೆಯುವ ಸ್ವಾರ್ಥವನ್ನು.ಸ್ವಾರ್ಥಕ್ಕೆ ಇದು ಸೂಕ್ತ ಕಾಲವಲ್ಲ.ಒಂದು ಉಡಾಫೆ ಇಡೀ ಊರನ್ನೇ ಸ್ಮಶಾನ
ಮಾಡಬಹುದು.ಈ ಮಾಸ್ಕ್ ಆರು ತಾಸಿನ ನಂತರ ಬದಲಾಯಿಸಬೇಕು.ನಿಮ್ಮಿಂದಲೇ ಹೊರಬಿದ್ದ ಕಣಗಳು ಅದರಲ್ಲಿ
ತುಂಬಿರುತ್ತವೆ.ಅದನ್ನು ಸೂಕ್ತ ರೀತಿಯಲ್ಲಿ ನಾಶ ಮಾಡಿ.ಮಾಸ್ಕ್ ಫ್ಯಾಷನ್ ಅಲ್ಲ.
ಕೊನೆಯದಾಗಿ:ಕರೋನಾ ವೈರಸ್ಸಿಗೆ ಮದ್ದಿಲ್ಲ ಎನ್ನುವುದೇ
ಆತಂಕಕಾರಿ ವಿಷಯವಾಗಿದೆ.ಅದು ನೆಗಡಿ ಪ್ರಬೇಧಕ್ಕೆ ಸೇರಿದ ಖಾಯಿಲೆ.ನೆಗಡಿಯೂ ತೀವ್ರವಾಗಿ ಬಾಧಿಸಿದಾಗ
ಶ್ವಾಸಕೋಶ ಸಂಬಂಧೀ ತೊಂದರೆಗಳು ಉಂಟಾಗುತ್ತವೆ.ಆ ವೈರಸ್ ಸೂಕ್ತ ಔಷಧಿಗಳಿಂದ ನಿಯಂತ್ರಣಕ್ಕೆ ಬರುತ್ತದೆ.ಈ
ವೈರಾಣಿಗೆ ಔಷಧಿ ಇಲ್ಲ.ವೈರಸ್ ಸೋಂಕಿತ ಪ್ರತಿ ವ್ಯಕ್ತಿಯೂ ಸಾಯುತ್ತಾನೆ ಅಂತ ಅರ್ಥವಲ್ಲ.ಸದ್ಯಕ್ಕೆ
ಇದಕ್ಕೆ ಏಕೆ ಹೆದರಬೇಕಾಗಿ ಬಂದಿದೆ ಎಂದರೆ ಇದರ ತೀವ್ರವಾದ ಹರಡುವಿಕೆಯ ಗುಣಕ್ಕಾಗಿ!ಯಾರಲ್ಲಿ ಹೆಚ್ಚು
ರೋಗನಿರೋಧಕ ಶಕ್ತಿ ಇದೆ,ಯಾರಲ್ಲಿ ಇಲ್ಲ ಎಂದು ನಿರ್ಧರಿಸುವುದು ಹೇಗೆ?ಅದಲ್ಲದೆ ಇದು ಅರವತ್ತಕ್ಕಿಂತ
ಮೇಲ್ಪಟ್ಟ ವಯಸ್ಸಿನ ಹಿರಿಯರಿಗೆ ಮಾರಣಾಂತಿಕವಾಗಿದೆ.ಇದೇ ಭಯವನ್ನು ಉಂಟು ಮಾಡಿದೆ.
ಏನೇ ಕಷ್ಟಗಳಿರಲಿ,ಭ್ರಾತೃತ್ವ,ಅಣ್ಣ ತಮ್ಮ,ತಂದೆ
ತಾಯಿ ಎನ್ನುವ ಭಾವನೆಗಳಿಂದ ಇಡೀ ದೇಶವೇ ಒಂದು ಕುಟುಂಬ ಎಂದು ಬದುಕುತ್ತಿರುವವರು ನಾವು.ಸ್ವರ್ಗ ಭೂಮಿ
ಇದು.ಇದು ಸ್ಮಶಾನವಾಗದಿರಲಿ ಎನ್ನುವುದು ಪ್ರಜಾ ಸ್ಪಂದನದ ಆಶಯ.
ಲಕ್ಷ್ಮೀಕಾಂತ ನಾಯಕ




