ವೈದ್ಯಲೋಕದ
ವಂಚನೆಯಲ್ಲಿ ಒಂದು ಸುತ್ತು...
“ಮನುಷ್ಯನ ದೇಹ
ನೈಸರ್ಗಿಕವಾಗಿರುವ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡಿತೆಂದರೆ ಆ ವ್ಯಕ್ತಿಯನ್ನು ಯಾರೂ
ಕಾಪಾಡಲಾರರು,ಡಾಕ್ಟರ್,ದೇವರು!”ಹಾಗಂತ ಹೇಳಿದರು;ನನ್ನ ಸ್ನೇಹಿತ ಮತ್ತು ವೈದ್ಯರಾಗಿರುವಂತವರು.ಆ
ಬ್ಯಾನಿ,ಈ ಬ್ಯಾನಿ,ಅಲ್ಲಿ ಚುಚ್ಚಿದಂಗ ಆಗ್ತದ,ಇಲ್ಲಿ ಚುಚ್ಚಿದಂಗ ಆಗ್ತದ ಅಂತ ನನ್ನ ಅನುಮಾನದ
ರೋಗಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನನಗವರು ಆ ಮಾತು ಹೇಳಿದರು;ಅದು ಸತ್ಯವೇ.ನನ್ನ ಫೇಸ್
ಬುಕ್ ವೈದ್ಯ ಉಪನ್ಯಾಸಕರೊಬ್ಬರು ಇದೆ ಮಾತನ್ನು ದೃಢೀಕರಿಸುತ್ತಾ ಔಷಧಿ ಎನ್ನುವುದು ವೈದ್ಯಲೋಕ
ಸೃಷ್ಟಿಸಿದ ಮೂಢನಂಬಿಕೆ;ಔಷಧಿಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದೇನೋ ನಿಜ,ಅವುಗಳಿಂದ
ದುಷ್ಪರಿಣಾಮಗಳೆ ಹೆಚ್ಚು.ಔಷಧಿಗಳಲ್ಲಿ ಹೆಚ್ಚು ಹೆಚ್ಚು ಅವಿಸ್ಕಾರಗಳನ್ನು ಮಾಡುತ್ತಿರುವಂತೆ
ರೋಗಗಳ ಸಂಖ್ಯೆ ಮರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.ಮತ್ತು ವೈದ್ಯವನ್ನು
ಉದ್ಯಮವಾಗಿಸಿಕೊಂಡಿರುವ ಕೆಲವರು ನೂರಾರು ಸಾವಿರಾರು ಕೋಟಿಯ ಒಡೆಯರಾಗುತ್ತಿದ್ದಾರೆ.ಔಷಧಿ
ಉತ್ಪಾದಕರು ಮತ್ತು ಅವುಗಳನ್ನು ಪ್ರಿಸ್ಕ್ರಿಪ್ಷನ್ ನಲ್ಲಿ ಬರೆಯುವ ವೈದ್ಯರು ಸೇರಿ ಇಡೀ ಮಾನವ
ಜಗತ್ತನ್ನು ವಂಚಿಸುತ್ತಿದ್ದಾರೆ.ಈ ಕುರಿತು ಅವೇರ್ನೆಸ್ ಬರಹಗಳನ್ನು ಬರೆದ ನನ್ನ ಮೇಲೆ ಅನೇಕ
ಷಡ್ಯಂತ್ರಗಳು ನಡೆದವು ಮತ್ತು ಕೇಸೂ ದಾಖಲಿಸುವ ಪ್ರಯತ್ನಗಳು ನಡೆದವು ಎಂದು ಒಮ್ಮೆ ಅವರು
ನನ್ನೊಂದಿಗೆ ಹೇಳಿಕೊಂಡಿದ್ದರು.ಅದು ಸತ್ಯವೆ,ವೈದ್ಯಲೋಕದಲ್ಲಿ ಈಗಿನಂತೆ ಬಗೆಬಗೆಯ ಔಷಧಿಗಳ
ಅವಿಸ್ಕಾರವಾಗದ ದಿನಗಳಲ್ಲಿ ಮನುಷ್ಯರು ಆರೋಗ್ಯವಾಗಿಯೇ ಇದ್ದರು;ನೂರು ವರ್ಷಗಳ ಸುದೀರ್ಘ
ಬದುಕನ್ನು ಸಾಗಿಸುತ್ತಿದ್ದರು.ನೂರಾ ಎಂಟು ವರ್ಷಗಳ ಸುದೀರ್ಘವಾಗಿ ಬದುಕಿದ ನಮ್ಮೂರಿನ
ವ್ಯಕ್ತಿಯೊಬ್ಬ ಉಣ್ಣುವಾಗ ತಿನ್ನುವಾಗ ಮಣ ಮಣ ಸಕ್ಕರೆ ತಿನ್ನುತ್ತಿದ್ದ;ಆತ ನೂರಾ ಎಂಟು ವರ್ಷ
ಪೂರೈಸಿ ಸಾಯುವವರೆಗೆ ಆತ ಆಸ್ಪತ್ರೆಗಳಿಗೆ ಹೋಗಲಿಲ್ಲ.ಸಕ್ಕರೆ ಖಾಯಿಲೆ,ಹೃದಯದ ಒತ್ತಡ,ಕಿಡ್ನಿ
ವೈಫಲ್ಯ ಎನ್ನುವ ಹೆಸರಿನ ರೋಗದ ನೆರಳಿನಲ್ಲಿ ಬದುಕಲಿಲ್ಲ.ಮತ್ತವು ಆತನ ಹತ್ತಿರಕ್ಕೂ
ಬರಲಿಲ್ಲ;ಅಸಲು ಆ ಪದಗಳ ಪರಿಚಯವೇ ಆತನಿಗೆ ಆಗಲಿಲ್ಲ.ಆತ ಮನೆಬಿಟ್ಟು ಹೊರ
ಬರುತ್ತಿರಲಿಲ್ಲ.ನಾಲಕ್ಕೆ ನಾಲ್ಕು ಹೆಜ್ಜೆ ಆತ ನಡೆದಿರುವುದನ್ನು ನಾನು ನೋಡಲಿಲ್ಲ.ಸಾಯುವವರೆಗೆ
ಸುಖವಾಗಿ ಇದ್ದು ಸತ್ತ.ಇದು ವೈದ್ಯಲೋಕದ ಅಚ್ಚರಿ ಅಲ್ಲದೆ ಮತ್ತೇನು?
ಅಸಲು ಮೂರು ನಾಲ್ಕು
ದಶಕಗಳ ಹಿಂದೆ ಆಸ್ಪತ್ರೆಗಳೆ ಇರಲಿಲ್ಲ.ತಾಲ್ಲೂಕಿಗೆ ಒಂದೋ ಎರಡೋ ಅವತ್ತಿನ ಮೌಲ್ಯಯುತ ಎಂಬಿಬಿಎಸ್
ಶಿಕ್ಷಣ ಪಡೆದ ವೈದ್ಯರಿರುತ್ತಿದ್ದರು;ಧನದಾಹ ಇರುತ್ತಿರಲಿಲ್ಲ.ವೈದ್ಯವನ್ನು ಒಂದು ಸೇವೆ
ಎನ್ನುವಂತೆ ನಿರ್ವಹಿಸುತ್ತಿದ್ದರು;ಕಿತ್ತು ತಿನ್ನುವ ಬಡತನದ ಮಧ್ಯೆ ಆ ಕಾಲಘಟ್ಟದಲ್ಲಿ
ಆಸ್ಪತ್ರೆಗಳಿಗೆ ಹೋಗುವವರಾದರು ಯಾರು?ಪೂಜಾರಿ,ಮುಲ್ಲಾ ಸಾಹೇಬ,ನಾಟಿ ವೈದ್ಯರು ಮಂತ್ರಿಸಿ ಕೊಡುವ
ಲಿಂಬೆಕಾಯಿಯೇ ಬಹುತೇಕ ರೋಗಗಳನ್ನು ವಾಸಿ ಮಾಡುತ್ತಿತ್ತು;ಮತ್ತದು ಜನ ಜೀವನವನ್ನು
ಆರೋಗ್ಯವಂತವಾಗಿ ಸದೃಢವಾಗಿಟ್ಟಿತ್ತು!ಆಗ ಜನಗಳಿಗೆ ವರ್ಷಕ್ಕೊಮ್ಮೆಯೊ ಎರಡು ಸಲವೋ ಜ್ವರ
ಬರುತ್ತಿದ್ದವು;ಪಿತ್ತಗ್ರಸ್ತ ಜ್ವರ;ಮನುಷ್ಯನ ಬಹು ಆರೋಗ್ಯ ಸಮಸ್ಯೆಗಳಿಗೆ ವಾತಾ-ಪಿತ್ತ-ಕಫಗಳ
ಅಸಂಬದ್ಧತೆಯೇ ಕಾರಣ ಎಂದು ನಿರ್ಧರಿಸಲಾಗುತ್ತಿತ್ತು.ನಾಡಿ ಪರೀಕ್ಷೆ ಮಾಡಿ ರೋಗ ನಿರ್ಧಾರ
ಮಾಡಲಾಗುತ್ತಿತ್ತು.ಶುಂಠಿ,ಜೀರಗೆ,ಮೆಣಸು,ಅರಿಷಿಣಗಳ ಸರಿಯಾದ ಬಳಕೆಯ ಚಿಕಿತ್ಸೆ
ಹೇಳಲಾಗುತ್ತಿತ್ತು.ಜನ ಆರೋಗ್ಯ ಸುಧಾರಿಸುತ್ತಿತ್ತು.ದೊಡ್ಡ ಖಾಯಿಲೆ ಅಂತ ಯಾವೂ
ಬರುತ್ತಿರಲಿಲ್ಲ.ಬರುವಂತಹವು ಎಂದರೆ ಪ್ಲೇಗು,ಕಾಲಾರಾ,ಮಲೇರಿಯಾ,ಟೈಪಾಯ್ಡು...ಈ ರೋಗಗಳು ಬಂದಾಗ
ಮನುಷ್ಯ ಉಳಿಯುತ್ತಿರಲಿಲ್ಲ.ದೇವರು ಇಷ್ಟೇ ಆಯುಷ್ಯ ಬರೆದಿದ್ದನೇನೋ ಎಂದು ಸುಮ್ಮನಾಗಿ
ಬಿಡುತ್ತಿದ್ದರು.ಈಗಿನಂತೆ ಆವಾಗ ಘನ ಪಂಡೀತರಿರಲಿಲ್ಲವಲ್ಲಾಎಮ್ ಆರ್ ಸ್ಕ್ಯಾನ್ ಮಾಡಿಸಿಕೊಂಡು
ಬನ್ನಿ,ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ,ರಕ್ತ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎನ್ನುವ
ಲಕ್ಷ ಟೆಸ್ಟುಗಳು ಹಾಗ ಎಲ್ಲಿದ್ದವು?ಈಗ ಪರೀಕ್ಷೆಗೆಂದು ಹೊರಟರೆ ಹತ್ತಾರು ಲಕ್ಷ ರೂಪಾಯಿಗಳ
ಟೆಸ್ಟುಗಳಿವೆ;ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಮಾಡಿಸಲೇಬೇಕು;ಇಲ್ಲವೆಂದರೆ ರೋಗ
ನಿರ್ಣಯವಾಗುವುದಿಲ್ಲ.
ಇದೇನು ಎಲ್ಲಾ ಬಿಟ್ಟು
ಈ ವೈದ್ಯಕೀಯ ಪ್ರಹಸನ ಏಕೆ ಶುರುಹಚ್ಚಿಕೊಂಡ ಎನ್ನುವ ಸಂದೇಹ ಮೂಡುತ್ತಿದೆಯಾ,ನಿಜ;ಕೆಲವೊಂದು
ಆಸಕ್ತಿಕರ ಘಟನೆಗಳು ಈ ಬರಹವನ್ನು ಬರೆಯುವಂತೆ ಮಾಡಿದವು.ಎಷ್ಟೊಂದು ಮೋಸವಿದೆಯಲ್ಲವೇ
ವೈದ್ಯಲೋಕದಲ್ಲಿ ಎನ್ನುವ ನನ್ನ ಪ್ರಶ್ನೆಗೆ ಉತ್ತರಿಸಿಕೊಳ್ಳುವ ಪ್ರಯತ್ನವೇ ಈ ಲೇಖನ.
ಅದೊಂದು ದಿನ ನನ್ನ
ಹೆಳೆಯನೊಬ್ಬ ಮಾವ ಅದೇನೋ ಎದೆಯಲ್ಲಿ ನೋಯಿಸಿದಂತೆ ಅನ್ನಿಸುತ್ತಿದೆ ಎಂದ.ಸಾಯಂಕಾಲದ ಹೊತ್ತು;ಆರು
ಗಂಟೆಯಾಗಿತ್ತು.ಕತ್ತಲು ನಿಧಾನವಾಗಿ ಆವರಿಸುತ್ತಿತ್ತು.ಬಾ ಹೋಗೋಣ ಆಸ್ಪತ್ರೆಗೆ ಎಂದೆ.ಇಬ್ಬರೂ
ಸೇರಿ ಆಸ್ಪತ್ರೆ ತಲುಪಿದೇವು.ಡಾಕ್ಟರ್ ಆತ್ಮೀಯರೆ,ಕೂಡಲೇ ಪರೀಕ್ಷೆಗೆ ಒಳಪಡಿಸಿದರು;ಇಸಿಜಿ
ಮಾಡುತ್ತಾ ಮೊದಲು ಯಾವಾಗಾದರೂ ಈ ರೀತಿ ಆಗಿತ್ತಾ ಎಂದು ಕೇಳಿದರು,ಮೊದಲು ಇಸಿಜಿ ಮಾಡಿದ
ವರದಿಗಳಿವೆಯಾ ಎಂದರು.ಅವರ ಮುಖದಲ್ಲಿ ಅನುಮಾನವಿತ್ತು;ನಮ್ಮ ಹತ್ತಿರ ಇದ್ದವು;ಅವುಗಳನ್ನು ಮತ್ತತೆ
ಮನೆಗೆ ಬಂದು ಹುಡುಕಿ ಕೊಟ್ಟೇವು.ಎರಡೂ ಇಸಿಜಿ ವರದಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ “ಏನೋ
ವ್ಯತ್ಯಾಸ ಕಾಣಿಸುತ್ತಿದೆ,ರಾತ್ರಿಯ ಹೊತ್ತು ತುಂಬಾ ಅಪಾಯ,ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು
ನಕಾರಾತ್ಮಕವಾಗಿ ಪರಿಗಣಿಸುವಂತಿಲ್ಲ.ಬೆಟರ್ ಎಂದರೆ ಹೃದಯ ರೋಗದ ಆಸ್ಪತ್ರೆಗೆ ಇವತ್ತು
ದಾಖಲಾಗಬೇಕು ನೀವು,ಕೆಲವೊಂದು ಪರೀಕ್ಷೆಗಳ ಅಗತ್ಯವಿದೆ”ಎಂದರು;ರೋಗಿ ಗಾಬರಿಗೊಂಡ,ಆತತನ ಮುಖ
ಕಪ್ಪಾಗುತ್ತಿರುವುದನ್ನು,ಹೆದರಿಕೆಯಿಂದ ಕಂಪಿಸುತ್ತಿರುವುದನ್ನು ನಾನು ಗಮನಿಸಿದೆ.ತಡಮಾಡಲಿಲ್ಲ
ನಾವು;ವೈದ್ಯರ ಶಿಫಾರಸು ಪತ್ರ ಬರೆಸಿಕೊಂಡು ಜಿಲ್ಲಾ ಕೇಂದ್ರಕ್ಕೆ ಬಂದು ಬಿಟ್ಟೇವು;ಅಲ್ಲೋ
ರೋಗಿಯನ್ನು ನೆಲದ ಮೇಲೆ ಪಾದ ಊರಲಿಕ್ಕೇ ಬಿಡಲಿಲ್ಲಅವನು ಚೆನ್ನಾಗಿಯೇ ಇದ್ದಾನೆ;ಯಾವ ಸಮಸ್ಯೆಯೂ
ಇಲ್ಲ.ವೀಲ್ ಚೇರಿನ ಮೇಲೆ ಕೂಡಿಸಿಕೊಂಡು ಟೆಸ್ಟಿಂಗ್ ಟೇಬಲ್ಲಿಗೆ ಕೊಂಡೊಯ್ದು ಟೆಸ್ಟಿಂಗ್
ಟೇಬಲ್ಲಿನ ಮೇಲೆಯೇ ಹಲವಾರು ಪರೀಕ್ಷೆಗಳನ್ನು ಮಾಡಿದರು!ಗಾಬರಿಯಿಂದ ಓಡಾಡಿದರು;ಅಂಜಿಯೋಗ್ರಫಿ
ಮಾಡಬೇಕು,ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಬೇಕು,ಇಪ್ಪತ್ತು ನಾಲ್ಕು ಗಂಟೆಗಳ ಅಬ್ಸರ್ವೇಷನ್
ಅಗತ್ಯವಿದೆ ಎಂದು ಐಸಿಯೂನಲ್ಲಿ ದಾಖಲಿಸಿದರು;ನಾನು ದಂಗಾಗಿ ಹೋದೆ,ಇಷ್ಟರಲ್ಲಿ ಹತ್ತು ಸಾವಿರ ಪೇ
ಮಾಡಿದ್ದೆ.ಗೆಳೆಯ ಐಸಿಯೂನಲ್ಲಿ ಸಂತೋಷವಾಗಿ ಮೈತುಂಬಾ ವೈರಿನ ನಳಿಕೆಗಳನ್ನು ಫಿಕ್ಸ್
ಮಾಡಿಸಿಕೊಂಡು ಸಂತೋಷವಾಗಿ ಮಲಗಿರುವಾಗ ನಾನು ಆ ಆಸ್ಪತ್ರೆಯ ವಿಸಿಟರ್ಸ್ ಹಾಲಿನಲ್ಲಿ ಕುಳಿತು
ಯೋಚಿಸತೊಡಗಿದೆ.
ಸುಮಾರು ಹತ್ತುಕೋಟಿಗಳ
ಮಹುಮಹಡಿ ಕಟ್ಟಡ,ನೂರಾರು ಸುಸಜ್ಜಿತ ಕೊಠಡಿಗಳು,ತುಂಬಾ ಬೆಲೆಬಾಳುವ ಪೀಠೋಪಕರಣಗಳು,ಕೋಟಿಗಟ್ಟಲೆ
ಬೆಲೆಬಾಳುವ ಟೆಸ್ಟಿಂಗ್ ಉಪಕರಣಗಳು,ಅವಗಳಿಗೆ ಅವುಗಳ ಅಧ್ಯಯನ ಮಾಡಿದ ರೋಗ ನಿರ್ಧಾರಕ
“ನಿಪುಣ”ತಜ್ಞರು,ನೂರಾರುಗಟ್ಟಲೆ ಇರುವ ಉಪಚಾರಿಕರು,ನರ್ಸುಗಳು,ಸೇವಕರು,ಬೃಹತ್ ಪ್ರಮಾಣದ
ಔಷಧಾಲಯ,ನೋಟು ಎಣಿಸುವ ಮೆಷಿನ್..ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ.ಒಬ್ಬ ಕಸಗುಡಿಸುವವನಿಗೂ
ಸದ್ಯದ ವರ್ತಮಾನದಲ್ಲಿ ಹತ್ತಾರು ಸಾವಿರ ಸಂಬಳ ಕೊಡಬೇಕು;ಈ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ
ದಿನವೊಂದಕ್ಕೆ ಹತ್ತಿಪ್ಪಪತ್ತು ಲಕ್ಷ ರೂಪಾಯಿಗಳ ವೈಹಿವಾಟು ಮಾಡಲೇಬೇಕು;ಹೇಗೆ ಮಾಡಬೇಕು?
ಮರುದಿನ ಬೆಳಿಗ್ಗೆ
ಬಿಲ್ ಸೆಟಲ್ ಆದ ಮೇಲೆ ಡಾಕ್ಟರ್, “ದೊಡ್ಡ ಸಮಸ್ಯೆ ಏನೂ ಇಲ್ಲ,ಹೃದಯದ ವಾಲೊಂದು ಕೊಂಚ
ಚಪ್ಪಟೆಯಾಗಿದೆ.ಇದಕ್ಕೆ ಆಪರೇಷನ್ ಅಗತ್ಯವಿಲ್ಲ.ಮೆಡಿಸಿನ್ ಮುಖಾಂತರ ಸರಿ ಹೋಗುತ್ತದೆ,ಆದರೆ
ಪ್ರತಿತಿಂಗಳು ತಪ್ಪದೆ ಬರಬೇಕು”ಎಂದ.ಅದಾಗಲೇ ಬಿಲ್ಲು ಇಪ್ಪತ್ತೆರಡು ಸಾವಿರವಾಗಿತ್ತು!ಪ್ರತಿ ತಿಂಗಳು
ಆಗುವ ಖರ್ಚು ನಾಲ್ಕು ಸಾವಿರ ಎಂದ,ಮಾತ್ರೆಗಳನ್ನು ತಪ್ಪಿಸಬಾರದು ಎಂದ.ನನ್ನ ಸ್ನೇಹಿತನನ್ನು
ಐಸಿಯೂನಲ್ಲಿ ದಾಖಲಿಸಿ ಗ್ಲುಕೋಸ್ ಬಾಟಲಿ ತಗುಲಿಸಿ ಅದರೊಳಗೆ ಔಷಧಿ ಹಾಕುವಾಗ ನಾನು ಔಷಧಿಗಳನ್ನು
ಪರಿಶೀಲಿಸುತ್ತಲೇ ಇದ್ದೆ.ಒಂದು ಸಿಪ್ರೊಪ್ಲಾಕ್ಸಾಸಿನ್ ಎನ್ನುವ ಆಂಟಿಬಯೋಟಿಕ್ ಮತ್ತು ಕೆಲವು
ನೋವು ನಿವಾರಕ ಇಂಜೆಕ್ಷನ್ ಮತ್ತು ಪಿತ್ತ ನಿವಾರಕ ಪೆಂಟಾಪ್ರೊಜೋಲ್ ಇಂಜೆಕ್ಷನ್ ಹೊರತು ನನಗೆ
ತಿಳಿಯದ ಯಾವ ಔಷಧಿಯನ್ನೂ ಹಾಕಿರಲಿಲ್ಲ!ಇಪ್ಪತ್ತೆರಡು ಸಾವಿರ ಬಿಲ್ ಆಗಿತ್ತು;ಬರೀ ಒಂದು
ರಾತ್ರಿಗೆ!ಹಾಹ್ಹಾ ವೈದ್ಯಲೋಕವೇ ಎಂದು ಉದ್ಗರಿಸಿದ್ದೆ ಮನಸ್ಸಿನಲ್ಲಿ!
ಇಷ್ಟಕ್ಕೂ ಆಗಿದ್ದೇನು
ಗೊತ್ತೆ?ದೀಪಾವಳಿಯ ಲಕ್ಷ್ಮೀ ಪೂಜೆಯಲ್ಲಿ ನಮ್ಮ ಕಡೆ ಮೂರ್ಖರೊಂದು ಪದ್ದತಿಯೊಂದನ್ನು
ಪಾಲಿಸುತ್ತಾರೆ.ಈ ಹಳ್ಳಿಯಲ್ಲಿ ಸಣ್ಣಪುಟ್ಟ ಅಂಗಡಿಗಳಿರುತ್ತವೆ,ಬೀಡಿ ಸಿಗರೇಟು ಮಾರುವ
ಅಂಗಡಿಗಳು;ಅವು ಸಿನ್ಸಿಯರ್ ಆಗಿ ಲಕ್ಷ್ಮಿಗೆ ಪೂಜೆ ಮಾಡುತ್ತವೆ;ದೀಪಾವಳಿಗೆ!ಹಾಗೆ ಮಾಡಿದರೆ
ಅವರಿಗೆ ಲಕ್ಷ್ಮಿ ಒಲೆಯುತ್ತಾಳೆ.ಇದೇ ಸಂದರ್ಭದಲ್ಲಿ ಲಕ್ಷ್ಮಿ ಅನೇಕರಿಗೆ ಒದೆಯುತ್ತಾಳೆ!ಹೇಗೆ
ಅಂತೀರಾ?ಈ ಮೂರ್ಖರು ಊರಿನ ಮೂರ್ಖರನ್ನೆಲ್ಲಾ ಪೂಜೆಗೆ ಆಹ್ವಾನಿಸಿ ರಾತ್ರಿ ಇಡೀ ಇಸ್ಪೀಟು
ಆಡಿಸುತ್ತಾರೆ.ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಈತನೂ ರಾತ್ರಿ ಇಡೀ ಮದ್ಯ
ಸೇವಿಸಿ,ಸಿಗರೇಟು,ಗುಟಕಾ ತಿನ್ನುತ್ತಾ ನಿದ್ದೆಗೆಟ್ಟು ಇಸ್ಪೀಟು ಆಡಿದ್ದಾನೆ.ನಿದ್ದೆ ಇರದ
ಕಾರಣಕ್ಕೆ ಅನೇಕ ದುಶ್ಚಟಗಳನ್ನು ಮಾಡಿದ್ದಕ್ಕೆ,ಹಣ ಸೋತದ್ದಕ್ಕೆ ತಿಂದ ಅನ್ನ
ಕರಗಿಲ್ಲ.ಲಕ್ಷ್ಮಿಯನ್ನು ಒಲೆಸಿಕೊಳ್ಳುವವರು ಸಮೃದ್ಧ ಹೋಳಿಗೆಯ ಊಟ ಹಾಕಿಸಿದ್ದಾರೆ.ಅದು
ಅಜೀರ್ಣವಾಗಿ ವಿಪರೀತ ಪಿತ್ತವಾಗಿ ತಳಮಳ ಶುರುವಾಗಿದೆ.ಇಂತಿರಲು ಎದೆ ನೋಯಿಸದೆ
ಇದ್ದೀತೆ?ಇದಕ್ಕಾಗಿ ಮಲ್ಟಿಸ್ಪೆಷಲ್ ಆಸ್ಪತ್ರೆಗೆ ನಾವು ಕಟ್ಟಿದ ದಂಡ ಇಪ್ಪತ್ತೆರಡು ಸಾವಿರ
ರೂಪಾಯಿಗಳು;ಮತ್ತು ಒಂದು ಭಯ!ಇದು ವೈದ್ಯಲೋಕದ ಅಚ್ಚರಿ!
ಇಂಥವೇ ಅನೇಕ
ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ,ಸತ್ತು ಹೋದ ರೋಗಿಗಳನ್ನು ಹತ್ತಾರು ದಿನ ಹವಾನಿಯಂತ್ರಿತ
ಕೊಠಡಿಯಲ್ಲಿಟ್ಟು ದುಡ್ಡು ಸುಲಿಯುವುದನ್ನು ಸುಲಿಯುತ್ತಿರುವುದನ್ನು ನಾನು ಕಂಡಿದ್ದೇನೆ.ಬೀಡಿ
ಸಿಗರೇಟು ವಿಪರೀತ ಸೇದಿ ಮಲಬದ್ಧತೆಗೆ ಗುರಿಯಾಗಿ ತಿಣುಕಿ ಮಲವಿಸರ್ಜನೆ ಮಾಡುತ್ತಾ ರಕ್ತ
ಬಂದದ್ದನ್ನೆ ಆತಂಕ ಮಾಡಿಕೊಂಡು ವಂಚಕ ವೈದ್ಯರ ಜಾಲಕ್ಕೆ ಸಿಲುಕಿ ಗುದ ಕೊಯ್ಯಿಸಿಕೊಂಡವರು
ಅನೇಕರಿದ್ದಾರೆ.ಅದಕ್ಕೊಂದು ಉದಾಹರಣೆ ನಾನೇ!ಒಬ್ಬ ಆರ್ ಎಂಪಿ ಎಂದು ಹೇಳಿಕೊಳ್ಳುವ ಡಾಕ್ಟರ್
ನನ್ನು ಶಾಣ್ಯೆ ಎಂದು ಭಾವಿಸಿ ಆತನ ಸಲಹೆಯ ಮೇರೆಗೆ ದ್ರೋಹಿ ಮತ್ತು ನಕಲಿ ಶಸ್ತ್ರ ಚಿಕಿತ್ಸಕನ
ಮುಖಾಂತರ ಗುದನಾಳದ ಆಪರೇಷನ್ ಮಾಡಿಸಿಕೊಂಡಿದ್ದೆ.ಇಪ್ಪತ್ತು ಸಾವಿರ ಕಳೆದುಕೊಂಡ ಮೇಲೂ ಆ ಸಮಸ್ಯೆ
ಹೋಗಲಿಲ್ಲ.ಸರಿಯಾದ ನೀರು ಸೇವನೆ,ಸರಿಯಾದ ಆಹಾರ ಸೇವನೆಯ ಪದ್ಧತಿ ಅನುಸರಿಸುವುದರ ಹೊರತು.ನಿಜಕ್ಕೂ
ಇವತ್ತಿನ ಆಸ್ಪತ್ರೆಗಳು ಜನರ ಮನಸ್ಸಿನ ದೌರ್ಬಲ್ಯವನ್ನು ಬಳಸಿಕೊಂಡು ದುಡ್ಡು ಮಾಡುವ
ಉದ್ಯಮವನ್ನಾಗಿ ಮಾಡಿಕೊಂಡಿವೆ.ಇದೊಂದು ಘೋರ ದುರಂತ.ಇವತ್ತಿನ ಬಹು ಮಹತ್ವಾಕಾಂಕ್ಷಿ ಉದ್ಯಮಗಳೆಂದರೆ
ಸ್ಕೂಲು ತೆರೆಯುವುದು,ಆಸ್ಪತ್ರೆ ಕಟ್ಟಿಸುವುದು ಮತ್ತು ರಾಜಕೀಯ ಮಾಡುವುದು!ಲೋಕ ಈ ವಂಚಕರ
ಅಣತಿಯಂತೆ ಸಾಗುತ್ತಿದೆ.
ಡಾ//
ಬಿ.ಎಂ.ಹೆಗಡೆಯವರು ತಮ್ಮ ಯೂಟ್ಯೂಬ್ ಉಪನ್ಯಾಸಗಳಲ್ಲಿ ಮನುಷ್ಯನಿಗೆ ರೋಗಗಳು ಏಕೆ ಬರುತ್ತವೆ
ಎನ್ನುವುದಕ್ಕೆ ಅರ್ಥತಪೂರ್ಣ ಮಾತುಗಳನ್ನು ಹೇಳುತ್ತಾರೆ.ಮನುಷ್ಯನ ಒಳಗಿರುವ ದ್ವೇಷ,ಮತ್ಸರ,ದುರಾಸೆಗಳೆ
ಮನುಷ್ಯನಿಗೆ ರೋಗಗಳನ್ನು ತರುತ್ತವೆ.ಯಾವ ಕೆಟ್ಟ ಯೋಚನೆಗಳೂ ಇಲ್ಲದೆ ಆರೋಗ್ಯಕರವಾಗಿ ತಿಂದು
ಸಂತೋಷದಿಂದ ದುಡಿದು ನೆಮ್ಮದಿಯಿಂದ ಮಲಗುವವರಿಗೆ ಯಾವುದೇ ರೋಗಗಳು ಬರುವುದಿಲ್ಲ
ಎನ್ನುತ್ತಾರೆ.ಮನುಷ್ಯ ಅನೇಕ ಸ್ಪರ್ಧೆಗಳಿಗೆ ತನ್ನನ್ನು ಒಡ್ಡಿಕೊಂಡು ಮನಸ್ಸು ಮತ್ತು ದೇಹದ ಮೇಲೆ
ಅತಿ ಒತ್ತಡ ಹಾಕುತ್ತಿರುವುದೇ ಹಲವು ಸಮಸ್ಯೆಗಳಿಗೆ ಕಾರಣ ಎನ್ನುತ್ತಾರೆ.ಅವರೂ ಔಷಧವನ್ನು ಒಂದು
ಮೂಢನಂಬಿಕೆ ಎಂದೇ ದೃಢೀಕರಿಸುತ್ತಾರೆ.ಅದು ನೂರಕ್ಕೆ ನೂರು ಸತ್ಯ!ಮನುಷ್ಯನ ದೇಹವನ್ನು
ಸೃಷ್ಟಿಸಿದ್ದು ನಿಸರ್ಗ ಅಥವಾ ದೇವರು ಎನ್ನುವುದಾದರೆ ಎಲ್ಲಾ ಮಾನವ ದೇಹಗಳನ್ನು ಮತ್ತದರ
ಅಂಗಗಳನ್ನು ಒಳಗಿನ ಭಾಗಗಳನ್ನು ಒಂದೇ ಸ್ವರೂಪದಲ್ಲಿ ಭಾವಿಸುವುದು ತಪು ಎನ್ನುತ್ತಾರೆ.ಒಬ್ಬನ
ಎಲುಬಿನ ಆಕೃತಿ ಬದಲಿರಬಹುದು,ಒಬ್ಬನ ನರವ್ಯೂಹದ ರಚನೆ ಬೇರೆ ಇರಬಹುದು,ಒಬ್ಬನ ಮೆದುಳಿನ ಸ್ವರೂಪ
ಬೇರೆ ಇರಬಹುದು;ಅದ್ಹೇಗೆ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಮುಖಾಂತರ ಅಂಗರಚನೆ ಮತ್ತದರಲ್ಲಿನ
ವ್ಯತ್ಯಾಸವನ್ನು ಗುರುತಿಸುತ್ತೀರಿ ಎನ್ನುತ್ತಾರವರು!ಮಾನವ ಮತ್ತು ಮಾನವ ಸಂಪನ್ಮೂಲದ ಸ್ವಾಸ್ಥ್ಯಯ
ಕಾಳಜಿ ಇರುವಂತ ಅಪರೂಪದ ವ್ಯಕ್ತಿತ್ವದ ಜನಗಳ ಮಾತಿವು.
ಹಾಗಾದರೆ ವೈದ್ಯರು
ಉಪಯೋಗವಿಲ್ಲವಾ?ಎಲ್ಲಾ ವೈದ್ಯರು ವಂಚಕರಾ ಎನ್ನುವ ಎರಡು ಪ್ರಶ್ನೆಗಳು ಕೊನೆಯದಾಗಿ
ಉಳಿದುಕೊಳ್ಳುತ್ತವೆ.ಸ್ವಸ್ಥ ಸಮಾಜಕ್ಕಾಗಿ ಮತ್ತು ಸದೃಢ ಮಾನವ ಸಂಪನ್ಮೂಲಕ್ಕಾಗಿ ವೈದ್ಯರ
ಉಪಸ್ಥಿತಿ ಅಗತ್ಯ.ಇವತ್ತಿಗೂ ಜನ ದೇವರೆಂದು ಭಾವಿಸುತ್ತಾರೆ.ಅವರು ನೀಡುವ ಔಷಧಿಗಳಿಂದ ರೋಗಗಳು
ಪರಿಹಾರವಾಗುವುದಿಲ್ಲ.ಯಾರು ಆ ವೈದ್ಯನ ಮೇಲೆ ಘನವಾದ ನಂಬಿಕೆಯನ್ನಿಟ್ಟಿರುತ್ತಾನೋ ಅಂಥಹ ರೋಗಿಗೆ
ವೈದ್ಯನ ಕೈ ಸ್ಪರ್ಷ ಮಾತ್ರ ರೋಗವನ್ನು ಗುಣವಾಗಿಸುತ್ತದೆ.ಮುಖ್ಯವಾಗಿ ಬೇಕಿರುವುದು ನಂಬಿಕೆ
ಮತ್ತು ಸಹನೆ.ಡಾಕ್ಟರ್ ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ.ಹಾಗೆನೆ ಕೆಟ್ಟ ಮತ್ತು ಧನದಾಹಿ
ಡಾಕ್ಟರ್ ಗಳಿಂದ ಸಮಾಜ ಉಳಿಯುವುದಿಲ್ಲ.ಬರೀ ಸಮಾಜವಷ್ಟೇ ಅಲ್ಲ ಡಾಕ್ಟರ್ ಮಾಡುವ ಒಂದು ಸಣ್ಣ
ತಪ್ಪಪಿನಿಂದ ಒಂದಿಡೀ ಕುಟುಂಬವೇ ನಾಶವಾಗುತ್ತದೆ.ಡಾಕ್ಟರ್ ಹಣದ ಮೇಲೆ ಮನಸ್ಸಿಟ್ಟು ಕೆಲಸ
ಮಾಡಬಾರದು,ಅದೊಂದು ದೈವ ಸೇವೆ;ಜನಗಳ ಜೀವ ಮತ್ತು ಜೀವನದ ಪ್ರಶ್ನೆ,ಡಾಕ್ಟರ್ ಬೇಕೆ ಬೇಕು.
ಸರ್ಕಾರಗಳು ನಕಲಿ
ವೈದ್ಯರನ್ನು ಅಪರಾಧಿ ಎಂದು ಗುರುತಿಸಿ ಕಾನೂನಿನ ಕಸ್ಟಡಿಗೆ ತೆಗೆದುಕೊಳ್ಳುವ ಕಾನೂನುಗಳನ್ನು
ತರಬೇಕು.ಈ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆಗಳ ಸುಲಿಗೆಯ ಮೇಲೆ ಬಲವಾದ ನಿಯಂತ್ರಣ ತರಬೇಕು.ಮಾನ್ಯ
ಸಿದ್ದರಾಮಯ್ಯನವರ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀ ರಮೇಶಕುಮಾರ ಸರ್ ಆ ಪ್ರಯತ್ನವನ್ನು
ಮಾಡಿದ್ದರು.ಇದರ ವಿರುದ್ಧ ವೈದ್ಯರ ಆಕ್ರೋಶ ವ್ಯಕ್ತವಾಗಿ ಬೀದಿ ಹೋರಾಟಗಳನ್ನು ಮಾಡಿದ್ದರು.ಈ
ದೇಶದ ಪ್ರಜ್ಞಾವಂತ ನಾಗರೀಕ ಸುಮ್ಮನೆ ಕುಳಿತಿದ್ದ;ಗುಡಿಯೊಳಗಿನ ದೇವರ ಹಾಗೆ!ಇವತ್ತು
ಹಳ್ಳಿಯೊಂದರಲ್ಲಿ ಹತ್ತಾರು ಜನ ಯಾವುದೇ ಅರ್ಹತೆ ಇಲ್ಲದೆ ಮುಗ್ದ ಗ್ರಾಮೀಣಿಗರ ಮೇಲೆ ಮನಸ್ಸಿಗೆ
ಬಂದ ಔಷಧಿಗಳನ್ನು ಪ್ರಯೋಗ ಮಾಡುತ್ತಿದ್ದಾರೆ.ಸದ್ದಿಲ್ಲದೆ ಸಾವು ಸಂಭವಿಸುತ್ತಿವೆ.ಗ್ರಾಮೀಣಿಗರ
ಆರೋಗ್ಯ ಕಾಯಬೇಕಿರುವ ಆರೋಗ್ಯ ಸಹಾಯಕರು ಹಳ್ಳಿಗಳಿಗೆ ಬರುವುದೇ ಇಲ್ಲ.ನಕಲಿ ವೈದ್ಯರ ಕುರಿತು
ವರದಿಗಳನ್ನು ಮಾಡುವುದಿಲ್ಲ.ವಿಪರೀತ ದುಷ್ಪರಿಣಾಮ ಬೀರುವ ನೋವು ನಿವಾರಕ ಮಾತ್ರೆಗಳನ್ನು
ಹೆಗ್ಗಿಲ್ಲದೆ ಕೊಡಲಾಗುತ್ತದೆ.ಅನ್ ನೆಸಸರಿ ಆಂಟಿಬಯೋಟಿಕ್ ಗಳನ್ನು
ಬಳಸಲಾಗುತ್ತದೆ.ಅನಾವಶ್ಯಕವಾಗಿ ಕುಂಡಿಗೆ ಮೂರು ನಾಲ್ಕು ಇಂಜಕ್ಷನ್ ಮಾಡಲಾಗುತ್ತದೆ.ಮಾಡಿದ
ಇಂಜಕ್ಷನ್ ನಿಂದ ಇನ್ಫೆಕ್ಷನ್ ಆಗಿ ಕುಂಡೆಯಿಂದ ಕೀವು ರಕ್ತ ಸೋರಿಸಿಕೊಳ್ಳುತ್ತಾ ಸರ್ಕಾರಿ
ಆಸ್ಪತ್ರೆಯಲ್ಲಿ ದಾಖಲಾಗಿರುವ ಹಲವು ಜನರನ್ನು ನನ್ನ ಕಣ್ಣುಗಳು ಕಾಣುತ್ತಿವೆ.ಸರ್ಕಾರ ಯಶಸ್ವಿ
ಆಳ್ವಿಕೆ ಮಾಡುತ್ತಿದೆ;ಜನ ನಂಬುತ್ತಿದ್ದಾರೆ.
ಈ ಲೇಖನವೂ ಅನುಭದ
ಆಧಾರದ ಮೇಲೆ ಬರೆದಿರುವಂಥದ್ದು,ಇಲ್ಲಿರುವ ವಿಚಾರಗಳು ಕಂಡ ಸತ್ಯಗಳು.ವೈದ್ಯಲೋಕ ವಂಚಕರ
ಲೋಕವಾಗಿದೆ.ಜನರ ಮನೋದೌರ್ಬಲ್ಯಗಳನ್ನು ಬಳಸಿಕೊಂಡು ಹಣಕ್ಕಾಗಿ ಹಲವು ಜೀವನಗಳ ನಾಶಕ್ಕೆ
ಕಾರಣವಾಗುತ್ತಿರುವ ದ್ರೋಹಿಗಳ ಬಗ್ಗೆ ಎಚ್ಚರವಿರಲಿ ಎನ್ನುವುದು ಈ ಲೇಖನದ ಆಶಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ