ಭಾನುವಾರ, ಮಾರ್ಚ್ 15, 2020

ಪ್ರೇಮ ಕಥೆ

ಪ್ರೇಮಯಾನದ ಪಕ್ಷಿಗಳು-೧

ಇಳಿ ಸಾಯಂಕಾಲ.ವಸಂತದ ಕಾಲ;ಮಾಮರವೊಂದನ್ನು ಬಿಟ್ಟು ಎಲ್ಲಾ ಮರಗಳು ಎಲೆ ಉದುರಿಸಿದ್ದವು.ಈ ಬೇಸಿಗೆ ನಿಜಕ್ಕೂ ದುರ್ಭರವಾಗಿತ್ತು.ಕ್ರಮೇಣ ಕಾಲ ನಾಶದ ಅಂಚಿಗೆ ತಲುಪುತ್ತಿದೆಯೇನೋ ಎಂಬಂತೆ ಪ್ರತಿಯೊಂದೂ ವಿಪರೀತವಾಗತೊಡಗಿದ್ದವು;ಅಂದರೆ ಮಳೆಗಾಲದಲ್ಲಿ ಮಳೆ,ಚಳಿಗಾಲದಲ್ಲಿ ಚಳಿ,ಈಗ ಬೇಸಿಗೆ;ಈ ಬೇಸಿಗೆಯ ಬಿಸಿಲು ಸಹಿಸದೇ ಜನ ಬಯಲಿಗೆ ಬರುವುದೇ ದುಸ್ತರವಾಗಿತ್ತು.ಏಕರೀತಿಯಿಂದ ಸೂರ್ಯದೇವ ಒಂದೇ ಸಮನೆ ಬೆಂಕಿಯ ಮಳೆ ಸುರಿಯುತ್ತಿದ್ದಾನೇನೋ ಎನ್ನುವಂತೆ ಬಿಸಿಲು ಧಾರಾಕಾರ ಸುರಿಯುತ್ತಿತ್ತು.ಸದ್ಯ ಈಗ ಇಳಿಸಂಜೆ,ಸೂರ್ಯ ತನ್ನ ತೀವ್ರತೆಯನ್ನು ಕಳೆದುಕೊಂಡು ಪಡುವಣದ ಕಡೆ ಸಾಗುತ್ತಿದ್ದಾನೆ.ಮುತ್ತೈದೆಯ ಹಣೆಯ ಕುಂಕುಮದ ರಂಗನ್ನು ಪಡೆದು ಆತ ತಾಯ ಗರ್ಭ ಸೇರಲು ಹೊರಟಿದ್ದಾನೆ.ಹಕ್ಕಿಗಳು ಗೂಡಿಗೆ ಹಿಂತಿರುಗುವ ಆ ಹೊತ್ತಿನಲ್ಲಿ ಮರಗಳು ಚಿಲಿಪಿಲಿಯ ಮಾತು ಪಡೆದಿದ್ದವು.ದೂರದ ದಿಕ್ಕಿನಿಂದ ಎಲ್ಲೋ ಕೋಗಿಲೆಯೊಂದು ಸಶ್ರಾವ್ಯವಾಗಿ ಹಾಡುತ್ತಿರುವ ಹಾಡೊಂದು ಕೇಳಿ ಬರುತ್ತಿತ್ತು.ರವಿ ಪುಳಕಿತಗೊಂಡ!ರಶ್ಮಿಯ ಧ್ವನಿ ಯಾವ ಕೋಗಿಲೆಗೂ ಕಡಿಮೆ ಇಲ್ಲವೆನ್ನುವುದು ಆತನ ಮನಸ್ಸಿನಲ್ಲಿ ಹಾದು ಹೋಗಿ ಆತ ಕಾತರಗೊಂಡ;ಅವಳ ಪಿಸುಮಾತು ಅವನನ್ನು ರೋಮಾಂಚಿತಗೊಳಿಸುತ್ತಿತ್ತು.

ಸಮಯ ನೋಡಿಕೊಂಡ,ಐದಾಗಲಿಕ್ಕೆ ಇನ್ನೂ ಹತ್ತು ನಿಮಿಷ ಬಾಕಿ ಇತ್ತು;ಇಷ್ಟೊತ್ತಿಗಾಗಲೇ ಆಕೆ ಬರಬೇಕಿತ್ತು.ತಾವಿಬ್ಬರೂ ಪ್ರತಿದಿನ ಸೇರುತ್ತಿದ್ದದ್ದು ಅದೇ ಸಮಯಕ್ಕೆ;ನಾಲ್ಕುವರೆ ಐದು ಗಂಟೆಯ ಒಳಗೆ.

ಅದು ಊರಿಗೆ ಹತ್ತಿರವಿರುವ ಒಂದು ಸಣ್ಣ ಹಳ್ಳ,ಸಾಯಂಕಾಲ ಅಲ್ಲಿ ಪ್ರಶಾಂತವಾದ ವಾತಾವರಣವಿರುತ್ತದೆ.ಹಳ್ಳದ ನೀರಿನ ಕುಲುಕುಲು ಸದ್ದೂ ಬಹಳ ಹಿತವಾಗಿ ಕೇಳಿಸುತ್ತದೆ.ಹಳ್ಳದ ತೀರದ ಗುಂಟ ಬೆಳೆದ ತರಾವರಿ ಮರಗಳು ತಂಪು ವಾತಾವರಣವನ್ನು ಸೃಷ್ಟಿಸಿರುವವು.ಸಾಯಂಕಾಲ ಅದು ನಿರ್ಜನವಾಗುವ ಪ್ರದೇಶವಾಗುವುದರಿಂದ ತಾವಿಬ್ಬರೂ ಆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು.

ರವಿ ರಶ್ಮಿಯ ಧ್ಯಾನದಲ್ಲಿರುವಂತೆ ದೂರದಲ್ಲಿ ಗೆಜ್ಜೆಯ ಸದ್ದು ಕೇಳುತ್ತಿರವಂತೆ ಅನ್ನಿಸಿತು,ಅದು ರಶ್ಮಿಯದೆ ಕಾಲ್ಗೆಜ್ಜೆ ಸದ್ದು.ಅವಳ ಕಾಲಿನ ಚೈನಿಗೆ ಇರುವ ಗೆಜ್ಜೆಗಳು ಆ ಸದ್ದನ್ನು ಹೊರಡಿಸುತ್ತವೆ.ತುಂಬಾ ಲಯವಾಗಿ ನಡೆಯುವ ಆಕೆ ಒಂದು ನವಿಲಿನಂತೆ ಭಾಸವಾಗುತ್ತಾಳೆ.ಕಡೆದಿಟ್ಟ ಶಿಲ್ಪದಂತಹ ಅವಳ ಚೆಲುವು ವರ್ಣಿಸಲು ಅಸಾಧ್ಯ..ಬೇಲೂರು ಶಿಲಾಬಾಲಿಕೆಯರಿಗೆ ಇವಳೇ ಸ್ಪೂರ್ತಿ ಎನ್ನುವಂತಿದ್ದಳು.ಅದೆಷ್ಟೋ ಬಾರಿ ಅವನು ಹಾಗೆಂದು ಹೇಳಿದಾಗ ಕೆಂಪಾಗುವ ಅವಳ ಕೆನ್ನೆಯನ್ನು ನೋಡಬೇಕು?ಅವಳ ಕಣ್ಣುಗಳ ಮಿಂಚು ಅವನ ಹೃದಯದ ಬೆಳಕಾಗಿತ್ತು.

"ಮನೇಲಿ ಅಪ್ಪಾ ಇದ್ದರು,ಅದ್ಕೆ ತುಸು ತಡವಾಯಿತು!"ಎಂದಳು ರಶ್ಮಿ.
"ತುಸು ತಡವಲ್ಲಾ ಚಿನ್ನಾ,ನಿನ್ನ ನಿರೀಕ್ಷಣೆಯ ಒಂದು ನಿಮಿಷವೂ ನಗೊಂದು ಯುಗ,ಆ ವಿರಹ ಸಹಿಸೇನು ನಾನು.ಕಾಯುವಿಕೆಯಲ್ಲಿ ಎಂಥಹ ನೋವಿದೆ ಅಂತ ಗೊತ್ತಿದೆಯಾ ನಿನಗೆ?"ಎಂದನು ರವಿ.ನಿಜಕ್ಕೂ ಅವನು ಆಕೆಯ ನಿರೀಕ್ಷೆಯಲ್ಲಿ ನೊಂದು ಹೋಗುತ್ತಿದ್ದನು.ಚಂದ್ರಾಪುರವೆಂಬ ಆ ಚಿಕ್ಕ ಹಳ್ಳಿಯಲ್ಲಿ ಜನರನ್ನು ತಪ್ಪಿಸಿಕೊಂಡು ಪ್ರೇಮಿಗಳಿಬ್ಬರು ಸೇರುವುದು ತುಂಬಾ ದುಸ್ತರವಿತ್ತು.ಅದು ಕಂಚಿನ ಘಂಟೆಯಂಥಹ ಹಳ್ಳಿ,ಎಲ್ಲೋ ಏನೋ ತಾಕಿದರೆ ಊರೆಲ್ಲಾ ಸದ್ದು ಕೇಳಿಸುತ್ತಿತ್ತು!ಸಮಾಜ ಹಲವು ಸಂಕೋಲೆಯ ಬಂಧನದಲ್ಲಿರುವಾಗ ಹಳ್ಳಿಗಳ ಮಟ್ಟದಲ್ಲಿ ಪ್ರೀತಿ ಪ್ರೇಮ ಸುಲಭವಿರಲಿಲ್ಲ.

ರಶ್ಮಿ ರವಿಯ ತೊಡೆಯ ಮೇಲೆ ತನ್ನ ತಲೆಯನ್ನು ಇಟ್ಟು ಮಲಗಿದಳು,ಹಾಗೆ ಅವಳು ತೊಡೆಯ ಮೇಲೆ ಮಲಗಿದರೆ ಮಡಿಲಲ್ಲಿ ಒಂದು ಮಲ್ಲಿಗೆಯ ದಂಡೆ ವಿರಮಿಸಿದ ಭಾವ ಪ್ರಾಪ್ತಿಯಾಗುತ್ತಿತ್ತು ರವಿಗೆ;ಅವಳ ಹೆರಳ ಸುಗಂಧ ಅವನನ್ನು ಮತ್ತಿಗೆ ಈಡು ಮಾಡುತ್ತಿತ್ತು.ನಿಧಾನವಾಗಿ ರವಿ ರಶ್ಮಿಯ ಮುಖವನ್ನು ತನ್ನ ಬೊಗಸೆಯಲ್ಲಿ ತುಂಬಿಕೊಂಡು ಚುಂಬಿಸುವನು.ಆ ಕ್ಷಣ ಸ್ವರ್ಗದಲ್ಲಿ ತೇಲುತ್ತಿರುವಂತೆ ಅನ್ನಿಸುತ್ತಿತ್ತು.

"ಇನ್ನೂ ಎಷ್ಟು ದಿನ ನಾವು ಹೀಗೆ ಕದ್ದು ಸೇರುವುದು ರವಿ?"ರಶ್ಮಿ ಕೇಳುವಳು.ಸದ್ಯಕ್ಕೆ ರವಿ ನಿರುತ್ತರನಾಗುವನು.ಅವಳಲ್ಲಿ ಆ ಪ್ರಶ್ನೆ ತಾವಿಬ್ಬರೂ ಸೇರುವ ಸಂದರ್ಭದಲ್ಲಿ ಉದ್ಭವವಾದರೆ ರವಿಗೆ ಅದು ನಿರಂತರವಾಗಿ ಹುಟ್ಟಿಕೊಳ್ಳುತ್ತಿತ್ತು.ತಮ್ಮ ಪ್ರೇಮಕ್ಕೊಂದು ಶಾಸ್ವತ ಬಂಧವನ್ನು ಕಲ್ಪಿಸುವ ಹಲವು ಮಾರ್ಗಗಳನ್ನು ಆತ ನಿರಂತರವಾಗಿ ಯೋಚಿಸುತ್ತಿದ್ದ.ಇತ್ತೀಚೆಗೆ ಈ ಚಿಂತೆಯಿಂದ ಅವನು ಅನ್ನ ಆಹಾರಗಳನ್ನು ತ್ಯೇಜಿಸಿದ್ದ.ರಾತ್ರಿಗಳು ನಿದ್ರಾಹೀನವಾಗಿದ್ದವು.ಸದಾ ಅವಳ ಸಾನಿಧ್ಯಕ್ಕೆ ಹಾತೊರೆಯುತ್ತಿತ್ತು ಮನಸ್ಸು.ಅವಳಿಲ್ಲದ ಕ್ಷಣ ಅವನಿಗೆ ಸಾವಿನ ಯಾತನೆ ನೀಡುತ್ತಿತ್ತು."ಅದೇ ಯೋಚಿಸುತ್ತಿದ್ದೇನೆ ಚಿನ್ನಾ,ಏನೂ ತೋಚುತ್ತಿಲ್ಲ.ನೀನು ಮೇಲ್ಜಾತಿಯವಳು ಎನ್ನುವ ಒಂದೇ ಒಂದು ಅಂಶ ನನ್ನ ಮನಸ್ಸನ್ನು ಛಿದ್ರ ಛಿದ್ರವಾಗಿಸುತ್ತದೆ.ಆತಂಕ ಉಂಟಾಗುತ್ತದೆ.ಮೈ ಬೆವರಿ ಹೋಗುತ್ತದೆ.ಸಮಾಜವನ್ನು ಒಪ್ಪಿಸುವ ಬಗೆ ಹೇಗೆ,ಸಮಾಜ ನಮ್ಮ ಪ್ರೇಮವನ್ನು ಒಪ್ಪುತ್ತದಾ ಎಂದು ಯೋಚಿಸಿ ಹುಚ್ಚು ಹಿಡಿದು ಹೋಗಿದೆ"ಎಂದನು ರವಿ.ಅವನ ಮಾತಿನಲ್ಲಿ ಸಣ್ಣದಾಗಿ ವಿಷಾದ ವ್ಯಕ್ತವಾಗುತ್ತಿತ್ತು."ಏನು ಮಾಡ್ತೀಯೋ ನನಗೆ ಗೊತ್ತಿಲ್ಲ.ನೀನಿಲ್ಲದೆ ಮಾತ್ರ ಬದುಕುವುದಿಲ್ಲನಾನು!ಬೇಗ ಪರಿಹಾರ ಕಂಡು ಹಿಡಿ"ಎಂದಳು ರಶ್ಮಿ.ಅದಾದ ಮೇಲೆ ಅವರು ಕನಸಿನ ಲೋಕಕ್ಕೆ ಬರುವರು.

ತಾವಿಬ್ಬರೂ ಯಾರೂ ಇಲ್ಲದ ನಿರ್ಜನ ಕಾಡಿನಲ್ಲಿ ಒಂದು ಸಣ್ಣ ಕುಟೀರದಂತಹ ಮನೆ ನಿರ್ಮಿಸಿಕೊಳ್ಳುವುದು,ಆ ಕುಟೀರವೂ ಹೂಬಳ್ಳಿಗಳಿಂದ ಆವೃತವಾಗಿರುವುದು;ಮನೆಯ ಮುಂದೆ ಅಂಬಾ ಎನ್ನುವ ಕರು ಇರುವುದು,ಮಡಿಲಿನಲ್ಲಿ ಪುಟ್ಟ ರವಿ ರಶ್ಮೀ ಪುತ್ರನಿರುವುದು ಪ್ರೇಮವೇ ಜೀವನವಾಗಿ ಯಾರ ತಂಟೆ,ಯಾವ ಸಮಸ್ಯೆಯಿಲ್ಲದೆ ಬದುಕುವ ಕನಸದು.ಅದು ಅವರ ಪ್ರತಿ ರಾತ್ರಿಯ ಕನಸಾಗಿತ್ತು.ಅದನ್ನು ಅವರಿಬ್ಬರೂ ಹಂಚಿಕೊಳ್ಳುತ್ತಿದ್ದರು.ನಿಧಾನವಾಗಿ ಹರಿಯುವ ಸಣ್ಣ ನೀರ ತೊರೆಯ ದಂಡೆಯ ಮೇಲೆ ನಿರ್ಮಿಸಿಕೊಂಡ ಆ ಕುಟೀರ ಗಿಣಿ,ಮೊಲ,ಜಿಂಕೆ ಮೊದಲಾದ ಮುದ್ದು ಪ್ರಾಣಿಗಳಿಂದ ಸಮೃದ್ಧವಾಗಿರುವುದು.ಆ ಪ್ರದೇಶದಲ್ಲಿ ಕೋಗಿಲೆಯ ಇಂಪು ಗಾನ,ನವಿಲಿನ ನರ್ತನದ ಸವಿ ಇದರ ಮಧ್ಯೆ ತಮ್ಮಿಬ್ಬರ ಮಿಲನ,ರತಿ ಮನ್ಮಥರ ಮಿಲನ!

"ರವಿ,ಒಂದು ಕ್ಷಣವೂ ನೀನು ನನ್ನಿಂದ ದೂರವಾಗಿ ಇರಬಾರದು,ಒಂದು ಕ್ಷಣದ ಅಗಲಿಕೆಯನ್ನೂ ನಾನು ಸಹಿಸಲಾರೆ.ನನ್ನ ತುಟಿಗಳು ಸದಾ ನಿನ್ನ ಅಧರಾಮೃತವನ್ನು ಸೇವಿಸುತ್ತಿರಬೇಕು.ನಿನ್ನ ಅಪ್ಪಿಗೆಯ ಸವಿಸುಖ ಅರೆಕ್ಷಣವೂ ಕಳೆದುಕೊಳ್ಳಲಾರೆ.ನಿನ್ನ ತೋಳ ಬಂಧನವೇ ಸ್ವರ್ಗ ನನಗೆ"ಎಂದು ಮತ್ತಿನಲ್ಲಿ ತೇಲುತ್ತಿರುವಂತೆ ನುಡಿಯುವಳು ರಶ್ಮಿ!ರವಿ ಅವಳನ್ನು ಮಡಿಲಿನಿಂದ ಸರಿಸಿ ಬಿಗಿದಪ್ಪುವುನು.ಅವರಿಬ್ಬರ ಬಾಹು ಬಂಧನದಲ್ಲಿ ಗಾಳಿಗೂ ಸ್ಥಳವಿಲ್ಲದಂತಾಗುವುದು.ಹದಿನಾರರ ಅವಳು ಇಪ್ಪತ್ತರ ಅವನು ಆ ಕ್ಷಣ ಯೌವನದ ಬೆಂಕಿಯಲ್ಲಿ ಬೆಂದು ಹೋಗುವರು.ಸ್ವರ್ಗದ ಕಲ್ಪನೆಯಲ್ಲಿ ಅವರು ತೇಲುವರು.ರತಿ ಮನ್ಮಥರಂತೆ ರಾಸಲೀಲೆಯಲ್ಲಿ ಸಾಯಂಕಾಲ ಕಳೆಯುವುದು.ಸೂರ್ಯ ತಾಯ ಗರ್ಭ ಸೇರುತ್ತಿರುವಂತೆ ಕತ್ತಲು ನಿಧಾನವಾಗಿ ಇಳಿಯತೊಡಗುತ್ತದೆ.ಆಗ ಅವರು ಬೇರಾಗಲೇಬೇಕು;ಅದು ಕದ್ದು ಸೇರುವಿಕೆ;ಕೊಂಚ ತಡವಾದರೆ ರಶ್ಮಿಯ ತಾಯಿ ಅಲ್ಲಿಗೆ ಬರಬಹುದಾದ ಭೀತಿ!

"ನೋಡು,ಏನ್ಮಾಡ್ತೀಯೋ ಗೊತ್ತಿಲ್ಲ.ಆದಷ್ಟು ಬೇಗ ನಾವು ಒಂದಾಗುವ ದಾರಿ ಹುಡುಕು!"ಅದವಳ ವಿದಾಯದ ಮಾತು.ನಂತರ ಅವರಿಬ್ಬರೂ ಮನೆಯ ಕಡೆ ಹೊರಡುವರು.(ಮುಂದುವರೆಯುತ್ತದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...