ತಂಬಾಕು ಎಷ್ಟೊಂದು ಅಪಾಯ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ,ಆದರೂ ದೀಪದ ಹುಳುಗಳಂತೆ ಜನ ಅದಕ್ಕೆ ಆಕರ್ಷಿತರಾಗುತ್ತಿದ್ದಾರೆ.ಈ ನಿಟ್ಟುನಲ್ಲಿ ಜನ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವಿದು.ನಾನು ಪತ್ರಿಕಾ ಕಾರ್ಯಾಲಯಗಳಿಗೆ ಹೋಗಲಾರೆ,ಅವುಗಳ ಅಡ್ರೆಸ್ಸೂ ಗೊತ್ತಿಲ್ಲ.ಈ ಫೇಸ್‌ಬುಕ್ ವಾಲೊಂದೆ ನನ್ನ ಬಯಲುರಂಗಮಂದಿರ.ಇಲ್ಲೇ ನನ್ನ ಕುಣಿತ.ಕೆಲ ಸಹೃದಯಿ ಸಂಪಾದಕರು ಪ್ರಕಟಿಸುವ ಇಚ್ಚೆ ತೋರುತ್ತಾರೆ.ಅದು ಅವರ ಇಷ್ಟವನ್ನು ಅವಲಂಬಿಸುತ್ತದೆ.
ರಾಜ್ಯದಲ್ಲಿ ಸರಾಯಿ ನಿಷೇಧ ಹೇರಿ ಬೀದಿ ಬೀದಿಗಳಲ್ಲಿ ಅಕ್ರಮವಾಗಿ ಸರಾಯಿ ಮಾರಾಟಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಸಿಕೊಟ್ಟ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರನ್ನು ಸ್ಮರಿಸುತ್ತಾ ಈ ಲೇಖನ ಬರೆದಿದ್ದೇನೆ.ಇಂದಿನಿಂದ ಈ ಅಕ್ರಮ ಮಾರಾಟಗಾರರಿಗೆ ಮತ್ತು ಪರೋಕ್ಷವಾಗಿ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಅಬಕಾರಿ ಇಲಾಖೆಯ ವಿರುದ್ಧ ಯುದ್ಧ ಸಾರಲಿದ್ದೇನೆ.
ಲೇಖನ ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ ನಾನು ಋಣಿ:-
ತಂಬಾಕು:ಮಾನವ ಸಂಪನ್ಮೂಲದ ನಾಶದ ರಹದಾರಿ
ಮೌನ ಮಡುಗಟ್ಟಿತ್ತು,ಆ ಮನೆಯಲ್ಲಿ ಸಾವು ಸಂಭವಿಸಿ ಇನ್ನೂ ತಿಂಗಳಾಗಿರಲಿಲ್ಲ.ಸಾಯಬೇಕಾದ ವ್ಯಕ್ತಿ ಸತ್ತರೆ ಯಾರಿಗೂ ಅಷ್ಟೊಂದು ದುಃಖ ಕಾಡುವುದಿಲ್ಲ;ಸಾಯಬೇಕಾದ ವ್ಯಕ್ತಿ ಎಂದರೆ ಜೀವನದ ಎಲ್ಲಾ ಆಯಾಮಗಳ ತನ್ನ ಕರ್ತವ್ಯಗಳನ್ನು ಮುಗಿಸಿ ವಾರ್ಧಕ್ಯದ ಕಾಷ್ಠತೆಯನ್ನು ಅನುಭವಿಸುತ್ತಿರುವವರು,ನೆನಪಿರಲಿ: ಎಷ್ಟೋ ಜನ ವೃದ್ಧರು ಸಾವಿಗಾಗಿ ಎದುರು ನೋಡುತ್ತಿರುತ್ತಾರೆ,ಸಾವು ಬರುವುದಿಲ್ಲ!ನನ್ನನ್ನು ನಿನ್ನ ಹತ್ತಿರ ಕರೆದುಕೋ ದೇವರೆ ಎಂದು ಅಂಗಲಾಚುತ್ತಿರುತ್ತಾರೆ;ದೇವರು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ.ನಡ ಬಾಗಿರುತ್ತದೆ,ಕೂತರೆ ಎದ್ದೇಳಲಿಕ್ಕೆ ಬಾರದ ಸ್ಥಿತಿ ತಲುಪಿರುತ್ತಾರೆ,ಮಲಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣ ಕಳೆದುಕೊಂಡಿರುತ್ತಾರೆ.ಒಟ್ಟಿನಲ್ಲಿ ಹೇಳಬೇಕು ಎಂದರೆ ಪರಾವಲಂಬಿತರಾಗಿ ಮನೆಯಲ್ಲಿ ಬೇಸರದ ವಾತಾವರಣ ಸೃಷ್ಟಿಸಿರುತ್ತಾರೆ;ಅವರಿಗೆ ಏನೇ ಜಪ್ಪಯ್ಯ ಎಂದರೂ ಸಾವು ಬರುವುದಿಲ್ಲ!ಆದರೆ ತುಂಬಾ ಜನ ಸಾಯಬಾರದ ವಯಸ್ಸಿನಲ್ಲಿ ಸತ್ತು ಅವಲಂಬಿತರ ಜೀವನವನ್ನು ನರಕವಾಗಿಸಿ ಬಿಡುತ್ತಾರೆ;ಹೆಂಡತಿ ಮಕ್ಕಳು ಜೀವನ ಪೂರ್ತಿ ಕಣ್ಣೀರು ಹಾಕುವಂತೆ ಮಾಡಿ ಬಿಡುತ್ತಾರೆ.ಅಕಾಲಿಕವಾಗಿ ಮರಣಿಸಿ ಮನೆಯನ್ನು ಕತ್ತಲಾಗಿಸಿ ಬಿಡುತ್ತಾರೆ.
“ಮೊದಲು ಸಣ್ಣದ್ದೊಂದು ಗುಳ್ಳೆಯಾಗಿತ್ತು,ಬಾಯಿ ಕೆಟ್ಟಾಗ ಆಗ್ತದಲ್ಲಾ,ಅಂಥದ್ದು.ಉಷ್ಣಕ್ಕೆ ಆಗಿರಬೇಕು ಎಂದು ಬಿ ಕಾಂಪ್ಲೆಕ್ಸಿನಂತಹ ಮಾತ್ರೆಗಳನ್ನು ಸೇವಿಸಿದ;ಉಹುಂ,ಗುಣ ಕಾಣಲಿಲ್ಲ.ಡಾಕ್ಟರ್ ಹತ್ತಿರ ತೋರಿಸಿದ;ಗುಣವಾಗಲಿಲ್ಲ.ಅದು ಬೆಳೆಯುತ್ತಾ ಹೋಯಿತು.ಡಾಕ್ಟರ್ ಒಂದು ದಿನ ಇದು ಕ್ಯಾನ್ಸರ್ ಎಂದು ಬಿಟ್ಟರು!ಬಾಯಿಯ ಕೆಲ ಭಾಗ ಕತ್ತರಿಸಿ ಸರ್ಜರಿ ಮಾಡಬೇಕು,ಹಾಗೆ ಮಾಡಿದರೆ ಉಳಿಯುವ ಚಾನ್ಸ್ ಇದೆ ಎಂದರು.ಆದದ್ದಾಗಲಿ ಮಾಡಿ ಡಾಕ್ಟರ್ ಎಂದೇವು.ಡಾಕ್ಟರ್ ಸರ್ಜರಿ ಮಾಡಿದರು,ಹದಿನೈದು ಲಕ್ಷ ಖರ್ಚಾದವು,ಉಳಿಲಿಲ್ಲ.ಹೆಣ ಮಣ್ಣು ಮಾಡಿ ಇವತ್ತಿಗೆ ಇಪ್ಪತ್ತು ದಿನವಾಯಿತು!”ಎಂದು ಆತ ಮಾತು ಮುಗಿಸಿದಾಗ ಆತನ ಕಣ್ಣುಗಳು ಅಪ್ರಯತ್ನವಾಗಿ ತುಂಬಿ ಬಂದು ನೀರು ಸುರಿದವು;ನನ್ನ ಕಣ್ಣುಗಳೂ ಒದ್ದೆಯಾದವು,ಸತ್ತವನು ಅವನಿಗೆ ನಲವತ್ತು ತುಂಬದ ಚಿಕ್ಕ ಚಿಕ್ಕ ಮಕ್ಕಳಿರುವ ತಮ್ಮನಾದರೆ,ನನಗವನು ಗೆಳೆಯ!
“ವಿಕಾರಗೊಂಡ ಹೆಣ ಊರಿಗೆ ತರುವುದೇನು?ಅಲ್ಲೆ ಬೀಗರ ಊರಿನಲ್ಲಿ ಸಂಸ್ಕಾರ ಮಾಡಿ ಬಿಟ್ಟೇವು”ಎಂದ ಆತ.
ಅದೊಂದು ದಿನ ನನ್ನ ಹಿರಿಯ ಗೆಳೆಯ ಹೀಗೆಂದು ಹೇಳಿದ:ಮದುಕನಾಗಲಿಕ್ಕೆ ಬಂದೆ,ಮಕ್ಕಳಿಗೆ,ಹೆಂಡತಿಗೆ ಏನೂ ಮಾಡಲಿಲ್ಲ.ವಯಸ್ಸು ಐವತ್ತಾದವು;ಗೋಲ್ಡನ್ ಡೇಯ್ಸ್‍ಗಳನ್ನು ಹಾಳು ಮಾಡಿಕೊಂಡೆ ಎಂದ.ನಿಜಕ್ಕೂ ಹಾಗೆ ಅನ್ನಿಸಿತು ನನಗೆ.ಇರಲಿಕ್ಕೆ ಒಂದು ಮನೆಯನ್ನೂ ಮಾಡಿಕೊಳ್ಳದೆ ಸುದೀರ್ಘ ಬದುಕನ್ನು ಅತಂತ್ರವಾಗಿ ಕಳೆದ ಆತನ ಬಗ್ಗೆ ನನಗೆ ಕೋಪವು ಬಂದಿತು,ಬುದ್ದಿ ಇಲ್ಲ ನಿನಗೆ ಎಂದು ಬೈದಿದ್ದೆ.ಆತ ವಿಪರೀತ ಧೂಮಪಾನ ಮಾಡುತ್ತಿದ್ದ ಮತ್ತು ವಿಪರೀತ ಮದ್ಯವನ್ನೂ ಸೇವಿಸುತ್ತಿದ್ದ.
ಅದೊಂದು ಮಧ್ಯಾಹ್ನ ಕೆಲಸದಲ್ಲಿ ನಿರತನಾಗಿದ್ದ ನನ್ನ ಹತ್ತಿರ ಆತ ಬಂದ.ಯಾಕೋ ಬೆಳಿಗ್ಗೆಯಿಂದ ಮೂತ್ರ ವಿಸರ್ಜನೆಯಾಗಿಲ್ಲ.ಹೊಟ್ಟೆ ಉಬ್ಬರವಾದಂತಾಗಿದೆ,ದವಾಖಾನೆಗೆ ಹೋಗಿ ಬರುತ್ತೇನೆ,ಒಂದು ಐದುನೂರು ಇದ್ದರೆ ಕೊಡು ಎಂದ.ನೋಡಿದೆ;ಹೊಟ್ಟೆ ಬಾತಂತಿತ್ತು,ಭಯಗೊಂಡು ಐದು ನೂರು ಕೊಟ್ಟೆ.ಆಂದ್ರ ವಲಸಿಗ ಆ ಗೆಳೆಯನ ಸುದ್ದಿ ಆ ನಂತರ ನನಗೆ ತಿಳಿಯಲಿಲ್ಲ.ಇದಾಗಿ ಒಂದು ತಿಂಗಳಿನ ನಂತರ ನನ್ನ ಇನ್ನೊಬ್ಬ ಗೆಳೆಯ ಫೋನ್ ಮಾಡಿದ:ವೆಂಕಟರೆಡ್ಡಿ ಹೋಗಿಬಿಟ್ಟ ಎಂದು!ಬೀಡಿ ಸಿಗರೇಟು ಮದ್ಯ ಸೇವಿಸುತ್ತಾ ಜೀವನ ಕಳೆದಿದ್ದ ಆ ವ್ಯಕ್ತಿ ಹೆಂಡತಿ ಮಕ್ಕಳಿಗೆ ಏನನ್ನೂ ಮಾಡಿರಲಿಲ್ಲ.ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿತ್ತು.
ಆತ ಮರಣಿಸಿದ್ದು ಅತಿಯಾದ ಧೂಮಪಾನ ಮತ್ತು ಮದ್ಯಪಾನದ ಪ್ರಯುಕ್ತ ಕಿಡ್ನಿ ವೈಫಲ್ಯಕ್ಕೆಳೊಗಾಗಿ!
ಈ ಮೇಲಿನ ಎರಡೂ ಘಟನೆಗಳನ್ನು ಏಕೆ ವಿವರಿಸಿದ್ದೇನೆ ಎಂದರೆ ಅಮೂಲ್ಯವಾದ ಜೀವನವನ್ನು ಯಾವೊಂದೂ ಸುಖ ನೀಡದ ನಮ್ಮನ್ನು ಕ್ಷಣ ಕ್ಷಣಕ್ಕೂ ಸಾವಿನ ಹತ್ತಿರಕ್ಕೆ ಕರೆದೊಯ್ಯುವ ಚಟಗಳ ಕುರಿತು ಮತ್ತದರ ಅಪಾಯದ ಅಗಾಧತೆಯನ್ನು ತಿಳಿಸಲಿಕ್ಕೆ.ಒಳ್ಳೆಯ ಊಟದ ಬಗ್ಗೆ ವ್ಯಕ್ತಿ ಆಸಕ್ತನಾಗುವುದಿಲ್ಲ.ಸಾಮಾಜಿಕ ಸ್ವಾಸ್ಥ್ಯೆದ ಬಗ್ಗೆ ಚಿಂತಿಸುವುದಿಲ್ಲ.ಅರ್ಥವಿರದ ಚಟಗಳಿಗೆ ದಾಸನಾಗಿ ಜೀವನವನ್ನು ನಾಶ ಮಾಡಿಕೊಂಡು ಬಿಡುತ್ತಾನೆ,ಏಕೆ?ಏಕೆ ದೀಪದ ಹುಳುಗಳಂತೆ ಸಾಯಲಿಕ್ಕೆ ಹಪಾಹಪಿಸುತ್ತೇವೆ?ಪ್ರಶ್ನೆ ನಿಗೂಢವೇನು ಅಲ್ಲ.
ತಂಬಾಕು ಮಾರಾಟ ಮತ್ತು ಸೇವನೆ ಅಪರಾಧ ಎನ್ನುವ ಕಾನೂನೆ ಇದೆ.ಆದರೂ ಈ ಸರ್ಕಾಗಳಿಂದ ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆನ ಜೀವನವನ್ನು ಮಾನವ ಸಂಪನ್ಮೂಲವನ್ನು ನಾಶ ಮಾಡುವ ಈ ತಂಬಾಕು ಉತ್ಪಾದನೆ ಮತ್ತು ಮಾರಾಟಕ್ಕೆ ಆಸ್ಪದ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನಿಸಿಕೊಳ್ಳುತ್ತದೆ.ಇದು ಜಾಗತಿಕ ಖಂಡನೆಯ ವಿಷಯ.ಸರ್ಕಾರಗಳು ಮಾದಕ ಪದಾರ್ಥಗಳ ನಿಷೇಧದ ನಾಟಕ ಆಡುತ್ತವೆ,ಭಹಿರಂಗವಾಗಿಯೇ ಅವುಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತವೆ.ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಟುಕ ನಿಷೇಧ ಮಾಡುತ್ತೇನೆ ಎಂದರು;ಅಂಥದ್ದೊಂದು ಆದೇಶವನ್ನೂ ಹೊರಡಿಸಿದರುÀ,ನಂತರದಲ್ಲಿ ಗುಟುಕ ಯಾವ ರೂಪವನ್ನು ಪಡೆದುಕೊಂಡಿತು ಗೊತ್ತೆ?ಈ ಸಲ ತಂಪಾಕು ಮತ್ತು ಅಡುಕೆ ರಾಸಾಯಿನಕ ಮಿಶ್ರಿತ ಪೊಟ್ಟಣಗಳು ಪ್ರತ್ಯೇಕ ಪ್ರತ್ಯೇಕವಾಗಿ ಮಾರುಕಟ್ಟೆಗೆ ಇಳಿದವು.ಹುಡುಗರು ಗಿಲಿಗಿಂಚಿ ಆಡಿಸುತ್ತಿರುವುದನ್ನು ನೀವು ಕಂಡಿರಬಹುದು;ಎರಡು ಪ್ರತ್ಯೇಕ ಪೊಟ್ಟಣಗಳ ಸರಕನ್ನು ಒಂದರಲ್ಲಿ ಸೇರಿಸಿ ಅಲ್ಲಾಡಿಸುತ್ತಾ ಬಾಯಿಗೆ ಹಾಕಿಕೊಳ್ಳುತ್ತಾರೆ,ಕರ್ನಾಟಕ ರಾಜ್ಯದಲ್ಲಿ ಗುಟುಕ ನಿಷೇಧವಿದೆ!
ತಂಬಾಕಿನಲ್ಲಿ ಸುಮಾರು ಅರವತ್ತು ಪ್ರತಿಶತ ಕ್ಯಾನ್ಸರ್‍ಕಾರಕ ಅಂಶಗಳಿವೆ ಎಂದು ಎಷ್ಟೋ ವೈಜ್ಞಾನಿಕ ಸಮೀಕ್ಷೆಗಳು ಹೇಳಿವೆ.ವೈದ್ಯಕೀಯ ಸಂಶೋಧನೆಗಳು ಇದನ್ನೇ ದೃಢೀಕರಿಸುತ್ತವೆ.ಮೊಟ್ಟ ಮೊದಲ ಬಾರಿಗೆ 1884ರಲ್ಲಿ ಇಂಗ್ಲೆಂಡಿನಲ್ಲಿ ಧೂಮಪಾನಕ್ಕೆ ಸಾರ್ವತ್ರಿಕ ವಿರೋಧ ವ್ಯಕ್ತವಾಯಿತು.ಇದರ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ ತಿಂಗಳು ಎರಡನೇಯ ಬುಧುವಾರವನ್ನು ‘ಧೂಮಪಾನ ವಿರೋಧಿ ದಿನ’ಎಂದು ಆಚರಿಸಲು ನಿರ್ಧರಿಸಲಾಯಿತು.ಮನುಷ್ಯನಿಗೂ ಹುಳುಗಳಿಗೂ ಏನೂ ವ್ಯತ್ಯಾಸವಿಲ್ಲದಂತೆ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂದರೆ,ಗುಟುಕಾ,ತಂಬಾಕು ಪೊಟ್ಟಣ,ಸಿಗರೇಟು ಮತ್ತು ಬೀಡಿ ಪೊಟ್ಟಣಗಳ ಮೇಲೆ ಬರ್ಭರವಾದ ಶ್ವಾಸಕೋಶ ಹಾಳಾದ ಮತ್ತು ಅತಿ ದಾರುಣವಾದ ಬಾಯಿ ಕ್ಯಾನ್ಸರ್‍ನ ಚಿತ್ರಗಳನ್ನು ಮುದ್ರಿಸಿದರು ಅದನ್ನು ಗಮನಿಸುವುದಿಲ್ಲ.ಶಾಸ್ತ್ರ ಹೇಳಲಿಕ್ಕೆ ಬದನೆಕಾಯಿ ತಿನ್ನಲಿಕ್ಕೆ ಎನ್ನುತ್ತಾ ಉಡಾಫೆಯ ಧೋರಣೆ ತೋರಿಸುತ್ತಾ ತಂಬಾಕು ಸೇವೆನೆಯನ್ನು ಮುಂದುವರೆಸುತ್ತಾನೆ.ಸಾವನ್ನು, ನರಕವನ್ನು ಕರೆದು ಕೊಂಡುಕೊಳ್ಳುತ್ತಾನೆ.ಇದೊಂದು ವಿಪರ್ಯಾಸ.
ಗುಟುಕಾ,ಪಾನ್,ಸಿಗರೇಟು ಬೀಡಿ ಮುಂತಾದ ರೂಪದಲ್ಲಿ ದೊರೆಯುವ ತಂಬಾಕು ಉತ್ಪನ್ನಗಳಲ್ಲಿ ಸುಮಾರು 4000ಕ್ಕೂ ಹೆಚ್ಚು ರಾಸಾಯಿನಿಕಳು ಇವೆ ಮತ್ತು 60ಕ್ಕೂ ಹೆಚ್ಚು ಕ್ಯಾನ್ಸರ್ ಕಾರಕ ಅಂಶಗಳಿವೆ ಎನ್ನುದು ವಿದಿತವಾಗಿದೆ.ತಂಬಾಕಿನ ಪ್ರಮುಖ ದುಷ್ಪರಿಗಳ ಪೈಕಿ ಬಾಯಿ ಕ್ಯಾನ್ಸರ್,ಗಂಟಲು ಕ್ಯಾನ್ಸರ್,ಶ್ವಾಸಕೋಶದ ಕ್ಯಾನ್ಸರ್,ಮೂತ್ರಪಿಂಡದ ವೈಫಲ್ಯ,ಹೃದಯಾಘಾತ ಅತ್ಯಂತ ಮಾರಕ ರೋಗಗಳಾಗಿ ಕಾಣಿಸಿಕೊಂಡೇ ಕಾಣಿಸಿಕೊಳ್ಳುತ್ತವೆ,ದೀರ್ಘಕಾಲೀನ ತಂಬಾಕು ಬಳಕೆದಾರರ ಮರಣ ಆ ತಂಬಾಕಿನಿಂದಲೇ ಸಂಭವಿಸುವುದು ತಪ್ಪಿದ್ದಲ್ಲ ಎಂದು ನಿವೃತ್ತ ವೈದ್ಯರೊಬ್ಬರು ಹೇಳುತ್ತಾರೆ.
ಧೂಮಪಾನದ ಇನ್ನೊಂದು ಭಯಾನಕ ಮುಖವೆಂದರೆ,ಇದನ್ನು ಎಚ್ಚರಿಕೆಯಿಂದ ಗಮನಿಸಿ;ಪ್ರತಿ ದಿನೆರಡು ಪ್ಯಾಕ್ ಸಿಗರೇಟು ಸೇದುವ ವ್ಯಕ್ತಿಯೊಂದಿಗೆ ನಾವು ಜೊತೆಯಾಗಿದ್ದರೆ ನಾವು ಮೂರು ಸಿಗರೇಟುಗಳನ್ನು ನೇರವಾಗಿ ಸೇದಿದಂತೆ!ಪರೋಕ್ಷ ಧೂಮಪಾನಿಗಳ ಮೂತ್ರ ಪರೀಕ್ಷೆಗೆ ಒಳಪಡಿಸಿದಾಗ ಅವರ ಮೂತ್ರದಲ್ಲಿ ನಿಕೋಟಿನ ಅಂಶ ಇರುವುದು ಪತ್ತೆಯಾಗಿದೆ.ಪರೋಕ್ಷ ಧೂಮಪಾನಿಗಳನ್ನು “ಪ್ಯಾಸಿವ್ ಸ್ಮೋಕರ್ಸ”ಎಂದು ಕರೆಯಲಾಗುತ್ತದೆ. “ಆಕೆಯೇನು ಸಿಗರೇಟು ಸೇದುತ್ತಿದ್ದಳಾ ಕ್ಯಾನ್ಸರ್ ಬರಲಿಕ್ಕೆ?”ಎಂದು ಕ್ಯಾನ್ಸರ್‍ಗೆ ಬಲಿಯಾದ ಕೆಲವೊಂದು ಹೆಂಗಸರ ಕುರಿತು ಮಾತಾಡಲಾಗುತ್ತದೆ.ಸಂಗಾತಿ ಧೂಮಪಾನಿಯಾಗಿದ್ದರೆ ಯಾವುದೇ ಪಾಪ ಮಾಡದ ಸಹಚಾರಿಗಳೂ ಅದರ “ಕರ್ಮಫಲ”ವನ್ನು ಅನುಭವಿಸಬೇಕಾಗುತ್ತದೆ.ಹಾಗಾಗಿಯೇ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ.ಇದಕ್ಕಾಗಿ ರಾಷ್ಟ್ರೀಯ ತಂಬಾಕು ನಿಷೇಧ ಕಾಯ್ದೆಯೇ ಇದೆ.ಆಸ್ಪತ್ರೆ,ಶಾಲಾ ಕಾಲೇಜು,ಸರ್ಕಾರಿ ಕಟ್ಟಡಗಳಿಂದ ಸುಮಾರು 100 ಅಡಿ ದೂರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಜಾಹಿರಾತುಗಳನ್ನು ನಿಷೇಧಿಸಲಾಗಿದೆ.ಜನ ಸಾಮಾನ್ಯರ ಜೀವನ ರಕ್ಷಣೆಗೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ಮನುಷ್ಯ ದೀಪದ ಹುಳುವಿನಂತೆ ಬೆಂಕಿಯ ಕಡೆಗೆ ಸೆಳೆಯಲ್ಪಡುತ್ತಾನೆ.ಚಿತ್ರಮಂದಿರದಲ್ ಲಿ ಭಯಾನಕ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ದೃಶ್ಯಗಳನ್ನು ತೋರಿಸಲಾಗುತ್ತಿದೆ.ಆದರೂ ಜನರು ಬದಲಾಗುತ್ತಿಲ್ಲ.
ಒಂದು ಭಯಾನಕ ಸತ್ಯವೇನು ಗೊತ್ತೆ?ವಿಶ್ವದಾದ್ಯಂತ ವಾರ್ಷಿಕ ಸುಮಾರು 55 ಲಕ್ಷ ಜನರ ಮರಣಕ್ಕೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ.ಭಾರತದಲ್ಲಿ ಇದರ ಸಂಖ್ಯೇ 10 ಲಕ್ಷ!ಏಡ್ಸ್,ಕ್ಷಯ,ಮಲೆರಿಯಾ ಈ ಮೂರು ರೋಗಗಳಿಂದ ಸಾಯುವ ಜನರಿಗಿಂತ ತಂಬಾಕು ಸೇವನೆಯಿಂದ ಸಾಯುವ ಸಂಖ್ಯೆ ಹೆಚ್ಚಾಗಿದೆ.ಒಂದು ದುರದೃಷ್ಟದ ಸಂಗತಿ ಎಂದರೆ ತಂಬಾಕು ಸೇವನೆಯಿಂದ ದಾರುಣವಾಗಿ ಸಾವನಪ್ಪುತ್ತಿರುವವರು ಗ್ರಾಮೀಣ ಭಾಗದ ಜನರು.ಶೇಕಡಾವಾರು ಇದರ ಸಂಖ್ಯೆ 80%,ಬದುಕುಗಳು ಸುಮ್ಮನೆ ಬಲಿಯಾಗಿ ಹೋಗುತ್ತಿವೆ.
ಇದೊಂದಿಷ್ಟು ಅಂಕಿ ಅಂಶಗಳು ನಿಮ್ಮ ಗಮನಿಕ್ಕಿರಲಿ:ಭಾರತದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಪತ್ತೆಯಾಗುವ ಕ್ಯಾನ್ಸರ್ ಪೈಕಿ ಕ್ರಮವಾಗಿ ಪುರುಷರಲ್ಲಿ ಶೇ.56.4 ಆದರೆ ಮಹಿಳೆಯರಲ್ಲಿ ಶೇ.44.6 ಆಗಿದೆ.100 ಕ್ಯಾನ್ಸರ್ ಪ್ರಕರಣಗಳಲ್ಲಿ 40 ಪ್ರಕರಣಗಳು ತಂಬಾಕು ಸೇವನೆಗೆ ಸಂಬಂಧಿಸಿದವುಗಳಾಗಿವೆ.ಒಂದು ಪ್ರಮುಖ ಅಂಶ ಗಮನದಲ್ಲಿಟ್ಟುಕೊಳ್ಳಿ: ಶೇ.95ರಷ್ಟು ಬಾಯಿ ಕ್ಯಾನ್ಸರಿಗೆ ತಂಬಾಕು ಸೇವನೆಯೇ ಕಾರಣವಾಗಿದೆ ಎಂದು ವೈದ್ಯಕೀಯ ಲೋಕ ಘೋಷಿಸಿದೆ.ತಂಬಾಕು ಚಟವಿರುವ ಮೂರ್ಖರನ್ನು ಗಮನಿಸಿ ನೋಡಿ,ಅವರು ತಮ್ಮ ವಯಸ್ಸಿಗಿಂತ ಹತ್ತು ವರ್ಷ ದೊಡ್ಡವರಂತೆ ಕಾಣಿಸುತ್ತಾರೆ;ಇದು ಕೂಡಾ ಸಂಶೋಧನೆಯಿಂದ ದೃಢಪಟ್ಟಿದೆ.ತಂಬಾಕಿನ ಈ ಭಯಾನಕ ಸತ್ಯ ಗೊತ್ತಿದ್ದರೂ ಬಹುತೇಕ ಜನ ಇದಕ್ಕೆ ಬಲಿಯಾಗುತ್ತಿದ್ದಾರೆ.ತಂಬಾಕಿನೊಳಗಿ ರುವ ನಿಕೋಟಿನ್ ಅಂಶ ಮೆದುಳು ಮತ್ತು ನರವ್ಯೂಹದ ಮೇಲೆ ಕೊಂಚ ಉದ್ರೇಕಕಾರಿ ಸುಖವನ್ನು(?)ಉಂಟು ಮಾಡುತ್ತಿರುವುದು ಅದರ ಸೆಳೆತಕ್ಕೆ ಕಾರಣವಾಗುತ್ತಿರಬಹುದು.ಈ ಚಟ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಮತ್ತು ವಿದ್ಯಾವಂತರಲ್ಲಿ ಕಾಣಿಸಿಕೊಳ್ಳುತ್ತಿರುವುದು ದುರದೃಷ್ಟದ ಸಂಗತಿಯಾಗಿದೆ.ಧಾರ್ಮಿಕ ಸಂಘರ್ಷಗಳು,ರಾಜಕೀಯ ತಾರತಮ್ಯಗಳು,ಇಸಂಗಳ ಹೆಸರಿನಲ್ಲಿ ಕಿತ್ತಾಡುವುದಕ್ಕಿಂತ ಮಾದಕ ವ್ಯಸನಗಳ ಅರಿವನ್ನು ಯುವಶಕ್ತಿಯಲ್ಲಿ ತುಂಬುವುದರ ಅವಶ್ಯಕತೆ ಪ್ರಸ್ತುತ ಕಾಲದಲ್ಲಿ ತುಂಬಾ ಅವಶ್ಯಕವಾಗಿದೆ ಎನ್ನುವುದರ ಅರಿವಿನಲ್ಲಿ ಈ ಬರಹ.
ಕೊನೆಯದಾಗಿ:
ಮೊನ್ನೆ ಗ್ರಾಮೀಣ ಪ್ರದೇಶದ(ಹಳ್ಳಿಯಲ್ಲಿ)ಜಾಗವೊಂದರಲ್ ಲಿ ನಿಂತಿದ್ದೆ.ಅದು ವಿವಿಧ ವಸ್ತುಗಳನ್ನು ಮಾರುವ ಒಂದು ಪೆಟ್ಟಿಗೆ ಅಂಗಡಿ.ಆ ಅಂಗಡಿ ಮಾಲೀಕನ ಜೊತೆ ಮಾತಾಡುತ್ತಾ ನಿಂತಿರುವಂತೆ ಹನ್ನೊಂದು ವರ್ಷ ವಯಸ್ಸಿರಬಹುದಾದ ಹುಡುಗ ಅಲ್ಲಿಗೆ ಬಂತು,ಬಂದು ಅಂಗಡಿಯವನನ್ನು ಹೀಗೆಂದು ಕೇಳಿತು:ಅರ್ಧ ಕ್ವಾಟ್ರು ಕೊಡ್ರಿ,ಒಂದು ಕಟ್ಟು ಗಣೇಸು ಬೀಡಿ ಕೊಡ್ರಿ,ಒಂದು ಮಾನಿಕಾರ(ಉಪ್ಪಿನಕಾರ)ಚೀಟು ಕೊಡ್ರಿ,ಉಳಿಕ್ಕಿದ್ದು ರೊಕ್ಕ ಕೊಡ್ರಿ!”ಅಂತು.ನನಗೆ ಮೂರ್ಛೆ ಬಂದಂತನ್ನಿಸಿತು.ಮೈ ಬೆವರಿತು,ಹಳ್ಳಿಗಳಲ್ಲಿ ಮುಗ್ಧ ಮಕ್ಕಳಿಂದ ಸರಾಯಿ,ತಂಬಾಕು ಇತ್ಯಾದಿ ಮಾದಕ ವಸ್ತುಗಳನ್ನು ತರಿಸಲಾಗುತ್ತದೆ ಮತ್ತು ಅಕ್ರಮವಾಗಿ ಕಿರಾಣಿ ಅಂಗಡಿ ಮತ್ತು ಪಾನ್ ಶಾಪ್‍ಗಳಲ್ಲಿ ನಿಯಂತ್ರನವಿಲ್ಲದೆ ಮಾರಾಟ ಮಾಡಲಾಗುತ್ತಿದೆ.ಇದರ ಉಪಕಾರ ಸ್ಮರಣೆಯನ್ನು ಯಡಿಯೂರಪ್ಪನವರ ಹೆಸರಿನೊಂದಿಗೆ ಸ್ಮರಿಸಬೇಕಾಗಿದೆ.ರಾಜ್ಯದಲ್ಲಿ ಸಾರಾಯಿ ನಿಷೇಧ ಹೇರಿ ಸಾರಾಯಿಯನ್ನು ಎಲ್ಲಂದರಲ್ಲಿ ಮಾರಾಟ ಮಾಡುವಂತೆ ಮಾಡಿದ ಪುಣ್ಯಾತ್ಮ!
ಲಕ್ಷ್ಮೀಕಾಂತ ನಾಯಕ
9845968164
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ