ಶನಿವಾರ, ಮಾರ್ಚ್ 14, 2020

ಕಥೆ:ಅಂಧಕಾರ


ಕಥೆ:ಅಂಧಕಾರ

     ಕೈಲಾಗದವನೊಬ್ಬ ಕಟ್ಟೆಯ ಮೇಲೆ ಕುಳಿತು ರಟ್ಟೆಯಲ್ಲಿ ಸೊಕ್ಕು ಇರುವ ಜನಗಳ ಮಗ್ಗಲು ಮುರಿಯುವುದು ಹೇಗೆಂದು ಯೋಚಿಸುತ್ತಾ ಕುಳಿತಿದ್ದ.ತಂದು ಊರಿಗೊಂದು ಮನೆ.ಊರ ತುಂಬಾ ಅವರು.ಕಾಟಿಗರು.ಮಾಂಸ ಮಡ್ಡಿ ತಿನ್ನುವ ಜನಗಳಿಗೆ ಶಕ್ತಿ ಸೇರಿದಂತೆ ಎಲ್ಲವೂ ಹೆಚ್ಚು;ಎಲ್ಲವೂ ಅಂದರೆ ಧೈರ್ಯ,ಲೈಂಗಿಕ ಶಕ್ತಿ,ಸಾವಿಗೂ ಮತ್ತೊಂದಕ್ಕೂ ಹೆದರದ ಜನ.ಅವರು ಶ್ರಮಜೀವಿಗಳು,ಸಾರಾಯಿ ಕುಡಿಯುತ್ತಾರೆ.ಅವರು ಯಾವಾಗ ಮನುಷ್ಯರಾಗುತ್ತಾರೋ ಯಾವಾಗ ರಾಕ್ಷಸರಾಗುತ್ತಾರೋ ತಿಳಿಯದು.ಇಂಥಹ ಜನಗಳ ಸಮೂಹದಲ್ಲಿ ನಿರ್ಭೀತಿಯಿಂದ ತಾನು ಬದುಕಬೇಕೆಂದರೆ ಏನಾದರೂ ಒಂದು ತಂತ್ರ ಹೂಡಲೇಬೇಕು.ಇವರ ರಟ್ಟೆಯೊಳಗಿನ ರಾಕ್ಷಸ ಶಕ್ತಿ ತನ್ನ ನಿಯಂತ್ರಣದಲ್ಲಿರಬೇಕು.ಇವರ ಶಕ್ತಿ,ಇವರ ಮೆದುಳನ್ನು ತಾನು ನಿಯಂತ್ರಿಸಬೇಕು;ಹೇಗೆ?ಹೇಗೆ?ಆತ ಯೋಚಿಸತೊಡಗಿದ.ಸದ್ಯದ ಕಾಲದಲ್ಲಿ ಮನುಷ್ಯನೆನ್ನುವವನಿಗೆ ಯಾವುದೇ ಭಯಗಳಿರಲಿಲ್ಲ.ನಿಯಂತ್ರಣಗಳಿರಲಿಲ್ಲ.ತಾನೋ ದೂರದ ದೇಶದಿಂದ ದನ ಮೇಯಿಸುತ್ತಾ ಬಂದವನು;ದನವೇ ತನ್ನ ಸರ್ವ ಸಂಪತ್ತು;ದನವೇ ತನ್ನ ಆಹಾರ.ತನ್ನೊಳಗೆ ಮೆದುಳಿದೆ;ಶಕ್ತಿ ಇಲ್ಲ.ತನ್ನ ತೋಳುಗಳೂ ದುರ್ಬಲ. ನೆಲದ ಜನ ದೈತ್ಯರು;ಭೇಟೆಗಾರರು.ಕಾಡಿನ ಪ್ರಾಣಿಗಳನ್ನು ಬೆನ್ನು ಹತ್ತಿ ಹೋಗಿ ಭೇಟೆಯಾಡಿ ತಿನ್ನುವ ಜನ!ತಾನು ಅಲ್ಪ ಸಂಖ್ಯಾತ;ಅಸಲು ತನ್ನದು ನೆಲವೇ ಅಲ್ಲ.ಹೇಗೆ ಮಾಡುವುದು?ಆತ ಯೋಚಿಸತೊಡಗಿದ.ಯೋಚಿಸುತ್ತಲೇ ಕುಳಿತ.ಸೂರ್ಯೋದಯಕ್ಕೂ ಮುನ್ನ ಆತ ಕಟ್ಟೆಗೆ ಕುಳಿತಿದ್ದ. ಕಟ್ಟೆಯನ್ನು ಆಕ್ರಮಿಸಿ ವಿಶಾಲವಾಗಿ ಆಕ್ರಮಿಸಿ ಬೇವಿನ ಮರವಿತ್ತು. ಮರದ ನೆರಳು ಕಟ್ಟೆಯ ಮೇಲೆ ಹರಡಿತ್ತು.ಮರ ಬೇವಿನದೆ ಆದರೂ ನೆರಳು ಕಹಿಯಾಗಿರಲಿಲ್ಲ.ತಂಪು ತಂಪಾಗಿತ್ತು;ಹಾಯಾಗಿತ್ತು.ಸಣ್ಣಗೆ ಕಾಡನ್ನು ಬಳಸಿ ಬರುತ್ತಿದ್ದ ಗಾಳಿ ಹಿತವಾಗಿತ್ತು. ದೇಶ ಸಸ್ಯ ಸಂಪದ್ಭರಿತವಾದದ್ದು.ಎಲ್ಲೆಂದರಲ್ಲಿ ಹರಿಯುವ ನದಿಗಳು ಹಸಿರ ದೀಪ ಹಚ್ಚಿದ್ದವು. ಭೂಮಿಯಲ್ಲಿ ಜನಿಸಲಿಕ್ಕೆ ಪುಣ್ಯ ಮಾಡಿರಬೇಕು. ನೆಲದ ಗಾಳಿ ಚೆನ್ನ, ನೆಲದ ಮಣ್ಣು ಚೆನ್ನ, ನೆಲದ ಜನರು ಚೆನ್ನ; ನೆಲದ ಪರಿಸರ ಚೆನ್ನ.ಆದರೆ ತಾನು ಅಲ್ಪ ಸಂಖ್ಯಾತ,ದನ ಮೇಯಿಸುತ್ತಾ ಸಾಗಿದ ತನ್ನ ಪ್ರಯಾಣ ಇಲ್ಲಿಗೆ ಬಂದು ತಲುಪಿದೆ.ಸಿಂದೂ ನದಿಗುಂಟ ನೀರಿನೊಂದಿಗೆ ಸಾಗಿದ ದನಗಳು ಅಂತಿಮವಾಗಿ ಇಲ್ಲಿಗೆ ಮುಟ್ಟಿಸಿವೆ.
    
     ತುಂಬಾ ಹೊತ್ತು ಸುದೀರ್ಘವಾಗಿ ಯೋಚಿಸಿದ ಮೇಲೆ ಆತನಿಗೆ ಉಪಾಯವೊಂದು ಹೊಳೆಯಿತು. ಊರ ಜನ ಸಾಯಂಕಾಲ ತಮ್ಮ ದೈನಂದಿನ ಕೆಲಸಗಳನ್ನು ಮುಗಿಸಿಕೊಂಡು ಒಂದು ಕಡೆ ಸೇರುವುದು ರೂಢಿಯಲ್ಲಿತ್ತು.ಅಸಲು ಮನೆ ಮಠಗಳೇ ಇರಲಿಲ್ಲವಲ್ಲ?ಬಯಲಿನಲ್ಲಿ ಕಾಲಕ್ಷೇಪ ಮಾಡುವುದು ಗುಹೆಗಳಲ್ಲಿ ವಾಸಿಸುವುದು ಅವರ ಪದ್ಧತಿಯಾಗಿತ್ತು.ದಿನಂಪ್ರತಿ ಆಹಾರ ಶೋಧಿಸುವುದು ಅವರ ಕಾಯಕವಾಗಿತ್ತು.ಆಹಾರವೆಂದರೆ ಮಾಂಸವೇ ಪ್ರಧಾನವಾಗಿತ್ತು.ಇದರ ಜತೆಗೆ ಗಡ್ಡೆ ಗೆಣಸುಗಳನ್ನೂ ಅವರು ಭೇಟೆ ದೊರಕದ ಸಂದರ್ಬದಲ್ಲಿ ತಿನ್ನುತ್ತಿದ್ದರು.ಭೇಟೆಯಾಡಿದ ಪ್ರಾಣಿಯ ದೇಹವನ್ನು ಇತ್ತೀಚೆಗೆ ಬೇಯಿಸಿ ತಿನ್ನುವುದನ್ನು ಅವರು ಕಲೆತಿದ್ದರು.ಸಾಯಂಕಾಲ ಸಾಮೂಹಿಕವಾಗಿ ಮಾಂಸವನ್ನು ಬೇಯಿಸಿಕೊಂಡು ಯಥೇಚ್ಚವಾಗಿ ತಿನ್ನುತ್ತಿದ್ದರು.ಮತ್ತುಕಾರಕ ದ್ರವಗಳನ್ನು ಸೇವಿಸುತ್ತಿದ್ದರು.ಸ್ವೇಚ್ಚೆಯೊಂದಿಗೆ ಸಂಭೋಗದಲ್ಲಿ ತೊಡಗುತ್ತಿದ್ದರು.ಸಂಭೋಗಕ್ಕೆ ಇತಿಮಿತಿಗಳು ಇರಲಿಲ್ಲ.ಅದು ಮನಸೋ ಇಚ್ಚೆಯಾಗಿತ್ತು.ಉದ್ರೇಕಗೊಂಡಾಗ ಸಿಗುವ ಹೆಂಗಸಿನೊಂದಿಗೆ ಗಂಡು,ಉದ್ರೇಕಗೊಂಡಾಗ ಸಿಗುವ ಗಂಡಸಿನೊಂದಿಗೆ ಹೆಣ್ಣು ದೇಹ ಸಂಪರ್ಕ ಹೊಂದುವುದು ಸಹಜವಾಗಿತ್ತು.ಬೇಧ ಭಾವಗಳು ಇರಲಿಲ್ಲ.ಸಾಮೂಹಿಕ ಲೈಂಗಿಕ ಕ್ರಿಯೆಗೆ ತೊಡಗಿದಾಗ ಬಲಶಾಲಿ ಗಂಡು ತಾನು ಇಷ್ಟಪಡುವ ಹೆಂಗಸನ್ನು ಬಲಹೀನ ಪುರುಷನೊಂದಿಗೆ ಸೆಣಸಾಡಿ ಹೊಂದುತ್ತಿದ್ದ.ಪ್ರತಿಯೊಬ್ಬ ಭೇಟೆಯಾಡಿ ತಂದ ಆಹಾರ ಬಲಶಾಲಿ ಪುರುಷನೊಂದಿಗೆ ಹಂಚಿಕೊಳ್ಳುವುದು ಕಡ್ಡಾಯವಾಗಿತ್ತು!

     ತಾನು ಸುಸಂಸ್ಕೃತ,ವಿದ್ಯೆಯನ್ನು ಬಲ್ಲವನು.ತಾನು ತನ್ನ ಹೆಣ್ಣನ್ನು ಹಂಚಿಕೊಳ್ಳಲಾರ.ಹಂಗಂತ ರಾಕ್ಷಸರಿಂದ ತನ್ನ ಜೀವ,ಜೀವನ,ಸಂಪತ್ತು ಮತ್ತು ಹೆಣ್ಣನ್ನು ಕಾಪಾಡಿಕೊಳ್ಳಲಾರ.ಅದಕ್ಕೆಂದು ಆತ ಉಪಾಯವೊಂದನ್ನು ಮಾಡಿದ್ದನಲ್ಲಾ ಅದನ್ನು ಜನರ ಮನಸ್ಸಿನಲ್ಲಿ ತುಂಬಲು ಮುಂದಾದ.

     ಹಚ್ಚ ಬಿಳಿಯ ಬಣ್ಣ,ನೀಳ ಶರೀರ,ಕಂದು ಮೂಗು ಇರುವ ಹೊಸ ಮನುಷ್ಯನನ್ನು ಜನ ವಿಚಿತ್ರದಿಂದ ನೋಡತೊಡಗಿದ್ದರು. ಮೊದಲು ಇಂಥಹ ಆಕಾರವಿರುವ ಜನಗಳನ್ನು ಅವರು ಕಂಡಿರಲಿಲ್ಲ.ಆತ ವಿಶೇಷವಾಗಿದ್ದ.ಆತ ಬಗೆಬಗೆಯ ನಟನೆಗಳನ್ನು ಮಾಡುತ್ತಿದ್ದ.ಆತನ ಭಾಷೆ ವಿಚಿತ್ರವಾಗಿತ್ತು.ಆತನ ಕುರಿತು ಕುತೂಹಲಗೊಂಡಿದ್ದ ಜನ ಆತನೊಂದಿಗೆ ಮಾತನಾಡಲು ಉತ್ಸುಕರಾಗಿದ್ದರು. ಸಾಯಂಕಾಲ ಕಟ್ಟೆಯ ಮುಂದಿರುವ ಆವರಣದಲ್ಲಿ ಅವರೆಲ್ಲಾ ಸೇರಿದರು.ಸರಿಯಾಗಿ ಅದೇ ಸಮಯಕ್ಕೆ ಆತ ಆಟ ಪ್ರಾರಂಭಿಸಿದ.ಮೈಯೊಳಗೆ ಏನೋ ಪ್ರಹರಿಸಿದಂತೆ ಆತ ವಿಚಿತ್ರ ರೀತಿಯ ನೃತ್ಯ ಮಾಡತೊಡಗಿದ.ಹಾಗೆ ನೃತ್ಯ ಮಾಡುತ್ತಾ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಬಡಬಡಿಸಿತೊಡಗಿದ.ಜನ ಆಸಕ್ತರಾಗಿ ಕೇಳತೊಡಗಿದರು.

     ನಂತರ ಆತ ದೇವರನ್ನು ಸೃಷ್ಟಿಸಿ ಅವರ ಮನಸ್ಸಿನಲ್ಲಿ ಸ್ಥಾಪಿಸಿದ;ಅವರ ಮನಸ್ಸು ಈಗ ದೇವಸ್ಥಾನವಾಯಿತು.ದೇವರೊಂದಿಗೆ ಆತ ಅವರ ಮೆದುಳಿನೊಳಗೆ ಭಯ ತುಂಬಿದ.ಭಯವೆಂದರೆ ಏನೆಂದು ಅರಿಯದ ಜನ ಕಂಪಿಸತೊಡಗಿದರು.ದೇವರಿಗೊಂದು ಹೆಸರಿಟ್ಟು ಅದನ್ನು ಸದಾ ಸ್ಮರಿಸಲು ಆತ ಅವರಿಗೆ ಆದೇಶಿಸಿದ.ಜನ ಅವನು ಹೇಳಿದಂತೆ ಕೇಳಿದರು.ಆತ ದೇವರ ಶಕ್ತಿಯ ಬಗ್ಗೆ ಘನವಾಗಿ ಹೇಳಿದ.ಅಂದಿನ ಕಾಲದ ಪ್ರಾಕೃತಿಕ ವಿಕೋಪಗಳಿಂದ ದೇವರು ನಿಮ್ಮನ್ನು ಕಾಪಾಡುತ್ತದೆ ಎಂದು ಆತ ಜನರನ್ನು ನಂಬಿಸಿದ.ಜನ ನಂಬಿದರು.ಅವರು ಬೇಸತ್ತು ಹೋಗಿದ್ದರು;ದುತ್ತನೆ ಬಂದೆರಗುವ ಧಾರಾಕಾರ ಮಳೆ,ದುತ್ತನೆ ಕಾಡುವ ಕಾಳ್ಗಿಚ್ಚು,ದುತ್ತನೆ ಬಂದೊದಗುವ ಗಾಳಿ,ದುತ್ತನೆ ಬಂದೊದಗುವ ಜಲ ಅವರನ್ನು ಕೆಂಗೆಡಿಸಿತ್ತು.ಅವರು ಜೀವಗಳನ್ನು ಕಳೆದುಕೊಳ್ಳುತ್ತಿದ್ದರು.ಪ್ರಕೃತಿ ವಿಕೋಪಗಳ ವಿರುದ್ಧ ಸೂಕ್ತ ರಕ್ಷಣೆಗಳನ್ನು ತಾವು ಮಾಡಿಕೊಂಡಿರದ ಕಾಲದಲ್ಲಿ ತಮಗೊದಗುವ ಎಲ್ಲಾ ಅವಘಡಗಳಿಗೆ ದೇವರೇ ಕಾರಣ ಎಂದು ಅವರು ನಂಬಿದರು;ಮೊಟ್ಟ ಮೊದಲ ಬಾರಿಗೆ ಆತ ಆಕಾಶದ ಕಡೆ ತೋರಿಸಿದ ದಿಕ್ಕಿನ ಕಡೆ ನೋಡಿ ಒಕ್ಕೂರಲಿನಿಂದ ಕೈ ಮುಗಿದರು.ಆತ ಅವರ ಪಾಲಿನ ದೇವರಾಗಿ ಕ್ಷಣ ಕಂಡ.ತಾನು ದೇವದೂತನೆಂದು,ದೇವರ ನಾಡಿನಿಂದ ನಿಮ್ಮನ್ನೆಲ್ಲಾ ಕಾಪಾಡಲೆಂದು ಬಂದವನೆಂದು ನಂತರದ ದಿನಗಳಲ್ಲಿ ಆತ ಅವರಿಗೆ ಹೇಳಿದ.ಇರಾನ್ಕಡೆಯಿಂದ ಬಂದ ಆತ ಬುದ್ದಿವಂತನಿದ್ದ.ಕಂದು ಬಣ್ಣದ ಮೂಗಿತ್ತು.ಬಿಳಿ ಬಣ್ಣದ ದೇಹವಿತ್ತು.ಆತನ ಹತ್ತಿರ ಹಸು,ಕುರಿ,ನಾಯಿ,ಮೇಕೆಗಳಿದ್ದವು.ಆತ ನಾಗರಿಕ ನಾಡಿನಿಂದ ಬಂದವನಾದ್ದರಿಂದ ಮನೆಯನ್ನು ನಿರ್ಮಿಸುವುದನ್ನು ಕಲೆತಿದ್ದ.ನಂತರದ ದಿನಗಳಲ್ಲಿ ಕಪ್ಪು ಬಣ್ಣದ ಜನಗಳಿಗೆ ಸುರಕ್ಷಿತವಾಗಿರುವುದನ್ನು ಮನೆ ನಿರ್ಮಿಸುವುದನ್ನು ಕಲಿಸುವುದರ ಮುಖಾಂತರ ಹೇಳಿದ.ಸದ್ಯಕ್ಕೀಗ ಅವರು ಗಾಳಿಯಿಂದ,ಮಳೆಯಿಂದ,ಅಗ್ನಿಯಿಂದ ಸುರಕ್ಷಿತರಾಗಿದ್ದರು.ಇದೆಲ್ಲವೂ ದೇವರ ಕೃಪೆ ಎಂದು ಭಯಂಕರ ಮಳೆ ಮತ್ತು ಗಾಳಿ ಬೀಸಿದ ರಾತ್ರಿಯ ಮರು ಬೆಳಿಗ್ಗೆ ತಾವಿನ್ನೂ ಜೀವಂತವಾಗಿರುವುದನ್ನು ಕಂಡು ಸಂಭ್ರಮಿಸಿದರು. ಸಂಭ್ರಮವನ್ನು ಹೃದಯಪೂರ್ವಕ ಅವರು ಸ್ಮರಿಸಿಕೊಳ್ಳುತ್ತಾ ದೇವಧೂತನೊಂದಿಗೆ ಹಂಚಿಕೊಂಡರು.ಇದೆಲ್ಲವೂ ದೇವರ ಕೃಪೆ ಎಂದು ಅವರು ಅಂದ ದಿನ ಆತ ಅವರನ್ನುದ್ದೇಶಿಸಿ ಮಾತುಗಳನ್ನು ಆಡಿದ:

     "ನೀವೆಲ್ಲರೂ ದೇವರ ಮಕ್ಕಳು,ನಾನು ದೇವರ ಧೂತ.ದೇವರು ಮೇಲಿದ್ದಾನೆ. ದೇವರು ನಿಮ್ಮನ್ನು ಕಾಪಾಡುತ್ತಾನೆ. ದೇವರು ನಿಮ್ಮನ್ನು ಕಾಪಾಡು ಎಂದು ನನ್ನನ್ನು ಕಳಿಸಿದ್ದಾನೆ.ನಿಮ್ಮನ್ನೆಲ್ಲಾ ಕಾಪಾಡುವ ದೇವರಿಗೆ ನೀವೇನು ಮಾಡಬಲ್ಲಿರಿ?"ಎಂದು ಪ್ರಶ್ನೆಯೊಂದನ್ನು ಕೇಳಿದ.ಜನ ಭಯ ಭೀತಿಯಿಂದ ಮುಖ ಮುಖ ನೋಡಿಕೊಳ್ಳತೊಡಗಿದರು.ತಾವೇನು ಕೊಡಬಲ್ಲೇವು ದೇವರಿಗೆ ಎನ್ನುವುದು ಅವರಿಗೆ ಅರಿಯದೇ ಹೋಯಿತು.ಅವರಲ್ಲೂ ದನಕರುಗಳಿದ್ದವು;ಆಪತ್ಕಾಲಕ್ಕೆಂದು ಸಂಗ್ರಹಿಸಿದ ಗೆಡ್ಡೆ ಗೆಣಸುಗಳಿದ್ದವು.ಅಮೂಲ್ಯ ಎನ್ನುವ ಮುತ್ತು ರತ್ನಗಳ ಸಂಗ್ರಹವಿತ್ತು.ಆದರೆ ಇವುಗಳನ್ನೆಲ್ಲಾ ದೇವರಿಗೆ ಅರ್ಪಿಸುವುದು ಹೇಗೆ? ಅವರು ಚಿಂತಾ ಮಗ್ನರಾದರು.ಅವರಿಗೆ ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಯಿತು.ಇದಕ್ಕೆ ನೀವೆ ಪರಿಹಾರ ಸೂಚಿಸಬೇಕು ಎಂದು ಅವರು ದೇವಧೂತನ ಮುಖವನ್ನು ಮಿಕಿಮಿಕಿ ನೋಡಿದರು.ಅವರ ಬಲಶಾಲಿ ದೇಹಗಳು ಕುಬ್ಜವಾಗಿದ್ದವು.ದೇವಧೂತ ಮಾತಾಡತೊಡಗಿದ.

     "ನೀವು ವಾಸಿಸಲು ಸುರಕ್ಷಿತ ಮನೆಗಳನ್ನು ಕಟ್ಟಿಸಿಕೊಂಡಿರಿ,ದೇವರು ಭೂಮಿಗೆ ಬಂದರೆ ಆತ ಎಲ್ಲಿ ನೆಲಸಬೇಕು?ಮೊನ್ನೆ ರಾತ್ರಿ ನನ್ನ ಮನೆಗೆ ಬಂದ ದೇವರಿಗೆ ಇರಲಿಕ್ಕೆ ಜಾಗವಿರಲಿಲ್ಲ.ತಿನ್ನಲಿಕ್ಕೆ ಆಹಾರವಿರಲಿಲ್ಲ.ನಿಮ್ಮನ್ನು ಕಾಪಾಡಲು ಇಲ್ಲಿಯೇ ಇರುತ್ತೇನೆ ಎಂದ ದೇವರನ್ನು ನಾನು ವಾಪಸ್ಸು ಆತನ ನಾಡಿಗೆ ಕಳಿಸಿಕೊಟ್ಟೆ.ದೇವರನ್ನು ನನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಎಂದರೆ ಏನು?ದೇವರಷ್ಟು ದೊಡ್ಡವನೆ ನಾನು?ನೀವೆಲ್ಲರೂ ಸೇರಿ ದೇವರಿಗಾಗಿ ಒಂದ ಗುಡಿಯನ್ನು ಕಟ್ಟಿಸಲಾರಿರಾ?"ಎಂದು ಆತ ಅವರನ್ನು ಕೇಳಿದ.ಜನಗಳ ಗುಂಪಿನಲ್ಲಿ ಇದರ ಕುರಿತು ಚರ್ಚೆ ನಡೆಯಿತು;ಅಂತಿಮವಾಗಿ ಅವರು ಗುಡಿ ಕಟ್ಟುವ ತೀರ್ಮಾನಕ್ಕೆ ಬಂದರು.ದೇವಧೂತ ಸಂತೃಷ್ಟನಾದ.

     ಕೆಲವೇ ಕೆಲವು ದಿನಗಳಲ್ಲಿ ದೇವರಿಗಾಗಿ ಒಂದು ಗುಡಿ ನಿರ್ಮಾಣವಾಯಿತು.ನಂತರದಲ್ಲಿ ಕಲ್ಲೊಂದರಲ್ಲಿ ದೇವರಿದ್ದಾನೆ ಎಂದು ನಂಬಿಸುವಲ್ಲಿ ದೇವಧೂತ ಯಶಸ್ವಿಯಾದ;ಸ್ಥಾವರ ಪ್ರತಿಷ್ಠಾಪನೆಯಾಯಿತು.ದೇವರಿಗೆ ಹಸಿವು ನಿದ್ರಾಹಾರಗಳ ಅವಶ್ಯಕತೆ ಇದೆ ಎಂದು ನಂಬಿಸಿದ.ಪೂಜೆ ಪುನಸ್ಕಾರ ಮತ್ತು ಬಲಿಗಳು ಪ್ರಾರಂಭವಾದವು.ಯಥೇಚ್ಚವಾಗಿ ನೈವೇದ್ಯ ಹರಿದು ಬರತೊಡಗಿತು.ಕಾಣಿಕೆಗಳು ಹರಿದು ಬರತೊಡಗಿದವು.ದೇವರಿಗಿಂತಾ ಹೆಚ್ಚಾಗಿ ದೇವಧೂತನಿಗೆ ಹೆದರತೊಡಗಿದರು ಜನ.ಬಲಶಾಲಿಗಳ ಶಕ್ತಿ ಅರ್ಥಹೀನವಾಹಿತು.ಮೆದುಳು ದೇವಧೂತನ ಪಾಲಾಯಿತು.ಸಂಪೂರ್ಣ ಜನ ಆತನ ನಿಯಂತ್ರಣಕ್ಕೆ ಬಂದಿತು;ಜನಗಳಿಗೆ ಆತನೇ ಮಾರ್ಗದರ್ಶಕನಾದ.ಜನ ಆತನ ಮಾತನ್ನು ಚಾಚೂ ತಪ್ಪದೆ ಪಾಲಿಸತೊಡಗಿದರು.ನಂತರದ ದಿನಗಳಲ್ಲಿ ದೇವಸ್ಥಾನಗಳ ಸಂಖ್ಯೆ ಹೆಚ್ಚು ಮಾಡಿದ.ಇರಾನಿನ ದಿಕ್ಕಿನಿಂದ ಬಂದ ತನ್ನ ಪರಿವಾರಗಳನ್ನು ದೇವಧೂತರನ್ನಾಗಿ ಮಾಡಿದ.ಜನ ಸಂಖ್ಯೆ ಬೆಳೆಯಿತು,ದೇವಸ್ಥಾನಗಳು ಹೆಚ್ಚಾದವು.ಜನಾಂಗಳು ಒಡೆದು ಹೋಗಿ ಹಲವು ಪಂಗಡಗಳಾದವು.ಪಂಗಡಗಳಿಗೊಂದು ದೇವರು ಹುಟ್ಟಿಕೊಂಡ.ದೇವರ ಹೆಸರಿನಲ್ಲಿ ಜಗಳಗಳು ಪ್ರಾರಂಭವಾದವು.

     ದೇವಧೂತ ಪೂಜಾರಿಯಾಗಿ ಪುರೋಹಿತನಾಗಿ ಬದಲಾದ.ದೇವರು ಎನ್ನುವ ಶಬ್ದ ಜನಗಳ ಬಲಹೀನತೆಯನ್ನು ಬಳಸಿಕೊಳ್ಳುವ ಬಂಡವಾಳವಾಗಿ ಬದಲಾಯಿತು.ಇಸಂಗಳು ಹುಟ್ಟಿದವು;ಜಾತಿಗಳು ಹುಟ್ಟಿದವು;ಧರ್ಮಗಳು ಹುಟ್ಟಿದವು;ನಾಗರೀಕತೆ ಹುಟ್ಟಿತು;ಮನುಷ್ಯ ರಾಕ್ಷಸನಾಗಿ ಬದಲಾದ!

+++++++++++++++++

     "ಏನ್ಸಾರ್ಇಷ್ಟೊಂದು ಸುಲಭವಾಗಿ ಹೇಳಿ ಬಿಟ್ಟಿರಿ!ದೇವರು ಅಂದರೆ ಅಷ್ಟೇನಾ?ಇಡೀ ಪ್ರಪಂಚ ದೇವರನ್ನು ನಂಬುತ್ತದೆ ಸರ್!ಭಾರತದಲ್ಲಿ ಬೆಂಕಿಯಂತಹ ದೇವರುಗಳಿವೆ;ಇಷ್ಟಾರ್ಥಗಳನ್ನು ಕ್ಷಣದಲ್ಲಿ ತೀರಿಸುವ ದೇವರುಗಳಿವೆ.ತಿರುಪತಿ ವೆಂಕಟರಮಣ ಸ್ವಾಮಿ,ಶಬರಿ ಮಲೈ ಅಯ್ಯಪ್ಪ ಸ್ವಾಮಿ,ಶ್ರೀಶೈಲ ಮಲ್ಲಿಕಾರ್ಜುನ ಕಡಿಮೆ ಶಕ್ತಿಯ ದೇವರುಗಳಲ್ಲ. ದೇವರುಗಳನ್ನು ವರ್ಷಕ್ಕೆ ಒಂದು ಸಲವೂ ಸಂದರ್ಶಿಸದ ಭಕ್ತರಿಲ್ಲ.ಮಹ್ಮದ್ಪೈಗಂಬರರು,ಜೀಸಸ್ಇವರೆಲ್ಲಾ ಏನು?ನಿಮ್ಮಾತು ಕೇಳಿ ಇದನ್ನು ಯಾರ ಮುಂದಾದರೂ ಹೇಳಿದರೆ ಜನ ಹುಚ್ಚು ನಾಯಿಗೆ ಹೊಡೆದಂತೆ ಕಲ್ಲಿನಿಂದ ಹೊಡೆದು ಸಾಯಿಸುತ್ತಾರೆ ಸರ್!ನಮ್ಮನೆಯಲ್ಲಿ ದಿನಾಲೂ ಎರಡು ಸಲ ನನ್ನ ತಾಯಿ ದೇವರಿಗೆ ದೀಪ ಹಚ್ಚುತ್ತಾಳೆ.ವರ್ಷಕ್ಕೊಮ್ಮೆ ನಾವು ಶ್ರೀಶೈಲ ಪಾದಯಾತ್ರೆಗೆ ಹೋಗುತ್ತೇವೆ. ದೇವರ ದಯೆಯಿಂದ ಆರಾಮವಾಗಿದ್ದೇವೆ.ನೀವು ನೋಡಿದರೆ ದೇವರನ್ನು ಒಬ್ಬ ಕೈಲಾಗದ ಮನುಷ್ಯ ಸೃಷ್ಟಿಸಿದ ಎಂಬಂತೆ ಹೇಳುತ್ತಿದ್ದೀರಿ,ನಾನು ನಂಬೊಲ್ಲ ಸರ್!ನೀವು ದೇವರ ಮೇಲೆ ಸಿಟ್ಟಾಗಿದ್ದೀರಾ? ನಿಮ್ಮ ಜೀವನದ ವೈಫಲ್ಯದಿಂದ ಹತಾಶರಾಗಿ ಹೀಗೆ ಬದಲಾಗಿದ್ದೀರಾ!ದೇವರನ್ನು ನಂಬಬೇಕು ಸರ್,ದೇವರು ನಮಗೆ ಸುಖ ಶಾಂತಿಗಳನ್ನು ಕೊಡುತ್ತಾನೆ.ನೆಮ್ಮದಿ ಕೊಡುತ್ತಾನೆ.ಮೋಕ್ಷ ಕೊಡುತ್ತಾನೆ"ಎಂದ ವಿಶ್ವ,ವಿಶ್ವರಾದ್ಯ ನಾಯಕ.ಪ್ರೊಫೇಸರ್ರಮಣ ತಲೆ ಕೆರೆದುಕೊಂಡರು.ಮಿಥ್ಯೆವನ್ನು ಸತ್ಯವೆಂದು ನಂಬಿರುವ ಜಗತ್ತಿನ ಮೆದುಳುಗಳನ್ನು ಬದಲಿಸಲಾಗದು ಎನ್ನುವ ಸತ್ಯ ಅವರಿಗೆ ಗೊತ್ತು.

     ಕ್ರಿಸ್ತ ಪೂರ್ವ 919ರಲ್ಲಿ ಗ್ರೀಕ್ದೇಶದಲ್ಲಿ ಸಾಕ್ರೇಟಿಸ್ಎನ್ನುವ ಮಾಹಾನುಭಾವ ಆತ್ಮವಿದೆ,ದೇವರಿದ್ದಾನೆ ಎಂದು ಸಿದ್ಧಾಂತ ಮಂಡಿಸಿದಾಗ ಜನ ಆತನನ್ನು ಹುಚ್ಚ ಎಂದು ತೀರ್ಮಾನಿಸಿದ್ದರು.ಹೊಸ ಹೊಸ ದೇವರುಗಳನ್ನು ಸೃಷ್ಟಿಸುತ್ತಿದ್ದಾನೆ ಎಂದು ಆತನನ್ನು ಕಲ್ಲಿನಿಂದ ಹೊಡೆದರು.ಜನರಿಗೆ ದೇವರ ಪರಿಕಲ್ಪನೆ ಇರಲಿಲ್ಲ.ಅವರು ಪ್ರಕೃತಿಯನ್ನು ಪೂಜಿಸುತ್ತಿದ್ದರು.ಸೂರ್ಯನನ್ನು ಗಾಳಿಯನ್ನು ಬೆಂಕಿಯನ್ನು ಅವರು ದೇವರೆಂದು ಭಾವಿಸಿದ್ದರು.ಸಾಕ್ರೇಟಿಸನ ಬಂಧನವಾಯಿತು.ಜೈಲಿನಲ್ಲಿ ಆತನನ್ನು ಪರಿಪರಿಯಾಗಿ ಹಿಂಸಿಸಲಾಯಿತು.ಆತ ತನ್ನ ಪ್ರತಿಪಾದನೆಯಿಂದ ಹಿಂದೆ ಸರಿಯಲಿಲ್ಲ.ಆತ ಹೇಳಿದ್ದು ಮನುಷ್ಯನಲ್ಲಿ ದೇವರಿದ್ದಾನೆ ಎಂದು.ಆತ್ಮ ಎನ್ನುವುದು ಮನುಷ್ಯನಲ್ಲಿದ್ದು ಅದು ಮನುಷ್ಯನನ್ನು ಚಾಲಿಸುತ್ತಿದೆ ಎಂದು ಹೇಳಿದ್ದ.ಮನುಷ್ಯರಲ್ಲಿರುವಂತೆ ಪ್ರಾಣಿಗಳಲ್ಲೂ ಆತ್ಮವಿದೆ ಎಂದು ಸಿಂಹವೊಂದನ್ನು ಪಳಗಿಸಿ ತೋರಿಸಿ ಕೊಟ್ಟಿದ್ದ.ಜೈಲಿನಲ್ಲಿ ಅನ್ನದಲ್ಲಿ ಆತ ತನ್ನ ಪ್ರತಿಪಾದನೆಯಿಂದ ಹಿಂದೆ ಸರಿಯದ ಕಾರಣಕ್ಕೆ ವಿಷ ಹಾಕಿ ಕೊಲ್ಲಲಾಯಿತು.ಆದರೆ ಆತನ ಆಲೋಚನೆ ಸಾಯಲಿಲ್ಲ.ಆತನ ಶಿಷ್ಯ ಫ್ಲೋಟೋ ಅದೇ ಸಿದ್ದಾಂತದ ಪ್ರಚಾರಕ್ಕೆ ತೊಡಗಿದ.ಫ್ಲೋಟೋ ನಂತರ ಆತನ ಶಿಷ್ಯ ಆರಿಸ್ಟಾಲ್ ಸಿದ್ದಾಂತದ ಪ್ರಚಾರ ಮುಂದುವರೆಸಿದ;ಜನ ಕ್ರಮೇನ ನಂಬಿದರು.ಇವತ್ತತು ಇಡೀ ಪ್ರಪಂಚ ದೇವರನ್ನು ನಂಬತೊಡಗಿದೆ.ಸಾಕ್ರೇಟಿಸನ ಸಿದ್ದಾಂತವನ್ನು ನಂಬತೊಡಗಿದೆ.ಇವತ್ತು ದೇವರಿಲ್ಲ,ಅದೊಂದು ಕಲ್ಪನೆ,ಬಂಡವಾಳಶಾಹಿಗಳು ಹುಟ್ಟು ಹಾಕಿದ ನಂಬಿಕೆ ಎಂದು ಹೇಳ ಹೋದರೆ ನಿಜಕ್ಕೂ ಜನ ಹುಚ್ಚು ನಾಯಿಗೆ ಹೊಡೆದಂತೆ ಕಲ್ಲಿನಿಂದ ಹೊಡೆದು ಸಾಯಿಸುವುದರಲ್ಲಿ ಆಶ್ಚರ್ಯವಿಲ್ಲ!

     ಪ್ರೊಫೆಸರ್,"ನೀನು ನಂಬು ಅಂತ ಹೇಳುತ್ತಿಲ್ಲ ವಿಶ್ವ,ಹೊಸ ವಿಚಾರವೊಂದು ಜನರ ಮನಸ್ಸಿನಲ್ಲಿ ತುಂಬುವುದು ಅಷ್ಟು ಸುಲಭವೂ ಅಲ್ಲ!ನನ್ನ ಜೀವನ ವೈಫಲ್ಯಕ್ಕೆ ನನ್ನ ಅಸಂಬದ್ಧ ನಡೆಗಳೇ ಕಾರಣ,ಅದು ಬೇರೆ ವಿಷಯ.ಮನುಷ್ಯನೊಬ್ಬ ಜೀವನಕ್ಕೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಹೋದಾಗ ಜೀವನ ವೈಫಲ್ಯದ ದಿಕ್ಕಿನ ಕಡೆ ಸಾಗುತ್ತದೆ.ದೇವರಿಂದ ಸುಖ ಶಾಂತಿ ನೆಮ್ಮದಿಗಳು ಸಿಗುತ್ತಿವೆ ಎನ್ನುವ ನಿನ್ನ ಮಾತು ಸಂತೋಷದಾಯಕ.ಅದರಿಂದ ಕಾರ್ಯವಾಗುತ್ತಿದೆ ಎಂದರೆ ಬಲು ಹೆಮ್ಮೆ ನನಗೆ.ಆದರೆ ದೇವರನ್ನೇ ನೆನೆಯುತ್ತಾ ಮೂರು ಹೊತ್ತು ದೇವಸ್ಥಾನದಲ್ಲಿ ಕೂತು ನೋಡು,ಸುಖ ಶಾಂತಿ ನೆಮ್ಮದಿ ಅಷ್ಟೇ ಅಲ್ಲ ಜೀವನ ಅವರು ಸೃಷ್ಟಿಸಿದ ನರಕದ ಪಾಲಾಗುತ್ತದೆ.ಕೊಲೆ ಮಾಡುವವನು ದೇವರೆ ಡೀಲ್ಯಶಸ್ವಿಯಾಗಿ ನಡೆಯಲಿ,ನಿನ್ನ ಹುಂಡಿಗೆ ಕಾಣಿಕೆ ಹಾಕುತ್ತೇನೆ ಎಂದು ಬೇಡಿಕೊಳ್ಳುತ್ತಾನೆ;ಕೊಲೆಗೆ ಒಳಗಾಗುವವನೂ ದೇವರೆ ನನಗೆ ಯಾವ ಆಪತ್ತೂ ಬಾರದಿರಲಿ,ನಿನ್ನ ಹುಂಡಿಗೆ ಹಣ ಹಾಕುತ್ತೇನೆ ಎಂದು ಬೇಡಿಕೊಳ್ಳುತ್ತಾನೆ.ದೇವರು ಯಾರ ಹರಕೆಯನ್ನು ತೀರಿಸಬೇಕು?ಯಾವ ಡಾಕ್ಟರ್ಇವತ್ತು ರೋಗಿಗಳ ಸಂಖ್ಯೆ ಕಡಿಮೆ ಇರಲಿ ಎಂದು ಮುಂಮಜಾನೆ ಊದುಬತ್ತಿ ಹಚ್ಚುವುದಿಲ್ಲ.ಯಾವ ವಕೀಲನೂ ಇವತ್ತು ವ್ಯಾಜ್ಯಗಳು ಬಾರದಿರಲಿ ಎಂದು ದೇವರನ್ನು ಪ್ರಾರ್ಥಿಸುವುದಿಲ್ಲ.ವರ್ಷಕ್ಕೊಮ್ಮೆ ದೇವಸ್ಥಾನಕ್ಕೆ ಹೋಗುವ ನೀನು ನೆಮ್ಮದಿಯಿಂದ ಇರುವುದಾದರೆ ವರ್ಷ ಪೂರ್ತಿ ದೇವಸ್ಥಾನದ ಮೆಟ್ಟಿಲ ಮೇಲೆ ಕೂತಿರುವ ಭಿಕ್ಷುಕ ಏಕೆ ಸುಖ ಶಾಂತಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಕಾಣುತ್ತಿಲ್ಲ?"ಎಂದರು ಪ್ರೊಫeಸರ್.ವಿಶ್ವ ಮೌನವಾದ.ಅವನಿಗೆ ಏನು ಹೇಳಬೇಕೋ ತಿಳಿಯದಾಯಿತು.ಆತನ ಮನಸ್ಸಿನಲ್ಲಿ ಭಾರತದ ಮುಕ್ಕೋಟಿ ದೇವರುಗಳು ಹಾದು ಹೋದರು.ಒಂದು ಸಲ ಅಯ್ಯಪ್ಪಸ್ವಾಮಿ ಭಾವಚಿತ್ರ ಬಲವಾಗಿ ಮೂಡಿ ಹೋಯಿತು,ವೆಂಕಟರಮಣನೂ ಮನಸ್ಸಿನ ಪರದೆಯಲ್ಲಿ ಬಾರದೆ ಇರಲಿಲ್ಲ.ತನ್ನ ಮನೆ ದೇವರಾದ ಶ್ರೀಶೈಲ ಮಲ್ಲಿಕಾರ್ಜುನ ಸಾಕ್ಷಾತ್ಪ್ರತ್ಯಕ್ಷವಾದಂತೆ ಭಾಸವಾದ.ಅವರಿಬ್ಬರೂ ಕೂತ ಸ್ಥಳ ಪ್ರಮುಖವಾದ ಒಂದು ಮುಖ್ಯರಸ್ತೆ.ಅದು ರಾಯಚೂರಿಗೆ ತಲುಪುವ ಮುಖ್ಯ ರಸ್ತೆ,ಇನ್ನೊಂದು ಹದಿನೈದು ದಿನದಲ್ಲಿ ಉಗಾದಿ,ಉಗಾದಿಯಲ್ಲಿ ಶ್ರೀಶೈಲದಲ್ಲಿ ಜಾತ್ರೆ.ಉಗಾದಿಯ ಹೊತ್ತಿಗೆ ತಲುಪಬೇಕು ಎಂದು ಹೊರಟ ಮಾಹಾರಾಷ್ಟ್ರದ ಸೊಲ್ಲಾಪೂರದ ಯಾತ್ರಿಗಳ ದಂಡು!ಧಾರಾಕಾರ ಬಿಸಿಲು!ನಯಾ ಪೈಸೆಯೂ ಖರ್ಚು ಮಾಡದ ಒಬ್ಬ ಲೋಭಿ ಶ್ರೀಶೈಲ ಯಾತ್ರಿಕರಿಗೆ ಅನ್ನದಾಸೋಹ ಏರ್ಪಡಿಸುತ್ತಾನೆ.ವ್ಯಾಪಾರದ ಹೆಸರಿನಲ್ಲಿ ಜನ ಸಾಮಾನ್ಯರ ಕತ್ತು ಹಿಸುಕಿದ ಆತ ನೀರಿನ ಅರವಟ್ಟಿಗೆ ಇಟ್ಟಿರುತ್ತಾನೆ.ಅದರ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಾನೆ.ಅದನ್ನು ಫೇಸ್ಬುಕ್ಮತ್ತು ವಾಟ್ಸಪ್ಪಿನಲ್ಲಿ ಹರಿಬಿಡುತ್ತಾನೆ.ಘನ ಕಾರ್ಯ ಮಾಡಿದೆ ಎಂದು ಘನವಾಗಿ ಹೇಳಿಕೊಳ್ಳುತ್ತಾನೆ!ಸುದ್ದಿಯಾಗುವುದು ಮುಖ್ಯ. ರಸ್ತೆಯ ಗುಂಟ ಯಾತ್ರಿಗಳ ದಂಡಿತ್ತು.ಅವರ ಕೈಗಳಲ್ಲಿ ಕೇಸರಿಯ ಧ್ವಜಗಳಿದ್ದವು. ಹೋಟೆಲ್ಲಿನ ಕಿಟಿಕಿಯಿಂದ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಮಾರ್ಚ್ತಿಂಗಳ ಧಗೆಯೊಂದಿಗೆ ಹೋರಾಡಲು ಏಸಿ ವಿಫಲ ಪ್ರಯತ್ನ ನಡೆಸಿತ್ತು.ಕೋಣೆ ಪ್ರಶಾಂತವಾಗಿತ್ತು.

     ಪ್ರೊಫೇಸರ್ಮಾತು ಆರಂಭಿಸಿದರು:

                                                                                                                                                                                                                                                           (ಮುಂದುವರೆಯುವುದು)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...