ವರ್ಷದ ಹಿಂದೆ
ಹೀಗೊಂದು ಲೇಖನ ಬರೆದಿದ್ದೆ,ಖಿನ್ನತೆಗೆ ಒಳಗಾಗಿ ನೊಂದ ಜೀವಕ್ಕೆ ಸಾಂತ್ವನ ಹೇಳುತ್ತಾ:
ಫೇಸ್ ಬುಕ್ಕು ಮತ್ತದರ
ಅಭಿಮಾನಿಯ ಆತ್ಮಹತ್ಯೆ ಪ್ರಕರಣವು..
ರಾತ್ರಿ ಹತ್ತು ಗಂಟೆಯ
ಸಮಯ;ಓದುತ್ತಿರುವ ಪುಸ್ತಕ ಮಡಚಿಟ್ಟು ಕಣ್ಣುಗಳು ಭಾರವಾದ ಪ್ರಯುಕ್ತ ಮಲಗಲು ಆಕಳಿಸಿದೆ.ಸರಿಯಾಗಿ
ಅದೇ ಸಮಯಕ್ಕೆ ನನ್ನ ಪ್ರಿಯೆ ಸಖಿ ತನ್ನ ಸುಶ್ರಾವ್ಯ ಕಂಠದಿಂದ ಚೀರತೊಡಗಿದಳು.ಮೊಬೈಲ್ ಕೈಗೆ
ತೆಗೆದುಕೊಂಡು ನೋಡಿದರೆ ಹೆಸರು ಪ್ರದರ್ಶಿಸದೇ ಅದೊಂದು ಅಪರಿಚಿತ ಕರೆಯಾಗಿತ್ತು.ಕುತೂಹಲಗೊಂಡು
ರಿಸೀವ್ ಮಾಡಿದರೆ ಆ ಕಡೆಯಿಂದ.
“ನಮಸ್ಕಾರ
ಅಣ್ಣ,ಹೇಗಿದ್ದೀರ?’ಎನ್ನುವ ಪ್ರಶ್ನೆ.ಹೇಗಿರುತ್ತೇನೆ?ಕಣ್ಣುಗಳು ನಿದ್ರೆಗೆ
ಹಾತೊರೆಯತ್ತಿರುವುದರಿಂದ ನಶೆಯಲ್ಲಿರುವಂತೆ ಮತ್ತಿನಲ್ಲಿರುವಂತೆ ಇದ್ದೇನೆ.ಸದ್ಯ ಆರೋಗ್ಯದ
ಸಮಸ್ಯೆಗಳಾವು ಇಲ್ಲವಾದ್ದರಿಂದ ಚೆನ್ನಾಗಿಯೇ ಇದ್ದೇನೆ.ಹಾಗಂತ ರಕ್ತ ಪರೀಕ್ಷೆ ಮತ್ತು ಮೂತ್ರ
ಪರೀಕ್ಷೆಯ ರಿಪೋರ್ಟಗಳು ಹೇಳುತ್ತಿವೆ.ಈ ಅಪರಿಚಿತನ ಪ್ರಶ್ನೆಗೆ ಆರೋಗ್ಯ ವರದಿಯನ್ನು ರಿಪೋರ್ಟುಗಳ
ಸಮೇತ ನಿವೇದಿಸುವುದೇ ಸಹಜವಾಗಿ ಆರೋಗ್ಯವಾಗಿದ್ದೇನೆ ಎಂದು ಹೇಳುವುದೇ ತುಸು ಗೊಂದಲಕ್ಕೆ
ಬಿದ್ದೇನಾದರೂ ಲೋಕಾರೂಢಿಯ ಪ್ರಶ್ನೆಗೆ ಸಹಜವಾಗಿ “ಸದ್ಯ ಚೆನ್ನಾಗಿದ್ದೇನೆ,ತಾವು ಯಾರು
ಸರ್?”ಎಂದು ಹೇಳಿದೆ.”ಸರ್ ನೀವಂದ್ರೇ ನಂಗೆ ತುಂಬಾ ಇಷ್ಟ ಸರ್,ನೀವು ತುಂಬಾ ಚೆನ್ನಾಗಿ
ಮಾತಾಡುತ್ತೀರ,ನಿಮ್ಮ ವಿಚಾರಗಳು ತುಂಬಾ ಆಸಕ್ತಿಕರವಾಗಿರುತ್ತವೆ.ನೀವು ಸಾಮಾಜಿಕ ಜಾಲತಾಣದಲ್ಲಿ
ಆಗಾಗ ಬರೀತಾ ಇರುತ್ತೀರಲ್ಲ?ಅದ್ಬುತವಾಗಿರುತ್ತದೆ ಸರ್,ನಿಮಗಿಂತ ನೋವನ್ನು ಅನುಭವಿಸಿದವರು,ಮತ್ತು
ನಿಮಗಿಂತ ನೋವಿನ ಬಗ್ಗೆ ಬರೆಯುವವರು ಯಾರೂ ಇಲ್ಲ ಸರ್!”ಎಂದ.ಹೊಗಳಿಕೆಗೆ
ಉಬ್ಬದವರ್ಯಾರು?ಸಹಜವಾಗಿಯೇ ಸ್ವಲ್ಪ ಮೃದುವಾದೆ.ಉದ್ಯೋಗವಿಲ್ಲದಿರುವುದರಿಂದ ಫೇಸ್ ಬುಕ್ ಮತ್ತು
ವಾಟ್ಸಪ್ ಎಂಬ ಬಯಲು ಆಟಗಳಲ್ಲಿ ಸಕ್ರೀಯನಾಗಿದ್ದು ಸಣ್ಣ ಟಿಪ್ಪಣಿ ಹಾಗೂ ಕೋಟ್ಸ್ ಗಳನ್ನು
ಹಾಕುತ್ತಿರುತ್ತೇನೆ.ಆಗಾಗ ಕವಿತೆಗಳು ಎಂದುಕೊಂಡು ಶಬ್ದಗಳ ಸಮುಚ್ಛಯ ಬರೆಯುತ್ತಿರುತ್ತೇನೆ.ಈತ
ಫೇಸ್ ಬುಕ್ ಸ್ನೇಹಿತನಾಗಿರಬಹುದು ಎಂದುಕೊಂಡೆ.ಎಷ್ಟೇ ಆಗಲಿ ಲೈಕ್ ಒತ್ತುವ ಅಭಿಮಾನಿ
ಅಲ್ಲವೇ?”ಹೌದೇ?ಯಾವ ಊರು,ಏನು ತಮ್ಮ ಹೆಸರು?”ಎಂದು ಕೇಳಿದೆ.ನಾನು ಕೇಳಿದ ಪ್ರಶ್ನಗೆ ಆತ ಉತ್ತರ
ಹೇಳಲಿಲ್ಲ.ಬದಲಾಗಿ ಆತ ಮೌನವಾದ.ಫೋನ್ ಕಟ್ಟಾಗಿರಬಹುದೇ ಎಂದು ಸಂಶಯಗೊಂಡು ಡಿಸ್ಪಲೇ ನೋಡಿದರೆ
ಕಾಲ್ ಕನೆಕ್ಟಾಗಿಯೇ ಇತ್ತು.ವ್ಯಕ್ತಿ ಯಾವುದೋ ರೈಲ್ವೆ ನಿಲ್ದಾಣದಲ್ಲಿರುವಂತೆ ರೈಲು ಅನೌನ್ಸ್
ಮೆಂಟುಗಳು ಕೇಳಿಸುತ್ತಿದ್ದವು.ರೈಲು ಹೊರಡಿಸುವ ಭಯಂಕರ ಸೈರನ್ ಕೂಡಾ ಕೇಳಿಸಿತು.ಆದರೆ ಆತ ತುಸು
ಸಮಯದ ನಂತರ ಮೌನ ಮುರಿದ.ತನ್ನ ಹಳ್ಳಿ ಮತ್ತು ತನ್ನ ಹೆಸರನ್ನು ಹೇಳಿದ ನಂತರ ಒಂದು ಗಂಭೀರ ಮಾತು
ಹೇಳಿದ.
“ಅಣ್ಣ ಯಾಕೋ ಸಾಯಬೇಕು
ಅನ್ನಿಸುತ್ತಿದೆ.ಸಾಯುವ ಹಂಬಲ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದಿದೆ.ಮರಣಕ್ಕೂ ನಿದ್ರೆಗೂ
ವ್ಯತ್ಯಾಸ ಇಲ್ಲ ಅಂತಿದ್ದೀರಲ್ಲ?ನಂಗೆ ದೀರ್ಘ ನಿದ್ರೆ ಬೇಕಾಗಿದೆ!”ಎಂದ.ಪಕ್ಕದಲ್ಲಿ ಭಯಾನಕ
ಬಾಂಬ್ ಸ್ಪೋಟವಾದಂತೆ ಬೆಚ್ಚಿಬಿದ್ದೆ.ನನ್ನ ನಿದ್ರೆಯೆಲ್ಲಾ ಆರಿ ಹೋಯಿತು.ಮೆದುಳೊಳಗೆ ಝೀ ಎನ್ನುವ
ಭಾವ.ಹೊತ್ತಲ್ಲದ ಹೊತ್ತಿನಲ್ಲಿ ವ್ಯಕ್ತಿಯೊಬ್ಬ ಫೋನ್ ಮಾಡಿ ನೆಮ್ಮದಿಯ ನಿದ್ರೆಗೆ ಹಾತೊರೆಯುವ
ಸಮಯದಲ್ಲಿ ಮಾನಸಿಕ ಸ್ಥಿಮಿತವೆ ನಾಶವಾಗುವಂತೆ ಸೈಬರ್ ಕ್ರೈಂನ ಕಣ್ಗಾವಲಿನಲ್ಲಿರುವ
ಎಲೆಕ್ಟ್ರಾನಿಕ್ ಉಪಕರಣದ ಮೂಲಕ ಸಾವಿರ ಸಾವಿರ ನನ್ನದೇ ಆದ ಸಮಸ್ಯೆಗಳಲ್ಲಿ ನರಳುತ್ತಿರುವ
ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸಾಯುವ ನಿರ್ಧಾರ ಕೈಗೊಂಡು ಕೊನೆಯ ಕರೆಯಾಗಿ ನನಗೆ ಫೋನ್
ಮಾಡುತ್ತಾನೆ ಎಂದರೆ is it not joke? ದಂಗಾಗಿ ಹೋದೆ ನಾನು.ಯಾವತ್ತೋ ಫೇಸ್ ಬುಕ್ ಲ್ಲಿ ಸಾವು
ನಿದ್ರೆಯಂತಿರಬಹುದು ಎಂದು ಟಿಪ್ಪಣಿಯೊಂದನ್ನು ಬರೆದಿದ್ದೆ ನಿಜ;ಆ ಟಿಪ್ಪಣಿ ಸಾಯುವ
ವ್ಯಕ್ತಿಯೊಬ್ಬನ ಅಂತಿಮ ಕ್ಷಣದಲ್ಲಿ ನನ್ನೊಂದಿಗೆ ಫೋನ್ ಕರೆಗೆ ಕಾರಣವಾಗುತ್ತದೆ ಎಂದು
ಊಹಿಸುವುದಾದರೂ ಹೇಗೆ ನಾನು?ತಲೆ ಗಿರಗಿರ ತಿರುಗತೊಡಗಿತ್ತು.
“ತುಂಬಾ ಒಳ್ಳೆಯ
ನಿರ್ಧಾರ ತೆಗೆದುಕೊಂಡಿದ್ದೀರ!ಸಾವು ನಿದ್ರೆಗಿಂತ ಭಿನ್ನವಲ್ಲ.ನಿಮ್ಮ ಸಾವಿಗೆ ಏನು ಕಾರಣ?ಸಾವು
ಎಂದರೆ ಸಕ್ರೀಯ ಬದುಕಿನ ಅಂತ್ಯ ಕೂಡಾ ಹೌದು.ನನ್ನವರು ನನ್ನದು ಎನ್ನುವ ಲೌಖಿಕ ಬಂಧನಗಳನ್ನೂ ದೂರ
ಮಾಡುತ್ತದೆ.ವ್ಯಕ್ತಿಯೊಬ್ಬನ ಅನುಪಸ್ಥಿತಿಯಿಂದ ಹಲವು ದಾರುಣ ಸಮಸ್ಯೆಗಳೂ ಉಂಟಾಗುತ್ತವೆ.ನಿಮ್ಮ
ಸಾವಿನ ಈ ಉತ್ತಮ ನಿರ್ಧಾರದ ಹಿಂದಿರುವ ಕಾರಣವೇನು?”ಎಂದು ಕೇಳಿದೆ.ನಿಜ ಹೇಳಬೇಕು ಎಂದರೆ ನಾನು
ಗಾಬರಿಯಾಗಿದ್ದೆ.ಆದರೆ ವ್ಯಕ್ತಿಯೊಬ್ಬ ಮಾನಸೀಕವಾಗಿ ಅವಿಶ್ರಾಂತಗೊಂಡಾಗ ಆತನಿಂದ ಮಾತನಾಡಿಸಲು
ಯತ್ನಿಸಿದರೆ ಆತ ಹಗುರವಾಗುವ ಸಾಧ್ಯತೆ ಇದ್ದು ಆತನ ಆತ್ಮಹತ್ಯೆಯ ಆಲೋಚನೆ ದೂರವಾಗುವ ಸಾಧ್ಯತೆ
ಇರುತ್ತದೆ ಎಂಬುದಾಗಿ ಯಾವುದೋ ಮನೋವೈದ್ಯಕೀಯ ಪುಸ್ತಕದಲ್ಲಿ ಓದಿದ ನೆನಪು.
ಮತ್ತೂ ಸ್ವಲ್ಪ
ಹೊತ್ತಿನ ಮೌನದ ನಂತರ ಆತ ಬಿಕ್ಕತೊಡಗಿದ.ಆತ್ಮಹತ್ಯೆಯ ಆಲೋಚನೆಗೆ ಒಳಗಾದ ವ್ಯಕ್ತಿಯಲ್ಲಿ ಅಳುವಿನ
ಪ್ರಕ್ರಿಯೆ ಘಟಿಸಿತು ಎಂದರೆ ಅದು ಉತ್ತಮ ಬೆಳವಣಿಗೆ.ಈ ಸಲ ನಾನು ಮೌನವಾದೆ.ಆತನಿಗೆ ಅಳಲು ಅವಕಾಶ
ಮಾಡಿಕೊಡುವುದು ನನ್ನ ಉದ್ದೇಶವಾಗಿತ್ತು.ತಾನು ಸಾಯುತ್ತೇನೆ ಎಂದಾಗ “ಅಯ್ಯೋ ಬೇಡಿ,ನಿಮಗೆ
ದಮ್ಮಯ್ಯ ಅಂತೀನಿ,ಸಾಯಬೇಡಿ”ಅಂತ ನಾನು ಅನ್ನಬಹುದು ಎಂದು ಆತ
ನಿರೀಕ್ಷಿಸಿದ್ದನೇನೋ?ಆತ್ಮಶೂನ್ಯತೆಯಿಂದ ನರಳುವ ವ್ಯಕ್ತಿ ಇತರ ವ್ಯಕ್ತಿಯಿಂದ ಅನುಕಂಪವನ್ನು
ಕನಿಕರವನ್ನು ನಿರೀಕ್ಷಿಸಿರುತ್ತಾನೆ.ಆದರೆ ನಾನು ಆತನ ಸಾವನ್ನು ಸ್ವಾಗತಿಸಿದ್ದು ಆತನಲ್ಲಿ
ಭ್ರಮನಿರಸನಕ್ಕುಂಟು ಮಾಡಿದೆ ಅಲ್ಲದೆ ನಿರಾಶೆಗೂ ಕಾರಣವಾಗಿರಬೇಕು.ತುಸು ಹೊತ್ತು ಅತ್ತ ನಂತರ
ಆತ:ಅಣ್ಣ ತುಂಬಾ ತೊಂದರೆಯಲ್ಲಿದ್ದೇನೆ.ಮೂರು ಮಕ್ಕಳು;ಮೂರಕ್ಕೆ ಮೂರು ಹೆಣ್ಣುಮಕ್ಕಳು.ಮೊದಲ
ಹೆಣ್ಣು ಮಗು ಬೆನ್ನು ಮೂಳೆಯ ತೊಂದರೆಯಿಂದ ಹುಟ್ಟಿದ್ದು ಅಂಗವೈಕಲ್ಯದಿಂದ ಬಳಲುತ್ತಿದೆ.ಇತ್ತೀಚಗೆ
ಮಾಡುತ್ತಿರುವ ವ್ಯಾಪಾರ ಮೂಲ ಬಂಡವಾಳದೊಂದಿಗೆ ನಷ್ಟವಾಗಿ ಹೋಯಿತು.ಮಾರುಕಟ್ಟೆಯಲ್ಲಿ ಹೆಸರು
ಕೆಟ್ಟುಹೋಗಿ ದಿನ ಹತ್ತು ರುಪಾಯಿ ಉತ್ಪಾದನೆಯೂ ಇಲ್ಲದಂತಾಗಿದೆ.ಯಾರೂ
ನಂಬುತ್ತಿಲ್ಲ.ಸ್ನೇಹಿತರೆಂದುಕೊಂಡಿದ್ದ ಜನ ಹತ್ತಿರವೂ ಬರುತ್ತಿಲ್ಲ ನಾನೇ ಹತ್ತಿರ ಹೋದರೆ
ನೆಗ್ಲೆಕ್ಟ್ ಮಾಡತೊಡಗಿದ್ದಾರೆ.ತಂದೆ ತಾಯಿ ಕೂಡಾ ಬೆಲೆ ಕೊಡುತ್ತಿಲ್ಲ.ಹೆಂಡತಿಯಲ್ಲೂ ಗೌರವ
ಕಾಣಿಸುತ್ತಿಲ್ಲ.ಈ ಸ್ಥಿತಿಯಲ್ಲಿ ಸಾವೊಂದೆ ಸೂಕ್ತ ಅನ್ನಿಸಿದೆ.ನೀವು ಇತ್ತೀಚಗೆ ಸಾವಿನ ಬಗ್ಗೆ
ಬರೆದಿದ್ದೀರಲ್ಲವೆ?ನಿಜಕ್ಕೂ ಸಾವು ನಿದ್ರೆಯಂತಹದು?ಅದರಿಂದ ಶಾಂತಿ ಸಿಗುತ್ತದೆಯೇ?”ಕೇಳಿದ.
ವಿಷಯದ ಗಂಭೀರತೆ ನನಗೆ
ಅರ್ಥವಾಯಿತು;ಅವನು ಮಾನಸೀಕವಾಗಿ ಅಸ್ವಸ್ತಗೊಂಡಿದ್ದಾನೆ.ಅವನಿಗೆ ಸಾಂತ್ವನದ ಅಗತ್ಯವಿದೆ.ಆತ ತೀರ
ಅಲಕ್ಷ್ಯಕ್ಕೆ ಒಳಗಾಗಿದ್ದಾನೆ.ಹೆಂಡತಿ ಮಕ್ಕಳು ತಾಯಿ ತಂದೆ ಎಲ್ಲರೂ ತನ್ನನ್ನು
ನಿರ್ಲಕ್ಷಿಸುತ್ತಿದ್ದಾರೆ ಎಂದು ಭಾವಿಸಿದ್ದಾನೆ.ಆತ ತಾನು ಮಾಡುತ್ತಿರುವ ವ್ಯಾಪಾರದಲ್ಲಿ
ವಿಫಲವಾಗಿದ್ದು ದುಡ್ಡಿನ ಮುಗ್ಗಟ್ಟು ಅನುಭವಿಸುತ್ತಿದ್ದಾನೆ.ಪ್ರೀತಿ ಮತ್ತು ಸಂಬಂಧಗಳು ಹಣ
ಎನ್ನುವ ಹೇಲಿನ ಸುತ್ತಾ ಗಿರಕಿ ಹೊಡೆಯುವ ನೊಣಗಳು ಎಂದು ಆತ ಬಲವಾಗಿ ತಿಳಿದುಕೊಂಡಿದ್ದಾನೆ.ಅಥವಾ
ಹಾಗಂತ ಯಾರೋ ಆತನಲ್ಲಿ ಬಲವಾಗಿ ಬೀಜ ಬಿತ್ತಿದ್ದಾರೆ.ಸದ್ಯ ಆತ ಪ್ರೀತಿ ಮತ್ತು ಸಂಬಂಧಗಳಿಗೆ
ಕುರುಡಾಗಿದ್ದಾನೆ.ಈ ಸ್ಥಿತಿಯಲ್ಲಿ ನಾನು ಯಾವ ರೀತಿಯಲ್ಲಿ ಆತನಿಗೆ ನೆರವಾಗಬಹುದು?ನನ್ನೊಳಗೆ
ವಿಚಾರಗಳ ಜೇನ ಹಟ್ಟಿ ಚೆದುರಿತು.ಕೆಲವೊಂದು ಅಂಶಗಳ ಕುರಿತು ನಾನು ಗಂಭೀರವಾಗಿ ಯೋಚಿಸಿದ ಮೇಲೆ ಆ
ವ್ಯಕ್ತಿಗೆ ತನ್ನ ಸಾವಿನ ನಿರ್ಧಾರವನ್ನು ಇನ್ನೊಂದು ದಿನಕ್ಕೆ ಮುಂದೂಡಲು ವಿನಂತಿಸಿದೆ.”ತಮ್ಮಾ
ನನ್ನ ಮೇಲೆ ಪ್ರೀತಿ ಇಟ್ಟು ನನಗೆ ಫೋನ್ ಮಾಡಿದ್ದು ಸಂತೋಷ.ನನ್ನ ಮೇಲೆ ನಿನಗೆ ನಿಜವಾಗಿಯೂ
ಗೌರವವಿದ್ದರೆ ನಿನ್ನ ಸಾವಿನ ನಿರ್ಧಾರ ಒಂದು ದಿನ ಮುಂದಕ್ಕೆ ಹಾಕಿ ನಾನು ಹೇಳಿದ ಕೆಲಸಗಳನ್ನು
ಮಾಡಬೇಕು”ಎಂದೆ.ಆತ ಒಪ್ಪಿದ.ಫೈನ್!
ಇದಾಗಿ ಒಂದು ತಿಂಗಳ
ನಂತರ ದೇವಸ್ಥಾನವೊಂದರಲ್ಲಿ ನಾನು ನನ್ನದೆ ಆದ ಸಮಸ್ಯೆಗಳ ಕುರಿತು ಧ್ಯೇನಿಸುತ್ತಾ
ಕುಳಿತರಬೇಕಾದರೆ “ಅಣ್ಣಾ ಹೇಗಿದ್ದೀರಿ?” ಎಂಬ ಮಾತು ಕೇಳಿ ಹಿಂತಿರುಗಿ ನೋಡಿದೆ.ಅಲ್ಲಿ ಒಂದು
ಕುಟುಂಬವಿದ್ದು ತುಂಬಾ ಆನಂದದಿಂದ ದೇವಸ್ಥಾನಕ್ಕೆ ಬಂದಿರುವಂತಿತ್ತು.ಆತನ ಮುಖದಲ್ಲಿ ಸಂತೃಪ್ತಿ
ಇತ್ತು.ಆತ ನಿರುಮ್ಮಳವಾಗಿರುವಂತೆ ಕಾಣಿಸುತ್ತಿದ್ದ.ಆತ ನನ್ನ ಹತ್ತಿರ ಬಂದು ತಾನು ಒಂದು ತಿಂಗಳ
ಹಿಂದೆ ನನಗೆ ರಾತ್ರಿ ಫೋನ್ ಮಾಡಿರುವುದಾಗಿಯೂ ಅವತ್ತು ತನ್ನ ಬದುಕು ಬದಲಾಗಿರುವುದಾಗಿಯೂ ತಾನು
ಸಕ್ರೀಯ ಫೇಸ್ ಬುಕ್ ಓದುಗನಾಗಿದ್ದು ನನ್ನ ಅಭಿಮಾನಿ ಎಂದು ಹೇಳಿಕೊಂಡ.ಆತನ ವಿವರಣೆ ಕೇಳಿಯಾದ
ಮೇಲೆ ನನಗೆ ಆತನಿಗೆ ಸಂಬಂಧಿಸಿದ ವಿವರಣೆ ನೆನಪಾಯಿತು.
ನಿಜ,ಬದುಕಿಗೂ ಸಾವಿಗೂ
ಮಧ್ಯೆ ಎಚ್ಚರ ಎನ್ನುವ ನಾಟಕದ ವೇದಿಕೆಯಿದ್ದು ಬದುಕು ಜೀವನದ ಬಹು ಮುಖ್ಯ ಪಾತ್ರವಾಗಿದೆ.ಈ
ಬದುಕಿನ ಪಾತ್ರಗಳಾದ ನಾವು ನಮಗೊಪ್ಪಿಸಿದ ಪಾತ್ರವನ್ನು ಅಭಿನಯಿಸಲೇಬೇಕು;ತಪ್ಪುವುದಿಲ್ಲ
ಅದು.ಹಾಗಂದುಕೊಂಡು ನಾನು ಸಾವಿನ ದಿನವನ್ನು ಒಂದು ದಿನ ಮುಂದೂಡಲು ವಿನಂತಿಸಿಕೊಂಡಿದ್ದೆ.ಹಾಗೆ
ವಿನಂತಿಸಿಕೊಳ್ಳುತ್ತಾ ಕೆಲವು ಅಂಶಗಳನ್ನು ಹೇಳಿದ್ದೆ.
1)ಹೇಗೂ
ಸಾಯುತ್ತೀಯವಾದ್ದರಿಂದ ಮಕ್ಕಳು ಮತ್ತು ಹೆಂಡತಿಯೊಂದಿಗೆ ಎರಡು ತಾಸು ಸಂಪೂರ್ಣವಾಗಿ ನಿನ್ನ
ಚಿಂತೆಗಳನ್ನು ಮರೆತು ಕಾಲ ಕಳೆ.
2)ವಯಸ್ಸಾಗಿರುವ
ನಿನ್ನ ತಂದೆ ತಾಯಿಯೊಂದಿಗೆ ನಿನ್ನ ಕೊನೆಯ ದಿನವನ್ನೂ ಯಾವುದೇ ಉದ್ದೇಶವಿಲ್ಲದೆ ಕಳೆ.ಮತ್ತು ನೀನು
ಸತ್ತ ಮೇಲೆ ದೈಹಿಕವಾಗಿ ವೈಯೋ ವೃದ್ದತೆಯಿಂದ ನರಳುವ ಆ ಮುದುಕರ ಜೀವನದ ಬಗ್ಗೆ ಯೋಚಿಸು.
3)ಹೇಗೂ
ಸಾಯುತ್ತೀಯವಾದ್ದರಿಂದ ನಿನ್ನ ಸಾಲಗಾರರಿಗೆ ನನ್ನಿಂದ ಈಗ ದುಡ್ಡು ಕೊಡಲು ಸಾಧ್ಯವಿಲ್ಲ ನೀವೇನು
ಮಾಡಿಕೊಳ್ಳುತ್ತೀರ ಎಂದು ಕೇಳು.
4) ಮಾಡುತ್ತಿರುವ
ನಿನ್ನ ವೃತ್ತಿ ನಾಶವಾಗಲಿಕ್ಕೆ ಕಾರಣ ನಿನ್ನ ಬೇಜವಬ್ದಾರಿ ವರ್ತನೆ.ಅದು ಸರೀನಾ ಎಂದು
ಕೇಳಿಕೊಳ್ಳು.
5)ಮತ್ತು ಸಾಯುವ
ಕೊನೆಯ ಗಳಿಗೆಯಲ್ಲಿ ಮನಸ್ಪೂರ್ತಿ ಸಿನೇಮಾ ಒಂದನ್ನು ನೋಡಿ ಸೆಕೆಂಡ್ ಶೋ ಮುಗಿದ ಮೇಲೆ ರೈಲು
ಹಳಿಗಳಿಗೆ ತಲೆ ಕೊಡು.ದಟ್ಸಾಲ್ ಎಂದಿದ್ದೆ.
ಆತ ಸಂಪೂರ್ಣವಾಗಿ
ನನ್ನ ಮಾತುಗಳನ್ನು ಪಾಲಿಸಿದ್ದ.ದಿನ ಕಳೆಯುವುದರಲ್ಲಿ ಆತನಿಗೆ ಬದುಕುವ ಉತ್ಸಾಹ ಬಂದಿತ್ತು.ಆತನ
ನಿರಾಶೆ ಅರ್ಥವಿಲ್ಲದ್ದು ಎಂದು ಆತನಿಗೆ ತಿಳಿದಿತ್ತು.
“ಪುಣ್ಯ ಅಣ್ಣ,ನಾನು
ಬದುಕಿಬಿಟ್ಟೆ.ಈಗ ನೆಮ್ಮದಿಯಾಗಿದ್ದೇನೆ.ಪುಃನ ವ್ಯಾಪಾರ ಕೈಹಿಡಿಯ ತೊಡಗಿದೆ.ಮಕ್ಕಳ ನಗು ಮರೆತು
ಹೋಗುವುದು ಅಸಾಧ್ಯ ಅನ್ನಿಸಿತು.ನನ್ನ ನಂತರ ಅಪ್ಪ ಅಮ್ಮ ಮತ್ತು ಅವಳ ಸ್ಥಿತಿ ಊಹಿಸಲು ಅಸಾಧ್ಯ
ಅನ್ನಿಸಿತು.ಬದುಕಬೇಕು ಎಂದು ಅನ್ನಿಸಿತು.ಥ್ಯಾಂಕ್ಸ್ ಅಣ್ಣ!”ಅಂದವನ ಕಣ್ಣಿನಲ್ಲಿ
ಕೃತಜ್ಞತೆಯಿತ್ತು.
ಆತ ಹೋದ ಮೇಲೆ ನನಗೆ
ಕೆಲವು ಪ್ರಶ್ನೆಗಳು ಕಾಡತೊಡಗಿದವು.ಜೀವನದಲ್ಲಿ ಜಿಗುಪ್ಸೆಗೊಂಡು ರೈಲು ಹಳಿಗಳಿಗೆ ತಲೆ ಒಡ್ಡಲು
ಬಂದ ವ್ಯಕ್ತಿಗೆ ವೈದ್ಯರ ಕುರಿತು ಮನೋವೈದ್ಯರ ಕುರಿತು ತಿಳಿಸುವುದು ಬಿಟ್ಟು ಸಲಹೆಗಳನ್ನು ನೀಡಲು
ನಾನು ಯಾರು?ನಾನು ವೈದ್ಯನೆ? ಮನಃ ಶಾಸ್ತ್ರ ಬಲ್ಲವನೆ?
ಕೆಲವು ಉತ್ತರವಿಲ್ಲದ
ಪ್ರಶ್ನೆಗಳು ಕಾಡತೊಡಗಿದ್ದವು....
*ಲಕ್ಷ್ಮೀಕಾಂತ ನಾಯಕ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ