ಭೂತ ರಹಸ್ಯ!
ನಿಸರ್ಗದೊಳಗಿನ ಕೆಲವು ಸಂಗತಿಗಳನ್ನು ಬಳಸಿಕೊಂಡು ಹೇಗೆ ಮಾನವ ಸಮಾಜವನ್ನು ಭಯದ ಬೇಲಿಯಲ್ಲಿ ನರಳುವಂತೆ ಮಾಡಲಾಯಿತೋ ಯೋಚಿಸಿ,ದೇವರ ಭಯ ಸೃಷ್ಟಿಸಲಾಯಿತು;ಪರಮಾರ್ಥ ಸಾಧನೆಯೇ ಮನುಷ್ಯನ ಮೋಕ್ಷದ ಅಂತಿಮ ಗುರಿ ಎನ್ನಲಾಯಿತು.ಹಲವು ಕಟ್ಟಳೆಗಳ ಸಂಕೋಲೆಯಲ್ಲಿ ಮನುಷ್ಯ ತನ್ನನ್ನು ತಾನು ಬಂಧಿಸಿಕೊಂಡು ನರಳತೊಡಗಿದ.ದೇವರ ಭಯದ ನಂತರ ದೆವ್ವದ ಭಯ ಸೃಷ್ಟಿಸಲಾಯಿತು. ದೆವ್ವವೆಂದರೆ ವಿಕಾರರೂಪಿ,ವಿಕಾರ ಸದ್ದಿನ,ಮನುಷ್ಯನ ನಾಶದ ಒಂದು ಕ್ರೂರ ಅಂಶ ಎಂದು ನಂಬಿಸಲಾಯಿತು.ಮನುಷ್ಯ ಸತ್ತ ಮೇಲೆ ಆತನ ಆತ್ಮ ಭೂತವಾಗುತ್ತದೆ ಎಂದು ಹೇಳಲಾಯಿತು;ಸತ್ತ ದೇಹದಿಂದ ಸಾಯದ ಆತ್ಮವೊಂದು ಭೂತವಾಗಿ ಮನುಷ್ಯನನ್ನು ಕಾಡುತ್ತದೆ ಎಂದು ಭಯಾನಕವಾಗಿ ಚಿತ್ರಿಸಲಾಯಿತು.ಮೊನ್ನೆ ಹಳ್ಳಿಯೊಂದರ ಮಸೀದಿ ಎಂದು ಹೇಳಲಾಗುವ(ಅಲ್ಲಾಯ್‌ಗುಡಿ,ಅಥವಾ ಪೀರಲ ದೇವರ ಗುಡಿ)ಸ್ಥಳದಲ್ಲಿ ಕುಳಿತಿರಬೇಕಾದರೆ ಆ ದೇವರ ಪೂಜಾರಿ ಲೋಭಾನ ಊದುಬತ್ತಿಗಳಿಂದ ಹೊಗೆ ಸೃಷ್ಟಿಸಿ ಮಕ್ಕಳಿಗೆ ಕಾಡುತ್ತಿರುವ ದೆವ್ವಗಳನ್ನು ಬಿಡಿಸುವ ಕಾಯಕದಲ್ಲಿ ನಿರತನಾಗಿದ್ದ,ಮತ್ತು ತಾಯತ ಚೀಟಿ ಇತ್ಯಾದಿಗಳನ್ನು ಕಟ್ಟುತ್ತಿದ್ದ.ಹೆಣ್ಮಕ್ಕಳು ಭಯ ಭಕ್ತಿಯಿಂದ ಪೂಜಾರಿ ಮಾಡುವ ಎಲ್ಲಾ ಕೆಲಸಗಳನ್ನು ಮಾಡಿಸಿ ನಂತರ ಒಂದು ದೀರ್ಘದಂಡ ನಮಸ್ಕಾರ ಹಾಕಿ ಹೋಗುತ್ತಿದ್ದರು;ನನಗೆ ನಗು ಬಂತು,ನಕ್ಕೆ.ಪೂಜಾರಿಯನ್ನು ನಾನು ಕಾಣಬಾರದ ಜಾಗಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡುವಾಗ ಹಲವಾರು ಬಾರಿ ಕಂಡಿದ್ದೆ.ದೇವರನ್ನೇ ವ್ಯಭಿಚಾರಕ್ಕಿಳಿಸುವ ಆಸಾಮಿ ಆತ!fine,ಇರಲಿ ಬಿಡಿ.
ಭಯ ಇನ್ನೂ ಇದೆ,ಇನ್ನೂ ಭಯಾನಕವಾಗಿದೆ.ಆ ಭಯ ಇರುವುದರಿಂದಲೇ ದೇವರು ದೆವ್ವಗಳ ಗುಡಿ ಗುಂಡಾರ ಚರ್ಚು ಮಸೀದಿಗಳು ಬೃಹತ್ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ.ಮನುಷ್ಯನ ಭಯವನ್ನೇ ಬಂಡವಾಳ ಮಾಡಿಕೊಂಡು ಹಲವು ಕೋಟಿ ಜನ ಬದುಕುತ್ತಿದ್ದಾರೆ.ಭಯ ಯಾವತ್ತಿಗೂ ಭೂಮಿಯಿಂದ ತೊಲಗಲಾರದು,ಮನುಷ್ಯನೇ ಸೃಷ್ಟಿಸಿದ ಭಯ ಮನುಷ್ಯನನ್ನು ಏನೂ ಮಾಡಿದರೂ ಬಿಡದಂತೆ ಸುತ್ತಿಕೊಂಡಿದೆ.
ಈ ಭಯದ ಬಗ್ಗೆ ಏಕೆ ಬರೆಯಬೇಕಾಗಿ ಬಂತೆಂದರೆ,ಸ್ಮಶಾನದ ಕುರಿತು ಇವತ್ತು ಮತ್ತು ಯಾವತ್ತಿಗೂ ವಿಚಿತ್ರವಾದ ಭಯ ಮನುಷ್ಯ ಸಂಕುಲಕ್ಕಿದೆ.ಅದಕ್ಕೆ ಪೂರಕ ಎನ್ನುವಂತೆ ಸ್ಮಶಾನವೂ ಕೆಲವೊಂದು ಆ ಕುರಿತಾದ ಅಂಶಗಳನ್ನು ಜೀವಂತವಿಟ್ಟಿದೆ.ನಾವು ಸೃಷ್ಟಿಸಿದ ಹಲವು ಸಾಹಿತ್ಯವೂ ಸ್ಮಶಾನವನ್ನು ಒಂದು ಭಯದ ಕೇಂದ್ರ ಎನ್ನುವಂತೆಯೇ ಚಿತ್ರಿಸಲಾಗಿದೆ.ಸ್ಮಶಾನದ ದಿಕ್ಕಿನಿಂದ ನರಿಯ ಊಳಿಡುವಿಕೆ,ವಿಕಾರ ಸದ್ದುಗಳು,ತರಗೆಲೆಗಳ ಸದ್ದು ಇತ್ಯಾದಿಗಳನ್ನು ದೆವ್ವದ ಚಟುವಟಿಕೆ ಎಂದು ಬಿಂಬಿಸುವ ಯತ್ನ ಮಾಡುತ್ತೇವೆ.ನಿಜ,ಇದೆಲ್ಲವೂ ನಿಜ;ಸ್ಮಶಾನದಲ್ಲಿ ತರಗೆಲೆಗಳ ಸದ್ದಿರುತ್ತದೆ.ಮತ್ತು ಗಾಢಾಂಧಕಾರದ ಸಮಯದಲ್ಲಿ ಭೂತದ ಸದ್ದೂ ಅತ್ಯಂತ ವಿಕಾರವಾಗಿ ಕೇಳಿ ಬರುತ್ತದೆ.ಇದೆಲ್ಲವೂ ಭೂತದ ಅಥವಾ ದೆವ್ವದ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತಿದೆ!
ಮೊನ್ನೆ ಗೆಳೆಯರಾರೋ ನನ್ನ ವಾಟ್ಸಪ್ ನಂಬರಿಗೆ kabar bijju ಎನ್ನುವ ವಿಚಿತ್ರವಾದ ಜೀವಿಯ ಧ್ವನಿ ಇರುವ ವಿಡಿಯೋ ಕಳಿಸಿದರು,ಅದು ಸ್ಮಶಾನದಲ್ಲಿದ್ದು ಶವ ಭೋಜನೆ ಮಾಡುತ್ತಾ ಜೀವಿಸುತ್ತದೆ.ಅದರ ವಿಚಿತ್ರವೇನೆಂದರೆ ಅದು ನೆಲಗುದ್ದು ಜೀವ ಸಂಕುಲಕ್ಕೆ ಸೇರಿದ ನೆಲವನ್ನು ಗುದ್ದಿ ತೋಡಿ ಸಮಾಧಿಯ ಆಳದೊಳಕ್ಕೆ ಇಳಿಯುವುದು!ಇದು ಆಮೆಯನ್ನು ಹೋಲುವ ಜೀವಿಯಾಗಿದ್ದು ಇದರ ನಡುಗೆ ತರಗೆಲೆಯ ಸದ್ದು ಹೊರಡಿಸುತ್ತದೆ.ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇದು ಮನುಷ್ಯನ ಅಳುವನ್ನು ಹೋಲುವ ಧ್ವನಿಯನ್ನು ಹೊಂದಿದೆ!
ಈಗ ತಿಳಿಯಿತೆ ಸ್ಮಶಾನದ ಭೂತದ ಚೀತ್ಕಾರ!
ಇದೊಂದೇ ಒಂದು ಧ್ವನಿಯ ಆಧಾರದಲ್ಲಿ ಸತ್ತ ಮನುಷ್ಯನ ನಂತರ ಭೂತ ಹುಟ್ಟಿಕೊಂಡಿದೆ.
ಮನುಷ್ಯ ಒಬ್ಬ ಬಂಡವಾಳಗಾರ,ಆತ ಏನನ್ನಾದರೂ ಬಂಡವಾಳ ಮಾಡಿಕೊಳ್ಳುತ್ತಾನೆ.
ಲಕ್ಷ್ಮೀಕಾಂತ ನಾಯಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ