ಮಲ್ಲ!
(೧)
◾◾◾◾◾◾◾◾◾◾◾◾◾◾◾◾◾◾◾◾◾◾◾
ಮಲ್ಲ ಸೊಂಟ ಮುರಿದ ನಾಯಿಯಂತೆ ಗುಡಿಸಲ ಮುಂದಕ್ಕೆ ಬಂದಾಗ ಆತನ ಮೈ ಬೆವರಿತ್ತು.ಬೆವರಿನಿಂದ ಮೈ ತೋಯ್ದು ಹೋಗಿತ್ತು.ಸೂಕ್ಷ್ಮವಾಗಿ ಗಮನಿಸಿದರೆ ಅವನೊಳಗಿನ ನೋವನ್ನು ಕುಟುಂಬಸ್ಥರು ಗುರುತಿಸಬಹುದಿತ್ತು;ಆದರೆ ಸದಾ ಕುಡಿದ ಅಮಲಿನಲ್ಲಿರುತಿದ್ದ ಮಲ್ಲ ಹಾಗೆ ಗಂಭೀರವಾಗಿ ತನ್ನ ಬಗ್ಗೆ ಯೋಚಿಸಬಹುದಾದ ಸಾಧ್ಯತೆಯನ್ನು ಕಳೆದುಕೊಂಡಿದ್ದ.ಮನೆ ತುಂಬಾ ಮಕ್ಕಳಿದ್ದರು;ಯಾರೂ ಮಲ್ಲನ ಕಡೆ ತಿರುಗಿ ನೋಡಲಿಲ್ಲ.ಗುಡುಸಿಲಿನ ಒಂದು ಮೂಲೆಯಲ್ಲಿದ್ದ ಒಲೆಯಲ್ಲಿನ ಬೆಳಗಿನ ಬೂದಿ ಕೆದುಕವುದರಲ್ಲಿದ್ದ ಹೆಂಡತಿ ಕೆಂಚಿ ‘ಕುಡುಕ ನಾಯಿ ಬಂತು ನೋಡು!’ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡಳು.ಇತ್ತೀಚಿನ ಕೆಲವು ದಿನಗಳಿಂದ ಮಲ್ಲನ ಕುಡಿತ ವಿಪರೀತವಾಗಿ ಮಾರ್ಪಟ್ಟಿತ್ತು.ಒಂದು ಕ್ಷಣವೂ ವ್ಯರ್ಥವಾಗದಂತೆ ದುಡಿಯುವ ಅವಸರಕ್ಕೆ ಅವನನ್ನು ಅವನ ಕುಡಿತ ಈಡು ಮಾಡಿತ್ತು.ಪ್ರತಿ ಅರ್ಧ ಗಂಟೆಗೊಮ್ಮೆ ಯಡಿಯೂರಪ್ಪ ಕುಮಾರಸ್ವಾಮಿ ನೇತೃತ್ವದ ಸಾರಾಯಿ ಬಂದ್ ನಿರ್ಧಾರಕ್ಕೆ ಹುಟ್ಟಿದ ಕಳ್ಳ ಕ್ವಾರ್ಟರ್ ಮಾರಾಟದ ಅಂಗಡಿಯಲ್ಲಿ ನೈಂಟಿ ಒರಿಜಿನಲ್ ಚಾಯ್ಸ್ ಎನ್ನುವ ನಾಮಧೇಯ ಎಣ್ಣೆ ಕುಡಿಯುವನು;ಮತ್ತು ಕುಡಿಯುತ್ತಲೇ ಇರುವನು.ಹಾಳಾದವನು ದುಡಿದ ಒಂದು ರೂಪಾಯಿಯೂ ಸಂಸಾರಕ್ಕೆ ಕೊಡುವುದಿಲ್ಲ ಎನ್ನುವುದು ಹೆಂಡತಿಯ ದಿನನಿತ್ಯದ ಗೋಳಾಗಿದೆ.ಮೊದಲು ಸಾರಾಯಿ ಅಂಗಡಿ ಇದ್ದಾಗ ಪಾಡಿತ್ತು,ನೂರು ರೂಪಾಯಿಯಲ್ಲಿ ಔಟಾಗಿ ಬಂದು ಮನೆಯೊಳಗೆ ಬೀಳುತ್ತಿತ್ತು.ಉಳಿದ ರೊಕ್ಕ ಕಿಸೆಯೊಳಗಿರುತ್ತಿದ್ದವು;ಮಕ್ಕಳು ಮರಿಗಳು ತೆಗೆದು ತನ್ನ ಕೈಗೆ ಕೊಡುತ್ತಿದ್ದವು.ಹಾಳಾದವರು,ಅವರ ಹೆಂಡರು ಮಕ್ಕಳು ರಂಡ್ಯಾರು ಆಗಲಿ ಸಾರಾಯಿ ಬಂದ್ ಮಾಡುತ್ತೀವಿ ಅಂತೇಳಿ ಹತ್ತು ರೂಪಾಯಿಗೆ ಸಿಗುವುದನ್ನು ನೂರು ರೂಪಾಯಿಗೆ ಸಿಗುವಂತೆ ಮಾಡಿ ಬಡವನ ಹೆಂಡತಿ ಮಕ್ಕಳು ಉಪವಾಸ ಬೀಳುವಂತೆ ಮಾಡಿದರು ಎನ್ನುವುದು ಕೆಂಚಿಯ ದಿನನಿತ್ಯದ ಶಾಪವಾಗಿದೆ.ರಾಜ್ಯದ ಅಷ್ಟೂ ಜನರ ಶಾಪ ನಿಜವಾಗಿ ಬಡವರ ಉಸಿರು ಸರ್ಕಾರಗಳಿಗೆ ಮುಟ್ಟಲಿ ಎನ್ನುವುದು ಕೆಲವರ ಆಶಯವಾಗಿದೆ.
ಮಲ್ಲ ತೇಕು ಉಸಿರಿನೊಂದಿಗೆ ಅತ್ಯಂತ ಪ್ರಯಾಶದೊಂದಿಗೆ ಗುಡಿಸಲು ತಲುಪವಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು.ಅದೇಕೋ ಕಣ್ಣಗಳು ಮುಚ್ಚಿಕೊಳ್ಳುವ ಯತ್ನ ಮಾಡತೊಡಗಿದ್ದವು.ಆಕಾಶದಲ್ಲಿ ಯಮಧರ್ಮನ ಧೂತರು ಕರಿ ಹಗ್ಗದೊಂದಿಗೆ ಕೈ ಬೀಸಿ ಕರೆಯುತ್ತಿರುವಂತೆ ಅನ್ನಿಸತೊಡಗಿತ್ತು.ಮಲ್ಲ ಗುಡಿಸಿಲಿನ ಹೊಸ್ತಿಲು ತಲುಪುತ್ತಿರುವಂತೆ ಕಣ್ಣು ಕತ್ತಲಾದಂತಾಗಿ ನೆಲಕ್ಕೆ ಕುಸಿದುಬಿಟ್ಟ.ಪ್ರಾಣ ಈಗ ಹೊರ ಹೋಗಲು ಸಿದ್ಧವಾಗಿತ್ತು. ಒಲೆಯ ಬೂದಿ ಕೆದರುತ್ತಿದ್ದ ಹೆಂಡತಿಯನ್ನು ಉದ್ದೇಶಿಸಿ ತುಂಬಾ ಕಷ್ಟದಿಂದ ಹೀಗೆ ಹೇಳಿದನು:“ಕೆಂಚಿ ಗೊಣಮಂತಣ್ಣ ದಣಿ ನನ್ ಮ್ಯಾಲ್ ಗಾಡಿ ಹೊಡೆದಾನ,ನಾನು ಸಾಯ್ತೀನಿ,ಅವನ ಮನೀಗಿ ಹೋಗ್ರೀ ನೀವೆಲ್ಲಾ...!”ಇಷ್ಟು ಹೇಳುವ ಹೊತ್ತಿಗೆ ಆತನ ಧ್ವನಿ ಅಡಗಿ ಹೋಯಿತು.ಆದರೆ ಆ ಮಾತನ್ನು ಆತ ಪ್ರಾಣವನ್ನು ಬಹು ಕಷ್ಟದಿಂದ ತಡೆ ಹಿಡಿದು ಹೇಳಿದ್ದಾಗಿತ್ತು.ವಿಚಿತ್ರವೆಂದರೆ ಆ ಮಾತನ್ನು ಅಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.ಹೆಂಡತಿ ಕೆಂಚಿಗೆ ಮತ್ತು ಮಕ್ಕಳಿಗೆ ಅಂತಹ ಮಾತುಗಳು ಸಹಜವಾಗಿದ್ದವು.ಪ್ರತಿದಿನವೂ ಇಂತಹ ಬಡಬಡಿಕೆಗಳು ಕುಡಿದ ಅಮಲಿನಲ್ಲಿ ಇದ್ದೇ ಇರುತ್ತಿದ್ದವು.ಹಂಗಾಗಿ ಆ ಕುಟುಂಬಸ್ಥರು ಆ ಮಾತುಗಳ ಕಡೆಗೆ ಗಮನ ಕೊಡಲಿಲ್ಲ.
ನಂತರ ಮಲ್ಲ ಸೈಲಂಟಾದ.ಆತನಿಂದ ಯಾವುದೇ ಧ್ವನಿ ಬರಲಿಲ್ಲ.ಆತ ಗುಡಿಸಿಲಿನ ಹೊಸ್ತಿಲಲ್ಲೇ ಮಲಗಿದ್ದ.ಮಕ್ಕಳು ಅಪ್ಪ ಸತ್ತ ಆಟ ಆಡುತ್ತಿದ್ದಾನೆ ಎಂದು ಭಾವಿಸಿದವು,ಕೆಂಚಿ ಕೂಡಾ ಹಾಗೆಯೇ ಭಾವಿಸಿದಳು.
ಹಾಳಾದವನೆ ಹಿಂಗ್ಯಾಕ್ ವಸ್ತಿಲಿಗೆ ಮಲಗಿರುವೆ ಅಂತ ಕೆಂಚಿ ಮಲ್ಲನಿಗೆ ಮುಟ್ಟುವವರೆಗೆ ಆ ದೇಹ ತಣ್ಣಗಾಗಿರುವುದು ಅಲ್ಲಿದ್ದ ಯಾರಿಗೂ ತಿಳಿದಿರಲಿಲ್ಲ.
ಮಲ್ಲ ಸತ್ತು ಹೋಗಿದ್ದ!
◾◾◾◾◾◾◾◾◾◾◾◾◾◾◾◾◾◾◾◾◾
(೨)
ಚಿಟ್ಟನೆ ಚೀರಿದಳು ಕೆಂಚಿ!ಮಲ್ಲ ತಣ್ಣಗಾಗಿದ್ದ.ಅದಾಗಲೇ ಅವನು ಸತ್ತು ಹೋಗಿದ್ದ.ಅಪ್ಪ ಸತ್ತ ಆಟ ಆಡುತ್ತಿಲ್ಲ ಎಂದು ತಾಯಿಯ ಅಳುವಿನಿಂದ ಮನಗಂಡ ಮಕ್ಕಳು ಅವೂ ಅಳತೊಡಗಿದವು.ಗುಡಿಸಲ ಮುಂದಿನಿಂದ ಹೊರಟ ಆಕ್ರಂದನ ಇಡೀ ಕೇರಿಯನ್ನು ಆಕ್ರಮಿಸಿಕೊಂಡಿತು.ಕೆಂಚಿ ಮತ್ತು ಆಕೆಯ ಮಕ್ಕಳ ಆರ್ತನಾದ ಕೇರಿಯ ಪ್ರತೀ ಕುಟುಂಬವನ್ನೂ ತಲುಪಿತು.ನಿಮಿಷ ಕಳೆಯುವುದರಲ್ಲಿ ಕೇರಿಯ ಬಡ ಜೀವಿಗಳೆಲ್ಲಾ ತಾವೂ ದುಃಖದಲ್ಲಿ ಪಾಲುದಾರರು ಎನ್ನುವಂತೆ ಕೆಂಚಿಯ ಗುಡಿಸಲ ಮುಂದೆ ದೌಡಾಯಿಸಿದರು.ಇಳಿ ಸಂಜೆಯ ಆ ಗೋಧೋಳಿ ಸಮಯದಲ್ಲಿ ಆ ಕೆಳಗೇರಿ ಅಳುವಿನಿಂದ ತುಂಬಿ ಹೋಯಿತು.ಕುಡುಕ ಮಲ್ಲನ ಸಾವಿನ ಕುರಿತು ಸೇರಿದ ಕೇರಿಯ ಹಿರಿ ಕಿರಿಯರೆಲ್ಲಾ ತರಾವರಿ ಮಾತುಗಳನ್ನಾಡತೊಡಗಿದರು.ಗಲ್ತಿ ಸರಾಯಿಯಿಂದ ಸಾವು ಸಂಭವಿಸಿದೆ ಎಂದು ಮಾತನಾಡಿದರೆ ಇಲ್ಲ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಇನ್ನೊಬ್ಬರು ಮಾತನಾಡುತ್ತಾ ಸಾವನ್ನು ಎಲೆ ಅಡಿಕೆಯ ರೀತಿಯಲ್ಲಿ ಒಬ್ಬರು ಜಗಿಯುತ್ತಿದ್ದರೆ ಇನ್ನೊಬ್ಬರು ಗುಟುಕಾದಂತೆ ನಮುಲತೊಡಗಿದರು.ಕೆಳಗೇರಿ ಜನರ ಬದುಕೇ ಅಷ್ಟು,ತಾವು ಎಷ್ಟು ದಿನ ಬದುಕಿರುತ್ತೇವೋ ಅಷ್ಟು ದಿನ ಮಾತ್ರ ತಮ್ಮ ಬದುಕು.ಯಂಡಿ ಕಸ,ಉಳ್ಳವರ ಒಕ್ಕಲು ಮಾಡುತ್ತಾ ಉಳಿದ ಹೆಂಜಲು ತಿಂದು ಬದುಕುವ ತಮಗೆ ಬದುಕಲಿರುವ ದಿನಗಳೂ ತಿಳಿಯವು;ಬದುಕಿನ ಸವಿಯೂ ತಿಳಿಯದು!ತಮಗೇನಾದರೂ ಸಂತೋಷ ಉಂಟಾಗುತ್ತದೆ ಎಂದರೆ ಹೊಟ್ಟೆ ತುಂಬಾ ಕುಡಿದು ಹೊಟ್ಟೆ ತುಂಬಾ ಸತ್ತ ದನದ ಮಾಂಸ ತಿಂದಾಗ ಎಂದು ಕೇರಿಯ ಮುದುಕ ಗೊಟ್ಟೆಪ್ಪಜ್ಜ ತನ್ನ ಸಹಪಾಠಿಗಳಿಗೆ ವೇದಾಂತದ ರೀತಿಯಲ್ಲಿ ಹೇಳುತ್ತಿದ್ದ.ಮಲ್ಲನ ಸಾವು ಒಂದು ಅನಿರೀಕ್ಷಿತವಾಗಿತ್ತು.ಈಗ ತಾಸೊತ್ತಿಗಿಂತ ಮೊದಲು ಬದುಕಿದ್ದು ಗಲ್ಲಿ ಗಲ್ಲಿಗಳಲ್ಲಿ ಕುಡಿದು ಡಿರಕಿ ಹೊಡೆದ ಮಲ್ಲ ಹೆಣವಾಗಿರುವುದು ನಂಬಲಾರದ ವಿಷಯವಾಗಿತ್ತು.ಯಾಕ್ ಸತ್ತ ಮಲ್ಲ ಎನ್ನುವ ಪ್ರಶ್ನೆಗಳೊಂದಿಗೆ ಅನಿಶ್ಚಿತವಾಗಿರುವ ಬಡವರ ಪ್ರಾಣದ ಬಗ್ಗೆ ಕೆಳಗೇರಿಯ ಜನಗಳೆಲ್ಲಾ ಯೋಚಿಸಿದರು.ನಮ್ಮಪ್ಪ ಸಿವ ಇಟ್ಟಷ್ಟು ದಿನ ಇರಬೇಕಲ್ಲಾ ಅಂತ ತಮ್ಮ ತಮ್ಮೊಳಗೆ ಅಂದುಕೊಂಡರು.
ಮಕ್ಕಳು ಮರಿ ಸಣ್ಣವು ಇರೋವಾಗ ಮಲ್ಲನ ಸಾವು ದುರ್ದೈವ ಅಂತ ಹೆಣ್ಮಕ್ಕಳು ಹಲುಬಿದರು.ನೋವು ಕಂಡಾಗ ಹೆಣ್ಮಕ್ಕಳಿಗೆ ಕರುಗುವ ಕರಳು ಕೊಟ್ಟ ಶಿವನ ವೈಚಿತ್ರಕ್ಯ ಸಾಕ್ಷಿ ಎನ್ನುವಂತೆ ಕೇರಿಯ ಹೆಂಗಸರು ಮಲ್ಲನ ಗುಣಗಾನ ಮಾಡುತ್ತಾ ಸ್ಪರ್ಧೆಗೆ ಬಿದ್ದಂತೆ ಅಳತೊಡಗಿದರು.ಮಕ್ಕಳು ಇನ್ನು ಸಣ್ಣವು ಇರುವಾಗ ನಿನ್ ಹೇಣ್ತೀ ಕೆಂಚೀನ ಬಿಟ್ಟು ಹೋಗಬಾರದಿತ್ತು ಎಂದು ಹೆಣಕ್ಕೆ ಅವರು ಕೇಳೇ ಕೇಳಿದರು.ಹೆಣ ಏನು ಮಾತಾಡೀತು?ಸ್ತಬ್ಧದ ಹೊರತು!
ಬದುಕಿರುವಾಗ ಮಲ್ಲ ಓಣಿಗೆ ಅಲಾರಂನಂತಿದ್ದ.ಸದಾ ಕುಡಿದ ಅಮಲಿನಲ್ಲಿರುತ್ತಿದ್ದ ಅವನು ಒಂದಿಲ್ಲ ಒಂದು ಧ್ವನಿಯನ್ನು ಹೊರಡಿಸುತ್ತಲೇ ಇರುತ್ತಿದ್ದ.ಗಂಡ ಹೆಂಡತಿಯರ ಜಗಳ ಪ್ರತಿ ನಿಮಿಷ ತಾರಕ ಸ್ವರದಲ್ಲಿರುತ್ತಿತ್ತು.ಆಜುಬಾಜು ಗುಡಿಸಿಲಿನ ಕುಟುಂಬದವರ ಕಿವಿ ದಡ್ಡಿ ತಿಂದು ಹೋಗಿದ್ದವು.ಒಂದ್ ಸಲ ಮನರಂಜನೆ ಅನ್ನಿಸಿದರೆ ಇನ್ನೊಂದು ಸಲ ಕಿರಿಕಿರಿ ಅನ್ನಿಸುತ್ತಿತ್ತು.ಅಂವ ಯಾವಗಲೋ ಬ್ಯಾಡರೋಣಿಯೊಳಗೆ ಆಡಿದ ಬಯಲಾಟದ ಮಾತುಗಳನ್ನು ರಸವತ್ತಾಗಿ ಹೇಳುತ್ತಿದ್ದ.ಸಿನಿಮಾ ಹಾಡುಗಳನ್ನು ತನ್ನದೆ ಭಾಷೆಯಲ್ಲಿ ಹಾಡುತ್ತಿದ್ದ.ನಿಶೆಯೊಳಗೆ ಜೋಲಿ ಹೊಡೆಯುತ್ತಾ ವಿಚಿತ್ರ ನರ್ತನ ಮಾಡುತ್ತಿದ್ದ.ನರ್ತನ ಮಾಡುತ್ತಾ ಮಾಡುತ್ತಾ ಗುಡಿಸಲ ಮುಂದಿನ ಅಂಗಳದಲ್ಲಿ ಮಲಗಿ ನಿದ್ದೆ ಹೋಗುತ್ತಿದ್ದ.ಎಷ್ಟೆ ಆಗಲಿ ಕೆಂಚಿ ಮತ್ತವಳ ಮಕ್ಕಳು ಮ್ಯಾಲೊಂದು ಗಂಡ ಅನ್ನುವ ಮಮಕಾರದಲ್ಲಿ ಕೌದಿ ಹೊದೆಸುತ್ತಿದ್ದರು.ಬಲು ವಿಚಿತ್ರವಾಗಿದ್ದ ಮಲ್ಲ.ಎಷ್ಟೇ ಕುಡಿದರೂ ಹೆಂಡತಿ ಮಕ್ಕಳ ಮೇಲೆ ಕೈ ಮಾಡಿದವನಲ್ಲ.ಬರೀ ಬಾಯಿ ಮಾತಿನ ಜಗಳ.ಸದಾ ಕುಡಿದ ಅಮಲಿನಲ್ಲಿ ಇರಬೇಕೆಂದು ಬಯಸುವ ಆತ ಸಂಸಾರ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ ನಿಜ;ಆದರೆ ಮನೆಗೊಬ್ಬ ಗಣಮಗನಾಗಿದ್ದ.ನಾಲ್ಕು ಮಕ್ಕಳಿಗೆ ತಂದೆಯಾಗಿದ್ದ.ಹುಟ್ಟಿದ ನಾಲ್ಕು ಮಕ್ಕಳ ಪೈಕಿ ಮೂರು ಹೆಣ್ಣಾದರೆ ಒಂದು ಗಂಡು.ಆ ಒಂದು ಗಂಡು ಮಾತು ಮತ್ತು ಕಿವಿಯಿಲ್ಲದೆ ಹುಟ್ಟಿತ್ತು.ಆದರೂ ಹುಡುಗ ಚುರುಕಾಗಿದ್ದ.ದೊಡ್ಡ ಮಗಳನ್ನು ಮದುವೆ ಮಾಡಿಕೊಟ್ಟಿದ್ದ.
ಮಲ್ಲ ಊರಿಗೆ ಬಾಳ್ ಬೇಕಾದವನಾಗಿದ್ದ.ಮೇಲ್ಜಾತಿಯ ಜನಗಳ ಮನ ಮೆಚ್ಚಿದ ಆಳಾಗಿದ್ದ.ಮನುಷ್ಯರಾರು ಮಾಡದ ಕೆಲಸಗಳನ್ನು ಕುಡಿದ ಅಮಲಿನಲ್ಲಿ ಅಥವಾ ಕುಡಿಸಿದರೆ ಯಾವುದೇ ಹೇಸಿಗೆ ಇಲ್ಲದೆ ಮಾಡಿ ಮುಗಿಸುತ್ತಿದ್ದ.ಬಚ್ಚಲು ಕಟ್ಟಿದರೆ,ಶೌಚದ ಪೈಪು ಬಂದಾದರೆ ಹೀಗೆ ಪ್ರತಿಯೊಂದು ಕೆಲಗಳನ್ನು ಅವನು ಅಸಹ್ಯಪಟ್ಟುಕೊಳ್ಳದೆ ಮಾಡುತ್ತಿದ್ದ.
ಓಣಿ ಜನ ಅವನ ಗುಣಗಳನ್ನು ಒಂದೊಂದೇ ನೆನಪಿಸಿಕೊಂಡು ಅಳುತ್ತಿರುವಾಗ ಮೇಲ್ಜಾತಿಯ ಕೆಲ ಊರಿನ ಹಿರಿಯರು ಬೈಕುಗಳೊಂದಿಗೆ ಗುಡಿಸಲ ಮುಂದೆ ಬಂದು ನಿಂತರು.ಕೆಳಗೇರಿಯ ಜನ ದುಃಖದಲ್ಲಿಯೇ ಅಚ್ಚರಿಪಟ್ಟುಕೊಂಡರು!
◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾ ◾◾
(೩)
“ಮಲ್ಲ ನಮ್ ಮನಿ ಮಗ ಇದ್ದಂಗಿದ್ದ.ಅಂವ ಸತ್ತ ಸುದ್ದಿ ಕೇಳಿ ಬಾಳ್ ದುಃಖ ಆಯ್ತು,ಈ ಸಾವು ಅನ್ನೋದು ಹೇಳಿಕೇಳಿ ಬರೋದಿಲ್ಲ.ದೇವರು ಯವಾಗ ಕರ್ಕೊಂತಾನೋ ಅವಾಗ ಹೋಗೋದೆ!ತಂಗಿ ಕೆಂಚವ್ವಾ,ದುಃಖ ತಾಳಿಕೋ,ನಾವೆಲ್ಲಾ ನಿನ್ ಜತಿ ಇರ್ತೀವಿ.ನೀನೇನು ಚಿಂತಿ ಮಾಡಬ್ಯಾಡ!”ಅಂದ ಗೊಣಮಂತದಣಿ ಹಿಂದ ಬಂದ ತಮಟೆರಾಯ.ತಮಟೆರಾಯ ಸಮಾಧಾನ ಹೇಳೋದಿಕ್ಕೆ ಬಾಳ್ ಚಾಣಾಕ್ಷ ಮನುಷ್ಯ.ಯಾವ ನ್ಯಾಯವನ್ನೂ ಸಲೀಸಾಗಿ ಬಗೆಹರಿಸುವ ಅವನ ಗುಣ ಊರಿಗೆ ಮೆಚ್ಚಿಗೆಯಾಗಿತ್ತು.ಹಂಗಂತಾನೆ ಅವನು ಊರಿನ ಪ್ರತಿ ಕದಲಿಕೆಗಳ ಸೂತ್ರದಾರನಾಗಿದ್ದ.ಇಡೀ ಊರು ನೊಣಗಳ ಹಾಗೆ ಅವನ ಸುತ್ತಾ ಸುತ್ತುತ್ತಿತ್ತು.ಅಂವ ನೊಣ ಸುತ್ತುಗನ ಗಿಡವಾಗಿದ್ದ.
ಕೆಂಚಿ ಕೈಯಾಗ ಐದು ಸಾವಿರ ರೂಪಾಯಿ ಕೊಟ್ಟರು.ಸತ್ತವ ತಿರುಗಿ ಬರಂಗಿಲ್ಲ.ಇದ್ದವರು ಮುಂದ ನೋಡಿ ಬದುಕಬೇಕು ಎಂದು ಸೂಚ್ಯವಾಗಿ ಹೇಳಿದ.ಕೆಂಚವ್ವ ಬಾಯಾಗ ಸೆರಗಿಟ್ಟುಕೊಂಡು ದುಃಖದಿಂದಲೇ ತಲೆ ಅಲ್ಲಾಡಿಸಿದಳು.ಕೆಳಗೇರಿಯೊಳಗೆ ಯಾರೂ ಸತ್ತರೂ ಮೇಲ್ಜಾತಿಯ ಜನ ತಿರುಗಿಯೂ ನೋಡುವುದಿಲ್ಲ.ಮಲ್ಲನ ಹೆಣಕ್ಕೆ ಊರ ಪ್ರಮುಖರು ಬಂದು ಭೇಟಿಕೊಟ್ಟಿದ್ದು ತುಂಬಾ ಅಚ್ಚರಿಯ ಸಂಗತಿಯಾಗಿತ್ತು.ದೊಡ್ಡೋರು ಹೇಳಿದಂಗ ಕೇಳಲೇಬೇಕಲ್ಲ.ಕೆಂಚಿ ಹಣ ಇಸಗೊಂಡು ಸುಮ್ಮನಾದಳು.
ಊರಿನ ಹಿರಿಯ ಮನುಷ್ಯರು ಅಲ್ಲಿಂದ ಹೋದ ಮೇಲೆ ಕೆಳಗೇರಿಯ ಜನ ಚರ್ಚೆಯಲ್ಲಿ ಮುಳುಗಿದರು.ಕೆಲವರು ತಮಟೆರಾಯ ಗೊಣಮಂತ ದಣಿಯ ಗುಣಗಳನ್ನು ಕೊಂಡಾಡಿದರು.ಅವರು ಬಾಳ್ ದೊಡ್ ಮನುಷ್ಯರಪ್ಪ.ಮೇಲ್ಜಾತಿಯ ನಾಯಿಗಳೂ ನಮ್ಮ ಓಣ್ಯಾಗ ಬರೋಂಗಿಲ್ಲ,ಅಂತಾದ್ರಲ್ಲಿ ದಣೇರಾ ಮಲ್ಲನ ಗುಡಿಸಿಲಿಗೆ ಬಂದಾರ ಅಂದ್ರ ಮಲ್ಲನ ಜನ್ಮ ಪಾವನವಾಯಿತು ಎಂದು ಓಣಿಯ ಕೆಲವರು ಬಹಿರಂಗವಾಗಿ ಅಂದರು.ತುಂಬಾ ಜನ ಹೌದೌದು ಎಂದರು.
ಈ ಎಲ್ಲಾ ಚರ್ಚೆಗಳ ಮಧ್ಯೆ ಅಲ್ಲೊಬ್ಬನಿದ್ದ:ರಾಮ!ರಾಮ ಅನುಮಾನಗೊಂಡ.ಕೆಳಗೇರಿ ಜನರನ್ನು ಮನುಷ್ಯರು ಎಂದು ಭಾವಿಸದ ಈ ಸೂಳೇಮಕ್ಕಳು ಓಣಿಗೆ ಬಂದು ಹೆಣಕ್ಕೆ ರೊಕ್ಕ ಕೊಡ್ತಾರ ಅಂದರ ಇದರ ಹಿಂದ ಏನೋ ಮಸಲತ್ತಿದೆ,ಏನದು?ಅವನು ಯೋಚಿಸತೊಡಗಿದ.ಮಲ್ಲನ ಸಾವಿನ ಹಿಂದೆ ಈ ಸೂಳೇಮಕ್ಕಳ ಕೈವಾಡವಿದೆಯಾ?ಅವನ ತಲೆ ಅನುಮಾನಗಳ ಹುತ್ತವಾಯಿತು.
ನಂತರ ಮಲ್ಲನ ಶವ ಸಂಸ್ಕಾರ ವಿಜೃಂಭಣೆಯಿಂದ ನಡೆದು ಹೋಯಿತು.ತಮಟೆರಾಯ ಮತ್ತು ಗೊಣಮಂತ ದಣಿ ಕೊಟ್ಟ ರೊಕ್ಕದಲ್ಲಿ ಹೆಣ ಭಲೇ ಸಿಂಗಾರಗೊಂಡಿತ್ತು.ಬಂದಂತಹ ಬಂಧು ಬಳಗ ಯಥೇಚ್ಛವಾಗಿ ಕುಡಿದರು.ಹೆಣದ ಮುಂದೆ ತರಾವರಿ ನರ್ತನ ಮಾಡಿದರು.ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಹೊಡೆದರು.ದಣೇರು ಕೊಟ್ಟ ರೊಕ್ಕದಲ್ಲಿ ಚಂದ ಕಾಣುವ ಮಂಟಪ ಮಾಡಿ ಮಂಟಪದಲ್ಲಿ ಮಶಾಣಕ್ಕೆ ಹೆಣ ಹೊಯ್ದು ಹೆಣ ಹೂಣಿಸಿದರು.ಮಲ್ಲ ಸಮಾಧಿಯಾಗಿ ಹೋದ.
ಮಲ್ಲನ ಸಮಾಧಿಯಾದ ನಿಜ,ಮಲ್ಲನ ಹೆಣ ರಾಮನ ತಲೆಯಲ್ಲಿ ಮರು ಜೀವ ಪಡೆದು ಬೃಹದಾಕಾರವಾಗಿ ಬೆಳೆಯಿತು.ಮಲ್ಲ ಹೆಂಗ್ ಸತ್ತ?ರಾಮ ತಲೆ ಕೆಡಿಸಿಕೊಳ್ಳತೊಡಗಿದ!
◾◾◾◾◾
(೪)
ಪರಂಪರಾಗತ ದಾಸ್ಯಕ್ಕೊಳಪಟ್ಟ ಜನರ ಕಿವಿಗೆ ರಾಮನ ಮಾತುಗಳು ತಲುಪಲೇ ಇಲ್ಲ.ಅವನು ಓಣಿಯ ಪ್ರತಿಯೊಬ್ಬರ ಮನೆ ಮುಂದೆ ನಿಂತು ಧಮನಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಕಾಲ ಬಂದಿದೆ ಎಂದು ಬೇಡಿಕೊಂಡ.ತುಳಿಯುವವರ ವಿರುದ್ಧ ತಾವು ಪ್ರತಿಭಟಿಸದರೆ ಹೋದರೆ ತಮ್ಮನ್ನು ಯಾವ ಸಂವಿಧಾನವೂ ಕಾಪಾಡುವುದಿಲ್ಲ ಎಂದನು.ಜನ ಮುಖ ಮುಖ ನೋಡಿಕೊಂಡರು.ರಾಮನಿಗೆ ಹುಚ್ಚು ಹಿಡಿದಿದೆ ಎಂದುಕೊಂಡರು.ಸಂವಿಧಾನ ಎಂದರೆ ಏನು ಅಂತ ಅವರು ತಮ್ಮ ತಮ್ಮೊಳಗೆ ಪ್ರಶ್ನಿಸಿಕೊಂಡರು.ಯಾರಿಗೂ ಉತ್ತರ ಸಿಗಲಿಲ್ಲ.
ಬಹುಶಃ ಗುಡಿಯೊಳಗಿನ ತಾವು ಎಂದೆಂದೂ ಕಾಣದ ದೇವರಾಗಿರಬೇಕು ಎಂದು ನಿರ್ಣಯಿಸಿಕೊಂಡರು.ದೇವರನ್ನು ನಂಬಬೇಡಿ,ಅಕ್ಷರವನ್ನು ನಂಬಿ ಎಂದು ಹೇಳಿದವರನ್ನೇ ದೇವರು ಎಂದು ಪೂಜಿಸ ಹೊರಟ ಜನಗಳಿಗೆ ರಾಮನ ಮಾತುಗಳು ಅರ್ಥವಾಗಲಿಲ್ಲ.ಅವನು ಒಳ ಒಳಗೇ ರೋಧಿಸಿದನು.ತನ್ನ ಜನರನ್ನು ಇನ್ನಾರು ಇನ್ನಾವ ಕಾಲದಲ್ಲೂ ಕಾಪಾಡಲಾರರು ಎಂದು ಅವನು ಮಮ್ಮಲ ಮರುಗಿದನು.
ನಾಲ್ಕಕ್ಷರ ಬಲ್ಲವನಾಗಿದ್ದ ರಾಮ ಕೇರಿಯ ಜನಗಳಿಗೆ ಹುಚ್ಚನಂತೆ ಕಾಣಿಸುತ್ತಿದ್ದ.ಈ ಹಿಂದೆ ರಾಮ ಸಣ್ಣವನಿದ್ದಾಗ ನನ್ ಮಗನ್ನಾ ದೊಡ್ಡ ಸಾಹೇಬನ ಮಾಡ್ತೀನಿ ಎಂದು ಹೇಳುತ್ತಿದ್ದ ರಾಮನ ತಂದೆಯನ್ನೂ ಜನ ಹುಚ್ಚನೆಂದೇ ಭಾವಿಸಿದ್ದರು.ತಾವು ಅಕ್ಷರ ಅದೂ ಇದು ಅಂತ ತಿರುಗಿದರೆ ಗೌಡರ ಮನೆಯ ಯಂಡಿ ಕಸ ಯಾರು ಮಾಡಬೇಕು?ಗೌಡರು ಹಿಡಿ ಅನ್ನ ಕೊಡುತ್ತಾರಲ್ಲ ಅದು ಮುಂದೆ ಕೊಟ್ಟಾರೆಯೇ?ತಮಗೆ ಊರಿನಲ್ಲಿ ಉಳಿಗಾಲ ಉಂಟೇ ಎಂದು ಅವರು ವಾದಿಸುತ್ತಿದ್ದರು.ಕೂಳಿಗೆ ಪರದಾಡುವ ಜನ ಬಟ್ಟೆ ಬರೆಗಳನ್ನು ಕಾಣುವುದೆಂತು?ಹರಕು ವಸ್ತ್ರದಲ್ಲಿ ಮಾನವೂ ಉಳ್ಳವರ ಸ್ವತ್ತು ಎಂದು ಭಾವಿಸಿದ್ದ ಕಾಲದಲ್ಲಿ ರಾಮನ ತಂದೆ ರಾಮನಿಗೆ ನಾಲ್ಕಕ್ಷರ ಕಲಿಸಿದ್ದ.ಅದು ಊರನ್ನೇ ಎದುರು ಹಾಕಿಕೊಂಡು!
ಮಲ್ಲನ ಹೂತಿರು ಹೆಣ ಹೊರ ತೆಗೆದು ಶವ ಪರೀಕ್ಷೆ ನಡೆಸಿದರೆ ಅವನ ಸಾವಿನ ಹಿನ್ನೆಲೆ ತಿಳಿಯುತ್ತದೆ ಎನ್ನುವುದು ರಾಮನ ವಾದ.ಆದರೆ ರಾಮನ ಈ ಮಾತುಗಳು ಮಾತ್ರ ಯಾರಿಗೂ ಅರ್ಥವಾಗದೆ ಹುಚ್ಚನ ಬಡಬಡಿಕೆಯ ರೀತಿಯಲ್ಲಿ ಅವರು ಭಾವಿಸಿದ್ದರು.ಅವರ ದೈನಂದಿನ ಬದುಕು ಹಾಗೆ ಭಾವಿಸುವಂತೆ ಮಾಡಿತ್ತೂ ಕೂಡಾ.ಒಂದು ವೇಳೆ ರಾಮ ಯಾರದೋ ದಾರ್ಷ್ಟ್ಯಕ್ಕೆ ಬಲಿಯಾಗಿ ಸತ್ತರೂ ತಾವೇನು ಕಿತ್ತುಕೊಳ್ಳಬಲ್ಲರು ಎನ್ನುವುದು ಓಣಿಯ ಮುಖ್ಯಸ್ಥರ ಅಭಿಮತ.ಊರಿನ ಹಿರಿಯರು ತಮ್ಮ ಕೇರಿಯ ಮೇಲಿಟ್ಟ ಅನುಕಂಪಕ್ಕೆ ಸಂ ಕಾರ ತಂದುಕೊಳ್ಳುವುದಾದರೂ ಏಕೆ ಎಂದು ಅವರೆಲ್ಲಾ ಯೋಚಿಸಿದರು.
◾◾◾◾◾
(೩)
“ಮಲ್ಲ ನಮ್ ಮನಿ ಮಗ ಇದ್ದಂಗಿದ್ದ.ಅಂವ ಸತ್ತ ಸುದ್ದಿ ಕೇಳಿ ಬಾಳ್ ದುಃಖ ಆಯ್ತು,ಈ ಸಾವು ಅನ್ನೋದು ಹೇಳಿಕೇಳಿ ಬರೋದಿಲ್ಲ.ದೇವರು ಯವಾಗ ಕರ್ಕೊಂತಾನೋ ಅವಾಗ ಹೋಗೋದೆ!ತಂಗಿ ಕೆಂಚವ್ವಾ,ದುಃಖ ತಾಳಿಕೋ,ನಾವೆಲ್ಲಾ ನಿನ್ ಜತಿ ಇರ್ತೀವಿ.ನೀನೇನು ಚಿಂತಿ ಮಾಡಬ್ಯಾಡ!”ಅಂದ ಗೊಣಮಂತದಣಿ ಹಿಂದ ಬಂದ ತಮಟೆರಾಯ.ತಮಟೆರಾಯ ಸಮಾಧಾನ ಹೇಳೋದಿಕ್ಕೆ ಬಾಳ್ ಚಾಣಾಕ್ಷ ಮನುಷ್ಯ.ಯಾವ ನ್ಯಾಯವನ್ನೂ ಸಲೀಸಾಗಿ ಬಗೆಹರಿಸುವ ಅವನ ಗುಣ ಊರಿಗೆ ಮೆಚ್ಚಿಗೆಯಾಗಿತ್ತು.ಹಂಗಂತಾನೆ ಅವನು ಊರಿನ ಪ್ರತಿ ಕದಲಿಕೆಗಳ ಸೂತ್ರದಾರನಾಗಿದ್ದ.ಇಡೀ ಊರು ನೊಣಗಳ ಹಾಗೆ ಅವನ ಸುತ್ತಾ ಸುತ್ತುತ್ತಿತ್ತು.ಅಂವ ನೊಣ ಸುತ್ತುಗನ ಗಿಡವಾಗಿದ್ದ.
ಕೆಂಚಿ ಕೈಯಾಗ ಐದು ಸಾವಿರ ರೂಪಾಯಿ ಕೊಟ್ಟರು.ಸತ್ತವ ತಿರುಗಿ ಬರಂಗಿಲ್ಲ.ಇದ್ದವರು ಮುಂದ ನೋಡಿ ಬದುಕಬೇಕು ಎಂದು ಸೂಚ್ಯವಾಗಿ ಹೇಳಿದ.ಕೆಂಚವ್ವ ಬಾಯಾಗ ಸೆರಗಿಟ್ಟುಕೊಂಡು ದುಃಖದಿಂದಲೇ ತಲೆ ಅಲ್ಲಾಡಿಸಿದಳು.ಕೆಳಗೇರಿಯೊಳಗೆ ಯಾರೂ ಸತ್ತರೂ ಮೇಲ್ಜಾತಿಯ ಜನ ತಿರುಗಿಯೂ ನೋಡುವುದಿಲ್ಲ.ಮಲ್ಲನ ಹೆಣಕ್ಕೆ ಊರ ಪ್ರಮುಖರು ಬಂದು ಭೇಟಿಕೊಟ್ಟಿದ್ದು ತುಂಬಾ ಅಚ್ಚರಿಯ ಸಂಗತಿಯಾಗಿತ್ತು.ದೊಡ್ಡೋರು ಹೇಳಿದಂಗ ಕೇಳಲೇಬೇಕಲ್ಲ.ಕೆಂಚಿ ಹಣ ಇಸಗೊಂಡು ಸುಮ್ಮನಾದಳು.
ಊರಿನ ಹಿರಿಯ ಮನುಷ್ಯರು ಅಲ್ಲಿಂದ ಹೋದ ಮೇಲೆ ಕೆಳಗೇರಿಯ ಜನ ಚರ್ಚೆಯಲ್ಲಿ ಮುಳುಗಿದರು.ಕೆಲವರು ತಮಟೆರಾಯ ಗೊಣಮಂತ ದಣಿಯ ಗುಣಗಳನ್ನು ಕೊಂಡಾಡಿದರು.ಅವರು ಬಾಳ್ ದೊಡ್ ಮನುಷ್ಯರಪ್ಪ.ಮೇಲ್ಜಾತಿಯ ನಾಯಿಗಳೂ ನಮ್ಮ ಓಣ್ಯಾಗ ಬರೋಂಗಿಲ್ಲ,ಅಂತಾದ್ರಲ್ಲಿ ದಣೇರಾ ಮಲ್ಲನ ಗುಡಿಸಿಲಿಗೆ ಬಂದಾರ ಅಂದ್ರ ಮಲ್ಲನ ಜನ್ಮ ಪಾವನವಾಯಿತು ಎಂದು ಓಣಿಯ ಕೆಲವರು ಬಹಿರಂಗವಾಗಿ ಅಂದರು.ತುಂಬಾ ಜನ ಹೌದೌದು ಎಂದರು.
ಈ ಎಲ್ಲಾ ಚರ್ಚೆಗಳ ಮಧ್ಯೆ ಅಲ್ಲೊಬ್ಬನಿದ್ದ:ರಾಮ!ರಾಮ ಅನುಮಾನಗೊಂಡ.ಕೆಳಗೇರಿ ಜನರನ್ನು ಮನುಷ್ಯರು ಎಂದು ಭಾವಿಸದ ಈ ಸೂಳೇಮಕ್ಕಳು ಓಣಿಗೆ ಬಂದು ಹೆಣಕ್ಕೆ ರೊಕ್ಕ ಕೊಡ್ತಾರ ಅಂದರ ಇದರ ಹಿಂದ ಏನೋ ಮಸಲತ್ತಿದೆ,ಏನದು?ಅವನು ಯೋಚಿಸತೊಡಗಿದ.ಮಲ್ಲನ ಸಾವಿನ ಹಿಂದೆ ಈ ಸೂಳೇಮಕ್ಕಳ ಕೈವಾಡವಿದೆಯಾ?ಅವನ ತಲೆ ಅನುಮಾನಗಳ ಹುತ್ತವಾಯಿತು.
ನಂತರ ಮಲ್ಲನ ಶವ ಸಂಸ್ಕಾರ ವಿಜೃಂಭಣೆಯಿಂದ ನಡೆದು ಹೋಯಿತು.ತಮಟೆರಾಯ ಮತ್ತು ಗೊಣಮಂತ ದಣಿ ಕೊಟ್ಟ ರೊಕ್ಕದಲ್ಲಿ ಹೆಣ ಭಲೇ ಸಿಂಗಾರಗೊಂಡಿತ್ತು.ಬಂದಂತಹ ಬಂಧು ಬಳಗ ಯಥೇಚ್ಛವಾಗಿ ಕುಡಿದರು.ಹೆಣದ ಮುಂದೆ ತರಾವರಿ ನರ್ತನ ಮಾಡಿದರು.ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಹೊಡೆದರು.ದಣೇರು ಕೊಟ್ಟ ರೊಕ್ಕದಲ್ಲಿ ಚಂದ ಕಾಣುವ ಮಂಟಪ ಮಾಡಿ ಮಂಟಪದಲ್ಲಿ ಮಶಾಣಕ್ಕೆ ಹೆಣ ಹೊಯ್ದು ಹೆಣ ಹೂಣಿಸಿದರು.ಮಲ್ಲ ಸಮಾಧಿಯಾಗಿ ಹೋದ.
ಮಲ್ಲನ ಸಮಾಧಿಯಾದ ನಿಜ,ಮಲ್ಲನ ಹೆಣ ರಾಮನ ತಲೆಯಲ್ಲಿ ಮರು ಜೀವ ಪಡೆದು ಬೃಹದಾಕಾರವಾಗಿ ಬೆಳೆಯಿತು.ಮಲ್ಲ ಹೆಂಗ್ ಸತ್ತ?ರಾಮ ತಲೆ ಕೆಡಿಸಿಕೊಳ್ಳತೊಡಗಿದ!(ಮುಂದುವರೆಯು ವುದು)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ