ಭಾನುವಾರ, ಮಾರ್ಚ್ 15, 2020

ನಲವತ್ತರ ಹೊಸಿಲಿನಲ್ಲಿ ನನ್ನ ಕೊಂಚ ಆತ್ಮಕ್ಷೋಭೆ ಕಕ್ಕುವ ಯತ್ನದಲಿ....

ನಲವತ್ತರ ಹೊಸಿಲಿನಲ್ಲಿ ನನ್ನ ಕೊಂಚ ಆತ್ಮಕ್ಷೋಭೆ ಕಕ್ಕುವ ಯತ್ನದಲಿ....

ಎರಡು ಕತ್ತೆಯ ವಯಸ್ಸು ನಲವತ್ತೆಂದರೆ!ಒಂದು ನಿಶ್ಚಿತ ಗುರಿ ತಲುಪುತ್ತೇನೆ ಎಂದು ಕೊಂಡಿದ್ದೆ;ಉಹುಂ,ಜೀವನ ಇನ್ನೂ ಅಧ್ವಾನವಾಗಿ ಹೋಯಿತು.ದುಡಿತೀನಿ,ಹಣವಿರುತ್ತದೆ,ಎಲ್ಲವೂ ಸರಿ ಇರುತ್ತದೆ ಎಂದು ಭಾವಿಸಿದ್ದೆ.ನನ್ನ ಭಾವ ಹುಸಿಯಾಯಿತು;ಕನಸು ಬರೀ ಕಮರಲಿಲ್ಲ.ಸುಟ್ಟು ಭಸ್ಮವಾದವು!ಈಗ ಮುಂದೇನು ಎನ್ನುವ ಚಿಂತೆ ದಟ್ಟವಾಗಿ ಕಾಡತೊಡಗಿದೆ.ನಂದು ಬಿಡಿ,ಅಲೆಮಾರಿ!ಎಲ್ಲೋ ತಿಂದು ಹೇಗೋ ಮಲಗಿ ಜೀವನ ಕಳೆದು ಬಿಡಬಲ್ಲೆ.ಜೀವದ ಮೇಲೂ ಆಸೆ ಇಲ್ಲ ನಂಗೆ.ಕಳೆದ ಹನ್ನೆರಡು ವರ್ಷಗಳ ಹಿಂದೆ ನನ್ನ ಬದುಕು ಮುಗಿದು ಹೋಯಿತು;ಪುನಃ ಬದುಕು ಕಟ್ಟಿಕೊಳ್ಳಬೇಕೆಂದುಕೊಂಡ ನನ್ನ ಪ್ರಯತ್ನಗಳೆಲ್ಲಾ ವಿಫಲವಾದವು,ಬರೀ ವಿಫಲವಲ್ಲಾ,ಹೈರಾಣಕ್ಕೆ ದಾರಿ ಮಾಡಿದವು.ನನ್ನ ಕಥೆ ನನಗೆ ಮುಖ್ಯವಲ್ಲ.ಮಕ್ಕಳ ಗತಿ?

ಒಂದು ವಿಷಯವಂತೂ ಸತ್ಯ;ಹಣ ಮತ್ತು ಆರೋಗ್ಯ ಸ್ಥಿರವಾಗಿದ್ದರೆ ಯಾವ ಬಂಧು ಬಳಗದ ಅಗತ್ಯವಿಲ್ಲ.ಯಾವ ಸಮಸ್ಯೆಯೂ ನಮ್ಮನ್ನು ಕಾಡುವುದಿಲ್ಲ.ನಮಗೆ ತೊಂದರೆಗಳು ಯಾವಾಗ ಕಾಡಲಿಕ್ಕೆ ಪ್ರಾರಂಭಿಸುತ್ತವೆ ಎಂದರೆ ನಾವು ನಾವಿಡುವ ತಪ್ಪು ಹೆಜ್ಜೆಗಳಿಂದ ಮತ್ತು ಸರಿಯಾದ ಆರ್ಥಿಕ ಅವಗಾಹನೆ ಇಲ್ಲದಿರುವುದರಿಂದ!ಬಹುತೇಕ ಸಮಸ್ಯೆಗಳಿಗೆ ಉಡಾಫೆ ಮತ್ತು ಉದಾಸೀನ ಕಾರಣವಾಗುತ್ತದೆ.ಇದು ನನ್ನ ಜೀವನದ ಸಿದ್ಧ ಅನುಭವ,ನಾನು ಜೀವನವನ್ನು ತುಂಬಾ ಉಡಾಫೆಯಿಂದ ಕಳೆದೆ.ಪತ್ನಿಯ ಮರಣದ ನಂತರ ಮುಂದಿನ ಜೀವನವನ್ನು ಊಹಿಸಲಿಲ್ಲ.ಆರೋಗ್ಯ ಹಣ ಸ್ಥಿರವಾಗಿರುತ್ತದೆ ಎಂದುಕೊಳ್ಳುತ್ತಾ ಬಹಳ ಉದಾಸೀನನಾದೆ.ಅದರ ಕಂದಾಯವನ್ನೀಗ ನಾನು ಕಟ್ಟತೊಡಗಿದ್ದೇನೆ!

ಮಕ್ಕಳಿಗೆ ಸರಿಯಾದ ಆಹಾರ ಒದಗಿಸದೆ ಹೋದೆ,ಅವು ಕೃಶಗೊಂಡಿವೆ,ಪೌಷ್ಟಿಕಾಂಶದ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ.ನನಗೂ ಸರಿಯಾದ ಆಹಾರದ ಕೊರತೆ ಮತ್ತು ಇತರ ಮಾನಸಿಕ ಒತ್ತಡಗಳಿಂದ ಹಲವು ಸಮಸ್ಯೆಗಳಿಂದ ನರಳುತ್ತಿದ್ದೇನೆ.ಬದುಕಿನ ಬಗೆಗಿನ ನನ್ನ ನಂಬಿಕೆ ಎನ್ನುವ ಹಡುಗು ಇಂದು ಸಂಪೂರ್ಣವಾಗಿ ಮುಳುಗಿ ಹೋಗಿದೆ.ಖಿನ್ನತೆ ನನ್ನನ್ನು ಇಡಿ ಇಡಿಯಾಗಿ ಆವರಿಸಿಕೊಂಡಿದೆ.ಹತಾಶೆ ಸಾಕಿನ್ನೂ ಎನ್ನುವ ಭಾವನೆಯನ್ನು ತರುತ್ತಿದೆ.ಇಂತಹ ಸಂಕಷ್ಟದ ಸಂದರ್ಭದಲ್ಲಿ ಒಂದೊಂದೆ ಕೊಂಡಿಗಳು ಕಳಚಿ ಸಂಪೂರ್ಣ ನಗ್ನನಾಗಿದ್ದೇನೆ.ಸಂತೆ ಮುಗಿದಂತೆ!

ಮುಂದೇನು ಎನ್ನುವುದು ಸದ್ಯಕ್ಕಿರುವ ಪ್ರಶ್ನೆ!

ಮನೆ ಕೆಲಸ ಅಡುಗೆ ಇತ್ಯಾದಿ ಮಾಡುತ್ತಾ ಕುಳಿತರೆ ಉಳಿದ ಇನ್ಯಾವ ಕೆಲಸವೂ ನಡೆಯುವುದಿಲ್ಲ.ಉಳಿದ ಕೆಲಸಗಳನ್ನು ಮಾಡದಿದ್ದರೆ ಹಣದ ಮುಗ್ಗಟ್ಟು!ನನ್ನ ಬದುಕಿನ ಹೊದಿಕೆ ಹೇಗಿದೆ ಎಂದರೆ ತಲೆಗಾದರೆ ಕಾಲಿಗೆ ಆಗುತ್ತಿಲ್ಲ ಕಾಲಿಗಾದರೆ ತಲೆಗಿಲ್ಲ!ಮನಸ್ಸು ಗೊಂದಲಕ್ಕೆ ದ್ವಂದ್ವಕ್ಕೆ ಬಿದ್ದಿರುವುದರಿಂದ ಇತ್ತೀಚಿಗೆ ನಿದ್ರಾಹೀನತೆ ಕಾಡತೊಡಗಿದೆ.ರಾತ್ರಿ ನಿದ್ರೆ ಇಲ್ಲದಿರುವಿಕೆಯಿಂದ ಹಗಲು ಉಲ್ಲಾಸವಾಗಿರದು!ತೀರಾ ಒಂಟಿತನ ನನ್ನನ್ನು ಹೆದರಿಸತೊಡಗಿದೆ.ಈ ಸಮಸ್ಯೆಗಳಿಗೆಲ್ಲಾ ಕಾರಣ ಮತ್ತು ಪರಿಹಾರ ಗೊತ್ತಿದ್ದರೂ ಮುಂದುವರೆಯದ,ಹಿಂಜರಿಕೆ,ಹೇಡಿತನ ನನ್ನನ್ನು ಆವರಿಸಿಕೊಂಡಿವೆ.

ಹತಾಶೆಯೇ ಜೀವನವಾಗಿರುವ ಈ ಶುಭ ಸಂದರ್ಭದಲ್ಲಿ ಇರುವ ಸಣ್ಣ ಆಸರೆಯೊಂದೂ ಈ ಸಲ ಕೈಬಿಟ್ಟಿದೆ.ಸದ್ಯಕ್ಕೆ ತಾಯಿಯೂ ಕೂಡಾ ನನ್ನ ಪಾಲಿಗೆ ಸತ್ತು ಹೋದಳು;ತಂದೆ ಜೀವಂತ ಹೆಣ!

ನಿಜವಾದ ಸಮಸ್ಯೆ ಈಗ ಎದುರಾಗಿದೆ.ಈಗ ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಸ್ತು ಯಾವುದೆಂದು ಕೇಳಿದರೆ ನಾನು ಹೇಳುವ ಉತ್ತರ ಶಾಂತಿ,ನೆಮ್ಮದಿ ಎಂದಾಗಿರುತ್ತದೆ.

ಬಹಳ ಅಸ್ತವ್ಯಸ್ತಗೊಂಡೆ,ಯಾವ ಭರವಸೆಗಳೂ ಉಳಿಯಲಿಲ್ಲ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...