ಶನಿವಾರ, ಮಾರ್ಚ್ 14, 2020

*ಹೆಸರಿಲ್ಲದ ಕಥೆ ಭಾಗ -೧*


Laxmikanth Nayak

12:49 PM (0 minutes ago)
to me
*ಹೆಸರಿಲ್ಲದ ಕಥೆ ಭಾಗ -೧*

ಬಾವಿಕಟ್ಟೆ ಹುಣಸೆ ಗಿಡದ ನೆರಳಡಿ ಅವರು ಸೇರಿದ್ದರು;ಮಟಮಟ ಮಧ್ಯಾಹ್ನ,ಕೆಲವರು ಶಾಲೆಗೆ ಚಕ್ಕರ್ ಹೊಡೆದಿದ್ದರೆ ಇನ್ನೂ ಕೆಲವರು ಶಾಲೆಯ ಮುಖವನ್ನೇ ನೋಡದವರು!ಕೆಲವರು ಶಾಲೆಯಲ್ಲಿ ಪಾಟಿ ಪುಸ್ತಕ ಇಟ್ಟು ಕಿರುಬೆರಳು ತೋರಿಸಿ ಹೊರ ಬಂದವರು.ಕೆಲವರ ಮೂಗಿನಲ್ಲಿ ಸಿಂಬಳ ಇದ್ದರೆ ಕೆಲವರ ಅಂಗಿ ಚೆಣ್ಣ ಹರಿದಿದ್ದವು.ದಿನಾ ಮಧ್ಯಾಹ್ನ ಅಲ್ಲಿ ಸೇರುವುದೊಂದು ಅವರ ರೋಮಾಂಚಕ ಹವ್ಯಾಸವಾಗಿ ಬದಲಾಗಿತ್ತು.ಸಂಸ್ಕಾರ ಅವರನ್ನು ಹಾಗೆ ಮಾಡಿರಬೇಕು;ಸಂಸ್ಕಾರದ ಕಥೆ ನಂತರ ಇರಲಿ,ಅದೊಂದು ಬೇಸಿಗೆಯ ಕೊನೆಯ ದಿನಗಳ ಮಧ್ಯಾಹ್ನದ ಸಮಯ.ಬಿಸಿಲು ಪ್ರಖರವಾಗಿಯೇ ಇತ್ತು.ದೆವ್ವಿನಂತಹ ಹುಣಸೆಗಿಡ ತಂಪು ನೆರಳನ್ನು ಕೊಡುತ್ತಿತ್ತು.ಗಿಡದಡಿ ಬಾವಿ ಇರುವುದರಿಂದ ಬೇಸಿಗೆಯ ಧಗೆಯ ಕಾಲದಲ್ಲಿ ಅದು ಹವಾನಿಯಂತ್ರಿತ ವಾತಾವರಣದ ಭಾವವನ್ನು ಉಂಟು ಮಾಡುತ್ತಿತ್ತು.ಹಾಳು ಸರ್ಕಾರ ಬೇಸಿಗೆಯಲ್ಲೂ ತಮ್ಮಂಥ ಹುಡುಗರಿಗೆ ಶಾಲೆ ಇಟ್ಟಿರುವುದು ಎಷ್ಟು ಘೋರ ಅಂತ ಅವರು ಮನಸ್ಸಿನಲ್ಲೇ ಹಾಗೊಮ್ಮೆ ಈಗೊಮ್ಮೆ ಶಾಪ ಹಾಕುತ್ತಿದ್ದರು.

ಅದು ಊರ ಹೊರಗಿನ ಒಂದು ಹಾಳು ಬಾವಿ ಇರುವ ಪ್ರದೇಶ,ಬಹುಕಾಲದ ಹಿಂದೆ ಅಲ್ಲೊಂದು ತೋಟವಿತ್ತೇನೋ?ಪಂಪಸೆಟ್ಟು ಅಳವಡಿಸಲಿಕ್ಕೆಂದು ಕಟ್ಟೆ ಕಟ್ಟಿದ್ದರು.ಈಗ ತೋಟವಿಲ್ಲ ನಿಜ;ತೋಟ ಇರುವುದಕ್ಕೆ ಸಾಕ್ಷಿಯಾಗಿ ಬಾವಿ,ಪಂಪುಸೆಟ್ಟು ಕಟ್ಟೆ,ನೀರು ಉಂಡು ಅದ್ಯಾವ ಕಾಲದಲ್ಲಿ ಬೆಳೆದು ನಿಂತಿದೆಯೋ ರಾಕ್ಷಸ ಗಾತ್ರದ ಹುಣಸೇಮರವಿದೆ.ಆ ತೋಟಕ್ಕೆ ಹೊಂದಿಕೊಂಡಂತೆ ತುಸು ದೂರದಲ್ಲಿ ಸ್ಮಶಾನವಿರುವುದರಿಂದ ಅದೊಂದು ಭಯಗ್ರಸ್ಥ ಸ್ಥಳವೂ ಹೌದು.ಮಧ್ಯಾಹ್ನದ ಹೊತ್ತು ದೆವ್ವಗಳ ಸಂಚಾರವಿರುತ್ತದೆ ಎನ್ನುವ ಪ್ರತೀತಿ ಇರುವುದರಿಂದ ಜನ ಸ್ಮಶಾನದ ಆಸುಪಾಸಿನಲ್ಲಿ ತಿರುಗಾಡುವುದಿಲ್ಲ.ಅದು ರೈತರು ವಿಶ್ರಮಿಸುವ ಕಾಲವಾದ್ದರಿಂದ,ರೈತಾಪಿ ಚಡುವಟಿಕೆಗಳು ಇರದ ಕಾಲವಾದದ್ದರಿಂದ ಜನ ಸಂಚಾರ ಇರುವುದಿಲ್ಲ.ಜನರೇನಿದ್ದರೂ ದೇವಸ್ಥಾನದ ಕಟ್ಟೆಗಳ ಮೇಲೆ ಕುಳಿತು ಹುಲಿಕಟ್ಟೆ ಆಟವಾಡುತ್ತಾರೆ.ಹೆಂಗಳೆಯರ ಪೈಕಿ ಕೆಲವರು ಚಕ್ಕರ್ ಆಡಿದರೆ ಇನ್ನೂ ಕೆಲವರು ಕೌದಿ ಹೊಲೆಯುವ ಕಾಯಕದಲ್ಲಿ ನಿರತರಾಗಿರುತ್ತಾರೆ.ದುಡಿಮೆ ಇಲ್ಲದ ಬೇಸಿಗೆ ಹಲವು ಹವ್ಯಾಸಗಳ ಕಾಲ....

ಇಂತಿರುವ ಸಮಯದಲ್ಲಿ ಇವರಿಗೆ ಅಲ್ಲಿ ಸೇರುವುದೆಂದರೆ ಏನೋ ರೋಮಾಂಚನ;ರೋಮಾಂಚನಕ್ಕೆ ಕಾರಣ ಹೇಳುವ ಮುನ್ನ ಅವರ ವಯಸ್ಸು ಮನದಟ್ಟಾಗಲಿ:ಅಲ್ಲಿ ಸೇರಿದ ಯಾರಿಗೂ ವಯಸ್ಸು ಹದಿನೈದು ಮೀರಿಲ್ಲ!ಒಬ್ಬಂವ ಐದನೆಯ ತರಗತಿ ಓದುತ್ತಿದ್ದರೆ ಇನ್ನೊಬ್ಬ ಆರು,ಮತ್ತೊಬ್ಬವನು ಏಳು.ಇನ್ನಿಬ್ಬರೂ ಶಾಲೆಯ ಮುಖ ನೋಡದ ಉಡಾಳರು;ಅವರೆಲ್ಲರೂ ಉಡಾಳರೆ ನಿಜ,ಶಾಲೆಯ ಮುಖ ನೋಡದ ಆ ಹುಡುಗರು ತೀರಾ ಕೆಟ್ಟು ಹೋದ ಹುಡುಗರು!ಐದನೆಯ ತರಗತಿ ಓದುವ ಹುಡುಗನ ಹೆಸರು ಚಂದ್ರನಾಗಿದ್ದರೆ,ಆರನೆಯ ಮತ್ತು ಏಳನೇಯ ತರಗತಿಯ ಹುಡುಗರ ಹೆಸರು ಸೋಮ ಮತ್ತು ಕಾಳ,ಓದದ ಉಡಾಳ ಹುಡುಗರು ಕ್ರಮೇಣ ಬೀರ,ಕೆಂಚ!

ಶಾಲೆಯಲ್ಲಿ ಪಾಠಿ ಇಟ್ಟು ಎಡಗೈ ಕಿರುಬೆರಳು ತೋರಿಸಿ ಕ್ಲಾಸ್ ತಪ್ಪಿಸಿಕೊಂಡು ಬಂದ ಆ ಮೂವರ ಪೈಕಿ ಆರನೆಯ ತರಗತಿಯ ಸೋಮ ಪಿಸುದನಿಯಲ್ಲಿ ಉಲಿದ:ತೆಗಿರಿಲೇ ಎಂದು.ಅವನು ಹಾಗಂದ ತಕ್ಷಣ ಹರಿದ ಚಡ್ಡಿಯ ಕಿಸೆಯಿಂದ ಬೀರ ಬೀಡಿಗಳನ್ನು ಕೆಂಚ ಕಡ್ಡಿ ಪೆಟ್ಟಿಗೆಯನ್ನು ಹೊರ ತೆಗೆದರು.ಚಂದ್ರ ಕುಳಿತಲ್ಲಿಂದ ಚಡ್ಡಿ ಏರಿಸುತ್ತಾ ಎಡಗೈಯಿಂದ ಮೂಗು ಒರೆಸಿಕೊಳ್ಳುತ್ತಾ ತುಸು ದೂರ ಸಾಗಿ ಸುತ್ತ ಮುತ್ತ ಯಾರೂ ಇಲ್ಲವೆನ್ನುವುದನ್ನು ಖಚಿತಪಡಿಸಿಕೊಂಡು ಬಂದ.ಚಂದ್ರನ ನಿರಾಳತೆಯನ್ನು ಗಮನಿಸಿದ್ದೆ ಎಲ್ಲರೂ ಒಂದೊಂದು ಬೀಡಿಯನ್ನು ಬಾಯಿಯೊಳಗಿಟ್ಟುಕೊಂಡರು.ಸೋಮ ಎಲ್ಲರ ಬೀಡಿಗಳಿಗೂ ಅತಿ ಜಾಗ್ರತೆಯಿಂದ ಬೆಂಕಿ ಹಚ್ಚಿ ತಾನೊಂದು ಬೀಡಿ ಹಚ್ಚಿಕೊಂಡ.ಎಲ್ಲರ ಬೀಡಿಗಳಿಗೂ ಅಗ್ನಿಸ್ಪರ್ಷವಾದ ಮೇಲೆ ಅದನ್ನೊಂದು ದಿವ್ಯಕಾಯಕ ಎನ್ನುವಂತೆ ಶ್ರದ್ಧೆಯಿಂದ ಎಳೆಯತೊಡಗಿದರು.ಎಳೆಯುತ್ತಾ ಎಳೆಯುತ್ತಾ ತಾವು ದೊಡ್ಡವರಾದಂತೆ ಕಲ್ಪಿಸಿಕೊಂಡರು;ತಮಗಿಂತಲೂ ದೊಡ್ಡವರು ಹಳ್ಳದ ದಂಡೆಗಳಲ್ಲಿ ನಡೆಸುವ ಕಳುವಿನ ದೊಡ್ಡಾಟದ ಬಗ್ಗೆ ರಸವತ್ತಾಗಿ ಮಾತಾಡಿಕೊಂಡರು;ತಾವೂ ಅಂಥದ್ದನ್ನು ಮಾಡಬೇಕು ಎಂದು ಗಂಭೀರವಾಗಿ ಚರ್ಚಿಸಿದರು.ತಮ್ಮ ತಮ್ಮ ಓರಿಗೆಯ ಓಣಿಯ ಪೋರಿಯರನ್ನು ಹಂಚಿಕೊಂಡರು.ಅವರವರ ಅಂಗಾಗಗಳ ಅಳತೆಗಳ ಬಗ್ಗೆ ಮಾತಾಡಿಕೊಂಡರು;ಬಲೆ ಖುಷಿಯಿಂದ ಬೀಡಿ ಎಳೆಯುತ್ತಾ ಅದರ ಹೊಗೆಯನ್ನು ಮೂಗಿನಲ್ಲಿ ಬಿಡುತ್ತಾ ರೋಮಾಂಚನವನ್ನು ಅನುಭವಿಸಿದರು;“ನಡಿರಿಲೇ ಅವನೌನು ಸಾಲಿ ಹೊತ್ತಾತು!”ಅನ್ನುವಷ್ಟರಲ್ಲಿ ಅವರ ಮಾತುಗಳು ಮುಗಿದಿದ್ದವು.ಅವರು ತಮ್ಮ ತಮ್ಮ ಮನೆಯ ಕಡೆಗೆ ಹೊರಟರು.
*****
ಸಾಯಂಕಾಲ ನಾಲ್ಕುವರೆಗೆ ಸೋಮ ಹೆಗಲಿಗೆ ಪಾಟಿಚೀಲ ಹಾಕಿಕೊಂಡು ಮನೆಗೆ ಬಂದನು;ಸೋಮ ಮನೆಯಿಂದ ಅಷ್ಟು ದೂರದಲ್ಲಿ ಇರುವಂತೆ ಅವನ ಮನೆಯಿಂದ ಯಾರೋ ಗಡಿಬಿಡಿಯಿಂದ ಹೋದಂತೆ ಅನ್ನಿಸಿತು;ಯಾಕ್ ಬರ್ತಾನೆ ಈತ ದಿನಾಲೂ ನಮ್ಮ ಮನೆಗೆ ಎನ್ನುವ ಸಂದೇಹ ತಲೆಯೊಳಗೆ ಹೊತ್ತು ಸೋಮ ಮನೆ ಪ್ರವೇಶಿಸುತ್ತಿರುವಂತೆ ಅವ್ವ ಸೀರೆ ಸರಿ ಮಾಡಿಕೊಳ್ಳುತ್ತಿದ್ದಳು;ಮಗ ಬಂದಿದ್ದು ಆಕೆಗೆ ಗಾಬರಿ ಹುಟ್ಟಿಸಿತ್ತು.ಆಕೆಯ ಮುಖದಲ್ಲಿ ತಪ್ಪಿತಸ್ಥ ಭಾವನೆ ಸ್ಪಷ್ಟವಾಗಿತ್ತು.ಸಣ್ಣಂವ,ಏನು ತಿಳಿದೀತು ಎನ್ನುವ ಧೈರ್ಯವಿದ್ದರೂ ತಪ್ಪಿತಸ್ಥರಿಗೆ ಭಯ ತಪ್ಪಿದ್ದಲ್ಲವಲ್ಲಾ?ಆಕೆಯ ತಲೆ ಕೆದುರಿತ್ತು!ಬಂದೇನೆಪ್ಪಾ,ಬಾ ಬಾ ನನ್ ರಾಜ್ಕುಮಾರ!ಬಾ,ಉಣ್ತೀಯೇನು ಎಂದು ಆಕೆ ಬಲು ಅಕ್ಕರೆಯಿಂದ ಕೇಳಿದಳು.ಮಗನಿಗೆ ಬಲು ಮುದ್ದು ಮಾಡಿದಳು.ಉಟರ(ಸೀರೆಯ ಗಂಟು)ದಿಂದ ತೆಗೆದು ಮಗನ ಕೈಗೆ ಹತ್ತು ರೂಪಾಯಿ ನೋಟು ಕೊಟ್ಟಳು.ಸೋಮನ ಮುಖ ಉಲ್ಲಸಿತಗೊಂಡಿತು.ಆಕೆ ಹೀಗೆ ಕೊಡುವ ರೊಕ್ಕ ಅವನ ಹಲವು ಸದ್ಗುಣ(!)ಗಳಿಗೆ ವಿನಿಯೋಗವಾಗುತ್ತಿತ್ತು.ಅವ್ವ ಗಾಬರಿಯಲ್ಲಿದ್ದರೆ ಅವನಿಗೆ ಹತ್ತು ರೂಪಾಯಿಯ ನೋಟು ಖಚಿತವಾಗಿರುತ್ತಿತ್ತು;ಮತ್ತದು ಅವನ ಸಂತೋಷಕ್ಕೆ ಕಾರಣವಾಗುತ್ತಿತ್ತು.ಪಾಟಿ ಚೀಲ ಬಿಸಾಕಿ ಅವನು ಮನೆಯಿಂದ ಹೊರಡುತ್ತಿದ್ದ.ನಡೆ ನಡೆಯುತ್ತಲೇ ಕಾಲಿಗೆ ಸಿಗುವ ಚಿಕ್ಕ ಗಾತ್ರಗಳ ಕಲ್ಲನ್ನು ಚೆಂಡು ಎಂದು ಭಾವಿಸುವ ಆತ ಅವುಗಳನ್ನು ಒದೆಒದೆಯುತ್ತಾ ಬೀಡಾ ಅಂಗಡಿಯನ್ನು ತಲುಪಿ ಬಿಡುತಿದ್ದ.ಬೀಡಾ ಅಂಗಡಿಯ ಸಾಹುಕಾರ “ಏನ್ ಬೇಕಲೇ ಸೋಮ!”ಎಂದು ಕೇಳುತ್ತಲೇ ಅವನು ಹತ್ತರ ನೋಟು ಹೊರ ತೆಗೆದು “ನಮ್ ಮಾಮ ಇಮಾಲ(vimal ಗುಟ್ಕಾ ಪಾಕೆಟ್) ತಗೊಂಡು ಬಾ ಅಂತ ಕಳಿಸ್ಯಾನ,ಎರಡು ಕೊಡ್ರಿ!”ಅಂತಿದ್ದ.“ಭೇಕೂಫ್ ಸೂ..ಗನೆ,ನಿನಗೆ ಅಂತ ಅನ್ನು,ಹಲ್ಲು ನೋಡು ಹೆಂಗಾಗ್ಯೆವ”ಅಂತ ಅಂಗಡಿ ಸಾಹುಕಾರ ಗದರಿಸಿದಂತೆ ಮಾಡಿ ಗುಟ್ಕಾ ಪಾಕೆಟ್ಟು ಕೊಡುತ್ತಿದ್ದ.ಮತ್ತೆ ಅಲ್ಲಿಂದ ನಡೆದು ಮುಂದೆ ಸಾಗುವ ಸೋಮ ನಿರ್ಜನ ಪ್ರದೇಶ ಪ್ರವೇಶಿಸುತ್ತಿರುವಂತೆ ಇಮಾಲ ಹರಿಯುವನು,ಅದರ ಜೊತೆಗೆ ಕೊಟ್ಟ ತಂಬಾಕು ಹರಿಯುವನು,ಮತ್ತವುಗಳನ್ನು ಒಂದರೊಳಗೊಂದು ಬೆರಸಿ ಹಣಮಂದೇರು ಗುಡಿಯೊಳಗೆ ಭಜನೆ ಮಾಡುವಾಗ ಬಾರಿಸುವ ತಾಳದಂತೆ ಕೈಗಳನ್ನು ಕುಲುಕುವನು.(ಈ ಕುಲುಕುವ ಭಾಗ್ಯವನ್ನು ಕರುಣಿಸಿದ ಪುಣ್ಯ ಮಾನ್ಯ ಸಿದ್ದರಾಮಯ್ಯನವರಿಗೆ ಸಲ್ಲಬೇಕು,ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ತಂಬಾಕು ಮತ್ತು ಗುಟ್ಕಾ ಪಾಕೆಟ್ಟನ್ನು ಬೇರೆ ಬೇರೆ ಉತ್ಪಾದನೆ ಮಾಡುವಂತೆ ಮಾಡಿರುವರು!)ನಂತರ ಆ ಕವಳವನ್ನು ಬಾಯಿ ತುಂಬಾ ತುಂಬಿಕೊಂಡು ಗುಡಿ ಅಂಗಳಕ್ಕೆ ಬರುವನು,ಬಂದರೆ ಆತನ ಗ್ಯಾಂಗ್ ಅಲ್ಲೇ ಇರುವುದು;ಚಂದ್ರ,ಕಾಳ,ಬೀರ,ಕೆಂಚ!

ಸೋಮನ ತಲೆಯೊಳಗೆ ಬೆಳಿಗ್ಗೆ ಅಪ್ಪ ಮಿರಗ(ಮೃಗಶಿರ ಮಳೆ ಕೂಡುವ ಸಮಯ)ಅಂತ ಅಂದದ್ದು ಕೊರೆಯುತ್ತಿತ್ತು.ಇವತ್ತು ಸಾಯಂಕಾಲ ಮಿರಗ ಕೂಡಿಸಬೇಕು ಎಂದು ಅಪ್ಪ ಅವ್ವನಿಗೆ ಖುಷಿಯಿಂದ ಹೇಳುತ್ತಿದ್ದ.ಹಂಗಂದರೆ ಏನೆಂದು ಸೋಮನಿಗೆ ವಿವರಿಸುವವರಾರು?ಆ ಸಂದೇಹ ಅವನ ಮನವನ್ನು ಕೊರೆಯುತ್ತಿತ್ತು,ಮಿರಗ ಎಂದರೆ ಏನು?ಅಪ್ಪ ಖುಷಿಯಿಂದ ಹೇಳುವುದು,ಅವ್ವ ಖುಷಿಯಿಂದ ಕೇಳುವುದು ಒಂದು ಕುತೂಹಲಕಾರಿಯಾಗಿತ್ತು.“ಮಿರಗ ಅಂತಿ,ಸಂಜಿಕಿ ಬರೋ ಮುಂದ ಖಂಡ(ಮಾಂಸ)ತಗೊಂಡು ಬಾ,ಮಾಡಿಕೊಡ್ತೀನಿ!”ಅಂತ ಅವ್ವ ಅಪ್ಪನಿಗೆ ಅಂದಿದ್ದಳು,ಈ ಮಿರಗ ಅಂದ್ರೇನಪಾ?

ಸೂರ್ಯ ಕಂದುತ್ತಾ ಬರುತ್ತಿರುವಂತೆ ಓಣಿಯ ವಾತಾವರಣವೇ ಬದಲಾಯಿತು,ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಮೋಡಗಳು ತುಂಬಿಕೊಂಡು ಪರಿಸರ ಬೇರೆಯದೆ ಸ್ವರೂಪ ಪಡೆದುಕೊಂಡಿತು.ಮಂದಿ ವಯಸ್ಸಿನ ತಾರತಮ್ಯವಿಲ್ಲದೆ ಡಬಲ್ ಡಬಲ್ ಆಗಿದ್ದರು;ಜನ ತಮ್ಮ ತಮ್ಮ ಯೋಗ್ಯತಾನುಸಾರ ಕುಡಿದಿರುವಂತೆ ಕಾಣಿಸುತ್ತಿತ್ತು.ಯಾವತ್ತೂ ಕುಡಿಯದವರೂ ಜೋಲಿ ಹೊಡೆಯುತ್ತಿದ್ದರು.ವಾತಾವರಣ ಕುಡುಕರ ತರೇವಾರಿ ಮಾತುಗಳಿಂದ ತುಂಬಿಕೊಂಡಿತು.ಹಾಸ್ಯದ ಸಿಟ್ಟಿನ ಬೈಗುಳದ ಶಬ್ದಗಳು ಇಡೀ ಸಮಾಜವನ್ನು ತುಂಬಿಕೊಂಡವು!

ಸ್ವಲ್ಪ ಹೊತ್ತಾದ ಮೇಲೆ ಬೀರ ಇದರ ರಹಸ್ಯ ಸೋಮನಿಗೆ ಹೇಳಿದ:ಮಿರಗ ಅಂದ್ರೆ ಇದೇ ಅಂತಲೇ,ಇವತ್ತು ಖಂಡ ಮಾಡಿಕೊಂಡು ಕುಡಿದು ತಿಂದರೆ ಬಾಳ್ ಚಲೋ ಅಂತ ಎಂದು ಅವನು ಹೇಳಿದ!ಐದೂ ಮಂದಿ ಸೇರಿ ಅದಕ್ಕೆ ಪಿಲಾನು ಹಾಕತೊಡಗಿದರು...
                        (ಮುಂದುವರೆಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...