ನದಿಯ ಒಡಲೊಳಗೆ ಜೆಸಿಬಿಯ ಹಸ್ತ ಮತ್ತು ಅವರು!
ಡೇಗ ತೂರಾಡುತ್ತಲಿದ್ದ.ನಿನ್ನೆ ಕುಡಿದಿದ್ದು,ನಿನ್ನೆ ಕುಡಿದಿದ್ದರ ಉಥಾರಿಗಾಗಿ ಇವತ್ತು ಕುಡಿದಿದ್ದು ಸೇರಿ ಅವನಿಗೆ ನೆಶೆ ಹೆಚ್ಚು ಮಾಡಿತ್ತು.ಬೆಳಗಾ ಬೆಳಗ್ಗು ಖಾಲಿ ಹೊಟ್ಟೆಯಲ್ಲಿ ಅತ್ಯಂತ ಕೆಟ್ಟ ಗುಣಮಟ್ಟದ ಅಗ್ಗದ ಮದ್ಯ ಸೇವಿಸಿದರೆ ಹೇಗೆ ಹೇಳಿ?ಒಂಚೂರು ಕುಡಿದು ತಲೆಭಾರ ಕಡಿಮೆ ಮಾಡಿಕೊಳ್ಳುವ ಎಂದು ಯೋಚಿಸಿ ಸರಾಯಿ ಅಂಗಡಿಗೆ ಹೋದವನಿಗೆ ಲಿಮಿಟ್ಟು ಮೀರಿತ್ತು.ಸರಾಯಿ ಮಾರುವ ಅಂಗಡಿಗೆ ತನ್ನಂತೆ ತಲೆಭಾರ ಕಡಿಮೆ ಮಾಡಿಕೊಳ್ಳಲು ಬಂದ ಸಹ ಕುಡುಕರ ಜೊತೆ ‘ಇನ್ನೊಂದು ಸ್ವಲ್ಪು ಮತ್ತೊಂದು ಸ್ವಲ್ಪು’ ಅಂತ ಎರಡು ಮೂರು ಬಾಟಲಿಗಳಾಗಿ ನಿಯಂತ್ರಣ ಮೀರಿತ್ತು.ಒಂಚೂರು ಗಂಟಲಿಗೆ ಇಳಿದರೆ ಸಾಕು;ಮತ್ತೆ ಮತ್ತೆ ಬೇಕೆನಿಸುವ ಈ ಸರಾಯಿಯನ್ನು ಯಾವ ಸೂಳೆಮಗ ಕಂಡು ಹಿಡಿದನೋ ಎಂದು ಮನಸ್ಸಿನಲ್ಲಿಯೇ ಗೊಣಗುತ್ತಾ ಆಚೆ ಬಂದಾಗ ದೇಹದ ನಿಯಂತ್ರಣ ತಪ್ಪಿತ್ತು.ಮನಸ್ಸೂ ನಿಯಂತ್ರಣ ಕಳೆದುಕೊಂಡಿತ್ತು.ಡೇಗನ ದೇಹ ತೂರಾಡುತ್ತಲಿತ್ತು,ಡೇಗ ತೂರಾಡುತ್ತಲಿದ್ದ!
ಡೇಗ ತೂರಾಡುತ್ತಲೇ ಗುಡಿಸಲ ಮುಂದೆ ಬಂದು ನಿಂತಾಗ ಹಡೆದ ಕರುಳಿನ ಮುದುಕಿ ಸಂಕಟ ಅನುಭವಿಸುತ್ತಾ “ಮುಂಜ್ ಮುಂಜಾನೆ ಕುಡುದು ಬಂದ್ರೆ ಸಂಸಾರ ಹೆಂಗಾಗ್ತಾದ?ಹಾಳಾಗಿ ಹೋಗ್ತಿದಿ”ಎನ್ನುತ್ತಾ ಗುಡಿಸಲ ಮುಂದಿನ ಅಂಗಳದ ಕಸ ಗುಡಿಸುತ್ತಿತ್ತು,ಗೂನು ಬೆನ್ನಿನ ಜೊತೆಗೆ.ಕುಡುಕ ಗಂಡ,ಕುಡುಕ ಮಕ್ಕಳು,ಕುಡುಕ ಸಮಾಜ,ಅಸ್ಥಿರ ಬದುಕಿನೊಂದಿಗೆ ಹೆಣಗಿ ಜೀವನ ಕಳೆದುಕೊಂಡಿದ್ದ ಮುದುಕಿಗೆ ಸಂಕಟವೆನ್ನುವುದು ಜನ್ಮಸಿದ್ಧ ಶಾಪ ಎನ್ನುವುದು ಅರ್ಥವಾಗಿ ಆ ಬಗ್ಗೆ ಯೋಚಿಸುವುದನ್ನು ಅದು ಮರೆತಿತ್ತು.ಇಂದಿನ ತಲೆಮಾರಿನ ಸೊಸೆಯರು ಗಂಡನ ಕುಡಿತಕ್ಕೆ ರೋಶಿ ತವರಿನ ಕಡೆ ಹೊರಟು ತವರಿನಲ್ಲೇ ಸ್ಥಿರವಾಗಿರುವುದು ಆಕೆಗೆ ಅಪಾರ ನೋವು ತಂದಿತ್ತು.ಗಂಡ ಅರಿವು ತಪ್ಪುವಂತೆ ಕುಡಿದು,ಸಾಯುವಂತೆ ಹೊಡೆದು ಉಪವಾಸ ವನವಾಸದ ಜೀವನ ನೀಡುತ್ತಿದ್ದಾಗಲೂ “ಕಟ್ಟಿಕೊಂಡವನು ಕಡೇತನಕ”ಎಂದು ತನ್ನ ತಾಯಿ ತಂದೆ ಹೇಳುತ್ತಾ ತವರಿನ ನೆರಳೂ ನೀಡದ ತನ್ನ ಕಾಲಘಟ್ಟದ ದಿನಗಳನ್ನು ನೆನೆಯುತ್ತಾ “ಇವತ್ತಿನ ಸೊಸೆ ಎಂಬ ಸೂಳೆಯರನ್ನು ಮನೆಯಲ್ಲಿಟ್ಟುಕೊಳ್ಳುವ ತವರಿನವರು ಅಪ್ಪಟ ತಲೆಹಿಡಕರು!”ಎಂದು ವ್ಯಾಖ್ಯಾನ ಮಾಡುತ್ತಿತ್ತು.ಡೇಗನ ಹೆಂಡತಿ ಆತನ ಕುಡಿತಕ್ಕೆ ಬೇಸತ್ತು ಎರಡು ವರ್ಷಗಳ ಹಿಂದೆಯೇ ತವರಿಗೆ ಹೋಗಿದ್ದಳು.ತವರು ಮನೆಯವರು “ಅಂಥಹ ಕುಡುಕ ಸೂಳೆಮಗನೊಂದಿಗೆ ನಮ್ಮ ಮಗಳನ್ನು ಬಾಳುವೆ ಮಾಡಿಸುವುದಿಲ್ಲ”ಎಂದು ಕರೆಯಲು ಹೋದ ಎಲ್ಲರಿಗೂ ಅವರು ಹೇಳಿದ್ದರು.
“ಮುಂಜಾನಿಯಿಂದ ದನಗಳು ಉಪವಾಸ ಸಾಯಲಿಕತ್ತ್ಯಾವ,ಒಂದೀಟು ಮೇವು ತರಬೇಕು ಎನ್ನುವ ಅರಿವಿಲ್ಲ,ಅರಿವುಗೇಡಿ!ಕೂಳು ತಿನ್ನಲಿಕ್ಕೆ ಕುಡಿಯಲಿಕ್ಕೆ ಬರುತ್ತದೆ,ದನಗಳ ಹೊಟ್ಟೆ ನೋಡಲಿಕ್ಕೆ ಬರಂಗಿಲ್ಲೇನು”ಅಂತ ಮುದುಕಿ ರಾಮಾಯಣ ಶುರುಮಾಡಿತು.ಇದು ದಿನಂಪ್ರತಿಯ ಗೋಳು.ಇತ್ತೀಚಿನ ದಿನಗಳಲ್ಲಿ ದನಗಳನ್ನು ಕಾಯುವವರಿಲ್ಲದೆ ದನಗಳ ಸಂತತಿಯೇ ಇಲ್ಲದಂತಾಗಿತ್ತು.ಗುಡಿಸಲ ಮುಂದೆ ನಾಲ್ಕು ದನಗಳು ಇಲ್ಲವೆಂದರೆ ಏನು ಚೆಂದ ಅಂತ ದನಗಳ ಕಿರಿಕಿರಿಯಿಂದ ಬೇಸತ್ತ ಡೇಗ ಕಟಗರವನನ್ನು ಮಾರಲಿಕ್ಕೆಂದು ಕರೆತಂದಾಗ ಮುದುಕಿ ಸಿಟ್ಟಿನಿಂದ ರೇಗಿತ್ತು.ಯಾವ ಸ್ವಾರ್ಥವೂ ಬಯಸದೆ ನಿಷ್ಕಾಮ ಪ್ರೀತಿ ತೋರಿಸುವ ದನಕರುಗಳನ್ನು ಕಟಕರವನಿಗೆ ಮಾರಿದರೆ ಶಿವ ಮೆಚ್ಚುತ್ತಾನಾ ಎಂದು ರೇಗಿ ಕಟಕರವನಿಗೂ ಡೇಗನಿಗೂ ಕಸಬರಿಗೆ ತೆಗೆದುಕೊಂಡಿತ್ತು.ಈಯ್ಯಲಿಕ್ಕಾದ ಹಸು ನಾಳೆ ಕರು ಈದರೆ ಹಾಲು ಐನ ಅಂತಾಗುತ್ತದೆ;ಅರಿವುಗೇಡಿ ಅಂತ ಡೇಗನಿಗೆ ಬೈದಿತ್ತು.
ಡೇಗನ ಹೆಂಡತಿ ತವರು ಸೇರಿದ ಮೇಲೆ ಮುದುಕಿಗೆ ಮನೆಕೆಲಸ ಹೆಚ್ಚಾಗಿ ಮೇವು ತರಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ.ಬಾಗಿದ ಬೆನ್ನು,ದೂರದ ಅಡವಿಯಿಂದ ಮೇವು ಹೊತ್ತುಕೊಂಡು ಬರುವುದು ಆಕೆಯ ವಯೋಸಹಜ ನಿಶ್ಯಕ್ತಿಯಿಂದ ಸಾಧ್ಯವಾಗುತ್ತಿರಲಿಲ್ಲ.ಸೊಸೆ ಇಲ್ಲದೆ ಎಲ್ಲವನ್ನೂ ಆಕೆಯೇ ನಿಭಾಯಿಸಬೇಕಾಗಿತ್ತು.
ಹಣೆಬರಹಕ್ಕೆ ಹೊಣೆ ಯಾರು ಎಂದು ಮುದುಕಿ ಸುಮ್ಮನಾಗಿದ್ದರೆ,ಸಂಸಾರದ ಜಂಜಾಟ ತಪ್ಪಿದ ಖುಷಿಯಲ್ಲಿ ಡೇಗನಿದ್ದ!
ಡೇಗ ಅವಸರ ಅವಸರ ಎಂಬಂತೆ ಗುಡಿಸಲ ಒಂದು ಪಕ್ಕದಲ್ಲಿ ಎಂದಿನಂತೆ ಇಟ್ಟಿದ್ದ ಮೇವು ಕೊಯ್ಯುವ ಕುಡುಗೋಲು ಮತ್ತು ಮೇವು ಕಟ್ಟಲು ಹಗ್ಗ ತೆಗೆದುಕೊಂಡು ಅಡವಿಯ ಕಡೆಗೆ ಹೊರಟ;ಮೇವಿಗೇನು ದಾಡಿ?ಗೌಡ್ರ ತೊಗರಿ ಹೊಲದಲ್ಲಿ ಸಾಕಷ್ಟಿದೆ ಎಂದು ಮನಸ್ಸಿನಲ್ಲಿಯೇ ಗೊಣಗಿದ.ಅವಸರದಲ್ಲಿ ನೆಶೆಯ ಪ್ರಭಾವದಿ ಎಡವಿ ಬೀಳುತ್ತಿರುವವನಿಗೆ ಮುದುಕಿ:ಜೋಪಾನ,ಬಿದ್ದು ಕಾಲು ಮುರಿದುಕೊಂಡು ಹೇಲು ಹೆಂಡಿ ಒಂದಲ್ಲಿಗೆ ಮಾಡಿಕೊಂಡಿದಿ ಎಂದಿತು,ಅದರ ತಾಯಿ ಕರುಳು ಚುರಕ್ ಎಂದಿತ್ತು.
ಸಿಗರೇಟು ಧಂ ಎಳೆಯದರೆ ಮಲ ವಿಸರ್ಜನೆ ಸಾಧ್ಯವಾಗದ ಬಾಧೆಯಿಂದ ಗೌಡ ಪಾಯಖಾನೆಯಲ್ಲಿ ನರಳುತ್ತಿದ್ದ.ಅತ್ತ ಕಡೆ ಆರ್ಥಿಕ ಸ್ಥಿತಿಯೂ ಅಧೋಗತಿಗೆ ಇಳಿದಿತ್ತು.ಮಾಡಬೇಕೆಂದ ಎಲ್ಲಾ ಬಿಜಿನೆಸ್ಸುಗಳೂ ನಷ್ಟವನ್ನೇ ಕೈತುಂಬಾ ಕೊಟ್ಟಿದ್ದವು.ಗೌಡಿಕಿ ಮನೆತನ ತಮ್ಮದು,ಮಾಡಿದರೆ ದೊಡ್ಡ ಬಿಜಿನೆಸ್ಸೇ ಮಾಡಬೇಕು ಎಂದುಕೊಳ್ಳುತ್ತಾ ಬಿಳಿ ಸಿಗರೇಟು ಸೇದುತ್ತಾ ಸೇದುತ್ತಾ ಸಾಲ ಹೆಚ್ಚಾಗಿ ಹೊಲವೊಂದನ್ನು ಮಾರಿ ಹಾಕಿದ್ದ.ಅಪ್ಪನ ವಿಪರೀತ ಕುಡಿತ ಆತನ ಅನಾರ್ಯೋಗ್ಯ ಗೌಡನಿಗೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತ್ತು.ಅವ್ವನ ವಿಪರೀತ ಶೋಕಿ ಕೂಡಾ ಮಲವಿಸರ್ಜನೆಗೆ ಅಡಚಣೆ ಉಂಟು ಮಾಡಿತ್ತು!ಜೀವನ ನರಕವಾಗಿ ಪರಿಣಮಿಸಿತ್ತು.ಊರ ತುಂಬಾ ತರಾವರಿ ಮಾತುಗಳು ಚಾಲ್ತಿಯಲ್ಲಿದ್ದು ತುಂಬಾ ಹಿಂಸೆಯನ್ನು ಕೊಟ್ಟಿದ್ದವು.ಏನು ಮಾಡಬೇಕು ದೇವರೆ ಎಂದು ಪಾಯಖಾನೆಯಲ್ಲಿ ಯೋಚಿಸುತ್ತಾ ಬಿಳಿ ಸಿಗರೇಟಿನ ಕುಂಡೆ ಸುಡುವವರೆಗೆ ಸೇದಿ ಅಲ್ಲಿಂದ ಎದ್ದು ಬಂದಿದ್ದ;ದೇವರು ಮನುಷ್ಯನ ದೇಹಕ್ಕೆ ಈ ವಿಸರ್ಜನೆ ಎನ್ನುವ ಪ್ರಕ್ರಿಯೆ ಇಡಬಾರದಿತ್ತು ಎಂದು ಆತ ಪಾಯಖಾನೆಯಿಂದ ಎದ್ದು ಬರುವ ಪ್ರತಿ ಸಲವೂ ಅಂದುಕೊಳ್ಳುತ್ತಿದ್ದ!
“ನೋಡಪ್ಪಿ?ನೀನು ಯಾವುದರ ಬಗ್ಗೆಯೂ ಯೋಚಿಸಬೇಡ,ನಿನ್ ತಾಯಿ ದಡ್ಡಿಯಲ್ಲ.ನಮ್ ಮನೆ ಸಂಪತ್ತು ವೃದ್ಧಿಯಾಗುವ ಬೀಜವನ್ನು ನಾನೀಗಲೆ ಬಿತ್ತಿದ್ದೇನೆ.ಹಣದ ಬಗ್ಗೆ ಚಿಂತಿ ನೀನು ಮಾಡಬೇಡ”ಎಂದಳು ಗೌಡನ ತಾಯಿ.ಹಾಗಷ್ಟೆ ಆಕೆ ತಲೆಗೆ ಕರಿಯ ಬಣ್ಣ ಹಚ್ಚಿದ್ದಳು.ಇನ್ನೂ ಸ್ನಾನವಾಗಿರಲಿಲ್ಲವಾಗಿರುವುದರಿಂದ ಅದು ಹಣೆಯನ್ನೆಲ್ಲಾ ಆಕ್ರಮಿಸಿಕೊಂಡಿತ್ತು. ‘ನಮ್ಮವ್ವನಿಗೆ ಈ ಶೋಕಿ ರೋಗ ಯ್ಯಾಕೆ ಅಂಟಿಕೊಂಡಿರಬೇಕು?’ಎಂದು ಮನಸ್ಸಿನಲ್ಲೇ ಅಂದುಕೊಂಡ ಗೌಡ.
ಇದಾದ ಕೆ ಕ್ಷಣಗಳಲ್ಲಿ ಆಕೆ ಹಣ ಸಂಪಾದಿಸುವ ಹಲವು ಮಾರ್ಗಗಳನ್ನು ಗೀತೋಪದೇಶದ ಹಾಗೆ ಮಗನಿಗೆ ವಿವರಿಸಿ ಹೇಳಿದಳು.ಆ ಮಾರ್ಗಗಳ ಪೈಕಿ ಅತ್ಯಂತ ಸುಲಭವಾದ ಮಾರ್ಗವನ್ನು ಆಕೆ ಈ ಕೂಡಲೇ ಪ್ರಾರಂಭಿಸು ಎನ್ನುವ ಆಜ್ಞೆಯನ್ನು ಮಾಡಿದಳು.ಆ ಖುಷಿಯಲ್ಲಿ ಗೌಡ ಮತ್ತೊಮ್ಮೆ ಪಾಯಖಾನೆ ಒಳಹೊಕ್ಕೆ ಸಿಗರೇಟಿಗೆ ಬೆಂಕಿ ಹಚ್ಚಿದ!
“ನಮ್ಮ ಮುಂದಿರುವ ಜ್ಚಲಂತ ಸಮಸ್ಯೆಗಳೆಂದರೆ ನೆಲ,ಜಲ,ಮತ್ತು ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು.ಈ ನಾಡಿನ ರೈತಾಪಿ ಜನಗಳ ಬದುಕನ್ನು ಹಸನು ಮಾಡುವುದು.ಸರ್ಕಾರಗಳು ರೈತರ ಹಕ್ಕುಗಳನ್ನು ವಂಚಿಸುತ್ತಿವೆ,ಇದರ ವಿರುದ್ಧ ಕಡು ಉಗ್ರವಾಗಿ ನಾವು ಹೋರಾಡಬೇಕಾಗಿದೆ.ಈ ಸಂಬಂಧ ಮೊದಲು ಮಹಿಳೆಯರು ಅಡುಗೆ ಮನೆಯಿಂದ ಹೊರಬರಬೇಕು,ಗಂಡ,ಮಕ್ಕಳು,ಸಂಸಾರ ಎನ್ನುವ ಸಂಕೋಲೆಗಳನ್ನು ಕಿತ್ತು ಎಸೆಯಬೇಕು.ಅಡುಗೆ ಮಾಡುವ ಕೈ ವಿಧಾನಸೌಧವನ್ನು ನಡುಗಿಸಬಲ್ಲದು ಎನ್ನುವುದನ್ನು ಜಗತ್ತಿಗೆ ತೋರಿಸಬೇಕಾಗಿದೆ,ಎದ್ದೇಳಿ ಮಹಿಳೆಯರೆ ಎದ್ದೇಳಿ!”ಎಂದು ಆ ವೇದಿಕೆಯಲ್ಲಿ ಆಕೆ ಭಾಷಣ ಮುಗಿಸಿದಳು.ತನ್ನ ಆಸನಕ್ಕೆ ಹೋಗಿ ಕುಳಿತಾಗ ಮಗ್ಗಲಲಿದ್ದ ಮತ್ತೊಬ್ಬ ಮಾತುಗಾರ, ‘ಹೌದಕ್ಕಾ ಹೌದು,ಮಹಿಳೆಯರು ಸಂಘಟಿತರಾಗದೆ ಹೋರಾಟಗಳು ಫಲಕೊಡುವುದಿಲ್ಲ.ತುಂಬಾ ಅದ್ಬುತವಾಗಿ ಮಾತಾಡಿದಿರಿ,ಭೇಷ್,ಭೇಷ್!!’ಎಂದ.
ಸುಮಾರು ಹೊತ್ತು ಆ ವೇದಿಕೆಯ ಮೇಲೆ ಹಲವು ಜನ ಮಾತನಾಡಿದರು.ನೆಲ ರಕ್ಷಣೆ,ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.ಭೂ ತಾಯಿಗೆ ನಾವೆಲ್ಲರೂ ಗೌರವ ಕೊಡಬೇಕು ಎಂದರು.ಭೂಮಿ ಹಸಿರಾಗಿದ್ದರೆ ಮಾತ್ರ ನಮಗೆಲ್ಲ ಉಸಿರು ಎಂದರು.ಇವತ್ತಿನ ಅತಿವೃಷ್ಟಿ ಅನಾವೃಷ್ಟಿಗಳಿಗೆ ಮಾನವನ ದುರಾಸೆಯೇ ಕಾರಣವೆಂದರು.ಅಕ್ರಮ ಮರಳು ಸಾಗಾಣಿಕೆ,ಮರಗಳ ಸಂತತಿಯ ನಾಶ ಭೂಮಿಯನ್ನು ಬರಡು ಮಾಡುತ್ತಿದೆ.ನಾವೆಲ್ಲರೂ ಇದರ ವಿರುದ್ಧ ಹೋರಾಡಬೇಕು ಎಂದು ಎಲ್ಲರೂ ಈ ಸಂದರ್ಭದಲ್ಲಿ ಶಪಥಗೈದರು.
ಸಭೆ ಈ ಮೂಲಕ ಮುಗಿದಿತ್ತು.ಹಚ್ಚಿಕೊಂಡ ಕರಿ ಬಣ್ಣ ತಿಂಗಳವರೆಗೆ ಬರುತ್ತದೆ,ಮುಖಕ್ಕೆ ಹಚ್ಚಿಕೊಂಡ ಪೌಡರ್ರು ಒಂದು ಗಂಟೆ ಮಾತ್ರವೇ ಇರುತ್ತದೆ.ಆ ಮೇಕಪ್ಪು ನಶಿಸುವವರೆಗೆ ಮಾತ್ರ ಮೇಕಪ್ಪಿನಿಂದ ಜೀವಿಸುವವರಿಗೆ ಸಾರ್ವಜನಿಕ ವೇದಿಕೆ,ಇನ್ನು ಆಡಿದ ಮಾತು ಮತ್ತು ಶಪಥಕ್ಕೆ ಎಷ್ಟು ಗಂಟೆಗಳ ಕಾಲ ಆಯಸ್ಸು ಇರುತ್ತದೋ ಕಾದುನೋಡಬೇಕಿದೆ!
ಕುಡಿದ ಮತ್ತು ಅತಿಯಾದ ಪ್ರಯುಕ್ತ ಡೇಗನ ತಲೆ ಗಿರ್ರ್ ಎನ್ನುತ್ತಿತ್ತು.ಸಮಸ್ಯೆಗಳು ಸಾಕಷ್ಟಿದ್ದರೂ ಆತ ಉಲ್ಲಾಸಿತನಾಗಿರುತ್ತಿದ್ದ.ಮನೆ ಮನೆಗೂ ಟ್ರ್ಯಾಕ್ಟರ್ ಗಳು ಬಂದು ಊರು ಸಂಪತ್ತಿನ ಗಣಿಯಾಗಿತ್ತು.ಹಿಂಗೋಗಿ ಹಂಗ್ ಬಂದರೆ ಕಿಸೆಯಲ್ಲಿ ನೂರಾರು ರೂಪಾಯಿ ಸಂಗ್ರಹವಾಗುತ್ತಿದ್ದವು,ಕುಡಿಯಲಿಕ್ಕೆ ತಿನ್ನಲಿಕ್ಕೆ ಇಸ್ಪೀಟು ಆಡಲಿಕ್ಕೆ ಮುಕ್ತ ಅವಕಾಶ ಕೊಟ್ಟ ಭಾರತೀಯ ಕಾನೂನಿಗೆ ಡೇಗ ದಿನಂಪ್ರತಿ ಸಲಾನು ಹೊಡೆಯುತ್ತಿದ್ದ.
ಪರಾಚತಿ ಎನ್ನುವ ಆ ಊರು ಇಂದ್ರವೈಭವದ ಸ್ವರ್ಗವಾಗಿ ಬದಲಾಗಿತ್ತು.ನೀರಿಗಿಂತ ಸುಲಭವಾಗಿ ಬೀರು,ವಿಸ್ಕಿ,ರಮ್ಮು ಮತ್ತು ಬೇಯ್ದ ಮಾಂಸ ದೊರೆಯುತ್ತಿತ್ತು.ಊರಿನ ಪ್ರತಿ ಕುಡುಕರು ಸಂಭ್ರಮಿಸುತ್ತಿದ್ದರು.ಈ ಪುಣ್ಯ ಪ್ರಾಪ್ತಿ ಮಾಡಿದ ಊರಿನ ಗಣ್ಯಾತಿಗಣ್ಯರಿಗೆ ಕುಡುಕರು ಋಣಿಯಾಗಿದ್ದರು,ಮತ್ತು ಧನ್ಯವಾದ ಸಲ್ಲಿಸುತ್ತಿದ್ದರು.
ಡೇಗನೂ ಸಂಭ್ರಮಪಡುತ್ತಿದ್ದ.ಕಿಸೆ ತುಂಬಾ ರೊಕ್ಕ ಹೊಟ್ಟೆ ತುಂಬಾ ಮದ್ಯ ಆತನ ಸಂತೋಷಕ್ಕೆ ಕಾರಣವಾಗಿತ್ತು.ಈ ಸಂತೋಷವನ್ನು ಸ್ಮರಿಸುತ್ತಿದ್ದರೆ ಮನುಷ್ಯ ಮದುವೆಯೇ ಆಗಬಾರದು,ಒಂಟಿತನ,ಅದರಿಂದ ಸಿಗುವ ನೆಮ್ಮದಿ ನಿಜಕ್ಕೂ ಅದ್ಭುತ!ಹೆಂಡತಿ ಇಲ್ಲದ ಮನೆ ಸ್ವರ್ಗ ಎಂದು ಆತ ನೆಶೆ ಹೆಚ್ಚಾದಾಗಲೆಲ್ಲ ಸಾರುತ್ತಿದ್ದ.ಆತ ತರಾವರಿ ಆಲೋಚನೆಗಳಿಂದ ಒಳಗೊಳಗೆ ಸಂತೋಷಪಡುತ್ತಾ ಸಾಗುತ್ತಿದ್ದ.ಮೊನ್ನೆ ನಡೆದ ಪರಾಚತಿ ಗ್ರಾಮದ ಮೊಹರಂ ಹಾಡುಗಳನ್ನು ಕ್ಷಣ ಬಿಟ್ಟು ಕ್ಷಣ ತಾರಕ ಸ್ವರದಲ್ಲಿ ಹಾಡುತ್ತಿದ್ದ.ತನ್ನಷ್ಟಕ್ಕೆ ತಾನೇ ‘ಧುಲ್ಲೋ,ಕ್ಯಾ ಮುಜಾವರ್’ಎಂದು ಪೀರಲ ದೇವರ ಹೇಳಿಕೆಗಳನ್ನು ಹೇಳುತ್ತಿದ್ದ. ‘ನಮ್ಮವ್ವನ ಪುಣ್ಯದಿಂದ ಪರಾಚತಿ ಗ್ರಾಮ ಇಂದ್ರಲೋಕವಾಗುವುದು ಮುಜಾವರ್!’ಎಂದು ಹೇಳಿಕೆ ಹೇಳುತ್ತಿದ್ದ.
ಅದು ಬೆಳಗಿನ ಜಾವ,ಒಂಬತ್ತು ಒಂಬತ್ತುವರೆ ಸಮಯ.ರೈತಾಪಿ ಕುಟುಂಬದ ಹೆಂಗಸರು ಹೊಲಗಳಿಗೆ ವಿವಿಧ ಕೆಲಸಗಳಿಗೆ ಹೋಗಿರುವ ಗಂಡಂದಿರಿಗೆ ಹೆಂಗಸರು ಬುತ್ತಿ ಹೊತ್ತುಕೊಂಡು ಹೋಗುವ ಸಮಯ.ಡೇಗನಿಗೆ ದಾರಿ ಮಧ್ಯೆ ಮಾತಾಡಿಸಿದ ಹೆಂಗಸಿರಿಗೆ ಡೇಗ ಪೀರಲ ದೇವರ ಹೇಳಿಕೆಯೋಪಾದಿಯಲ್ಲಿ ಉತ್ತರಗಳನ್ನು ಕೊಟ್ಟ.ತಾನು ಕೊಟ್ಟಿಗೆಯಲ್ಲಿ ಹಸಿದು ನಿಂತ ದನಕರುಗಳಿಗೆ ಮೇವು ತರಲು ಹೊರಟಿರುವೆ ಮುಜಾವರ್ ಎಂದು ಗ್ರಾಂಥಿಕ ಶೈಲಿಯಲ್ಲಿ ಹೇಳಿದ.ಕೇಳಿದಂತಹ ಸ್ತ್ರೀಯರು ಮುಸಿಮುಸಿ ನಕ್ಕರು;ಕೆಲವರು ಲ್ವಾಳೆ,ಮುಂಜಾನೆ ಕುಡಿದೀಯೇನು?ಎಂದು ಬೈದರು.ಬೈದವರ ಬೇಗುಳವನ್ನು,ನಕ್ಕವರ ನಗುವನ್ನು ತನ್ನ ಹೊಟ್ಟೆಯಲ್ಲಿ ಹಾಕಿಕೊಂಡು ಡೇಗ ಮುಂದೆ ಸಾಗುತ್ತಿರಲು...
ಹಳದಿ ಬಣ್ಣದ ಹೂಗಳಿಂದ ಸಮೃದ್ಧವಾಗಿ ಬೆಳೆದ ಗೌಡರ ಹೊಲ ಹತ್ತಿರ ಬಂತು.ತೊಗರಿಯ ಸಾಲಿನಲ್ಲಿ ಮೊಳಕಾಲೆತ್ತರ ಬೆಳೆದ ಮೇವು ಕೊಯ್ದುಕೊಳ್ಳಲಿಕ್ಕೆ ಎಷ್ಟು ಹೊತ್ತು?ಕ್ಷಣಾರ್ಧದಲ್ಲಿ ಒಂದು ಗಂಟು ಮೇವು ಮಾಡಬಹುದು ಎನ್ನುತ್ತಿರುವಂತೆ,ಗಾಳಿ ಇಲ್ಲದ ಬೆಳಗಿನ ತಂಪು ವಾತಾವರಣದಲ್ಲಿ ತೊಗರಿ ಗಿಡಗಳು ತನ್ನ ಹೂಗಳೊಂದಿಗೆ ವಿಲಕ್ಷಣ ನೃತ್ಯ ಮಾಡುತ್ತಿರುವುದು ಕಾಣಿಸಿತು.ಆಶ್ಚರ್ಯಗೊಂಡ ಡೇಗ!ಮೊನ್ನೆ ಮೊಹರಂ ಸಂದರ್ಭದಲ್ಲಿ ಮಾದಿಗರ ಮಾಹಾದೇವ ಹೊಡೆದ ಹಲಗೆಗೆ ಬೋಸಾಯಿ ಹೆಜ್ಜೆಗಳು ಹಾಕುತ್ತಾ ಲಯಬದಧವಾಗಿ ಕುಣಿದ ಬೋಸಾಯಿ ಕಲವಿದರ ಹೆಜ್ಜೆಯ ಲಯ ನೆನಪಾಯಿತು.ತೊಗರಿ ಗಿಡದ ಬೊಡ್ಡೆಗೆ ಗೆಜ್ಜೆ ಕಟ್ಟಿರುವಂತೆ ಲಯಬದ್ಧವಾದ ಗೆಜ್ಜೆಯ ಸದ್ದೂ ಕೇಳಿಬಂದಿತು;ಕಿವಿ ನಿಮಿರಿಸಿ ಕೇಳಲು ಹಿತವಾಗಿ,ಮಧುರವಾಗಿ,ಸುಶ್ರಾವ್ಯವಾಗಿ ಹೆಣ್ಣೊಂದು ಮುಲುಗುತ್ತಿರುವ ಅದಕ್ಕೆ ತಾಳವೆಂಬಂತೆ ಗಂಡಿನ ಬುಸುಗುಡುವ ಸದ್ದು ಕೇಳಿಬಂದಿತು.ಕೂತೂಹಲಗೊಂಡ ಡೇಗ ನಿಧಾನವಾಗಿ ಹೆಜ್ಜೆ ಸದ್ದಾಗದಂತೆ ಸಂಗೀತ ಹರಿದುಬರುವ ದಿಕ್ಕಿನತ್ತ ಹೊರಟ!
ಕಾಯಿ ಕರ್ಫೂರ ಹೊಡೆದಾದ ನಂತರ ಜೆಸಿಬಿ ಯಂತ್ರ ನದಿಯೊಳ್ಕೆ ಇಳಿಯುತು.ಗೌಡನೂ ಸೇರಿದಂತೆ ಊರಿನ ಪ್ರಮುಖರೆಲ್ಲಾ “ಏಳುಕೋಟಿಗಿ ಏಳುಕೋಟಿಗೇ!”ಎಂದು ಒಕ್ಕೂರಲಿನಿಂದ ಕೂಗಿದರು.ಕೇಲವರು ಯಥಾನುಶಕ್ತಿ ಕೇಕೆ ಹಾಕಿದರು;ಅಂತರ್ಜಲ ಕಾಯ್ದುಕೊಳ್ಳುವ ಭೂಮಿಯ ಪ್ರಮುಖ ಖನಿಜ ತನ್ನ ಮೇಲ್ಮೈಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ನದಿ ಬೆತ್ತಲೆಯಾದ ವೇಶ್ಯೆಯಂತೆ ಕಾಣಿಸುತ್ತಿತ್ತು;ಜೆಸಿಬಿ ಹಸಿದ ಕಾಮುಕನಂತೆ ತನ್ನ ರಾಕ್ಷಸ ಹಸ್ತವನ್ನು ನದಿಯ ಒಡಲೊಳಗೆ ಹಾಕುತ್ತಿರುವಂತೆ....
ಡೇಗ ನಿಧಾನವಾಗಿ ಸಂಗೀತಾಲಾಪದ ಕಡೆ ಸಾಗಿ ಅಲ್ಲಿ ಮದಗಜಗಳ ಗುದ್ದಾಟದಂತೆ ನಡೆದ ಮೈಥುನಕ್ಕೆ ಸಾಕ್ಷಿಯಾಗುತ್ತಿರುವಂತೆ ಹೆಣ್ಣಿನ ಅಚಿತಿಮ ಕ್ಷಣದ ಚೀತ್ಕಾರ ಕೇಳಿ ಬಂದಿತು!ಮಳೆ ನಿಂತ ವಾತಾವರಣದಂತೆ ಪರಿಸರ ಸ್ತಬ್ಧವಾಯಿತು;ಸುಖದ ಅಮಲಿನಲ್ಲಿ ತತಕ್ಷಣವೇ ಎದ್ದ ಆ ಜೋಡಿ ಜೀವಗಳು ಡೇಗನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡವು;ಡೇಗ ಅವರು ಯಾರಂತ ನೋಡುತ್ತಿರಲು...
ಆಕೆ,ಆಕೆಯ ಮನೆಯ ಆಳು!!ಆಕೆ ನದಿ,ಅವನು ಜೆಸಿಬಿ!!!
ಲಕ್ಷ್ಮೀಕಾಂತ ನಾಯಕ
9845968164
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ