ಶನಿವಾರ, ಮಾರ್ಚ್ 14, 2020

ಕುಡಿತದ ಕುರಿತು ಒಂದು ಪ್ರಹಸನ


ಕುಡಿತದ ಕುರಿತು ಒಂದು ಪ್ರಹಸನ

ಕುಡಿತ ದೇಹಕ್ಕೆ ಕೈ ಹಚ್ಚುತ್ತದೆ;ನಿಧಾನವಾಗಿ ಕಿಡ್ನಿ,ಲಿವರ್,ಸೇರಿದಂತೆ ಕೆಲವು ಅಂಗಾಂಗಗಳನ್ನು ತಿನ್ನುತ್ತಾ ಬರುತ್ತದೆ.ಇವೆಲ್ಲವಕ್ಕಿಂತ ಮೊದಲು ಆತನ ಆರ್ಥಿಕ ಸ್ವಾವಲಂಬನೆಗೆ ಧಕ್ಕೆ ನೀಡುತ್ತದೆ.ಸಂಸಾರಿಕ ಅಶಾಂತಿಗೆ ಕಾರಣವಾಗುತ್ತದೆ.ಹೆಂಡತಿ ಮಕ್ಕಳ ಅಧೋಗತಿಗೆ ಕಾರಣವಾಗುತ್ತದೆ.ಬಾಂಧವ್ಯಗಳು ಹಾಳಾಗುತ್ತವೆ.ಸಮಾಜ ಕುಡಕನ ಮೇಲಿನ ನಂಬಿಕೆ ಕಳೆದುಕೊಳ್ಳುತ್ತದೆ.ಭಲಾ,ಭಲಾ ಎನ್ನುವ ಸ್ನೇಹಿತರು ನೆಶೆ ಹೆಚ್ಚಾದ ಕೂಡಲೇ, ಹಣ ಖಾಲಿಯಾದ ಕೂಡಲೇ ಬೇರೆ ಟೇಬಲ್ಲಿಗೆ ಸ್ಥಳಾಂತರವಾಗುತ್ತಾರೆ.ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆ ಸೇರಿದಾಗಸೂಳೇಮಗ ಹೇಳಿದರೆ ಎಲ್ಲಿ ಕೇಳುತ್ತಿದ್ದ.ಒಂದ್ ಕುಡೀತಿದ್ನಾ ಎರಡು ಕುಡೀತಿದ್ನಾ,ಸಾಯಿಲಿ ಮಗ!”ಅಂತಾರೆ,ಆಸ್ಪತ್ರೆಗೆ ಅವರಾರು ಬರುವುದಿಲ್ಲ.ಕುಡಿದು ಕುಡಿದು ದುಡಿಯುವ ಶಕ್ತಿ ಕಳೆದುಕೊಂಡ ಮೇಲೆ ಜನ ಹತ್ತಿರವೂ ಸುಳಿಯುವುದಿಲ್ಲ.ಕುಡಿತದ ವ್ಯಸನಕ್ಕೆ ಒಳಗಾದ ವ್ಯಕ್ತಿ ತಾಯಿಯನ್ನು ಕೊಂದಿರುವುದನ್ನು ಕಂಡಿದ್ದೇನೆ,ತಂದೆಯ ಜೀವ ತಿಂದದ್ದನ್ನು ಕಂಡಿದ್ದೇನೆ;ಹೆಂಡತಿಯನ್ನು ವ್ಯಭಿಚಾರಕ್ಕೆ ಇಳಿಸಿದ್ದನ್ನು ಕಂಡಿದ್ದೇನೆ.ಮಕ್ಕಳ ಜೀವನ ನಾಶ ಮಾಡಿರುವುದನ್ನು ನನ್ನ ಕಣ್ಣಾರೆ ಕಂಡಿದ್ದೇನೆ.ಕುಡಿತದ ದಾಸ್ಯಕ್ಕೆ ಒಳಗಾಗಿ ಸುದೀರ್ಘವಾದ ತುಂಬು ಜೀವನವನ್ನು ನರಕಮಯವಾಗಿಸಿದ ನನ್ನ ಹಿರಿಯ ಸ್ನೇಹಿತೆಯ ಜೀವನದ ರೌರವ ನರಕ ಕಂಡಿದ್ದೇನೆ.ಅಂತಿಮವಾಗಿ ಇಡೀ ಬದುಕನ್ನು ನರಕವಾಗಿಸುವ ಕುಡಿತ ಮನುಷ್ಯನನ್ನು ವ್ಯಾಘ್ರನನ್ನಾಗಿಸುತ್ತದೆ.ಆದರೂ ಮನುಷ್ಯ ಕುಡಿಯುತ್ತಾನೆ.

ಒಂದು ಸಲ ಕುಡಿದ ದಾಸ್ಯಕ್ಕೆ ವ್ಯಕ್ತಿಯೊಬ್ಬ ಒಳಪಟ್ಟನೆಂದರೆ,ಆತನಿಗೆ ಬುದ್ದಿ ಹೇಳುವ ಭಯ,ಜೀವನದ ಭಯ,ಹಿರಿಯರು,ಹಿತೈಷಿಗಳ ಭಯವಿಲ್ಲವೆಂದರೆ ಆತನ ಜೀವನ ನರಕದೊಳಗೆ ಶಾಸ್ತ್ರೀಯವಾಗಿ ಪ್ರವೇಶ ಪಡೆದುಕೊಂಡಿತೆಂದೇ ಲೆಖ್ಖ.ಆತನನ್ನು ಅಂಕೆಯಲ್ಲಿಡುವ ಅಂಕುಶಗಳೇ ಇಲ್ಲವೆಂದ ಮೇಲೆ ಆತ ಕ್ರಮೇಣ ವ್ಯಾಘ್ರನಾಗಿ ಬದಲಾಗಿ ಹೋಗುತ್ತಾನೆ.ಆತನನ್ನು ಯಾರೂ ಕಾಪಾಡುವುದಿಲ್ಲ.ಮನೋವೈದ್ಯರು,ವ್ಯಸನ ಮುಕ್ತ ಕೇಂದ್ರಗಳು ಯಾವ ಪರಿಣಾಮವನ್ನೂ ಬೀರುವುದಿಲ್ಲ.ಕುಡಿತದ ಆಚೆ ವ್ಯಕ್ತಿ ಸೋಮಾರಿಯಾಗುತ್ತಾನೆ.ಆತ ದುಡಿಯಲು ಹೊರಡುವುದು ಕುಡಿಯುವುದಕ್ಕಾಗಿಯೇ,ನನ್ನ ವರಸೆಯಲ್ಲಿ ಅಣ್ಣನಾಗಬೇಕಿದ್ದ ಒಬ್ಬ ವ್ಯಕ್ತಿ ರಾತ್ರೋರಾತ್ರಿ ಸತ್ತು ಹೋದ.ಆತ ಕುಡಿತಕ್ಕೆ ಎಷ್ಟೊಂದು addict ಆಗಿದ್ದನೆಂದರೆ-ಆತ ತುಂಬಾ ಕ್ರಿಯಾಶೀಲವಾಗಿರುತ್ತಿದ್ದ.ಆತನ ಕ್ರಿಯಾಶೀಲತೆ ಬರೀ ಕುಡಿತಕ್ಕಾಗಿ ಮಾತ್ರವೇ ಆಗಿರುತ್ತಿತ್ತು.ಆತ ಕುಡಿತದ ಹೊರತು ಬೇರೇನನ್ನೂ ಯೋಚಿಸುತ್ತಿರಲಿಲ್ಲ.ಆತ ಊಟ ಮಾಡುತ್ತಿರಲಿಲ್ಲ;ಆತ ತಂದೆ ತಾಯಿಯ ಆರೈಕೆ ಮಾಡಬೇಕಿರಲಿಲ್ಲ ಮತ್ತು ಮಾಡುತ್ತಿರಲಿಲ್ಲ.ಹೆಂಡತು ಅದೆಂದೋ ಬಿಟ್ಟೋಗಿ ತವರು ಸೇರಿದ್ದಳು.ದೂರದಲ್ಲಿರುವ ಗಂಡನನ್ನು ದ್ರೋಣಾಚಾರ್ಯನೆಂದು ಭಾವಿಸಿ ಮಕ್ಕಳ ಪ್ರಸಾದ ಪಡೆದಿದ್ದಳು.ವಿಪರೀತ ಕುಡಿತ ಮತ್ತು gardinol ಮಾತ್ರೆಗಳಿಂದಜೀವಿಸುತ್ತಿದ್ದ ಆತ ಮೂರ್ಛೆ ರೋಗಿಯಾಗಿದ್ದ.ಬದುಕಿನ ಕುರಿತು ತನ್ನೆಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದ ಆತ ಅಂತಿಮ ದಿನಗಳಲ್ಲಿ ಮನೋರೋಗಕ್ಕೆ ಒಳಗಾಗಿದ್ದ.ಕೊನೆಗೊಂದು ದಿನ ಮಲಗಿದಲ್ಲಿ ನರಳಿ ಸತ್ತು ಹೋಗಿದ್ದ.ಬೆಳ್ಳಿಗೆ ಪಾನಮತ್ತ ತಾಯಿ ಹೆಣ ನೋಡಿದಾಗ ದೇಹ ಸೆಡೆದಿತ್ತು.

ಮೈಡಿಯರ್ ಫ್ರೆಂಡ್ಸ್,ಜೀವನದ ಕುರಿತು ಹತಾಶೆಗೊಂಡು ಸುದೀರ್ಘವಾದ ಎಂಟು ವರ್ಷಗಳನ್ನು ನಾನೂ ಭಯಾನಕವಾಗಿ ಕುಡಿತದಿಂದಲೇ ಕಳೆದುಕೊಂಡೆ.ನನ್ನ ನಿಯಂತ್ರಣಕ್ಕೆ ಬಾರದ ನನ್ನ ಜೀವನ ಯಾರೋ ನಿಯಂತ್ರಿಸುತ್ತಿದ್ದಾರಲ್ಲ ಎನ್ನುವ ಅಧೀರತೆಯಿಂದ ಕುಡಿದು ಶೂರನಾಗುವ ಪ್ರಯತ್ನ ಮಾಡಿದೆ. ಪ್ರಯತ್ನದಲ್ಲಿ ಲಕ್ಷಗಟ್ಟಲೆ ಹಣದ ಜೊತೆ ಜೀವನವನ್ನೇ ಕಳೆದುಕೊಂಡೆ.ಪ್ರೀತಿಯ ಹುಡುಗಿ ನನ್ನ ಬೇಜವಬ್ದಾರಿಯಿಂದ ತೀರಿ ಹೋದಳು.ಸುಂದರವಾದ ಬದುಕು ನಾಶವಾಯಿತು.ದೃಢ ನಿರ್ಧಾರವಿಲ್ಲದ ದೃಢ ನಿರ್ಧಾರ ತೆಗೆದುಕೊಳ್ಳದ ನನ್ನ ಹೇಡಿ ಮನ್ನಸ್ಸು ಕುಡಿತದಿಂದ ಶೂರತ್ವ ಮೆರೆಯುವ ಪ್ರಯತ್ನ ಮಾಡುತ್ತಿತ್ತು.ಸುತ್ತಲಿನ ಹೆಂಜಲ ಗಿರಾಗಿಗಳ ಹೊಗಳಿಕೆಯಿಂದ ಉಬ್ಬುತ್ತಿತ್ತು.ಅಂತಿಮವಾಗಿ ಬದುಕು ನಾಶವಾಯಿತು.ಕುಡಿತದಿಂದ ಏನೂ ಸಾಧಿಸಲಾರೇವು ಎಂದು ತಿಳಿಯುವುದರ ಒಳಗೆ ಇಬ್ಬರ ಮಕ್ಕಳೊಂದಿಗೆ ಏಕಾಂಗಿ ಪ್ರಯಾಣಕ್ಕೆ ಆತ್ಮಕ್ಷೋಭೆಯ ಯಾತ್ರೆಗೆ ಸಿದ್ದನಾಗಿದ್ದೆ.

ಒಂದಂತೂ ಸತ್ಯ:ಪ್ರತಿಸಲ ಕುಡಿಯುವಾಗಲೂ ಕುಡಿತ ನನಗಾಗಿ ಅಲ್ಲ ಎಂದು ಕುಡಿಯುತ್ತಿದ್ದೆ.ಕುಡಿದ ಮೇಲೆ ನನ್ನನ್ನು ನಾನೇ ಬೈಯ್ದುಕೊಳ್ಳುತ್ತಿದ್ದೆ.ಕುಡಿಕುಡಿಯುತ್ತಾ ಕುಡಿತದ ಬಗ್ಗೆ ದ್ವೇಷ ಹುಟ್ಟಿಸಿಕೊಳ್ಳುತ್ತಿದ್ದೆ.ಮನೋಸಾಸ್ತ್ರದ ಪುಸ್ತಕಗಳ ಅಧ್ಯಯನ ಮಾಡುತ್ತಿದ್ದೆ.ಡಾ//ಸಿ.ಆರ್.ಚಂದ್ರಶೇಖರ್ ಬರಹಗಳನ್ನು ಓದುತ್ತಿದ್ದೆ.ಸಮ್ಮೋಹನ ಶಾಸ್ತ್ರದ ಬಗ್ಗೆ ವಿಪರೀತ ವ್ಯಾಮೋಹವಿತ್ತು.ನನ್ನನ್ನು ನಾನು ಹಲವು ಪರೀಕ್ಷೆಗೆ ಒಳಪಡಿಸುತ್ತಿದ್ದೆ.ತಿಂಗಳುಗಟ್ಟಲೆ ಕುಡಿತ ಬಿಡುತ್ತಿದ್ದೆ.ಮತ್ತೆ ಪ್ರಾರಂಭಿಸುತ್ತಿದ್ದೆ.ಅದು ನನ್ನ ನಿಯಂತ್ರಣದಲ್ಲಿದೆಯಾ ಇಲ್ಲವಾ ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಿದ್ದೆ.ಆದರೂ ನಷ್ಟ ಅನುಭವಿಸಿದೆ.ಕೆಟ್ಟದರ ಪರಿಣಾಮ ಕೆಟ್ಟದ್ದೆ ಆಗುತ್ತದೆ. ದುಷ್ಪರಿಣಾಮ ಆಗಿಯೇ ತೀರಿತು.ಅದೊಂದು ದಿನ ಅದನ್ನು ಬಿಟ್ಟೂ ಬಿಟ್ಟೆ;ಬಿಡುವಷ್ಟರಲ್ಲಿ ತುಂಬಾ ಕಳೆದಯಕೊಂಡಿದ್ದೆ.ಸ್ನೇಹಿತರೆ ನೆನಪಿರಲಿ:ನನ್ನನ್ನು ಕುಡಿತಕ್ಕೆ ಹುರಿದುಂಬಿಸುತ್ತಿದ್ದ ಅನೇಕ ಸ್ನೇಹಿತರು ಹುರಿದುಂಬಿಸುತ್ತಾ ಹುರಿದುಂಬಿಸುತ್ತಾ ತಾವೇ ಕುಡಿದು ಸತ್ತು ಹೋದರು;ಹತ್ತಾರು ಜನ ಸ್ನೇಹಿತರ ಶವ ಸಂಸ್ಕಾರದಲ್ಲಿ ತೊಡಗಿಕೊಂಡ ನನ್ನ ಅನುಭವ ಅತ್ಯಂತ ದಾರುಣವಾದದ್ದು!

ಕುಡಿತವೆನ್ನುವುದು ಒಂದು ಚುಂಬಕ ಬಲೆ ಇದ್ದಂತೆ;ಅದು ಕೀಟಗಳನ್ನು ಸೆಳೆಯುವಂತೆ ಸೆಳೆಯುತ್ತಲೇ ಇರುತ್ತದೆ.ಕುಡಿತ ಕುಡಿಯುವವನ ನಿಯಂತ್ರಣ ತಪ್ಪಿ ಹೋಯಿತು ಎಂದರೆ ಅದರಿಂದ ಆತನನ್ನು ಯಾವ ದೇವರೂ ಹೊರ ತರಲಾರ!ಅಂತಿಮ ಪರಿಣಾಮ ಹಲವು ನಷ್ಟಗಳ ನಂತರ ಸಾವು ಮಾತ್ರವೇ!ಇದೊಂದು ಶಾಪಗ್ರಸ್ತ ಬದುಕು.

ಕುಡಿತ ದೇಹ,ದೇಹದ ಅಂಗಾಂಗಗಳು ಮತ್ತು ಸಾಮಾಜಿಕ ಬದುಕಿನ ಮೇಲೆದುಷ್ಪರಿಣಾಮ ಬೀರಿದರೆ ಇನ್ನೊಂದಿದೆ:

ಗಾಂಜಾ ಸೇವನೆ!

ಇದು ಮಾತ್ರ ತುಂಬಾ ಅಪಾಯಕಾರಿ.ಇದು ದೇಹಕ್ಕೆ ಕೈ ಹಚ್ಚುವುದಿಲ್ಲ.ಮನಸ್ಸಿಗೆ ಕೈ ಹಚ್ಚುತ್ತದೆ,ನೇರವಾಗಿ ಮೆದುಳಿನ ನ್ಯೂರಾನ್ಗಳ ಮೇಲೆ ಪ್ರಭಾವ ಬೀರುತ್ತದೆ.ನರಗಳ ಮೇಲೆ ಪ್ರಭಾವ ಬೀರುತ್ತದೆ.ಭಾರತದ ಆಧ್ಯಾತ್ಮಿಕ ಶರಣ ಪಂಕ್ತಿಯ ಜನ ಕಾಮವನ್ನು ಗೆಲ್ಲಲ್ಲಿಕ್ಕೆಂದೆ ಇದನ್ನು ಉಪಯೋಗಿಸುತ್ತಿದ್ದರು.ನರಗಳ ಮೇಲೆ ಸಂಪೂರ್ಣವಾಗಿ ಪರಿಣಾಮವನ್ನು ಬೀರುವ ಇದು ಷಂಡತ್ವವನ್ನು ಪ್ರಾಪ್ತ ಮಾಡುತ್ತದೆ.ಲೈಂಗಿಕ ಉದ್ರೇಕವನ್ನು ನಾಶ ಮಾಡುತ್ತದೆ.ದೇಹವನ್ನು ಗಾಳಿಯಂತಾಗಿಸುವ ನೆಶೆ ತುಂಬಾ ಅಪಾಯಕಾರಿ.ಗಾಂಜಾದ ಅಡಿಕ್ಶನ್ಗೆ ಒಳಗಾದ ಮನುಷ್ಯ ಅದರಿಂದ ಹೊರ ಬರುವುದು ಅಸಾಧ್ಯದ ಮಾತು.ಆತ ಸಂಪೂರ್ಣವಾಗಿ ಹುಚ್ಚನಾಗುತ್ತಾನೆ.ಆತನ ಸಂಸಾರಿಕ ಜೀವನ ಮುಗಿದಂತೆಯೇ ಲೆಖ್ಖ,ಆತ ಒಂದು ಭ್ರಮೆಯೊಳಗೆ ಮುಳುಗಿ ಹೋಗುತ್ತಾನೆ.

ಗಾಂಜಾ ಸೇವನೆ ತುಂಬಾ ಅಪಾಯಕಾರಿ ಚಟ, ಚಟಕ್ಕೆ ಒಳಗಾದ ವ್ಯಕ್ತಿ ಸಂಸಾರಿಕ ಜೀವನ ನಡೆಸುತ್ತಿರುವುದನ್ನು ನಾನೆಲ್ಲೂ ಕಂಡಿಲ್ಲ.ಹಾಗೊಂದು ವೇಳೆ ಅಲ್ಲೊಂದು ಇಲ್ಲೊಂದು ಸಂಸಾರಗಳು ಕಂಡು ಬಂದರೆ ಸಂಸಾರಗಳ ಅಧ್ವಾನವನ್ನೊಮ್ಮೆ ಪರಿಶೀಲಿಸಿ ನೋಡಿ. ಗಾಂಜಾ ವ್ಯಸನಿಗಳು ಮನುಷ್ಯತ್ವ ಕಳೆದುಕೊಳ್ಳುತ್ತಾರೆ.ಇವರಿಗೆ ಬಾಂಧವ್ಯ ಮತ್ತು ಇಹ ಪರ ಧ್ಯಾನಗಳು ಇರುವುದಿಲ್ಲ.(ಮೊನ್ನೆ ನನ್ನ ತಮ್ಮನಿಂದ ಹತ್ಯಾ ಪ್ರಯತ್ನ ನಡೆಯಿತು.ಗಾಂಜಾದಿಂದಆತನನ್ನು ಉದ್ರೇಕಿಸಲಾಗಿತ್ತು).ಇಂತಹ ಜನಗಳಿಗೆ ಪ್ರಾಣದ ಬೆಲೆ ಗೊತ್ತಿರುವುದಿಲ್ಲ.

ಚಟಗ್ರಸ್ತ ಬದುಕೆಂದರೆ ಬೇರೇನೂ ಅಲ್ಲ.ಭೂಮಿ ಮೇಲಿನ ನಿಜ ನರಕದ ಸಾಕ್ಷಾತ್ಕಾರ. ಸುಂದರವಾದ ಬದುಕನ್ನು ನರಕವಾಗಿಸಿಕೊಂಡು ತನ್ನ ಸುತ್ತಲಿನ ಜನರ ಜೀವನವನ್ನೂ ಅಶಾಂತಿಗೊಳಪಡಿಸಿ ಬದುಕುವ ಭಂಡ ಬಾಳು ಅತ್ಯಂತ ಹೇಯವಾದದ್ದು.ಇವುಗಳನ್ನು ನಿಯಂತ್ರಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಚಿತ್ರದುರ್ಗದಿಂದ ಬೆಂಗಳೂರಿಗೆ ನಡೆದ ರಾಯಚೂರಿನ ಬಡ ಕುಡಿತದ ಸಂತ್ರಸ್ತ ಹೆಣ್ಣುಮಕ್ಕಳಿಗೆ ಪ್ರಭುತ್ವ ಹೇಳಿದ ಕಟ್ಟ ಕಡೆಯ ಮಾತೆಂದರೆ....

ನಾವು ಕುಡಿತದಿಂದ ಬಂದ ಆದಾಯದಲ್ಲೇ ಸರ್ಕಾರ ನಡೆಸುತ್ತೇವೆ ಎಂದು!

                             ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...