ಶನಿವಾರ, ಮಾರ್ಚ್ 14, 2020

ರಕ್ತದ ರುಚಿ ನೋಡಲೇಬೇಕೆಂದಾಗ ಬೀರನ್ನೇ ವೈರಿಯ ರಕ್ತವೆಂದು ಭಾವಿಸಿದ್ದೇವು...!


ರಕ್ತದ ರುಚಿ ನೋಡಲೇಬೇಕೆಂದಾಗ ಬೀರನ್ನೇ ವೈರಿಯ ರಕ್ತವೆಂದು ಭಾವಿಸಿದ್ದೇವು...!

ಕೊಲೆ ಮಾಡಲೇಬೇಕು ಎನ್ನುವ ಹಗೆ ಅದ್ಹೇಗೆ ಉದ್ಬವವಾಗುತ್ತದೋ ಗೊತ್ತಿಲ್ಲ.ಆತನನ್ನು ಕೊಲ್ಲದಿದ್ದರೆ ನಮಗುಳಿಗಾಲ ಇಲ್ಲವೆಂದು ಅನ್ನಿಸಿಬಿಟ್ಟಿತ್ತು.ದಿನಂಪ್ರತಿ ನಿರ್ಧಾರಕ್ಕೆ ತುಪ್ಪ ಸುರಿಯುವಂತೆ ಅಂತಹ ಘಟನೆಗಳು ಸಂಭವಿಸುತ್ತಿದ್ದವು.ಕುಡುಕರು ತೀರ ಮನೆಯ ಮುಂದೆ ಬಂದು ನಿಂತು ಕಡಿಯುವ ಬೆದರಿಕೆ,ಕೊಲ್ಲುವ ಬೆದರಿಕೆ,ಮನೆಗೆ ಕಲ್ಲು ತೂರುವ ಬೆದರಿಕೆ,ಹೆಣ್ಣು ಮಕ್ಕಳ ಕುರಿತು ಅವಾಚ್ಯ ಶಬ್ದಗಳನ್ನು ಬಳಸುವುದು ಅವ್ಯಾಹತವಾಗಿ ನಡೆದಿತ್ತು.ಇದು ಒಂದು ದಿನದ ಗೋಳಾಗಿರಲಿಲ್ಲ;ದಿನಂಪ್ರತಿ,ಸಾಯಂಕಾಲ ಆದ ಕೂಡಲೇ ಇಡೀ ಊರು ಆತಂಕಕ್ಕೊಳಗಾಗುತ್ತಿತ್ತು.ಏನಾಗುತ್ತೋ ಎನ್ನುವ ಭಯ,ಇಡೀ ಊರ ಜನ ಬಾಗಿಲು ಭದ್ರ ಮಾಡಿಕೊಂಡು ಸಾಯಂಕಾಲದ ನಂತರ ಆಚೆ ಬರುವುದನ್ನು ನಿರ್ಬಂಧಿಸಿ ಬಿಟ್ಟಿದ್ದರು.ಊರು ತನಗರಿವಿಲ್ಲದೆ ರಾಕ್ಷಸ ಕೂಂಪೆಯಾಗಿ ಬದಲಾಗಿತ್ತು.ಸಭ್ಯಸ್ತರು ಒಬ್ಬೊಬ್ಬರಾಗಿ ಊರು ಬಿಡತೊಡಗಿದ್ದರು.ಊರು ನಿಜಕ್ಕು ಯಮಪುರಿಯಂತೆ ಕಾಣಿಸತೊಡಗಿತ್ತು

ನಮ್ಮ ಮನೆಯಲ್ಲೂ ಕಡಿಮೆ ಇರಲಿಲ್ಲ.ನಾವೂ ತಂಡಗಳನ್ನು ರಚಿಸಿ ಬಿಟ್ಟಿದ್ದೇವು.ನಮ್ಮ ಬಂಧು ಬಳಗ ಅಣ್ಣ ತಮ್ಮಂದಿರದೆ ದೊಡ್ಡ ಸೈನ್ಯವಾಗುತ್ತಿತ್ತು.ದೂರಿಕೊಂಡು ಹೋಗಿ ಮೈ ಮೇಲೆ ಬಿದ್ದಿದ್ದರೆ ಇಡೀ ಊರು ಸ್ಮಶಾನವಾಗಿ ಬಿಡುತ್ತಿತ್ತು.ನಾವಿರುವಷ್ಟು ಜನ ಅವರಿರಲಿಲ್ಲ.ಅವರಲ್ಲಿ ಕುಡುಕರು,ನಿಷ್ಠೆ ಇಲ್ಲದವರು,ದುಡ್ಡಿಗೆ ಆಸೆ ಬೀಳುವವರು ಮತ್ತು ಸ್ವತಃ ಜನ ಬಡತನದ ಬೇಗುದಿಯಲ್ಲಿ ನರಳಿ ಸಾಯುತ್ತಿದ್ದರು.ಅವರಿಗೆ ಜಗಳವಾದರೆ ನಿಭಯಿಸಿಕೊಳ್ಳುವ ಶಕ್ತಿಯೂ ಇರಲಿಲ್ಲ.ಹಣಕಾಸಿನ ಸಮಸ್ಯೆ ಅವರಿಗೆ ಎಷ್ಟೊಂದು ಉಲ್ಬಣವಾಗಿತ್ತು ಎಂದರೆ ದೊಡ್ಡ ಪ್ರಮಾಣದ ಭೂಮಿ ಇಟ್ಟುಕೊಂಡು ಅವರು ಕೂಲಿ ಮಾಡುವ ಸ್ಥಿತಿಗೆ ತಲುಪಿದ್ದರು.ಅವರಿಗೆ ರಾಜಕೀಯ ಒತ್ತಾಸೆ ಇರಲಿಲ್ಲ.ರಾಜಕೀಯ ಸವಲತ್ತುಗಳನ್ನು ಪಡೆದುಕೊಳ್ಳುವ ಚಾಕಚಕ್ಯತೆಯೂ ಇರಲಿಲ್ಲ.ಒಂದ್ಹತ್ತು ಮಂದಿ ಎಡೆ ಮುರಿ ಕಟ್ಟಿ ಬಿಡೋಣ ಅಂತ ನಮ್ಮ ಹುಡುಗರು ದಿನಂಪ್ರತಿ ಅನ್ನುತ್ತಿದ್ದರು!ಅಪ್ಪ ಬೇಡ ಅನ್ನುತ್ತಿದ್ದರು.ಅಪ್ಪನಿಗೆ ಜಗಳ ಬೇಕಿರಲಿಲ್ಲ.ಅಪ್ಪ ಜೀವಮಾನ ಪೂರ್ತಿ ಜಗಳದಲ್ಲಿ ಮುಳುಗಿ ಬೇಸತ್ತು ಹೋಗಿದ್ದರು.ಸುಳ್ಳೇ ಅವರ ಕೈಗೆ ರಕ್ತದ ಆಪಾದನೆ ಹತ್ತಿತ್ತು.ಕೋರ್ಟು ಕಛೇರಿಗಳು ಅವರನ್ನು ನಿರಾಸಕ್ತರನ್ನಾಗಿ ಮಾಡಿದ್ದವು. ಹಂತದಲ್ಲಿ ಅವರು ಜಗಳವನ್ನು ತುಂಬಾ ತೀವ್ರವಾಗಿ ಖಂಡಿಸುತ್ತಿದ್ದರು.“ಜಗಳದಾಗ ಹೋಳಿಗಿ ಊಟ ಇರುತ್ತದೇನು,ಸಾವು ನೋವಿನ ಹೊರತು?ಏನ್ ಬರ್ತದ ಅದರಿಂದ?ಕೈಕಾಲು ಮುರಿತಾವ,ಪ್ರಾಣ ಹೋಗ್ತಾವ,ಆನಂತರ ಜೈಲು,ಪೋಲಿಸ್ ದೊಡ್ಡ ರಾಮಾಯಣವದು,ಅದರ ಸಹವಾಸವೇ ಬೇಡ!ಮುಂದು ನೋಡಿ ಮಾಡಿಕೊಂಡು ಉಣ್ಣ್ರೀ!”ಅಂತ ಆತಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದಾಗಲೆಲ್ಲ ಬಯ್ಯುತ್ತಿದ್ದ.ಅಪ್ಪನ ಮಾತು ನಾವ್ಯಾರು ಮೀರುತ್ತಿರಲಿಲ್ಲ.ಅಪ್ಪನಿಗೆ ಇಡೀ ತಾಲ್ಲೂಕು ಗೌರವ ಕೊಡುತ್ತಿತ್ತು;ಹೆದರುತಿತ್ತು.ಅಪ್ಪ ನಮ್ಮ ಪಾಲಿಗೆ ಹೀರೋ ಆಗಿದ್ದ.ಏನೇ ನಿಯಂತ್ರಣ ಮೀರುವ ಸನ್ನಿವೇಶ ಏರ್ಪಟ್ಟರೂ ವೈರಿಗಳ ಅವಾಚ್ಯ ಶಬ್ದಗಳಿಗೆ ಕಿವಿ ಕಿವುಡು ಮಾಡಿಕೊಂಡು ಮನೆ ಸೇರುತ್ತಿದ್ದೇವು,ಅದು ಅನಿವಾರ್ಯವಾಗಿತ್ತು ಕೂಡಾ!”

ಅವರ ಆರ್ಭಟ ಹೆಚ್ಚಾಯಿತು,ಬದುಕಲಿಕ್ಕೆಂದು ನಾವು ತಾಳಿದ ಮೌನವನ್ನು ಹೇಡಿತನ ಎಂದು ಭಾವಿಸಿದರು;ಹಾಗೆಂದೇ ಅವಮಾನ ಮಾಡುವುದು ಹೀಯಾಳಿಸುವುದು ಪ್ರಾರಂಭಿಸಿದರು.ಕೊಡಲಿ ಹೆಗಲ ಮೇಲಿಟ್ಟುಕೊಂಡು ಮನೆಗೆ ಬರತೊಡಗಿದರು.ನಾವು ತುಂಬಾ ಎಚ್ಚರಿಕೆಯಿಂದ ಬದುಕಬೇಕಾದ ಪರಿಸ್ಥಿತಿ ಉಂಟಾಯಿತು,ಅಪ್ಪ ಜೇಬಿನಲ್ಲಿ ರಿವಾಲ್ವರ್ ಇಟ್ಟುಕೊಂಡು ತಿರುಗಾಡತೊಡಗಿದರು.ಬೈಕ್ ತಿರುಗಾಡಲಿಕ್ಕೆ ಸೇಫ್ ಅಲ್ಲ ಅನ್ನಿಸಿ ಕಾರು ಕೊಂಡೇವು,ರಾತ್ರಿ ಮತ್ತು ಅವ ವೇಳೆಯಲ್ಲಿ ತಿರುಗಾಡುವುದನ್ನು avoid ಮಾಡಿದೇವು.ಯಾರೂ ಒಂಟೊಂಟಲಿ ತಿರುಗಬಾರದು ಎನ್ನುವ ನಿರ್ಣಯಕ್ಕೆ ಬಂದೇವು.ನನಗೆ ನನ್ನ ಕುಡುಕ ಅಣ್ಣನ ಬಗ್ಗೆ ಆತಂಕವಿತ್ತು.ಬರೀ ಜಗಳ ಹೊಡೆದಾಟದಲ್ಲಿ ಬಂದ ಮನೆ ನಮ್ಮದು.ರಾಜಕೀಯ ಸ್ವಪ್ರತಿಷ್ಠೆಗಾಗಿ ದಿನಂಪ್ರತಿ ಜಗಳಗಳಾಗುತ್ತಿದ್ದವು.ಅಪ್ಪ ನ್ಯಾಯ ಹೇಳುತ್ತಿದ್ದರು.ಅಪ್ಪನ ಮಧ್ಯೆಸ್ಥಿಕೆಯಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ವ್ಯಾಜ್ಯಗಳು ಬಗೆಹರಿಯಲ್ಪಡುತ್ತಿದ್ದವು.ಅಪ್ಪ ಭಾಗದ ರಾಜಕೀಯ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರು.ನಮ್ಮ ತಾಲ್ಲೂಕಿನ ಸಂಪೂರ್ಣ ರಾಜಕೀಯ ಅಪ್ಪನ ನಿಯಂತ್ರಣದಲ್ಲಿತ್ತು.ಶಾಸಕರು ಅಪ್ಪನನ್ನು ಅಣ್ಣಾ ಎಂದು ಗೌರವ ಕೊಟ್ಟು ಸಂಬೋಧಿಸುತ್ತಿದ್ದರು.ಗ್ರಾಮ ಪಂಚಾಯತಿಯೂ ನಮ್ಮದೆ ನಿಯಂತ್ರಣದಲ್ಲಿತ್ತು.uncontested ಆಗಿ ಅಪ್ಪನ ಅಣತಿಯಲ್ಲಿ ಸದಸ್ಯರ ನೇಮಕಗಳಾಗುತ್ತಿದ್ದವು.ಸರ್ಕಾರದ ಯೋಜನೆಗಳು ನಮ್ಮದೆ ಅಣತಿಯಂತೆ ಸಾಮಾನ್ಯ ಜನತೆಗೆ ತಲುಪುತ್ತಿದ್ದವು.ವಿರೋಧಿ ಬಣಕ್ಕೆ ಯಾವೊಂದು ಆದಾಯವೂ ಇಲ್ಲದೆ ಅತ್ಯಂತ ಭಯಾನಕ ಸಂಕಷ್ಟದ ಸ್ಥಿತಿ ಏರ್ಪಟ್ಟಿತ್ತು.ಅವರಿಗೆ ಆರ್ಥಿಕವಾಗಿ ಯಾವುದೇ ಮೂಲ ಇಲ್ಲದಂತಾಗಿತ್ತು. ಸ್ಥಿತಿಯನ್ನು ಭರಿಸುವುದೆಂತು?”

ನಾಯಕ್ ಕೊಂಚ ಹೊತ್ತು ಮಾತು ನಿಲ್ಲಿಸಿದರು.ಕೇಳಿಸಿಕೊಳ್ಳುತ್ತಿದ್ದ ನನ್ನ ವರದಿಗಾರ ಒಳ ಒಳಗೆ ಬೆವರುತ್ತಿದ್ದ.ಮಧ್ಯಾಹ್ನದ ಹೊತ್ತು ಬೇಸಿಗೆಯಾಗಿತ್ತು.ಸಹಜವಾಗಿಯೇ ಧಗೆ ಇತ್ತಾದರೂ ಹವಾನಿಯಂತ್ರಿತ ಕೋಣೆ ನಿರ್ದಿಷ್ಟ ಡಿಗ್ರಿ ಸೆಲ್ಸಿಯಸ್ ಹವಾ ನಿಯಂತ್ರಣ ಹೊಂದಿತ್ತು. ತಂಪಿನಲ್ಲೂ ಈತ ಬೆವರುತ್ತಿದ್ದ.

ತಾಲ್ಲೂಕನ್ನು ತುಂಬಾ disturb ಮಾಡಿದ್ದ ಎರಡು ಭಯಾನಕ ಕೊಲೆಗಳ ಕೃತ್ಯಕ್ಕೆ ಸಂಬಂಧಿಸಿದ ಕಥನವಿದು.ಇದು ಪತ್ರಿಕೆಗೆ ಅನಗತ್ಯ.ಅಪರಾಧವನ್ನು ವೈಭವೀಕರಿಸುವುದು ಅಕ್ಷರದ್ರೋಹವಾದೀತು!ಆದರೆ ಸದ್ಯದ ಟ್ರೆಂಡ್ ಅಪರಾಧವನ್ನು ಅದಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಆಸ್ವಾದಿಸುತ್ತದೆ. ಹಿನ್ನೆಲೆಯಲ್ಲಿ ಟಿವಿ,ಟ್ಯಾಬ್ಲಾಯ್ಡ್ ಪತ್ರಿಕೆಗಳು ಅಪರಾಧಕ್ಕೆ ಸಂಬಂಧಿಸಿದ ಕಥನಗಳ ಬೆನ್ನು ಹತ್ತಿವೆ.ರಾತ್ರಿಯಾದರೆ ಸಾಕು,ಟಿವಿಯೊಂದು ಸುಡುಗಾಡಾಗಿ ಬದಲಾಗುತ್ತದೆ.ಮನೆಯನ್ನು ಭಯದ ವಾತಾವರಣದಿಂದ ತುಂಬಿ ಬಿಡುತ್ತದೆ.

ಮನುಷ್ಯ ಒಳ ಒಳಗೆ ಕ್ರೌರ್ಯವನ್ನು ಬಯಸುತ್ತಾನಾ?ಹಿಂಸೆಯನ್ನು enjoy ಮಾಡುತ್ತಾನಾ?ಕೆಲವು ಮನೋವೈದ್ಯಕೀಯ ಲೇಖನಗಳು ಅಂಶಗಳನ್ನು ದೃಢೀಕರಿಸುತ್ತವೆ.ಪ್ರಾಣಿ ಬಲಿಯ ಹಿಂದೆ,ಕೊಲೆಗಳ ಹಿಂದೆ,ಜಗಳಗಳ ಹಿಂದೆ ಅದೇ ಮನಸ್ಥಿತಿ ಇದೆ.ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿ:ಎಲ್ಲೋ ಜಗಳ ಸ್ಟಾರ್ಟ್ ಆಗುತ್ತಿರುವಂತೆ ಜನ ಮಾಡುತ್ತಿರುವ ಕೆಲಸ ಬಿಟ್ಟು ಗುಂಪುಗೂಡಲು ಪ್ರಯತ್ನಿಸುತ್ತಾರೆ.ಇದು ಪರಮ ಸತ್ಯ!ಪಾತಕಿಯ ಮಾತುಗಳು ಕೇಳಿಸಿಕೊಳ್ಳಿ:

ಸಹಜವಾಗಿಯೇ ಮನೆಯಲ್ಲಿ ಎಲ್ಲಾ ರೀತಿಯ ಆಯುದ್ಧಗಳಿದ್ದವು;ಜಗಳಗಳಿಂದ ಕೂಡಿದ ಮನೆಯಲ್ಲಿ ಅವುಗಳ ಅಗತ್ಯ ತುಂಬಾ ಮುಖ್ಯವಾಗಿರುವುದರಿಂದ ಅಪ್ಪ ಎಲ್ಲವನ್ನೂ ಮಾಡಿಸಿಟ್ಟಿದ್ದ.ತಳವಾರುಗಳಿದ್ದವು;ಜೆಂಬೆಗಳಿದ್ದವು;ಹರಿತವಾದ ಕೊಡಲಿಗಳಿದ್ದವು;ಬಾಕುಗಳಿದ್ದವು;ಮತ್ತು ಒಂದು ಪಿಸ್ಟಲ್ ಕೂಡಾ ಇತ್ತು!ನಾವು ಯಾರೂ ಬರಿಗೈಯಲ್ಲಿ ಎಲ್ಲೂ ಹೊರಗಡೆ ತಿರುಗುವಂತಿರಲಿಲ್ಲ.ಪುರಾತನ ದ್ವೇಷಗಳು ನಮ್ಮ ಹತ್ಯೆಗೆ ಸಿದ್ದವಾಗಿ ಕಾದು ಕುಳಿತಿದ್ದವು.ಕೊಲೆಯಾಗುವ ಸಂಭವದಲ್ಲಿಯೇ ನಾವು ಹೊರಗಡೆ ತಿರುಗುತ್ತಿದ್ದೇವು!”

ರಾಜಕೀಯ ನಮ್ಮ ತೆಕ್ಕೆಯಲ್ಲಿತ್ತು. ವ್ಯಾಜ್ಯಗಳು ಜಗಳಗಳ ಕಿರಿಕಿರಿಯಿಂದಲೇ ಅಪ್ಪ ನನಗೆ ಲಾ ಮಾಡಿಸಿದ್ದ.ಕಾನೂನಿನ ಕಿರಿಕಿರಿ ನಾವೇ ಸ್ವತಃ ಬಗೆಹರಿಸಿಕೊಳ್ಳಬೇಕು ಎನ್ನುವುದು ಅಪ್ಪನ ಆಸೆಯಾಗಿತ್ತು.”

ಅದೊಂದು ದಿನ ನನ್ನ ತಮ್ಮ ಬಂದುಅಣ್ಣಾ ಸೂಳೇಮಕ್ಕಳದು ಬಾಳ್ ಆಯ್ತಪ್ಪಾ ಕಿರಿಕಿರಿ!’ಅಂದ.ಮರಳು ತುಂಬುವ ವಿಷಯಕ್ಕೆ ಸಂಬಂಧಿಸಿದಂತೆ ನದಿ ತೀರದಲ್ಲಿ ಜಗಳವಾಗಿದೆ.ಹತ್ತಾರು ಮಂದಿ ಸೇರಿ ಅವನ ಮೇಲೆ ಹಲ್ಲೆಗೆ ಯತ್ನಿಸಿದಾರೆ.ಆದರೆ ಕಿಕಾಸಿ ಬೋಲಪ್ಪನ ಮಕ್ಕಳ ಮೇಲೆ ಕೈ ಮಾಡಲಿಕ್ಕೆ ಗುಂಡಿಗೆ ಇರಬೇಕಲ್ಲಾ?ಸುಮ್ಮನೆ ಹೆದರಿಸಲು ಪ್ರಯತ್ನಿಸಿದ್ದಾರೆ,ಅದೇ ಅವರು ಮಾಡಿದ ತಪ್ಪು. ತಪ್ಪು ಹತ್ಯೆಯೊಂದಕ್ಕೆ ಮುನ್ನುಡಿ ಬರೆಯಿತು!ಅವತ್ತು ಇಡೀ ದಿನ ಊರಿನಲ್ಲಿ ಆತಂಕದ ಪರಿಸ್ಥಿತಿ ಏರ್ಪಟ್ಟಿತು.ಮನೆಯ ಮ್ಯಾಳಗಿಯ ಮೇಲೆ ಕಲ್ಲುಗಳನ್ನು ಸಜ್ಜು ಮಾಡಿ ಯುದ್ಧ ಸಿದ್ಧತೆ ಮಾಡಿಕೊಂಡು ಬಿಟ್ಟಿದ್ದೇವು,ಇನ್ನೆಷ್ಟು ದಿನ ಸಹಿಸುವುದು?ಅಪ್ಪನೂ ಸುಮ್ಮನಾಗಿದ್ದ!ವೈರಿಗೆ ಇನ್ನೂ ಆಯುಷ್ಯ ಮುಗಿದಿರಲಿಲ್ಲವೆಂದು ಕಾಣಿಸುತ್ತದೆ;ಅವತ್ತು ಇಡೀ ಊರ ತುಂಬಾ ಪೋಲಿಸ್ ನೆಲಸಿಬಿಟ್ಟರು.ಜಗಳದ ಮಾಹಿತಿ ಹೋಗಿರಬೇಕು.ಪೊಲೀಸರು ಎರಡು ವ್ಯಾನ್ಗಳಲ್ಲಿ ಬಂದು ಊರಿನಲ್ಲಿ ಟೆಂಟ್ ಹಾಕಿದರು.ಜಗಳ ತಣ್ಣಗಾದರೂ ಈಗ ಜಗಳದ ಸ್ವರೂಪ ತೀರ ಗಂಭೀರತೆಯನ್ನು ಪಡೆದುಕೊಂಡಿತ್ತು.ಈಗ ಎರಡರಲ್ಲಿ ಒಂದಕ್ಕೆ ಬಂದು ನಿಂತಿತ್ತು.ಅವತ್ತು ನಿರ್ಧರಿಸಿದೇವು:ಸುಜಯ್ ಲಕ್ಕಿಯನ್ನು ತೆಗೆದು ಬಿಡೋಣ ಎಂದು!”

ಡಾವಣ್ಣ ಕಿಕಾಸಿ ಮಾತು ನಿಲ್ಲಿಸಿದ.ಆತನ ಕಣ್ಣುಗಳು ಕೆಂಪಡರಿದ್ದವು.ನೆನಪುಗಳು ಆತನಲ್ಲಿ ಉದ್ರಿಕ್ತತೆಯನ್ನು ಉಂಟು ಮಾಡಿದ್ದವು.ಟೇಬಲ್ ಮೇಲಿದ್ದ ನೀರಿನ ಬಾಟಲಿಯ ಮುಚ್ಚಳ ತೆಗೆದು ನೀರನ್ನು ಗಟಗಟನೆ ಕುಡಿದ.ವೈರಿಯ ರಕ್ತ ಕುಡಿಯುತ್ತೇನೆ ಎಂದು ಆತ ಮಾಡಿದ ಶಪಥ ಕನಸಾಗಿ ಉಳಿದಿತ್ತು. ನೆನಪು ಬಂದಾಗಲೆಲ್ಲ ಆತ ನಿಯಂತ್ರಣ ಕಳೆದುಕೊಳ್ಳುತ್ತಿದ್ದನಾದರೂ ಈಗ ಅರ್ಜೆಂಟಾಗಿಮಾಡಿಕೊಂಡು ತಿನ್ನುವಜರೂರತ್ತು ಇತ್ತು. ಕೊಲೆಗಳ ನಂತರ ಲೂಟಿಗಳು ಜರುಗಿ ಸಂಪತ್ತು ನಾಶವಾಗಿತ್ತು.ಕೊಲೆ ನಡೆದ ಮೇಲೆ ಸುದೀರ್ಘ ಒಂದುವರೆ ವರ್ಷ abscond ಆಗಬೇಕಾಗಿ ಬಂತಲ್ಲ?ಜೀವನಗಳು ಹೈರಾಣಾಗಿ ಹೋಗಿದ್ದವು.ಆರ್ಥಿಕ ಜರ್ಜರಿತತೆ,ರಾಜಕೀಯ ಅಸ್ತಿತ್ವತೆ ಮತ್ತು ಅವರ ಕೃಷಿ ಚಟುವಟಿಗಳು ಸ್ತಗಿತವಾಗಿದ್ದವು.ಒಟ್ಟಾರೆ ನಾಶವಾಗಿ ಹೋಗಿದ್ದರು.ದೂರಾ ಇವರ ಮಧ್ಯೆ ಬಂದು ರಾಜಿ ಮಾಡಿಸದಿದ್ದರೆ ಬದುಕುಗಳು ಇನ್ನೂ ದಾರುಣ ನಷ್ಟ ಅನುಭವಿಸುತ್ತಿದ್ದವು.ಸ್ಥಳೀಯ ಶಾಸಕರು ಬೋಲಪ್ಪ ಕಿಕಾಸಿಯ ಮೇಲಿನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲೆಂಬಂತೆ ಜಗಳ ನಿಲ್ಲಿಸಿದರು.

ಡಾವಣ್ಣ ಕಿಕಾಸಿ ಮಾತಾಡತೊಡಗಿದ...(ಮುಂದುವರೆಯುವುದು)

                                                                                                           ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...