ಶನಿವಾರ, ಮಾರ್ಚ್ 14, 2020

ಜೀವನ ಕಾಳಗ


ಜೀವನ ಕಾಳಗ

ಏಯ್ ಇವನೌವ್ನ ಅನ್ನುವಷ್ಟರಲ್ಲಿ ಆತ ಮೈಮೇಲೆ ಬಿದ್ದು ಬಿಟ್ಟಿದ್ದ.ಜಂಗೀ ಕುಸ್ತಿ ಆರಂಭವಾಗಿತ್ತು.ಅದು ರಾತ್ರಿಯ ಹೊತ್ತು ಮತ್ತು ಪೂರ್ವ ನಿಯೋಜಿತ ದಾಳಿಯ ಸಂಚಾಗಿದ್ದರಿಂದ ಆತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದ.ಆತನು ಹತ್ಯೆಗೆ ಪ್ರಬಲವಾದ ಸಂಚು ರೂಪಿಸಿದ್ದ.ದಢೂತಿ ದೇಹದ ಸಕ್ಕರೆ ಖಾಯಿಲೆ ಇರುವ ಮತ್ತು ಜೀವನ ಪೂರ್ತಿ ಹಗಲು ರಾತ್ರಿ ಎನ್ನದೆ ದುಡಿದು ಕೂಳಿಲ್ಲದೆ,ಪತ್ನಿ ವಿಯೋಗದಿಂದ ನರಳಿ ಬೆಂಡಾದ ಬೊಜ್ಜು ದೇಹದ ಆತನನ್ನು ಕೊಲ್ಲುವುದು ಅತ್ಯಂತ ಸುಲಭವಿತ್ತು.ಒಂದು ಕಟ್ಟಿಗೆಯಿಂದ ಬಲವಾಗಿ ತಲೆಯ ಭಾಗಕ್ಕೆ ಹೊಡೆದರೆ ಕ್ಷಣಾರ್ಧದಲ್ಲಿ ನೆಲಕ್ಕೆ ಬಿದ್ದು ವಿಲವಿಲ ಒದ್ದಾಡಿ ಸಾಯಬಹುದಾದ ಆತನನ್ನು ಕೊಲ್ಲಲಿಕ್ಕೆ ಕೊಡ್ಲಿ,ನೆಲಕ್ಕೆ ಬಿದ್ದಾಗ ತಲೆ ಜಜ್ಜಲಿಕ್ಕೆ ಕಲ್ಲು,ಇವೆಲ್ಲವುಗಳಿಗಾಗಿ ನಿರ್ದಯತೆ ಸೃಷ್ಟಿ ಮಾಡಿಕೊಳ್ಳಲಿಕ್ಕೆ ಗಾಂಜಾ ಸರಾಯಿ ಎಲ್ಲವನ್ನು ಸಿದ್ಧ ಮಾಡಿಕೊಂಡು ಆತ ಹಲ್ಲು ಮಸೆದು ಕುಳಿತಿದ್ದ.ಅವನ ಭೌತಿಕ ಅಸ್ತಿತ್ವ ನಾಶ ಮಾಡದಿದ್ದರೆ ತನ್ನ ನೆಶೆಕ್ಕೇನು ಅರ್ಥವೆಂದು ತನ್ನೊಳಗೆ ತಾನು ನಿರ್ಧರಿಸಿ ಕಾದು ಕುಳಿತಿದ್ದ ಈತ ಆತ ಮನೆಗೆ ಬಂದ ತಕ್ಷಣ ನೋಡು ನೋಡುತ್ತಿರುವಂತೆ ಆಕ್ರಮಣ ಮಾಡಿದ.

-ತಲಾತಲಾಂತರಗಳ ರಕ್ತ ಸಂಬಂಧದ ಸಂಕೋಲೆ ನಾಚಿಕೊಳ್ಳುವಂತೆ,ಮಾಡಿಸಿಕೊಂಡ ಉಪಕಾರಗಳು ವಿಷವಾಗಿ ಬದಲಾದಂತೆ,ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತನ್ನು ಸಾಕ್ಷಾತ್ಕರಿಸಿಕೊಳ್ಳಲು ಆತ-ಎಲ್ಲಾ ಸಂಬಂಧಗಳ ಆಚೆ ದಾಳಿ ಮಾಡಿಯೇ ಬಿಟ್ಟ.

ಸದ್ಯ ಪ್ರಾಣ ಹೋಗಲಿಲ್ಲ.ಮದ್ಯ ಪ್ರವೇಶಿಸಿದ ಕೆಲವು ಸಹೃದಯರು ರಾಕ್ಷಸ ದಾಳಿಯನ್ನು ತಡೆದರು.ಮನೆಯ ಹೆಣ್ಣುಮಕ್ಕಳು ದಾಳಿಯನ್ನು ತಡೆದರು.ಕೆಲವು ಕ್ರೂರ ಮನಸ್ಸಿನ ಜನ ಪ್ರಾಣ ಹತ್ಯೆಯ ನೇರ ಘಟನೆಯನ್ನು ನೋಡಲು, ಮೂಲಕ ವಿಕೃತ ಆನಂದವನ್ನು ಹೊಂದಲು ಸುತ್ತಲೂ ಕಾದು ನಿಂತಿದ್ದರು.ಪ್ರೋತ್ಸಾಹ, ಪ್ರಚೋದನೆ,ದ್ವೇಷ,ವಿಷ ಮತ್ತು ಸೇಡಿನ ನಂತರ ದಾಳಿ ಪ್ರಾಣ ಹತ್ಯೆ ಜರುಗದೆ ನಿಂತಿತು.ದಾಳಿ ನಿಂತರೂ ಪಾನ ಮತ್ತ ಮಾನಸಿಕ ಸ್ಥಿಮಿತತೆ ಕಳೆದುಕೊಂಡ ವ್ಯಕ್ತಿ ವಿಕೃತವಾಗಿ ಅರಚುತ್ತಾ ಅಸಭ್ಯ ಪದಗಳನ್ನು ಬಳಸುತ್ತಾ ಅರಚತೊಡಗಿತ್ತು;ಹುಚ್ಚು ನಾಯಿಯಂತೆ,ಕೇಡು ಸಮೀಪಿಸಿದ ಧುರುಳನಂತೆ,ಮಾನಸೀಕ ರೋಗಿಯಂತೆ,ಹಾದರದ ಸಂತಾನದಂತೆ!

ಈತ ನಿಶ್ಯಕ್ತಗೊಂಡ.ಖುರ್ಚಿಯ ಮೇಲೆ ಕುಸಿದು ಕುಳಿತ.ಕೈ ಕಾಲುಗಳು ನಿಶ್ಯಕ್ತಗೊಂಡಿದ್ದವು.ಮೈಂಡ್ ಬ್ಲಾಂಕ್ ಆಗಿತ್ತು.ಜೀವನ ಕತ್ತಲು,ಕತ್ತಲು ಅನ್ನಿಸತೊಡಗಿತ್ತು.ಜೀವನ ಅರ್ಥವಿಲ್ಲದ್ದು ಅನ್ನಿಸತೊಡಗಿತ್ತು.ಮತ್ತೆ ಮತ್ತೆ ತನ್ನ ಜೀವನಕ್ಕೆ ಕಾಡತೊಡಗಿದ ಏಕಾಂತತೆ ಮತ್ತೂ ದುತ್ತೆಂದು ಆವರಿಸಿಕೊಂಡಿತು.

ಇವೆಲ್ಲವಕ್ಕೂ ಸಾಕ್ಷಿ ಎಂಬಂತೆ ಎರಡು ಪ್ರಾಣಿಗಳ ಮಧ್ಯೆದ ಕಾದಾಡುವಿಕೆಗೆ ಪ್ರತ್ಯಕ್ಷದರ್ಶಿಯಾಗಿ ಘಟನೆಗೆ ಮೂಲ ಕಾರಣಕರ್ತ ಇವುಗಳ ತಂದೆ ಸುಮ್ಮನೆ ನೋಡುತ್ತಲಿತ್ತು.ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಬುದ್ದಿಮಾಂದ್ಯತೆಗೆ ಒಳಗಾದ ಅದು ಕೇವಲ ಒಂದು ಪ್ರಾಣಿಯಂತೆ ನೋಡುತ್ತಿತ್ತು!

ಖಾಲಿತನದ ಭವದಲ್ಲಿ ಖುರ್ಚಿಯ ಮೇಲೆ ಕುಸಿದು ಕುಳಿತ ವ್ಯಕ್ತಿ ತನಗೆ ತಾನೇ ಪ್ರಶ್ನೆ ಹಾಕಿಕೊಂಡಿತು;ಏನಾಗಿ ಹೋಯಿತು ಬದುಕು?ಯಾವ ಅಪರಾಧಕ್ಕೆ ಶಿಕ್ಷೆ?ಯಾವ ತಪ್ಪಿಗೆ ಬದುಕು ಇಷ್ಟೊಂದು ನರಕಮಯವಾಗಿದೆ?

ಇಲ್ಲೆಪ್ಪಾ,ಲಕ್ಷ ಪುಸ್ತಕ ಓದಿದರೇನು,ಜಗತ್ತನ್ನು ಸುತ್ತಿದರೇನು?ಜೀವನ,ಬದುಕು ರೂಪಿಸಿಕೊಳ್ಳದಿದ್ದರೆ ಹೇಗೆ?ಯಾವ ಪುಸ್ತಕ ಓದಿ ಏನು ಲಾಭ?ಓದುವುದು ಮುಖ್ಯವಲ್ಲ,ಬದುಕುವುದು,ಸುಂದರವಾಗಿ ಬದುಕುವುದು,ನೆಮ್ಮದಿಯಾಗಿ ಬದುಕುವುದು ಮುಖ್ಯವೆಂದು!”ಅಂದು ಬೆಳಿಗ್ಗೆ ಸತ್ಯಂಪೇಟ್ ಮಚ್ಚಿನಿಂದ(ಚಪ್ಪಲಿ) ಹೊಡೆದಂತೆ ಹೇಳಿದ್ದರು!ಹೌದು,ಓದು ಪಾಂಡಿತ್ಯ ಜೀವನವನ್ನು ಕಲಿಸದಿದ್ದರೆ ಅದರಿಂದೇನು ಪ್ರಯೋಜನೆ?ಸಮಯ ವ್ಯರ್ಥದ ಹೊರತು?ಈತ ದಿನವಿಡೀ ಚಿಂತೆಯಲ್ಲಿದ್ದ.ಸುದೀರ್ಘ ಮೂವತ್ತೊಂಬತ್ತು ವರ್ಷಗಳ ಜೀವನವನ್ನು ಆರ್ಥಿಕ ಭದ್ರತೆ ಆರೋಗ್ಯ ಭದ್ರತೆ ಉತ್ತಮ ಬಾಂಧವ್ಯ,ಒಳ್ಳೆಯ ಸ್ನೇಹ ಸಂಬಂಧಗಳಿಂದ ರೂಪಿಸಿಕೊಳ್ಳದೆ ಹೋದದ್ದು ಎಷ್ಟೊಂದು ಮೂರ್ಖತನ ಅಂತನ್ನಿಸುತ್ತದಲ್ಲವೇ ಎಂದು ಈತ ದಿನವಿಡೀ ಚಿಂತಿಸಿದ್ದ.ಓದುತ್ತಾ ಓದುತ್ತಾ ಜೀವನದ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡು ಬಿಟ್ಟೆನಲ್ಲಾ ಎಂದು ವ್ಯಾಕುಲಗೊಂಡಿದ್ದ.

ಜ್ಞಾನ ಏಕಾಂಗಿತನವನ್ನು ಸೃಷ್ಟಿ ಮಾಡಿಕೊಟ್ಟಿತ್ತು.ಮೌನ ಅಹಂಕಾರದ ಸಂದೇಶ ನೀಡಿತ್ತು.ಬಡತನ ಜನರಲ್ಲಿ ಬೆರೆಸದೆ ನಿಷ್ಠೂರಿಯನ್ನಾಗಿ ಮಾಡಿತ್ತು.ವಿಶ್ವಾಸಘಾತುಕ,ನಂಬಿಕೆ ದ್ರೋಹಗಳು ಈತನ ಮನಸ್ಸನ್ನು ಕಲ್ಲು ಮಾಡಿದ್ದವು.ಹೆತ್ತ ತಂದೆ ತಾಯಿಗಳೆ ಈತನನ್ನು ನೀಚನೆಂದು ಜರಿಯುತ್ತಿದ್ದರು.ಈತನ ನೇರ ಮಾತುಗಳು ಶತೃಗಳನ್ನು ಸೃಷ್ಟಿ ಮಾಡಿಕೊಟ್ಟಿದ್ದವು.ಈತ ಪ್ರಗತಿಪರ ಸಂಘಟನೆಗಳೊಂದಿಗೆ ಸ್ನೇಹ ಬೆಳಸಿ ದುಷ್ಟರ ಕೆಂಗಣ್ಣಿಗೆ ಗುರಿಯಾಗಿದ್ದ.ಸರ್ಕಾರದ ವಿರುದ್ಧ ಆಡಳಿತದ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಬರೆಯುತ್ತಾ ಹಲವು ರಾಜಕಾರಣಿಗಳ ಕೋಪಕ್ಕೆ ಗುರಿಯಾಗಿದ್ದ.ಮೌಢ್ಯವನ್ನು ದೇವರ ಹುಸಿ ನಂಬಿಕೆಗಳ ಅಂಧಕಾರವನ್ನು ಜನಗಳ ಮೆದುಳಿನಲ್ಲಿ ತುಂಬುತ್ತಾ ಶತಶತಮಾನದ ಕತ್ತಲಿಗೆ ಕಾರಣವಾದ ಶಕ್ತಿಗಳ ವಿರುದ್ಧ ಉಗ್ರ ಕೋಪ ಹೊರಹಾಕುತ್ತಿದ್ದ.ಮಾನವ ಹಕ್ಕುಗಳನ್ನು ಕಸಿದು ತಿನ್ನುವ ಖೂಳ ರಾಕ್ಷಸರ ವಿರುದ್ಧ ಹೋರಾಟ ರೂಪಿಸಿದ್ದ.ಬಡವರ ಹಕ್ಕುಗಳು ಬಡವರಿಗೆ ತಲುಪಬೇಕು ಎನ್ನುವ ಹಂಬಲ ಉಳ್ಳವನಾಗಿದ್ದ.ಸರ್ಕಾರಿ ಅಧಿಕಾರಿಗಳು ರಾಜಕಾರಣಿಗಳೊಂದಿಗೆ ಕೈಜೋಡಿಸಿ ಜನರಿಗೆ ವಂಚಿಸುತ್ತಿರುವುದನ್ನು ಆತ ಬರೆಯುತ್ತಾ ಬಯಲು ಮಾಡುತ್ತಿದ್ದ.ಎಲ್ಲಾ ಮೂಲಗಳಿಂದ ಆತ ವೈರಿಗಳನ್ನು ಸೃಷ್ಟಿಸಿಕೊಂಡಿದ್ದ.ನೈತಿಕತೆಯ ಹೆಸರಿನಲ್ಲಿ ನಡೆಸುವ ಅನೈತಿಕ ಚಟುವಟಿಕೆಗಳು ಈತನ ಪೆನ್ನಿನಲ್ಲಿ ಕಥೆಗಳಾಗುತ್ತಿದ್ದವು.ಈತ ಇನ್ನೇನು ಬದುಕಲಿಕ್ಕೆ ಆಗದಂತಹ ಒಂದು ಇಬ್ಬಂದಿಯನ್ನು ಸೃಷ್ಟಿ ಮಾಡಿಕೊಂಡಿದ್ದ.ಮಾರ್ಕ್ಸ್ನಂತೆ,ಚೆ ಗುವಾರನಂತೆ,ಸಾಕ್ರಟೀಸನಂತೆ...

ಅಂದಹಾಗೆ ಈತನನ್ನು ಕೊಲ್ಲುವ ಯತ್ನ ಮಾಡಿ ಆಕ್ರಮಣ ಮಾಡಿದ ವ್ಯಕ್ತಿ ಬೇರಾರು ಅಲ್ಲ,ಆತ ಈತನ ತಮ್ಮ!ಈತನಿಂದ ಜೀವನ ಪಡೆದವನು;ಈತನ ಹೇಲು ತಿಂದವನು!ಈತನ ಹೇಲಿನಲ್ಲಿ ಬದುಕುತ್ತಿರುವವನು! ಹತ್ಯೆ ಪ್ರಯತ್ನ ಏಕೆ ನಡೆಸಿದ?
****
ಇರಲಿ ಬಾ ಉಣ್ಣು!”ಎಂದಳು ಹೇಣ್ತಿ.

ಕೂಳು ಎಲ್ಲಿಂದ ಹೋಗುತ್ತದೆ?ಉಳಿಸಿಕೊಂಡಿದ್ದರೆ ದುಡ್ಡಾದರೂ ಉಳಿಯುತ್ತಿತ್ತು.ಮನೆ ಪಾಲು ಮಾಡು ಹೊಲ ಪಾಲು ಮಾಡು ಎಂದು ನಡೆಸಿದ ಸಂಚಿನಿಂದ ಪ್ರಾಣ ಹೋಗುವುದು ತಪ್ಪುತ್ತಿತ್ತು.ಹಗಲು ರಾತ್ರಿ ಮೋಟರ್ ರೀವೈಂಡಿಂಗ್ ವೃತ್ತಿ ನಿರ್ವಹಿಸಿ ಲಕ್ಷಗಳ ರೂಪಾಯಿ ಸಂಪಾದಿಸಿ ಏನೊಂದು ಉಪಯೋಗವಿಲ್ಲದ ಮನೆಗೆ ಸುರಿದಿದ್ದು ಕೇವಲ ಅಪ್ಪನೆಂಬ ಸೂಳೇಮಗನ ಮಾತು ಕೇಳಿ!ಅದೊಂದು ದಿನ:“ಸಿಮೆಂಟು ತರಿಸಬೇಕುಎಂದ ಅಪ್ಪ.“ಎಲ್ಲ್ಯಾವ ರೊಕ್ಕ?”ಎಂದ ಇವನು.“ರೊಕ್ಕ ಇದ್ರ ಸಂಸಾರ ಮಾಡವನೇನು ನೀನು?”ಎಂದ ಅಪ್ಪ.ಭೋಳಿಮಗ ಇವನಿಗೆ ಸಂಸಾರ ಎಲ್ಲಿದೆ ಎಂದು ಭಾವಿಸಿದನೋ?ವಿನಾಕಾರಣ ಕಷ್ಟಾರ್ಜಿತ ಒಂಬತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿಸಿಬಿಟ್ಟ.ಇವತ್ತು ಹತ್ಯಾ ಪ್ರಯತ್ನ ಮಾಡಿದ ತಮ್ಮನೆಂಬ ಹೀನ ಪ್ರಾಣಿ ಲಕ್ಷಾಂತರ ರೂಪಾಯಿಯನ್ನು ಕನಸಿನಲ್ಲಿಯಾದರೂ ನೋಡೀತಾ?ಒಂದಿಷ್ಟು ಕೃಷಿಯಿಂದ ಹಣ ಬಂದಿದ್ದು ನಿಜ;ಬೀಳಾನು ಬೀಳು ಭೂಮಿಯನ್ನು ಅರವೆತ್ತೆಪ್ಪತ್ತು ಸಾವಿರ ಖರ್ಚು ಮಾಡಿಸಿ ಜಾಲಿ ಕಡಿಸಿ ಕೊರಡು ಕಿತ್ತಿಸಿ ಸಾಗುವಳಿ ಭೂಮಿ ಮಾಡಿಸಿ,ಹತ್ತಿ ಸಸಿ ನಾಟಿಸಿ,ಅದಕ್ಕೆ ಕೂಲಿ,ಗೊಬ್ಬರ,ಕೀಟನಾಶಕ ಖರ್ಚುಗಳನ್ನು ಮಾಡಿ ಅಲ್ಪ ಲಾಭ ಪಡೆದಿದ್ದು ಕೇವಲ ಈತನದೇ ಕಷ್ಟಾರ್ಜಿತ ದುಡ್ಡಿನಿಂದ.ತಿನ್ನುವು ಒಂದು ರೂಪಾಯಿ ತಂಬಾಕು ಚೀಟಿಗೂ ಹಣ ಗತಿ ಇರದ ಸೂಳೇಮಗ ಬಂದು ಮನೆ ನಾನು ಕಟ್ಟಿಸಿದೆ,ಹತ್ತಿ ನಾನು ಬೆಳೆದೆ ಎನ್ನುವ ಪಾಪದ ಮಾತುಗಳನ್ನಾಡುತ್ತಾ ಹತ್ಯೆಗೆ ಪ್ರಯತ್ನಿಸುತ್ತಿದ್ದಾನೆಂದರೆ ಇವನು ಮನುಷ್ಯನಾ?

ಕೂಳು ತಿನ್ನಬೇಕನ್ನಿಸಿಲಿಲ್ಲ.ಮಲಗಿದಾಗ ತಲೆಯ ಮೇಲೆ ಕಲ್ಲು ಎತ್ತಾಕಿ ಕೊಲ್ಲಬಹುದೆನ್ನುವ ಆತಂಕದಿಂದ ಅದಾವ ಜಾವದಲ್ಲೋ ನಿದ್ರೆ ಹತ್ತಿತ್ತು.ಬೆಳಕು ಮೂಡಿದಾಗ ಸ್ವಲ್ಪ ದುಗುಡ ಕಡಿಮೆಯಾಗಿತ್ತು.
**
ಸ್ನಾನ ಮಾಡಿ ಪ್ಯಾಂಟು ಧರಿಸುವಾಗ ಹಿಂದಿನ ಜೇಬಿನಲ್ಲಿರಬಹುದಾದ ಪಾಕೆಟ್ ಬಗಲು ಜೇಬಿನಲ್ಲಿರುವುದು ಗಮನಕ್ಕೆ ಬಂದಿತು.ಅಲಾ ಇದೇನು ಎಂದು ಈತ ಹೆಂಡತಿಯನ್ನು ಕೇಳಿದ;ಆಕೆ ಯಾರ್ ನೋಡಾರ್ ಅದನ್ನು ಎನ್ನುವು ಉತ್ತರ ಕೊಟ್ಟಳು.ಕೊಂಚ ಹೊರ ಹೋಗುವುದು ಅವಸರ ಇರುವುದರಿಂದ ತಲೆ ಕೆಡಸಿಕೊಳ್ಳದೆ ಹೊರ ಬಂದ.

ತನ್ನ ವ್ಯಾಪರಕ್ಕೆ ಸಂಬಂಧಿಸಿದಂತೆ ಸರಕು ಖರೀದಿ ಮಾಡುವ ಅಂಗಡಿಗೆ ಬಂದು ವಯರ್ ಮತ್ತು ಕೆಲ ಸಾಮಗ್ರಿಗಳನ್ನು ಖರೀದಿ ಮಾಡಿಯಾದ ನಂತರ ಬಿಲ್ ಮಾಡಿಸಿದ.ಅಂಗಡಿಯವನು ಬಿಲ್ ಮಾಡಿ ಬಿಲ್ ಕೈಗೆ ಕೊಟ್ಟಾಗ ಮೊತ್ತ ಒಂಬತ್ತು ಸಾವಿರವಾಗಿತ್ತು.ಜೀವನದ ಎಲ್ಲಾ ಕಹಿ ಘಟನೆಗಳೊಂದಿಗೆ ಸಮಸ್ಯೆಗಳು ಪ್ರಾಣದ ಒರಗೆ ಬಂದಿರುವುದನ್ನು ಚಿಂತಿಸುತ್ತಾ ಹಿಂದಿನ ಜೇಬಿನಿಂದ ಪಾಕೆಟ್ ತೆಗೆದು ಅದನ್ನು ತೆರೆದ,ಅದರಲ್ಲೇನಿತ್ತು ಖಾಲಿ!ಎದೆ ಧಸಕ್ಕೆಂದಿತು. ಸಲ ತಲೆ ಗಿರಗಿರ ತಿರುಗಿದಂತಾಯಿತು.ನಿಜವಾಗಿಯೂ ಕೊಲೆಯಾದ ಅನುಭೂತಿ ಉಂಟಾಯಿತು.

ವಾರದ ತನ್ನ ವಹಿವಾಟನ್ನು ಆತ ಮನಸ್ಸಿನಲ್ಲಿಯೇ ಲೆಖ ಹಾಕತೊಡಗಿದ.ಮಾಲಗತ್ತಿ ಗೌಡನ ಎರಡು ಮೋಟರ್ ವೈಂಡಿಗ್=ನಾಲ್ಕು ಸಾವಿರ ರೂಪಾಯಿ,ಹೇಮನೂರು ಬಸವಾರಜುವಿನ ಮೋಟರ್ ವೈಂಡಿಂಗ್ ಐದು ಸಾವಿರ ರೂಪಾಯಿ,ಶಾಖಾಪೂರು ಸಬ್ ಮಾರ್ಸಿಬಲ್ ಮೋಟರ್ ಇನ್ಸಟಾಲೇಷನ್ ಎರಡು ಸಾವಿರ ರೂಪಾಯಿ,ಒಬ್ಬ ಇಂಜಿನಿಯರ್ ನೀಡಿದ ಹಳೆಯ ಬಾಕಿ ಎರಡುವರೆ ಸಾವಿರ,ಪತ್ರಿಕೆಯ ಚಂದಾದಾರಿಕೆಯ ಕಲೆಕ್ಷನ್ ಅಮೌಂಟು ಎರಡು ಸಾವಿರ.....

ಹದಿನೈದು ಸಾವಿರದ ಐದು ನೂರು ರೂಪಾಯಿ!ಐದು ಸಾವಿರದ ಐದು ನೂರು ನನ್ನ ಮನೆ ಸಂಸಾರ ಮತ್ತು ಇತರೆ ಖರ್ಚುಗಳಿಗೆ ತೆಗೆದು ಹಾಕಿದರೆ ಜೇಬಿನಲ್ಲಿ ನಿವ್ವಳ ಹತ್ತು ಸಾವಿರ ರೂಪಾಯಿ ಇರಬೇಕು!ಈತನದೇ ಜೇಬು,ಈತನದೇ ಸಂಸಾರ.ಚಿಕ್ಕ ಸಂಸಾರ,ಒಬ್ಬ ಹೆಂಡತಿ,ಮಗಳು,ಮಗ.ಮಗ ಈತನ ತಾಯಿ (ಅಜ್ಜಿ) ಹತ್ತಿರವಿರುತ್ತಾನೆ.ಅವನು ಕೇಳದೆ ಏನನ್ನೂ ಮುಟ್ಟುವುದಿಲ್ಲ.ಹತ್ತು ವರ್ಷ ವಯಸ್ಸಿನ ಅವನು ಹನ್ನೆರಡು ವರ್ಷ ವಯಸ್ಸಿನ ಮಗಳು ಅಷ್ಟೊಂದು ದುಡ್ಡು ತೆಗೆದುಕೊಂಡು ಏನು ಮಾಡುತ್ತಾರೆ?ತನ್ನ ದೇಹದ ಒಂದು ಭಾಗವಾಗಿರುವ ಪಾಕೇಟನ್ನು ಆತ ಯಾವತ್ತೂ ತೆಗೆದು ನೋಡುವುದಿಲ್ಲ.ದುಡ್ಡು ಎಲ್ಲಿಗೆ ಹೋಗುತ್ತವೆ ತಾನು ಖರ್ಚು ಮಾಡದ ಹೊರತು ಎನ್ನುವ ನಂಬಿಕೆ ಆತನದು.ಈಗ ಜೇಬಿನಲ್ಲಿರುವ ಹಣ ಕೇವಲ ಸಾವಿರ ರೂಪಾಯಿ!ಎಲ್ಲಿ ಹೋಯಿತು ಒಂಬತ್ತು ಸಾವಿರ ರೂಪಾಯಿ?ಇದ್ದ ಮೂವರಲ್ಲಿ ಕದ್ದವರು ಯಾರು?ಹುಚ್ಚು ಹಿಡಿಯಿತು ಈತನಿಗೆ!ಏನು ಯೋಚಿಸಿದರೂ ಹಣ ಪತ್ತೆಯಾಗಲಿಲ್ಲ.
***
ಶನಿವಾರ ಇವತ್ತು,ಸಂತಿ ಏನಾದರೂ ಬೇಕಾಗುತ್ತದಾ ನೋಡುಎಂದ ಹೇಣ್ತಿಗೆ.ಹೇಣ್ತಿ:“ಶೇಂಗಾ,ಸಾಸುವೆ ಜೀರಗಿ,ಅರಿಸಿಣ, ಚಹಾಪುಡಿ ಸಕ್ಕರೆ ಇಷ್ಟು ಸಾಕು!”ಎಂದಳು.“ಹಾಂ,ಒಂದಿಷ್ಟು ಕಾಯಿಪಲ್ಯ ಮತ್ತಿ ಇರುಳ್ಳಿ ತನ್ನಿಎಂದು ಜ್ಞಾಪಿಸಿದಳು.

ಆತ ದೇವದುರ್ಗಕ್ಕೆ ನಡೆದ.ದೇವದುರ್ಗದಲ್ಲಿನ ತನ್ನ ವ್ಯವಹಾರಗಳನ್ನು ಮುಗಿಸಿದ.ಸ್ನೇಹಿತರೊಂದಿಗೆ ತುಸು ಹೊತ್ತು ತನಗೊದಗಿರುವ ದುಸ್ಥಿತಿ,ಕೊಲೆ ಯತ್ನ,ಮನೆಗೆ ಒಂದೇ ಇರುವ ಬಾಗಿಲನ್ನು ಎರಡು ಮಾಡಿ ಹಂತಕನಿಗೂ ತನಗೂ ಸಂಪರ್ಕವಿಲ್ಲದಂತೆ ಮಾಡಿಕೊಡಿ ಎಂದು ವಿನಂತಿಸಿದ.ನಶಿಸಿ ಹೋಗುತ್ತಿರುವ ಮಾನವ ಸಂಬಂಧಗಳು,ಮನುಷ್ಯ ಪ್ರಾಣಿಯಂತೆ ವರ್ತಿಸುತ್ತಿರುವುದು,ನೈತಿಕ ಮೌಲ್ಯಗಳು ಇಲ್ಲವಾಗುತ್ತಿರುವುದು,ಹಿರಿಯರು ಕಿರಿಯರು ಎನ್ನುವ ಭಾವಗಳು ಇಲ್ಲವಾಗುತ್ತಿರುವುದರ ಬಗ್ಗೆ ಚರ್ಚಿಸಿದರು.ಅವರು ಕುಡಿದರು.ಅವರ ಕುಡಿತಕ್ಕೆ ಸಾಕ್ಷಿಯಾದ.ಅವರು ಬಾಯಿಯ ಮುಖಂತರ ಸೇದಿದರು;ಈತ ಉಸಿರನ ಮುಖಾಂತರ ಸೇದಿ ಸೆಕೆಂಡರಿಧೂಮಪಾನಿಯಾದ.“ನಾ ಹೋತೀನೋ ಮಾರಾಯಎಂದವನಿಗೆ ಅವರು ಒಂಬತ್ತು ಗಂಟೆಗೆ ಬೀಳ್ಕೊಟ್ಟರು.

ಕೊಂಚ ತರಕಾರಿ ಕೊಂಡ.ಕಿರಾಣಿ ಅಂಗಡಿಗೆ ಬಂದು ಹೆಂಡತಿ ಹೇಳಿದ ಸಾಮಾನು ಕೊಂಡ.ಸಾಮಾನು ಕೊಳ್ಳುವ ಮುನ್ನ ಇನ್ನೊಮ್ಮೆ ಫೋನ್ ಹಚ್ಚಿ ಖಾತ್ರಿ ಮಾಡಿಕೊಂಡ.ಏನ್ ತಗೋಬೇಕೋ ಅವನ್ನೆಲ್ಲಾ ತಗೊಂಡ.ಹೊಟ್ಟೆ ಚುರುಗುಟ್ಟುತ್ತಿತ್ತು.ರಾತ್ರಿ ಒಂತ್ತುವರೆ ಸಮಯ.ಕುಡುಕ ಗೆಳೆಯರೊಂದಿಗೆ ತಾನು ಸಮಯ ವಿನಿಯೋಗ ಮಾಡಬಾರದಿತ್ತು ಎಂದುಕೊಂಡ.ಮನೆ ತಲುಪಿದ.

ಹೆಂಡತಿ ಮಲಗಿದ್ದಳು.ಆಕೆಯ ತಲೆಯ ಪಕ್ಕ ಸುಲಿದ ಬಳ್ಳುಳ್ಳಿಯ ಎಸಳುಗಳಿದ್ದವು.ಗ್ಯಾಸ್ ಸ್ಟೌವ್ ಮೇಲೆ ಕರಕೆದ್ದ ಕುದಿಯಲಿಕ್ಕೆ ಇಟ್ಟ ಪುಡಿ ಖಾರ ಮಿಶಿಲ್ರಿತ ಪಾತ್ರೆ ಇತ್ತು.ಆಕೆ ನಿದ್ದೆ ಹೋಗಿದ್ದಳು.ಕಾಲಿನಿಂದ ತಿವಿದು ಎಬ್ಬಿಸಿದ.ಆಕೆ ಎದ್ದು ಮೌನವಾಗಿ ಕುಳಿತಿರುವಂತೆ ಈತ ಪ್ಯಾಂಟು ಬಿಚ್ಚಿ ಕೈ ತೊಳೆದು ಊಟಕ್ಕೆ ಸಿದ್ದನಾಗಿ ಕುಳಿತ.

ಜಗತ್ತಿನ್ಯಾಗ ಹೇಣ್ತೀ ಕೈಯಾಗ ಒಂದು ರೂಪಾಯಿ ಕೊಡದ ಗಂಡನ್ನ ನಾನು ಎಲ್ಲಿ ನೋಡಿಲ್ಲ.ಎಣ್ಣಿ ಇಲ್ಲದೆ ಅಡುಗೆ ಎಲ್ಲಿಂದ ಮಾಡಲಿ?ನಿನಗ ಸಂಸಾರ ಹೆಂಡತಿ ಮಕ್ಕಳು ಯಾಕ್ ಬೇಕು?ಬರ್ತಾನ ಬರ್ತಾನ ಎಂದು ದಾರಿ ಕಾಯ್ದು ಸಾಕು ಸಾಕಾಯಿತು.ಕೈಯಾಗ ರೊಕ್ಕ ಇದ್ರ ಎಣ್ಣಿ ತರಿಸಿ ಸಾರು ಮಾಡುತ್ತಿದ್ದೆ.ಈಗೇನು ಮಾಡಬೇಕು,ಎಣ್ಣಿ ತಂದಿಲ್ಲ!?”ಎಂದಳು.ಸಾಮಾನು ಏನು ಬೇಕು ಎಂದು ಹಲವು ಸಲ ಹೇಳಿದಾಗ ಆಕೆ ಎಣ್ಣಿಯನ್ನು ಹೇಳಿರಲೇ ಇಲ್ಲ.ತನ್ನ ತಪ್ಪು ಮುಚ್ಚಿಕೊಳ್ಳಲು ಆಕೆ ಲಕ್ಷ ಅಸಭ್ಯ ಮಾತುಗಳನ್ನು ಆಡತೊಡಗಿದಳು. ಮತುಗಳನ್ನು ಮನಸ್ಸಿಗೆ ತೆಗೆದು ಕೊಂಡರೆ ಆಕೆ ಹತಳಾಗುತ್ತಿದ್ದಳು.

ನಿನ್ನೆ ಪ್ರಾಣಿಯೊಂದಿಗೆ ನಡೆದ ಕಾಳಗದಲ್ಲಿ ಆಕೆ ಜಗಳ ಬಿಡಿಸಲಿಕ್ಕೆಂದು ಬಂದು ನರ ತೊಡಕಿಸಿಕೊಂಡಿದ್ದಳು.ಅದಕ್ಕೆ ಚಿಕಿತ್ಸೆಗೆಂದು ಸಾವಿರ ರೂಪಾಯಿ ವೆಚ್ಚವಾಗಿತ್ತು.ಸಿಟಿಗೆ ಬಂದಿದ್ದ ಯಮ್ಮ ಸಂತಿ ಮಾಡಬಹುದಿತ್ತು.

ಈತ ಏನೂ ಮಾಡಲಿಲ್ಲ.ಹೇಲಿನೊಳಗಿನ ಹುಳುವಿನ ಉದ್ರೇಕಕ್ಕೆ ಆವೇಶಗೊಂಡರೆ ಬಾಯಿ ತುಂಬಾ ಹೇಲಾಗುತ್ತದೆ.

ಸಕ್ಕರೆ ಖಾಯಿಲೆ ರೋಗಿ ಹಸಿವಿನಿಂದ ಹಾಗೆಯೇ ಮಲಗಲು ಪ್ರಯತ್ನಿಸಿದ...

ಕೋಳಿ ಕೂಗುವವರೆಗೆ ನಿದ್ರೆ ಬರಲಿಲ್ಲ.
                                                                                                                     ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...