ಭಾನುವಾರ, ಏಪ್ರಿಲ್ 5, 2020

ಮೂಲಭೂತವಾದ ಎನ್ನುವ ರಣಹದ್ದು ರೆಕ್ಕೆ ಬಿಚ್ಚಲಿದೆಯಾ?

ಮೂಲಭೂತವಾದ ಎನ್ನುವ ರಣಹದ್ದು ರೆಕ್ಕೆ ಬಿಚ್ಚಲಿದೆಯಾ?

ಈಗ ದೇಶವ್ಯಾಪಿ  ತಬ್ಲಿಘ್ ಜಮಾತ್ಸ ಸುದ್ದಿ ಹರಿದಾಡುತ್ತಿದೆ.ಇದು ಎಷ್ಟೊಂದು ತೀವ್ರತೆ ಪಡೆದುಕೊಂಡಿದೆ ಎಂದರೆ ಭಾರತದ ಮುಸ್ಲಿಮರೆಲ್ಲರೂ ರಾಕ್ಷಸರು ಮತ್ತು ಆ ರಾಕ್ಷಸರು ಭಾರತದ ಇತರೆ ಸಮುದಾಯಗಳ ನಾಶಕ್ಕೆ ಸಂಕಲ್ಪ ತೊಟ್ಟಿದ್ದಾರೆ ಎನ್ನುವಂತೆ ಬಿಂಬಿಸಲಾಗುತ್ತಿದೆ.ಒಬ್ಬ ಮಾಹಾಶಯ ಮುಂದುವರೆದು ಟಿವಿ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ತಬ್ಲಿಘ್ ಜಮಾತನ ಸಮಾವೇಶದ ಹಿಂದೆ ಕರೋನಾ ವೈರಸ್ಸು ಹರಡುವ ತಂತ್ರವಿದೆ,ಇದು ವ್ಯವಸ್ಥಿತ ಸಂಚು,ಭಯೋತ್ಪಾದನೆಯ ಒಂದು ಭಾಗ ಎನ್ನುವಂತೆ ಅತಿ ಸುಂದರವಾಗಿ,ತಾರ್ಕಿಕ ಎನ್ನುವಂತೆ ವಿವರಣೆಯನ್ನು ಕೊಟ್ಟಿದ್ದಾನೆ.ಇದಾದ ನಂತರ ವಾಟ್ಸಪ್ಪು ಪೇಸುಬುಕ್ಕುಗಳಲ್ಲಿ ಮುಸ್ಲೀಮರೊಂದಿಗೆ ಯಾವುದೇ ವ್ಯವಹಾರಗಳನ್ನು ಮಾಡದಿರಿ ಎನ್ನುವಂತಹ ಸಂದೇಶಗಳು ಹರಿದಾಡತೊಡಗಿವೆ.ಯುವಕರು ಸೇರಿದಂತೆ ಭಾರತದ ಬಹುತೇಕ ಜನ ಮುಸ್ಲೀಮರ ವಿರುದ್ಧ ಕೆಂಡ ಕಾರತೊಡಗಿದ್ದಾರೆ.ಅನಾಹುತಗಳಿಗೆ ಮುಂದಾಗುವಂತಹ ವಾತಾವರಣ ಉಂಟಾಗಿದೆ.ಇದು ಮತ್ತೊಂದು ಸುತ್ತಿನ ಭಯಾನಕ ಧರ್ಮ ಸಂಘರ್ಷದ ಮುನ್ನುಡಿಯಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡತೊಡಗಿದೆ.ಬಹುತೇಕ ಮುಸ್ಲಿಂ ಸಮುದಾಯಗಳು ಅವಮಾನಗಳಿಂದ ಮತ್ತು ಉದ್ರಿಕ್ತ ಜನರ ತುಛ್ಛ ನೋಟಗಳಿಂದ ಮನೆಯ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.ಇದು ನಿಜಕ್ಕೂ ಆತಂಕಕಾರಿ ವಿಷಯ.ಕೋಮು ದಳ್ಳುರಿಗೆ ಕಾದು ಕುಳಿತ ಕೋಮುವಾದಿ ರಾಕ್ಷಸರು ತಮ್ಮ ಉಗ್ರಸ್ವರೂಪದ ಮುಖವಾಡ ತೋರಿಸುವ ಆತುರದಲ್ಲಿದ್ದಾರೆ.ಬಹುಶಃ 144 ಜಾರಿಯಲ್ಲಿರದೇ ಹೋಗಿದ್ದರೆ ಹಿಂಸಾಚಾರಗಳು ಪ್ರಾರಂಭವಾಗುತ್ತಿದ್ದವೇನೋ,ಸಾಮಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಆ ಸೂಚನೆಯನ್ನು ತೋರಿಸುತ್ತಿವೆ!

ಏನಿದು ತಬ್ಲಿಘ್ ಜಮಾತ್?

ಮುಸ್ಲಿಮ್ ಸಮುದಾಯದ ಸಂಪ್ರದಾಯ ನಡೆನುಡಿಗಳನ್ನು ಮರೆತ ಮತ್ತು ಹಿಂದೂಗಳೊಂದಿಗೆ ಸೇರಿ ರೈತಾಪಿ ಜೀವನ ನಡೆಸುತ್ತಾ ಹಿಂದೂಗಳ ಆಚರಣೆಯನ್ನು ರೂಢಿಸಿಕೊಂಡಿರುವ ಸಾಮಾನ್ಯ ಮುಸ್ಲೀಮರಿಗೆ ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳನ್ನು ತಿಳಿಸುವ ಒಂದು ಆಂದೋಲನ.ಈ ಆಂದೋಲನ ಉದ್ದೇಶ ಶಾಂತಿಯನ್ನು ಸ್ಥಾಪಿಸುವುದನ್ನು ಹೊಂದಿದೆ.ಇದು ರಾಜಕೀಯೇತರವಾಗಿದ್ದು ಇದರ ಕಾರ್ಯಕರ್ತರು ಮೌಖಿಕವಾಗಿ ಸುನ್ನಿ ಸಮುದಾಯದ ಸಾಮಾನ್ಯ ಮುಸ್ಲೀಮರಿಗೆ ಧರ್ಮದ ಆಚಾರ ನಡೆ ನುಡಿಗಳನ್ನು ಕಲಿಸುವ ಉದ್ದೇಶವನ್ನು ಹೊಂದಿದೆ.1927ರಲ್ಲಿ ಮೌಲಾನಾ ಮಹ್ಮದ್ ಇಲ್ಯಾಸ್ ಖಾಂದಾಲಾ ಹುಟ್ಟು ಹಾಕಿದ  ಈ ಆಂದೋಲನ ಅತ್ಯಂತ ಶೀಘ್ರವಾಗಿ ಜಗತ್ತಿನ ನೂರೈವತ್ತಕ್ಕೂ ಹೆಚ್ಚು ರಾಷ್ಟ್ರಗಳನ್ನು ವ್ಯಾಪಿಸಿ ಸುಮಾರು ಎಂಟು ನೂರು ಅನುಯಾಯಿಗಳನ್ನು ಹೊಂದಿದೆ.ಹಿಂದೂ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಇತರ ಧರ್ಮೀಯರೊಂದಿಗೆ ಬದುಕುತ್ತಾ ಅವರ ಆಚಾರ ಸಂಪ್ರದಾಯಗಳನ್ನು ರೂಢಿಸಿಕೊಂಡಿರುವ ಮುಸ್ಲಿಮರನ್ನು ಪುನಃ ಮರಳಿ ಇಸ್ಲಾಂ ಧರ್ಮದ ತೆಕ್ಕೆಗೆ ತರುವುದು ಈ ತಬ್ಲಿಘ್ ಜಮಾತ್ನ ಉದ್ದೇಶ.ಆದರೆ ಭಾರತದ ಕೋಮುವಾದಿ ರಾಕ್ಷಸರು ಇದೊಂದು ಉಗ್ರವಾದಿ ಸಂಘಟನೆ ಮರ್ಕಜ್ ನಿಜಾಮುದ್ದೀನನಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಸಂಚನ್ನು ಹೊಂದಿತ್ತು ಎನ್ನುವಂತೆ ಪ್ರಚಾರ ಮಾಡಲೆತ್ನಿಸುತ್ತಿವೆ.ಜಾಗತಿಕವಾಗಿ ಮೂನ್ನೂರು ಜನ ಧರ್ಮ ಗುರುಗಳು ಸೇರಿ ಸುಮಾರು ನಾಲ್ಕು ಸಾವಿರ ಜನ ಸಮೂಹದ ಈ ಕಾರ್ಯಕ್ರಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಿಗಾವಣೆ ಇರುವ ದಕ್ಷಿಣ ದೆಹಲಿಯ ಮರ್ಕಾಜ್ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿತ್ತು.

ಚೀನಾ ಮತ್ತು ಇಟಲಿ ಸೇರಿದಂತೆ ಈ ಕರೋನಾ ವೈರಾಣಿನ ಭೀಭತ್ಸ್ಯ ಸುದ್ದಿಗಳು ಜಾಗತಿಕವಾಗಿ ಹರಡಿತ್ತಾದರೂ ಅದಿನ್ನೂ ಭಾರತದಲ್ಲಿ ಕಲ್ಲೋಲ ಸೃಷ್ಟಿಸಿರಲಿಲ್ಲ.ಈ ವೈರಾಣು ಮೊಟ್ಟ ಮೊದಲ ಬಾರಿಗೆ ಪತ್ತೆಯಾದದ್ದು ಚೀನಾದ ವುಹಾನ್ ನಗರದಲ್ಲಿ ನವಂಬರ್ ಹದಿನೇಳು 2019ರಂದು.ನಂತರ ಅದು ಇಡೀ ಚೀನಾವನ್ನು ಆಕ್ರಮಿಸಿದ್ದಲ್ಲದೆ ಇಡೀ ಜಗತ್ತನ್ನು ವ್ಯಾಪಿಸಿ ಬಿಟ್ಟಿತು.ಸಾವಿನ ಸುದ್ದಿಗಳು ಬಹು ವಿಜೃಂಭಣೆಯಿಂದ ಬರತೊಡಗಿದವು.ನಾವೂ ಅಂದರೆ ಭಾರತೀಯರು ಸಾವಿನ ಸುದ್ದಿ ಬರುತ್ತಿರುವ ದಿಕ್ಕಿನೆಡೆಗೆ ಕ್ಯಾಜುಯಲ್ ಆಗಿ ನೋಡತೊಡಗಿದೇವು;ಪ್ರಿಕಾಷನ್ ಬಗ್ಗೆ ಯೋಚಿಸಲಿಲ್ಲ.ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಬರುವವನಿದ್ದನಲ್ಲಾ?ಅದಕ್ಕೆ ಗೋಡೆಯ ಸಿದ್ಧತೆ ಇತ್ಯಾದಿಗಳಲ್ಲಿ ಭಾರತ ಸರ್ಕಾರ ತನ್ನನ್ನು ತಾನು ತೊಡಗಿಸಿಕೊಂಡಿತು.ಟ್ರಂಪ್ ಬಂದ,ಕರೆದುಕೊಂಡು ಹೋಗಿ ತೋರಿಸಿದ ಸ್ಥಳಗಳನ್ನೆಲ್ಲಾ ನೋಡಿ ಆತ ಹೋದ.ಫೆಬ್ರವರಿ 25 2020.ಇದಾದ ನಂತರವೂ ಭಾರತ ಸರ್ಕಾರ ಆ ಸಮಸ್ಯೆಯ ಕುರಿತು ಗಂಭೀರವಾಗಿ ಯೋಚಿಸಲಿಲ್ಲ.ಈ ಮಧ್ಯೆ ಕರೋನಾ ಭಯಕ್ಕೆ ಜಗತ್ತಿನಾದ್ಯಂತ ಹಂಚಿ ಹೋದ ಭಾರತೀಯ ಪ್ರಜೆಗಳು ತಾಯಿ ನಾಡನ್ನು ಸೇರುವ ಧಾವಂತದಲ್ಲಿದ್ದರು.ಇತ್ತ ಸರ್ಕಾರದ ಗಮನಕ್ಕೆ ಬಾರದಂತೆ ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಭಾರತವನ್ನು ಪ್ರವೇಶಿಸಿಬಿಟ್ಟರು.ಏರ್ಪೋರ್ಟುಗಳಲ್ಲಿ ಯಾವುದೇ ತಪಾಷಣೆಗಳು ನಡೆಯಲಿಲ್ಲ!ಮತ್ತು ವಿಮಾನ ಹಾರಾಟವನ್ನೂ ತಡೆಯಲಿಲ್ಲ.ಗಂಡಾಂತರ ಮನೆ ಹೊಕ್ಕ ಮೇಲೆ ಭಾರತ ಸರ್ಕಾರ ವಿಮಾನ ಹಾರಾಟವನ್ನು ನಿಷೇಧಿಸಿತು.ಊರು ಹಾಳಾದ ಮೇಲೆ ಕೋಟೆ ಬಾಗಿಲು ಹಾಕಿದಂತೆ!

ಮರ್ಕಜ್ ನಿಜಾಮುದ್ದೀನ್

ದಕ್ಷಿಣ ದೆಹಲಿಯಲ್ಲಿರುವ ಮರ್ಕಜ್ ನಿಜಾಮುದ್ದೀನ್ ತಬ್ಲಿಘ್ ಜಮಾತನ ಪ್ರಧಾನ ಕೇಂದ್ರವಾಗಿದೆ.ಈ ಮೇಲೆ ತಿಳಿಸಿದಂತೆ ಅಲ್ಲಿನ ಮೌಲ್ವಿಗಳು ಈ ಮೊದಲೇ ಸರ್ಕಾರಕ್ಕೆ ಸಮ್ಮೇಳನ ನಡೆಸುತ್ತಿರುವುದಾಗಿ ತಿಳಿಸಿತ್ತಲ್ಲದೆ ಅನುಮತಿಯನ್ನೂ ಕೋರಿತ್ತು.ಅಣ್ಣಾ ಹಜಾರೆಯನ್ನು ಬೀದಿಗಿಳಿಸಿ ಮುಸ್ಲೀಮರ ಒಲವು ಗಳಿಸಿ ಕಾಂಗ್ರೇಸ್ಸಿನೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯಕ್ಕೆ ಪ್ರವೇಶಿಸಿ ಎರಡನೆ ಅವಧಿಗೆ ದಿಲ್ಲಲಲಿ ಗದ್ದುಗೆ ಏರಿರುವ ಅರವಿಂದ್ ಕೇಜ್ರಿವಾಲನಿಗೆ ಈ ಸಮ್ಮೇಳನದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು.ಯಾವುದೇ ದೇಶದ್ರೋಹದ ಆಪಾದನೆಗಳಿರದ ಕೇವಲ ಶಾಂತಿ ಮತ್ತು ಧರ್ಮ ಪ್ರಚಾರದ ಆಶಯವನ್ನು ಹೊಂದಿದ್ದ ಈ ಧಾರ್ಮಿಕ ಸಂಸ್ಥೆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವೆಲ್ ಅವರನ್ನು ಅತಿಥಿಯಾಗಿ ಆಹ್ವಾನಿಸಿತ್ತು.ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅವಗಾಹನೆಯಲ್ಲಿಯೇ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಉಭಯ ಸರ್ಕಾರಗಳಿಗಿತ್ತು!ಇದಲ್ಲದೆ ದೇಶದಲ್ಲಿ ಗುಪ್ತಚರ ಇಲಾಖೆ,ಪೋಲಿಸ್ ಇಲಾಖೆ ಮತ್ತು ಇತರ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿ ಇಲಾಖೆಗಳೂ ಮಾಹಿತಿ ಸಂಗ್ರಹಿಸಿರುತ್ತವೆ;ಕಾರ್ಯಕ್ರಮ ಸಣ್ಣದಲ್ಲಲ,ಮಾರ್ಚ್ 10ರಿಂದ ಆರಂಭವಾಗಿರುವ ಆ ಕಾರ್ಯಕ್ರಮದ ಸಿದ್ಧತಗಳು ಮಾರ್ಚ್ 24ರ ವರೆಗೆ ನಡೆದಿವೆ.ಈ ಮಧ್ಯೆ ಆ ಕಾರ್ಯಕ್ರಮಕ್ಕೆ ಅಥವಾ ಮರ್ಕಜ್ ನಿಜಾಮುದ್ದೀನ ಕೇಂದ್ರಕ್ಕೆ ಸುಮಾರು 6500 ರಿಂದ ಏಳು ಸಾವಿರ ಜನ ಭೇಟಿ ನೀಡಿದ್ದಾರೆ.ನಿಮಗೆ ಗೊತ್ತಿರಲಿ:ಒಂದೇ ದಿನ ಸುಮಾರು ನಾಲ್ಕು ಸಾವಿರ ಜನ ಸೇರಿದ್ದಾರೆ!ಅದು ಆರು ಅಂತಸ್ತುಗಳ ಬಹು ಕೊಠಡಿಗಳ ಕಟ್ಟಡ,ಅದಿಷ್ಟೂ ಜನ ಆ ಇಕ್ಕಟ್ಟಿನಲ್ಲೇ ವಾಸಿಸಿದ್ದಾರೆ.ಸ್ಥಳ ಅಭಾವದಿಂದ ಒಂದಿಷ್ಟು ಜನ ದೆಹಲಿಯ ವಸತಿಗೃಹಗಳಲ್ಲೂ ನೆಲಸಿದ್ದಾರೆ.

ಸರಾಸರಿ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಜನಗಳ ಸಂಖ್ಯೆ ಇಂತಿದೆ:ದೆಹಲಿಯ ಮುಖ್ಯಮಂತ್ರಿ ಕೊಟ್ಟ ಅಂಕಿ ಅಂಶಗಳ ಪ್ರಕಾರ 2346 ಜನರನ್ನು ಬುಧವಾರ ಮರ್ಕಜ್ ನಿಜಾಮುದ್ದೀನ್ ಕಟ್ಟಡದಿಂದ ತೆರವುಗೊಳಿಸಲಾಗಿದೆ.ಈ ಪೈಕಿ 536 ಜನರನ್ನು ಆಸ್ಪತ್ರೆಗೆ ದಾಖಲಿಸಿದರೆ 167 ಜನರನ್ನು ಅಂದು ಕ್ವಾರೆಂಟೈನ್ನಲ್ಲಿ ಇಡಲಾಗಿದೆ.ಆ ಕ್ವಾರೆಂಟೈನ್ ತುಘಲಕಬಾದನ ಹಂಗಾಮಿ ಕ್ವಾರಂಟೈನ್,1810 ಜನರನ್ನು ನಿರೀಕ್ಷಣೆಯಲ್ಲಿ ಇಟ್ಟುಕೊಳ್ಳಲಾಗಿದೆ.ಒಟ್ಟು ಮಾರ್ಚ್ 13ರಂದು ಸಮ್ಮೇಳನದಲ್ಲಿ ಸೇರಿದ ಜನ 3500.ಮರ್ಕಜ್ ಕೇಂದ್ರ ರಾಜ್ಯ ಸರ್ಕಾರಕ್ಕೆ ಸೇರಿದ ಜನಗಳ ಸಂಖ್ಯೆಯ ಕುರಿತು ಮತ್ತು ಪ್ರತಿನಿಧಿಗಳ ಕುರಿತು ತಪ್ಪು ಮಾಹಿತಿ ನೀಡಿದೆ ಎನ್ನುವುದೊಂದು ಆರೋಪವೂ ಇದೆ.

ಇದಾದ ಮೇಲೆ ಮಾರ್ಚ್ 24ರಂದು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶವನ್ನು ಕುರಿತು ಭಾಷಣ ಮಾಡುತ್ತಾ ತರಾತುರಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿಬಿಟ್ಟರು.ಇಷ್ಟೊತ್ತಿಗೆ ಆಗುವ ಅನಾಹುತಗಳು ಆಗಿ ಬಿಟ್ಟಿದ್ದವು!ಇದಾದ ಮೇಳೆ ಮೈಕೊಡವಿ ಆಕಳಿಸಿ ಎದ್ದರು ನೋಡಿ ಕೋಮುವಾದಿಗಳು?ತಬ್ಲಿಘ್ ಜಮಾತ್ ಒಂದು ಪೂರ್ವ ನಿಯೋಜಿತ ಸಂಚು,ಇದು ಕರೋನಾ ಭಯೋತ್ಪಾದನೆ ಎಂದರು;ಅದಕ್ಕೆ ಇಂಬು ಕೊಡುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡೋನೇಷಿಯಾದ ಒಂಬತ್ತು ಜನ ತೆಲಂಗಾಣದಲ್ಲಿ ಮರಣಿಸಿದರು;ಅವರು ಕರೋನಾ ಪಾಸಿಟಿವ್!ಈ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲ ಸಾವಾದದ್ದು ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾದ 60 ವರ್ಷ ವಯಸ್ಸಿನ ಮುಸ್ಲಿಂ ವೃದ್ಧನದು.ಸಾವಿನ ನಂತರ ಆತನ ಮಕ್ಕಳ ಮತ್ತು ಹೆಂಡತಿಯರ ಸಂಖ್ಯೆ ಬಹು ವಿಧದಲ್ಲಿ ಚರ್ಚಿತವಾಗಿದ್ದೊಂದು ಬೇರೆ ಕಥೆ.ಈತನ ಕರೋನಾ ಮೂಲ ಹುಡುಕಲು ಹೊರಟಾಗ ಆತನ ದೆಹಲಿ ಪ್ರವಾಸ ಬೆಳಕಿಗೆ ಬಂದಿತು.ನಂತರ ಈ ತಬ್ಲಿಘ್ ಜಮಾತ್!ಆಶ್ಚರ್ವೆಂದರೆ ಕರ್ನಾಟಕದಲ್ಲಿ ಮೊದಲ ಸಾವಾದದ್ದು ಕಲಬುರಗಿಯಲ್ಲಿ,ಆತನೂ ಮುಸ್ಲಿಂ!ಇವು ಕಾಕತಾಳೀಯವಾದರೂ ಹಿಂದೂ ಮೂಲಭೂತವಾದಿಗಳ ಅವ್ಯಕ್ತ ರಾಕ್ಷಸನ ಜಾಗೃತಿಗೆ ಕಾರಣವಾಯಿತು!

ಆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು ಇದುವರೆಗೆ ಕರ್ನಾಟಕದಲ್ಲಿ ಗುರುತಿಸಲಾದ ಜನ 300 ಎಂದು ಹೇಳಲಾಗುತ್ತಿದೆ.ಈ ಪೈಕಿ 78 ಜನ ಕ್ವಾರಂಟೈನಿನಲ್ಲಿದ್ದಾರೆ.ಆಂದ್ರ ಪ್ರದೇಶದಲ್ಲಿ 711 ಜನರನ್ನು ಪತ್ತೆ ಮಾಡಲಾಗಿದೆ.ತಮಿಳುನಾಡಿನಿಂದ ಭಾಗವಹಿಸಿದವರ ಸಂಖ್ಯೆ 1031,ಇದರಲ್ಲಿ 300 ಜನರನ್ನು ಪತ್ತೆ ಹಚ್ಚಲಾಗಿದೆ,400 ಜನ ದೆಹಲಿಯಲ್ಲಿ ಸಿಕ್ಕಿ ಹಾಕಿಕೊಂಡಿರು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ತೆಲಂಗಾಣದಿಂದ 400 ಜನ,ಇವರು ಸಮ್ಮೇಳನದಿಂದ ಬರುತ್ತಾ 10 ಜನ ಇಂಡೋನೆಷಿಯಾದ ಪ್ರಜೆಗಳನ್ನು ಕರೆತಂದಿದ್ದಾರೆ.ಆ ಪೈಕಿ ಒಂಬತ್ತು ಜನ ಮರಣಿಸಿದ್ದಾರೆ.ಉತ್ತರ ಪ್ರದೇಶದ ಹತ್ತು ಜಿಲ್ಲೆಗಳ ಸುಮಾರು 569,ಹರಿಯಾಣದ 480 ಜನ,ರಾಜಸ್ಥಾನದ 183 ಜನ,ಕಾಶ್ಮೀರದ ಪಟ್ಟಿ 800 ಜನ!ಕಾಶ್ಮೀರದಲ್ಲಿ 380 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನಿನಲ್ಲಿ ಇಡಲಾಗಿದೆ.ನಿಜಕ್ಕೂ ಈ ಸಮ್ಮೇಳನ ಆತಂಕಕಾರಿಯೇ,ಈ ಸಂದರ್ಭದಲ್ಲಿ ಇದು ನಡೆಯಬಾರದಿತ್ತು.ಇದರ ಅರಿವಿದ್ದು ಅಲ್ಲಿನ ಸರ್ಕಾರ,ಆ ಜಿಲ್ಲೆಯ ಡಿಸಿ,ಎಸ್ಪಿ ಏನು ಮಾಡುತ್ತಿದ್ದರು ಎನ್ನುವುದು ಬಹು ಮುಖ್ಯ ಪ್ರಶ್ನೆ!

ನಂತರದ ಬೆಳವಣಿಗೆಯಲ್ಲಿ ದೇಶದ ಇತರ ರಾಜ್ಯಗಳು ಎಚ್ಚೆತ್ತು ಸಮ್ಮೇಳನದಲ್ಲಿ ಭಾಗವಹಿಸಿವರಿಗೆ ಪರೀಕ್ಷೆಗೆ ಒಳಪಡುವ ಕರೆಯನ್ನು ಕೊಟ್ಟವು,ಜನ ಸ್ಪಂದಿಸಲಿಲ್ಲ.ಈ ಅನಾದರಣೆಯೇ ಕೋಮುವಾದಿಗಳಿಗೆ ಇದು ಷಡ್ಯಂತ್ರ ಎಂದು ಸುದ್ದಿ ಹಬ್ಬಿಸುವ ಸಂಚಿಗೆ ಇಂಬು ನೀಡಿತು.ಅದರ ಪರಿಣಾಮವೀಗ ನಾವು ಕಾಣುತ್ತಿದ್ದೇವೆ!ಏಕೆ ಇವರೆಲ್ಲರೂ ಅವಿತು ಕುಳಿತರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಎಲ್ಲಿ ತಮ್ಮನ್ನು ದೇಶದ್ರೋಹಿಗಳ ಪಟ್ಟಕ್ಕೆ ಸೇರಿಸುತ್ತಾರೇನೋ ಎನ್ನುವ ಆತಂಕ ಅವರನ್ನು ಕಾಡತೊಡಗಿತು.ಭಯಗೊಂಡ ತುಂಬಾ ಜನ ಮನೆಯಿಂದ ಹೊರಬರಲಿಲ್ಲ.

ಪ್ರವಾಸಿ ವೀಸಾ

ಮರ್ಕಜ್ ಜಮಾತ್ ಸಮ್ಮೇಳನಕ್ಕೆ ವಿದೇಶದಿಂದ ಭಾಗವಹಿಸಿ ಧರ್ಮ ಗುರುಗಳು ಇಲ್ಲೊಂದು ತಪ್ಪು ಮಾಡಿದ್ದಾರೆ.ಇದರಿಂದಾಗಿ ಸರ್ಕಾರ ದಾರಿ ತಪ್ಪಿತಾ ಎನ್ನುವ ಒಂದು ಸಂದೇಹ ಕಾಡುತ್ತದೆ.ಇದರ ಬೆನ್ನಲ್ಲೆ ಭಾರತದ ರಕ್ಷಣಾ ಇಲಾಖೆಯ ವೈಫಲ್ಯ ಎದ್ದು ಕಾಣಿಸುತ್ತದೆ.ಅಂದರೆ ಪ್ರವಾಸಿ ವೀಸಾ ಬಳಸಿಕೊಂಡು ಭಾರತದಲ್ಲಿ ಯಾವ ವಿದೇಶಿಗನೂ ಸುಲಭವಾಗಿ ಪ್ರವೇಶಿಸಿ ಏನು ಬೇಕಾದರೂ ಮಾಡಬಹುದು ಎಂದು.ಇಲ್ಲಿ ಏರ್ ಪೋರ್ಟಿನ ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ಅವರ ನಿರ್ಲಕ್ಷ್ಯ ಧೋರಣೆ ಎದ್ದು ಕಾಣಿಸುತ್ತದೆ.ಪ್ರವಾಸದ ನೆಪದಲ್ಲಿ ಭಾರತವನ್ನು ಪ್ರವೇಶಿಸುವವರ ಸೂಕ್ತ ಮಾಹಿತಿ ಸಂಗ್ರಹಿಸುವ ನಿಯಾಮವಳಿಗಳನ್ನು ನಮ್ಮ ಸರ್ಕಾರದ ಅಧಿಕಾರಿಗಳು ಸೂಕ್ತವಾಗಿ ಪಾಲಿಸುತ್ತಿಲ್ಲವೆಂದು ಅರ್ಥ.ಈ ಸೋಮಾರಿತನ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಭಾರತ ಪದೇಪದೇ ಘಾಸಿಗೊಳಗಾಗುತ್ತಿದೆ.ಯಾವ ಸರ್ಕಾರವಿದ್ದರೇನು?ಒಬ್ಬ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಸುಂದರವಾದ ಭಾಷಣಗಳನ್ನು ಮಾಡಬಹುದೇ ಹೊರತು ನಾಗರಿಕ ಸೇವಾ ವರ್ಗ ದಕ್ಷತೆಯ ಸೇವೆ ನಿರ್ವಹಿಸದಿದ್ದರೆ ಏನಿದ್ದು ಏನು ಪ್ರಯೋಜನೆ?

ಸಿಎಎ,ಎನ್ ಆರ್ ಸಿ ಯಿಂದ ಭಾರತ ಹೊತ್ತಿ ಉರಿಯುತ್ತಿತ್ತು.ಮುಸ್ಲಿಮರು ಮತ್ತು ಎಡಪಂಥೀಯರ ಆಕ್ರೋಶ ಮುಗಿಲು ಮುಟ್ಟಿತ್ತು.ದೇಹಲಿಯಲ್ಲಿ ನಡೆದ ಟ್ರಂಪ್ ಪ್ರವಾಸ ಕಾಲದ ಹಿಂಸಾಚಾರ 2002 ಗುಜರಾತ್ ಹಿಂಸಾಚಾರವನ್ನು ನೆನಪಿಸುವಂತಿತ್ತು.ಸದ್ಯಕ್ಕೆ ಕೇಂದ್ರ ಸರ್ಕಾರದ ಒಂದೊಂದೆ ವೈಫಲ್ಯಗಳು ಬೆಳಕಿಗೆ ಬರತೊಡಗಿದ್ದವು.ಜಿಡಿಪಿ,ಆರ್ಥಿಕತೆ,ಸುಳ್ಳು ಅಭಿವೃದ್ದಿ,ನಿರುದ್ಯೋಗ,ಉದ್ಯಮಗಳ ದಿವಾಳಿ,ಮುಚ್ಚಿ ಹೋಗುತ್ತಿರುವ ಸರ್ಕಾರದ ಕಂಪನಿಗಳು,ಖಾಸಗೀಕರಣ,ಬ್ಯಾಂಕುಗಳ ದಿವಾಳಿತನ...ಹೀಗೆ! ಈ ವೈಫಲ್ಯಗಳಿಂದ ಜನರ ಮನಸ್ಸನ್ನು ಬೇರೆಯ ಕಡೆಗೆ ತಿರುಗಿಸುವ ಜರೂರತ್ತು ಇತ್ತು.ಅದೃಷ್ಟವೆಂಬಂತೆ ಕರೋನಾ ಬಂದಿತು;ದೇಶ ಲಾಕ್ ಡೌನ್ ಆಯ್ತು.ಲಾಕ್ ಡೌನ್ ಯಶಸ್ವಿಯಾಯಿತಲ್ಲವೇ ಮುಂದೆ ಮಾಡುವುದಕ್ಕೆ ಬೇರೇನು ಗದ್ದಲವಿದೆ ಎಂದುಕೊಳ್ಳುವಷ್ಟರಲ್ಲಿ ಈ ತಬ್ಲಿಘ್ ಜಮಾತ್!ಆಯ್ತಲ್ಲಾ?ಇನ್ನು ಮುಸ್ಲಿಮರ ಗತಿ ಅದೋಗತಿ!

ಸಾಮಾಜಿಕ ಜಾಲತಾಣಗಳಲ್ಲಿ ಉದ್ರಿಕ್ತ ಹುಡುಗರು ಹಾಕುತ್ತಿರುವ ಪೋಸ್ಟುಗಳನ್ನು ನೋಡಿ ನಾನೊಂದಿಷ್ಟು ಸಣ್ಣ ಸಣ್ಣ ಬರಹಗಳನ್ನು ಬರೆದೆ,ದೇಶದ ಎಲ್ಲಾ ಮುಸ್ಲೀಮರು ಕೆಟ್ಟವರಲ್ಲ.ತಬ್ಲಿಕ್ ಜಮಾತನ ಉದ್ದೇಶ ಕೆಟ್ಟದ್ದಾಗಿರಲಿಲ್ಲ.ಅದಕ್ಕೇಕೆ ಭಯೋತ್ಪಾದನೆಯ ಲಿಂಕ್ ಹಾಕುತ್ತೀರಿ ಎಂದು ಬರೆದೆ.ನೂರಾರು ಕರೆಗಳು ಬಂದವು.ಒಬ್ಬ ಹುಡುಗ ನನ್ನನ್ನು ಕಮ್ಯುನಿಸ್ಟ್ ಗುಂಪಿಗೆ ಸೇರಿಸಿದ್ದಾನೆ.ಈ ತಬ್ಲಿಘ್ ಜಮಾತ್ ನಡೆಯುವ ಸಂದರ್ಭದಲ್ಲಿ ತಿರುಪತಿಯಲ್ಲಿ ಸುಮಾರು ನಾಲ್ಕು ಜನ ಸಿಕ್ಕಿಹಾಕಿಕೊಂಡಿದ್ದರು;ಸುದ್ದಿಯಾಗಲಿಲ್ಲ;ವೈಷ್ಣವಿದೇವಿ ದೇವಸ್ಥಾನದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು;ಸುದ್ದಿಯಾಗಲಿಲ್ಲ.ಖುದ್ದಾಗಿ ಮಂತ್ರಿ ಮಾಗಧರು,ಮುಖ್ಯಮಂತ್ರಿಗಳು ಲಾಕ್ ಡೌನ್ ಬ್ರೇಕ್ ಮಾಡಿ ಉಳ್ಳವರ ಮದುವೆಗಳಲ್ಲಿ ಭಾಗಿಯಾಗುತ್ತಿದ್ದಾರೆ;ಸುದ್ದಿಯಾಗುತ್ತಿಲ್ಲ.

ಅಸಲು ಜಾಗತಿಕವಾಗಿ ಈ ಕರೋನಾ ವ್ಯಾಪಿಸಿ ಜನ ತತ್ತರಿಸುತ್ತಿರುವ ಸುದ್ದಿಗಳು ವರದಿಯಾಗುತ್ತಿದ್ದರೂ ಕೋಟೆ ಬಾಗಿಲು ಹಾಕಲಿಲ್ಲ;ಇದು ಚರ್ಚೆಯಾಗಲಿಲ್ಲ.

ಮುಸ್ಲಿಮರ ಅನುಚಿತ ವರ್ತನೆ

ಈ ಲೇಖನದ ದ್ದೇಶ ಎಡಬಲಪಂಥಗಳ ವಾದ ಸರಣಿಯಲ್ಲ.ಮೋದಿಜಿಯನ್ನು ಟೀಕಿಸುವ ಉದ್ದೇಶವಲ್ಲ.ಇಡೀ ದೇಶವನ್ನು ಮುಸ್ಲಿಮ್ ಸಮುದಾಯದ ವಿರುದ್ಧ ಎತ್ತಿ ಕಟ್ಟುತ್ತಿರುವ ಕೆಲವರ ಬಗ್ಗೆ.ಮಾನ್ಯ ಚಕ್ರವರ್ತಿ ಸೂಲಿಬೆಲೆಯವರ ಟಿವಿಗೆ ನೀಡಿದ ಹೇಳಿಕೆಯನ್ನು ಗಮನಿಸಿ,ಆತನ ಹೇಳಿಕೆಯಿಂದ ಉದ್ರಿಕ್ತರಾಗಬಹುದಾದ ಆತನ ಅನುಯಾಯಿಗಳು ಮುಸ್ಲಿಂ ಶೇಷಕ್ಕೆ ಕೈ ಹಾಕಿದರೆ?ಹೆಣಗಳಿಗಾಗಿ ಕೆಲ ಪಟ್ಟಭದ್ರರು ಕಾದು ಕುಳಿತಿದ್ದಾರೆ,ಅದರಲಿ;ಈ ಮುಸ್ಲಿಂ ಸೋಂಕಿತರ ಅನುಚಿತ ವರ್ತನೆಯ ಬಗ್ಗೆ ಬರೆಯದಿದ್ದರೆ ಈ ಲೇಖನ ಪೂರ್ಣವಾಗದು.ನನಗೆ ಬಂದಿರುವ ಕೆಲವು ವಿಜಲ್ಸ್ ತುಂಬಾ ಅಸಹ್ಯವನ್ನು ಹುಟ್ಟಿಸುತ್ತಿವೆ.ನೋಟುಗಳಿಗೆ ಎಂಜಲು ಹಚ್ಚುವುದು,ವೈದ್ಯರಿಗೆ ಉಗುಳುವುದು,ತರಕಾರಿಗೆ ಎಂಜಲು ಹಚ್ಚುವುದು,ಸರ್ಕಾರದ ಆದೇಶವಿದ್ದರೂ ಸಾಮೂಹಿಕ ಪ್ರಾರ್ಥನೆಗೆ ಮೊಂಡು ಹಿಡಿಯುವುದು,ಪೋಲೀಸ್ ಮತ್ತು ಆಶಾ ಕಾರ್ಯಕರ್ತರ ಮೇಲೆ ಕಲ್ಲು ತೂರಿರುವುದು...ಹೀಗೆ!ಈ ಕೃತ್ಯಗಳನ್ನು ಮುಸ್ಲೀಮರ ಹೊರತು ದೇಶದಲ್ಲಿ ಇನ್ಯಾರು ಮಾಡಿಲ್ಲ.ಇದನ್ನು ನೋಡುತ್ತಿದ್ದರೆ ನಿಜಕ್ಕೂ ಅವರಿಗೆ ಭಯೋತ್ಪಾದನೆಯ ಮನಸ್ಥಿತಿ ಇದೆಯೇನೋ ಅನ್ನುವ ಅನುಮಾನ ಕಾಡುತ್ತದೆ.ಕೊನೆಯದಾಗಿ ಹೇಳಬೇಕೆಂದರೆ ದೇಶ ಕೊಮುದಳ್ಳುರಿಗೆ ಸಿದ್ಧವಾಗುತ್ತಿದೆ ಎನ್ನುವ ಸೂಚನೆ ಕಾಣಿಸುತ್ತದೆ.ಇದ್ಯಾವುದನ್ನೂ ಯೋಚಿಸದೆ ದೇಶದ ನೇತಾರರು ಚಪ್ಪಾಳೆ ತಟ್ಟಿ,ಘಂಟೆ ಬಾರಿಸಿ,ದೀಪ ಹಚ್ಚಿ ಎನ್ನುವ ಕರೆಗಳನ್ನು ಕೊಡುವುದರಲ್ಲಿ ಮಗ್ನರಾಗಿದ್ದಾರೆ.

ಜನ ಜೈ ಎನ್ನತೊಡಗಿದ್ದಾರೆ!

                                                                                                          ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...