ಶನಿವಾರ, ಮಾರ್ಚ್ 14, 2020

ಕಮರಿದ ಕನಸುಗಳ ಘೋರ ವಾಸನೆ...


ಕಮರಿದ ಕನಸುಗಳ ಘೋರ ವಾಸನೆ...
ಬದುಕುಗಳು ಕಮರಿ ಹೋಗುತ್ತಿವೆಯಾ?ಕಳಪೆ ಬದುಕನ್ನು ಸೃಷ್ಟಿಸಲಾಗುತ್ತಿದೆಯಾ?ಮೌಲ್ಯಗಳೆಂದರೆ ಏನು?ಅವನ್ಯಾವನು ಮಾರ್ಕ್ಸ್?ಕಣ್ಣ ಹನಿ ತನ್ನ ಮುಂದಿನ ಮದ್ಯದ ಗ್ಲಾಸಿನಲ್ಲಿ ಜಾರಿ ಬೀಳುತ್ತಿರುವಂತೆ ಯೋಚಿಸಿದ ಭಾಸ್ಕರ್.ದ್ರವ ನಿದನಿಧಾನವಾಗಿ ಗಂಟಲಿನ ನಾಳದಿಂದ ಬೆಚ್ಚಗಿನ ಅನುಭೂತಿ ಒದಗಿಸುತ್ತಾ ಹೊಟ್ಟೆಯನ್ನು ಕರುಳನ್ನು ಮೂಲಕ ಮೆದುಳಿನ ನ್ಯೂರಾನ್ಗಳನ್ನು ಸೇರುತ್ತಿತ್ತು.ನೆಶೆ ಎನ್ನುವುದು ಅವನನ್ನು ವ್ಯಾಪಿಸತೊಡಗಿತ್ತು.ಅರುವಿನ ಬದುಕು ಬದುಕುವುದಕ್ಕಿಂತ ಭ್ರಮೆಯ ಬದುಕು ಎಷ್ಟೊಂದು ಸುಖಕರ ಎನ್ನುವ ನಿಲುವಿಗೆ ಆತ ಬಂದು ತಲುಪಿದ್ದ.ಬೆಟ್ಟಗಳು ಬಯಲಾಗಿದ್ದವು,ಆಣೆಕಟ್ಟುಗಳು ಬರಿದಾಗಿದ್ದವು,ಕಾಡುಗಳು ನಾಶವಾಗಿದ್ದವು,ನದಿಗಳು ಬತ್ತಿ ಹೋಗಿದ್ದವು,ರಾಜಕಾರಣಿಗಳು ಸಮೃದ್ಧರಾಗಿದ್ದರು!ಹೋರಾಟಗಾರರು ಸಮೃದ್ಧರಾಗಿದ್ದರು;ಹಳ್ಳಿಗಳ ಪುಡಿ ರಾಜಕಾರಣಿಗಳು ಸಮೃದ್ಧರಾಗಿದ್ದರು.ಜನ ಗುಳೆ ಹೊರಟಿದ್ದರು:ಕಾಣದ ತೀರಗಳ ಕಡೆಗೆ!ಸಾವಿನ ಕಡೆಗೆ,ನೈತಿಕ ಬದುಕಿನ ಅಂತ್ಯದ ಕಡೆಗೆ,ಪಾಪದ ಕಡೆಗೆ,ಇಲ್ಲದ ದೇವರ ಕಡೆಗೆ,ಮಾತಿನಲ್ಲಿ ಮೋಸ ಮಾಡುವ ಕಿಂದರಿಜೋಗಿಗಳ ಮೋಹದ ಕಡೆಗೆ!!

ಭಾಸ್ಕರ ಅಳತೊಡಗಿದ!

ಛೀ,ನಿಂಗೆ ನೆಶೆ ಹೆಚ್ಚಾದ ಕೂಡಲೇ ಹುಚ್ಚು ಹುಚ್ಚು ಮಾಡ್ತೀಯ,ನಿನ್ನ ಜೊತೆ ಕುಡಿಯಲಿಕ್ಕೆ ಬರುವುದೇ ತಪ್ಪು!ಅಳಲು ಪ್ರಾರಂಭಿಸಿ ನಮ್ಮ ನೆಶೆ ಹಾಳು ಮಾಡಿ ಬಿಡುತ್ತೀಯ!”ಎಂದು ರೇಗಿದ ರಮಣ.ಭಾಸ್ಕರನ ಸೂಕ್ಷ್ಮ ಮನಸ್ಥಿತಿ ಅವನಿಗೆ ತುಂಬಾ ಇಷ್ಟವಾಗುತ್ತಿತ್ತಾದರೂ ಗೆಳೆಯ ನಿಕೃಷ್ಟ ನಿರ್ಭಾವುಕ ಜಗತ್ತಿನಲ್ಲಿ ನಾಶವಾಗಿ ಹೋದರೆ ಹೇಗೆ ಎನ್ನುವುದು ಆತನ ಆತಂಕ.ಅಸಲು ಕುಡಿಯುವುದೇ ತಪ್ಪು.ಕುಡಿಯುವುದರ ಮೂಲಕ ಗೆಳೆಯನ ಅವನತಿಗೆ ಮತ್ತು ತನ್ನದೇ ಅರೋಗ್ಯದ ಅವನತಿಗೆ ತಾನು ಕಾರಣನಾಗುತ್ತಿದ್ದೇನೆ ಎನ್ನುವುದು ರಮಣನಿಗೆ ತುಂಬಾ ಚೆನ್ನಾಗಿ ಗೊತ್ತು;ದಿನದ ಜಂಜಡಗಳ ಮಧ್ಯೆ ಕೊಂಚ ರಿಲೀಫ್ ಇರಲಿ ಎಂದು ರೂಢಿಸಿಕೊಂಡ ಚಟ ಗೆಳೆಯನ ಭಾವುಕತೆಯ ಅನಾವರಣಕ್ಕೆ ಕಾರಣವಾಗಿದ್ದು ಆತನಿಗೆ ತುಂಬಾ ಬೇಜಾರುಉಂಟು ಮಾಡಿತ್ತು.ರಮಣನ ಹೆಂಡತಿ ಗೀತಾ ಪ್ರತಿ ದಿನವೂ ಹೇಳುತ್ತಿರುತ್ತಾಳೆ.ಅವನು ಭಾಸ್ಕರ ಮಗುವಿನಂತವನು,ಅವನಿಗೆ ಕುಡಿಯಲಿಕ್ಕೆ ಕೊಂಡೊಯ್ಯದಿರು.ಅವನು ಭಾವುಕ.ಅಳುತ್ತಾನೆ.ನೀನು ಮಲಗಿದ ಮೇಲೆ ಫೋನ್ ಮಾಡಿ ನನ್ನ ಜೀವ ಹಿಂಡುತ್ತಾನೆ;ಬೈಯ್ತಾನೆ,ಜಗತ್ತಿಗೆ ಏನನ್ನೂ ಮಾಡದ ವ್ಯಕ್ತಿ ಅಮೇಧ್ಯದ ರುಚಿಗೆ ಮನಸೋತ ಹೀನ ಕೀಟ ಅಂತಾನೆ,ಪ್ರೀತಿಯ ಬಗ್ಗೆ ಅದರ ವೈಶಾಲ್ಯತೆಯ ಬಗ್ಗೆ ಪಾಠ ಹೊಡೆಯುತ್ತಾನೆ,ದೇವರೇ!ಇನ್ನೊಮ್ಮೆ ಕುಡಿಸದಿರು ಆತನಿಗೆ!!”ಎನ್ನುತ್ತಾಳೆ.

ಭಾಸ್ಕರ್ ಕೆಟ್ಟ ಜೀವಿಯಲ್ಲ.ಅವನು ಭಾವುಕ.ಹಾಡಿನಂತೆ ಬದುಕಬೇಕು ಎನ್ನುತ್ತಾನೆ.ಜೀವನವನ್ನು ಪ್ರೀತಿಯ ಮನೆಯನ್ನಾಗಿಸಿಕೊಳ್ಳಬೇಕು ಅಂತಾನೆ.ಅವನ ಹೆಂಡತಿ ತೀರಿ ಹೋದ ಮೇಲೆ ಅವನು ಆಕೆಯ ನೆನಪಿನಲ್ಲಿ ಹುಚ್ಚನಾಗಿ ಹೋಗಿದ್ದಾನೆ.ಅವನು ಆಗದೇ ಇರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾನೆ.ಕಾರ್ಲ್ಮಾರ್ಕ್ಸ ಸಿದ್ಧಾಂತಗಳು ಆತನ ಶ್ರಮದ ಮೌಲ್ಯದ ಪ್ರತಿಪಾದನೆ ಕುರಿತು ಮಾತನ್ನಾಡುತ್ತಾನೆ.ಅದನ್ನಾರು ಕೇಳುತ್ತಾರೆ ಈಗ?ರಮಣ ಅದೆಷ್ಟೋ ಸಾರಿ ತನ್ನ ಪತ್ನಿ ಗೀತಾಳಿಗೆ ಹೇಳಿದ್ದಾನೆ:ಅಣ್ಣಯ್ಯ ಅಂತೀಯಲ್ಲ?ಅವನ ವಿಚಾರಗಳನ್ನೂ ಭರಿಸಬೇಕು!ಎಂದು.

ಒಂದು ತಿಂಗಳ ಹಿಂದೆ ರಮಣ ತನ್ನ ಪತ್ನಿ ಗೀತಾಳಿಗೆ ಹೇಳಿದ್ದ.ಅಲ್ಲಮಾ ತಾಯಿ,ಅವನಿಗೆ ಎದುರಿನ ವ್ಯಕ್ತಿಯ ಮುಖದ ಭಾವನೆಗಳನ್ನು ಓದುವ ಚಾಳಿಯಿಂದ ಹೊರ ಬಾ ಎಂದು ಹೇಳು,ಅಲ್ಲಿಗೆ ನನಗೆ ನನ್ನ ಗೆಳೆಯ ಉಳಿಯುತ್ತಾನೆ,ನಿನಗೆ ನಿನ್ನ ಅಣ್ಣಾ ಉಳಿಯುತ್ತಾನೆ ಎಂದು!

ತಾನು ರೂಪಿಸಿದ ತಾನು ಪ್ರತಿಪಾದಿಸಲ್ಪಟ್ಟ ಸಿದ್ದಾಂತಗಳೊಂದಿಗೆ ರಾಜಿಯಾಗದಿರುವವನೆ ಸಾಕ್ರಟೀಸ್ ಎನ್ನುವುದು ಭಾಸ್ಕರನ ವಾದ.ನಿಜ ಹೇಳಬೇಕು ಎಂದರೆ ಗ್ರೀಕ್ ದೇಶ ಸಾಕ್ರಟೀಸ್ನಂತಹ ಶ್ರೇಷ್ಠ ತತ್ವಜ್ಞಾನಿಯನ್ನು ಕಳೆದುಕೊಳ್ಳಲಿಕ್ಕೆ ಇಷ್ಟಪಟ್ಟಿರಲಿಲ್ಲ.ಇವನಿದ್ದನಲ್ಲ ಸಾಕ್ರಟೀಸ್? ಅವನೊಬ್ಬ ಹಠಮಾರಿ,ಆತ ಆಡಳಿತದ ಮಾತು,ಸಂಪ್ರದಾಯವಾದಿಗಳ ಮಾತು,ಯಾರ ಮಾತನ್ನೂ ಕೇಳಲಿಲ್ಲ.ನಗು ನಗುತ್ತಾ ಯಾವ ವಿಚಲಿತ ಮನೋಭಾವಕ್ಕೆ ಒಳಗಾಗದೆ ಜೈಲಿನ ಕಾವಲುಗಾರ ತಂದಿಟ್ಟ ವಿಷಾನ್ನ ತಿಂದು ಪ್ರಾಣ ಬಿಟ್ಟ‌!ಹಾಗೆ ವಿಚಾರಗಳಿಗೆ ಅಂಟಿಕೊಂಡಿದ್ದಕ್ಕೆ ಪ್ರಪಂಚ ಆತ್ಮದ ಬಗ್ಗೆ ಮಾತನಾಡುತ್ತದೆ.ತಾನೂ ಅಷ್ಟೇ ಅಂತಾನೆ ಭಾಸ್ಕರ್!ಇಂತಹ ಹಠಮಾರಿಯನ್ನು ಬದಲಿಸುವುದು ಹೇಗೆ ಸಾಧ್ಯ?

ಹೇ,ನೀ ಸುಮ್ನಿರಪಾ ಭಾಸ್ಕರ್!”ಎಂದ ರಮಣ.
****

ಕವಿತಾ ಲಾಡ್ಜ್ ಮುಂದಿರುವ ಟೀ ಪಾಯಿಂಟ್ನಲ್ಲಿ ಟೀ ಸೇವಿಸುತ್ತಿದ್ದ ಭಾಸ್ಕರ ಹೇಳಿದ್ದು ಸಕ್ಕರೆ ರಹಿತ ಟೀ ಅಲ್ಲವಾ?ಅದು ಕಹಿ ಕಹಿಯಾಗಿತ್ತು. ಭಾಸ್ಕರನಿಗೊಂದು ವಿಲಕ್ಷಣ ಚಟ ಅಂಟಿಕೊಂಡಿತ್ತು:face reading!ಪುಸ್ತಕ ಓದುವುದಕ್ಕಿಂತ ಫೇಸ್ ರೀಡಿಂಗ್ ಅದ್ಬುತ ಎನ್ನುವುದು ಭಾಸ್ಕರನ ವಾದ...

ಕವಿತಾ ಲಾಡ್ಜನ ಎದುರಿಗಿರುವ ಹಳೆಯ ಬಸ್ ನಿಲ್ದಾಣದಲ್ಲಿ ವಿವಿಧ ಸ್ಥಳ ವಿವಿಧ ಹಳ್ಳಿಗಳಿಂದ ಆಗಮಿಸುತ್ತಿರುವ ಬಸ್ಸುಗಳು ನಿಲುಗಡೆಯಾಗುತ್ತಿದ್ದವು.ಬಹುಶಃ ಚಿಕ್ಕ ಪಟ್ಟಣದಲ್ಲಿರುವ ಜನ ನಿಬಿಡತೆ ಬೆಂಗಳೂರಿನ ವಿವಿಧ ಏರಿಯಾಗಳಿಗೂ ಇರಲಿಕ್ಕಿಲ್ಲ.ಬೆಂಗಳೂರು ಸುಸಜ್ಜಿತವಾದ ನಗರ.ಅದು ಕರ್ನಾಟಕದ ರಾಜಧಾನಿ. ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರ ಇರುವ ಸ್ಥಳ.ರಾಜವೀಧಿಗಳು,ಮುಖ್ಯ ಮುಖ್ಯ ಶಹರಗಳು ಸೇರಿದ ಒಂದು ಅದ್ಬುತ ನಗರ.ವಿಶಾಲವಾದ ರಸ್ತೆಗಳು,ಪುಟ್ಪಾಥ್ ವ್ಯವಸ್ಥೆ.ಬೆಂಗಳೂರು ಜನ ನಿಬಿಡ ಶಹರ ಅನ್ನಿಸುವುದಿಲ್ಲ. ಊರು ಇದೆಯಲ್ಲ?ಚಿಕ್ಕ ಶಹರ.ಹೈದರಾಬಾದ್ ಕರ್ನಾಟಕದ ಚಿಕ್ಕ ತಾಲ್ಲೂಕು. ಜನನಿಬಿಡ ಅನ್ನಿಸುತ್ತದೆ.ಇಕ್ಕಟ್ಟಿನ ರಸ್ತೆಗಳು,ತರಾವರಿ ವ್ಯಾಪಾರಕ್ಕೆ ಬರುವ ಹಳ್ಳಿಯ ಜನಗಳು.ಊರು ಅತ್ಯಂತ ಜನ ದಟ್ಟಣೆಯ ತಾಲ್ಲೂಕು ಎನ್ನಿಸಿಕೊಳ್ಳುತ್ತದೆ.

ಇದ್ಯಾಕೇ ಬಿತ್ತು ನಂಗೆ ಮುಖದ ಭಾವನೆಗಳನ್ನು ಓದುವ ಚಟ?ಎಂದು ತನ್ನನ್ನು ತಾನು ಕೇಳಿಕೊಂಡ ಭಾಸ್ಕರ. ಉತ್ತರಿಸುವವರು ಯಾರು?ಕೆಲವು ಚಟಗಳು ಜನ್ಮಗಳಿಂದ ಹಾದು ಬಂದಿರುತ್ತವೆ!ಹೂ ಮಾರುವವರು,ಹಣ್ಣಿನ ವ್ಯಾಪಾರದ ಜನ,ಕೆಲವು ಬೀದಿ ಬದಿಯ ಹರ್ ಏಕ್ ಮಾಲಿನ ಬಾಯಿಬಡುಕ ವ್ಯಾಪಾರಿಗಳು...ನೀರಿನಂತೆ ಹರಿದು ಹೋಗುವ ಜನ ಸಾಗರ.ವಾಹನಗಳ ಕಿವಿಗಡಚ್ಚಿಕ್ಕುವ ಹಾರನ್ ಶಬ್ದ.ಅಬ್ಬಾ,ಬೇಡಪ್ಪಾ ನಗರ ಜೀವನ ಎಂದುಕೊಳ್ಳುತ್ತಿರುವಂತೆ ಬಸ್ನಿಲ್ದಾಣದ ಪ್ರವೇಶ ದ್ವಾರದ ಹತ್ತಿರ ಹಳ್ಳಿಯಿಂದ ಬಂದ ಬಸ್ಸೊಂದು ಪ್ರಯಾಣಿಕರನ್ನು ಇಳಿಸುವ ಸಲುವಾಗಿ ನಿಂತುಕೊಂಡಿತು.ಏರುವಾಗಿನಷ್ಟೇ ಅವಸರ ಇಳಿಯುವಾಗಲೂ ಪ್ರದರ್ಶಿಸುತ್ತಾ ಇಳಿದ ಜನಗಳ ಮಧ್ಯೆ ಒಂದು ಮುದುಕಿ ಮತ್ತು ಹದಿನಾಲ್ಕರ ಹುಡುಗಿ ಕ್ರಮೇಣ ಇಳಿದರು.

ಅದೇನೋ ಹುಡುಗಿಯನ್ನು ಮತ್ತು ವೃದ್ಧೆಯನ್ನು ನೋಡುತ್ತಿರುವಂತೆ ವಿಲಕ್ಷಣ ಭಾವಗಳು ಮನಸ್ಸನ್ನು ತುಂಬಿಕೊಂಡವು ಭಾಸ್ಕರನಿಗೆ.ಬಡತನ ಮತ್ತು ಹಸಿವು ದಟ್ಟೈಸಿರುವಂತೆ ಹುಡುಗಿ ಕೃತಕವಾಗಿ ಅಗ್ಗದ ಶೃಂಗಾರ ಸಾಧನಗಳಿಂದ ಸಿಂಗರಿಸಿಕೊಂಡಂತೆ ಕಾಣಿಸುತ್ತಿತ್ತು.ಮುದುಕಿಯ ಕಪ್ಪು ಮುಖ,ಆಕೆ ಸೀರೆ ಅಲ್ಲಲ್ಲಿ ಹರಿದಿರುವಂತೆ ಕಾಣಿಸುತ್ತಿತ್ತು;ಇವಲ್ಲ ಭಾಸ್ಕರನನ್ನು ಸೆಳೆದ ಅಂಶಗಳು?

ಹುಡುಗಿಯ ಚೆಲುವು!ಆದುನಿಕ ಅಕ್ಕ ಮಹಾದೇವಿಯಂತಹ ಆಕೆಯ ನೀಳ ಕೇಶರಾಶಿ ನೆಲವನ್ನು ಸೋಕುತ್ತಿತ್ತು.ಬಿಚ್ಚು ಗೂದಲಿಗೆ ಆಕೆ ಕೇವಲ ಒಂದು ಪಿನ್ ಹಾಕಿದ್ದಳು.ಹದಿನಾಲ್ಕರ ಜವ್ವನೆ ರಸ್ತೆಯ ಬದಿಯಿಂದ ತನ್ನ ವೃದ್ಧ ಅಜ್ಜಿಯ ಕೈ ಹಿಡಿದು ಬರುತ್ತಿರುವಾಗ ನವಿಲೊಂದ ವಯ್ಯಾರದಿ ನಾಜೂಕು ಹೆಜ್ಜೆಗಳನ್ನು ಹಾಕುತ್ತಿರುವಂತಿತ್ತು.ಆಕೆ ಕೆಂಪು ಬಣ್ಣದ ಲಂಗ ಧಾವಣಿ ಧರಿಸಿದ್ದಳು.ಮುಖ ಸ್ವಲ್ಪ ಕಪ್ಪಾದರೂ ಅತ್ಯಾಕರ್ಷಕವಾಗಿತ್ತು.ಹಳ್ಳಿಯ ಬಡತನದ ಬದುಕಿನ ಸ್ಪಷ್ಟ ಕುರುಹುಗಳು ಆಕೆಯ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು.ಭಾಸ್ಕರ್ ಚಕೋರಿಯನ್ನೇ ತದೇಕ ದೃಷ್ಟಿಯಿಂದ ನೋಡುತ್ತಿರುವಂತೆ-

ಹುಡುಗಿ ರಸ್ತೆಯ ಡಿವೈಡರ್ ದಾಟಿ ಭಾಸ್ಕರ ನಿಂತ ಲಾಡ್ಜೊಂದರ ಮುಂದೆ ನಗರದೊಳಗೆ ಪ್ರವೇಶಿಸುವ ಹಾದಿಗೆ ನಡೆದು ಬಂದಳು. ಹಾದಿಯಲ್ಲೇ ಲಾಡ್ಜಿನ ಹಿಂಬಾಗಿಲ ದ್ವಾರವಿತ್ತು;ಮುದುಕಿ ಮತ್ತು ಹುಡುಗಿ ಸುತ್ತಲೂ ಒಮ್ಮೆ ಪರೀಕ್ಷಾತ್ಮಕ ದೃಷ್ಟಿ ಹಾಯಿಸುತ್ತಿರುವಂತೆ ಅವರನ್ನೇ ಕಾದು ನಿಂತ ವ್ಯಕ್ತಿಯೊಬ್ಬ ಹುಡುಗಿಯನ್ನು ಕೈ ಹಿಡಿದು ಅವಸರ ಎನ್ನುವಂತೆ ಒಳ ಸೆಳೆದ!ನಂತರ ಮುದುಕಿ ಲಾಡ್ಜಿನ ಮುಂದಿರುವ ಟೀ ಪಾಯಿಂಟಿನ ಬದಿಯ ಕೊಂಚ ಸ್ಥಳವಿರುವ ನೆಲದಲ್ಲಿ ಲಾಡ್ಜಿನ ಗೋಡೆಗೆ ಬೆನ್ನು ಒರಗಿಸಿ ಕೂತುಕೊಂಡಳು.

ಅರ್ಧ ಗಂಟೆಯ ನಂತರ ಹೊರ ಬಂದ ಹುಡುಗಿ ನಿಶ್ಯಕ್ತವಾಗಿ ಕಾಲು ಎಳೆದು ಹಾಕುತ್ತಿತ್ತು.ಮುಖ ನಿಸ್ತೇಜವಾಗಿತ್ತು.ಕನಸಗಳು ಲಾಡ್ಜಿನ ಮಂಚದ ಮೇಲೆ ಸತ್ತು ಕಮರಿ ಹೋಗಿರುವುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಭಾವೋದ್ವೇಗದಿಂದ ಗಂಟಲು ಕಟ್ಟಿದಂತಾಯಿತು ಭಾಸ್ಕರನಿಗೆ.ಸಮಾಜಕ್ಕೆ ಕತ್ತಲು ಆವರಿಸುವುದು ವ್ಯವಸ್ಥೆಯ ದೊಡ್ಡ ಲೋಪ.ಅಚ್ಚುಕಟ್ಟಾದ ಸಾಂವಿಧಾನಿಕ ವ್ಯವಸ್ಥೆ ಇದ್ದರೂ ಬದುಕುಗಳು ತಪ್ಪು ದಾರಿಗೆ ಸಾಗುತ್ತವೆ;ಸಾಯುತ್ತವೆ;ಕಮರುತ್ತವೆ!ಭಾಸ್ಕರ್ ಅಲ್ಲಿ ನಿಂತುಕೊಳ್ಳಲಿಲ್ಲ.
****

ರಮಣ ಸಮಾಧಾನ ಮಾಡಲೆತ್ನಿಸಿದ.ಸಮಾಧಾನವಾಗಲಿಕ್ಕೆ ಭಾಸ್ಕರ ಲೋಕದಲ್ಲಿ ಇರಲಿಲ್ಲ.ಸಾಮಾಜಿಕ ವ್ಯವಸ್ಥೆಯ ಕಡು ಘೋರ ನೆಶೆ ಆತನನ್ನು ಇಡಿ ಇಡಿಯಾಗಿ ಆಕ್ರಮಿಸಿಕೊಂಡಿತ್ತು.

                                 ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...